ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ತೈವಾನ್‌ನಲ್ಲಿ ಚೀನಾಗೆ ಟಾಂಗ್ ಕೊಟ್ಟು ಅಧ್ಯಕ್ಷ ಗಾದಿ ಗೆದ್ದ ವೆನ್‌

ಯಾರೀಕೆ? ಏನಿದು ಸಾಧನೆ?
Last Updated 13 ಜನವರಿ 2020, 2:28 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""

ತೈಪೆ: ತೈವಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಶನಿವಾರ ಹಾಲಿ ಅಧ್ಯಕ್ಷೆ ತ್ಸೈ ಇಂಗ್‌–ವೆನ್‌ (63) ಅಭೂತಪೂರ್ವ ಜಯ ಸಾಧಿಸುವ ಮೂಲಕ ಪುನರಾಯ್ಕೆಯಾಗಿದ್ದಾರೆ. ಎರಡನೇ ಅವಧಿಗೂ ತೈವಾನ್‌ನ ಮೊದಲ ಮಹಿಳಾ ಅಧ್ಯಕ್ಷರನ್ನು ಜನರು ಕೈಹಿಡಿದಿದ್ದಾರೆ.

ಈ ಮೂಲಕ ಚೀನಾದಿಂದ ತೈವಾನ್‌ ಅನ್ನು ಪ್ರತ್ಯೇಕಿಸುವ ಅಭಿಯಾನವನ್ನು ಜನರು ಎತ್ತಿಹಿಡಿದಂತೆ ಆಗಿದೆ.ತಮ್ಮ ಆಡಳಿತದ ವಿರುದ್ಧ ಹಗೆತನ ಸಾಧಿಸುತ್ತಿದ್ದ ಚೀನಾಕ್ಕೆ ಗೆಲುವಿನ ಮೂಲಕವೇ ವೆನ್‌ ತಿರುಗೇಟು ನೀಡಿದ್ದಾರೆ. ತೈವಾನ್ ಅಧ್ಯಕ್ಷೀಯ ಚುನಾವಣೆಯ ಈ ಫಲಿತಾಂಶವು ಸದ್ಯ ಚೀನಾವನ್ನು ಕೆರಳುವಂತೆ ಮಾಡಿದೆ.

ಗೆಲುವಿನ ಖುಷಿಯಲ್ಲಿ ಬೀಗುತ್ತಿದ್ದ ವೆನ್ ಬೆಂಬಲಿಗರೊಂದಿಗೆ ಮಾತನಾಡಿ,‘ಇಂದು ನಾವು ನಮ್ಮ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇವೆ. ನಾಳೆ ಎದುರಾಗುವ ಎಲ್ಲ ಸವಾಲು ಮತ್ತು ತೊಂದರೆಗಳನ್ನು ನಿವಾರಿಸಲು ಒಗ್ಗಟ್ಟಾಗಿ ನಿಲ್ಲೋಣ’ಎಂದು ತಿಳಿಸಿದರು.

ತ್ಸೈ ಇಂಗ್‌–ವೆನ್‌ ಗೆಲುವು ಸಂಭ್ರಮಿಸುತ್ತಿರುವ ಬೆಂಬಲಿಗರು

ಮತಗಳಿಕೆ ಲೆಕ್ಕಾಚಾರ

ಅಧಿಕೃತ ಫಲಿತಾಂಶವು ವೆನ್ ಅವರು 82 ಲಕ್ಷ ಮತಗಳೊಂದಿಗೆ ಶೇ 57ರಷ್ಟು ಜನಪ್ರಿಯ ಮತಗಳನ್ನು ಗಳಿಸಿದ್ದಾರೆ. ಇದು2016ರಲ್ಲಿ ಅವರು ಗಳಿಸಿದ್ದ ಮತಕ್ಕಿಂತಲೂ 13 ಲಕ್ಷದಷ್ಟು ಹೆಚ್ಚು. ಚೀನಾ ಸ್ನೇಹಿ ಎಂದು ಗುರುತಿಸಿಕೊಂಡಿದ್ದ ಕ್ಯುಮಿಂಟಾಂಗ್‌ನ ಹಾನ್ ಕುವೊ-ಯು ಸೋಲೊಪ್ಪಿಕೊಂಡಿದ್ದಾರೆ.ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ 39ರಷ್ಟು ಮತಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಮಾತ್ರ ಅವರು ಯಶಸ್ವಿಯಾಗಿದರು.

ತೈವಾನ್‌ನ ಒಟ್ಟಾರೆ 113 ಸೀಟುಗಳ ಪೈಕಿ ಡಿಪಿಪಿ 61 ಸ್ಥಾನಗಳಲ್ಲಿ ವಿಜಯ ಸಾಧಿಸಿ ದ್ವೀಪದ ಏಕಸಭೆಯ ಸಂಸತ್ತಿನಲ್ಲಿ ತನ್ನ ಬಹುಮತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಕೆಎಂಟಿ 38 ಸ್ಥಾನಗಳನ್ನು ಪಡೆದುಕೊಂಡಿದೆ.

ಚೀನಾದಿಂದ ತೈವಾನ್ ಪ್ರತ್ಯೇಕ ರಾಷ್ಟ್ರ ಎಂಬ ವೆನ್ ಮತ್ತು ತೈವಾನ್ ಜನರ ಅಭಿಪ್ರಾಯಕ್ಕೆ ಅಡ್ಡಗಾಲಾಗಿರುವ ಬೀಜಿಂಗ್‌ಗೆ ಈ ಫಲಿತಾಂಶವು ಬಹುದೊಡ್ಡ ಹೊಡೆತ. ತ್ಸೈ ಅವರನ್ನು ತೈವಾನ್‌ನಿಂದ ಹೊರಹಾಕಲು ಚೀನಾಯತ್ನಿಸುತ್ತಿರುವುದು ಇದೀಗ ಬಹಿರಂಗ ರಹಸ್ಯ.

ವೆನ್ ಅವರ ಎದುರಾಳಿಯಾಗಿರುವ ತನ್ನ ಕೈಗೊಂಬೆಹಾನ್ ಕುವೊ-ಯು ಅವರನ್ನುಬೆಂಬಲಿಸುವಂತೆ ಮತದಾರರನ್ನು ಹೆದರಿಸುವ ಭಾಗವಾಗಿ ಕಳೆದ ನಾಲ್ಕು ವರ್ಷಗಳಿಂದ ಚೀನಾ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಸ್ವತಂತ್ರ ಆಡಳಿತ ಹೊಂದಿರುವ ತೈವಾನ್‌ ದ್ವೀಪದ ಮೇಲೆಆರ್ಥಿಕ, ಮಿಲಿಟರಿ ಮತ್ತು ರಾಜತಾಂತ್ರಿಕ ಒತ್ತಡವನ್ನು ಹೇರಿತ್ತು. ಆದರೆ ಬಲಿಷ್ಠಚೀನಾದ ತಂತ್ರಗಳಿಗೆ ಮಣಿಯದ ಮತದಾರರು ವೆನ್ ಅವರ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿಯನ್ನೇ (ಡಿಪಿಪಿ)ಬೆಂಬಲಿಸಿ, ಡ್ರ್ಯಾಗನ್‌ ಮೀಸೆ ಮಣ್ಣಾಗಿಸಿದರು.

ತೈವಾನ್‌ಗೆ ಮಿಲಿಟರಿ ಸಹಕಾರ ನೀಡುತ್ತಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಮೈಕ್ ಪೊಂಪಿಯೊ, ‘ನಿರಂತರ ಒತ್ತಡದ ನಡುವೆಯೂ ಚೀನಾ ಮತ್ತು ತೈವಾನ್‌ ನಡುವಣ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ವೆನ್ ಅವರ ಬದ್ಧತೆಗೆ ವಂದಿಸುವೆ’ ಎಂದು ಹೇಳಿದ್ದಾರೆ.

ಗೆಲುವಿನ ಸುದ್ದಿ ತಿಳಿದ ನಂತರ ತ್ಸೈ ಇಂಗ್‌–ವೆನ್‌ ಪ್ರತಿಕ್ರಿಯೆ

ಸರ್ವಾಧಿಕಾರಿ ಧೋರಣೆಯ ಎದುರಾಳಿ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನೇತೃತ್ವದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಧೋರಣೆ ವಿರುದ್ಧ ಉದಾರವಾದಿ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಕರಾಗಿ ವೆನ್ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಈಚಿನ ದಿನಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಬೀಜಿಂಗ್, ‘ಒಂದಲ್ಲಾ ಒಂದುದಿನ ನನ್ನ ದ್ವೀಪವನ್ನು ನಾನು ಪುನಃ ಪಡೆದುಕೊಳ್ಳುವೆ’ ಎಂದು ಪ್ರತಿಜ್ಞೆ ಮಾಡಿದೆ.

‘ತೈವಾನ್‌ ಸ್ವತಂತ್ರವಾಗಿದೆ. ಅದು ಚೀನಾದ ಭಾಗ ಎನ್ನುವ ಪರಿಕಲ್ಪನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದುವೆನ್ ನಿರಾಕರಿಸಿದ್ದಾರೆ.

ಅಕಸ್ಮಾತ್ ಚೀನಾವು ತೈವಾನ್‌ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಮುಂದಾಗಿದ್ದೇ ಆದರೆ, ಅದರ ಪರಿಣಾಮ ಏನಾಗಬಹುದು ಎಂಬುದಕ್ಕೆ ವೆನ್ ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತಮ್ಮ ಚುನಾವಣಾ ಅಭಿಯಾನಗಳಲ್ಲಿ ಉಲ್ಲೇಖಿಸಿ ಎಚ್ಚರಿಸಿದ್ದರು.

ಹಾಂಗ್‌ಕಾಂಗ್‌ನ ನಿವಾಸಿಗಳ ವಿರುದ್ಧ ಆರೋಪ ಎದುರಾದಾಗ, ಅವರನ್ನು ಚೀನಾಕ್ಕೆ ಹಸ್ತಾಂತರ ಮಾಡಲು ಅವಕಾಶ ಕೊಡಲಿದ್ದ ಮಸೂದೆಯೊಂದರ ವಿರುದ್ಧ ಹಾಂಗ್‌ಕಾಂಗ್‌ನಲ್ಲಿ ಆರಂಭವಾಗಿದ್ದ ಪ್ರತಿಭಟನೆಯು ತಿಂಗಳುಗಳ ಕಾಲ ನಡೆದು ಬೃಹತ್ ಮತ್ತು ಹಿಂಸಾತ್ಮಕವಾಗಿ ಬದಲಾಗಿತ್ತು. ಪ್ರಜಾಪ್ರಭುತ್ವದ ಪರವಾಗಿ ನಡೆದ ಪ್ರತಿಭಟನೆಗಳಿಗೆ ಚೀನಾದ ಕಠಿಣ ಪ್ರತಿಕ್ರಿಯೆಯು ಮತ್ತಷ್ಟು ಉತ್ತೇಜನ ನೀಡಿತ್ತು. ಇದು ತೈವಾನ್ ಜನರ ಮೇಲೆ ಪ್ರಭಾವ ಬೀರಿದೆ.

ತ್ಸೈ ಇಂಗ್‌–ವೆನ್‌ ಗೆಲುವಿನ ಸುದ್ದಿಯನ್ನು ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿ

ಶಾಂತಿಗೆ ಬದ್ಧತೆ

ತಾವು ವಿಜಯ ಸಾಧಿಸಿದ ಸಂದರ್ಭ ಮಾತನಾಡಿದ ವೆನ್, ನಾನು ಶಾಂತಿ ಬಯಸುತ್ತೇನೆ.ಚೀನಾದ ನಾಯಕರೊಂದಿಗೆ ಮಾತುಕತೆ ನಡೆಸಲು ಬದ್ಧಳಾಗಿದ್ದೇನೆ.ಬೀಜಿಂಗ್‌‌ಆಕ್ರಮಣಕಾರಿ ಧೋರಣೆಯನ್ನು ತೈವಾನ್‌ ಮೇಲೆ ಹೇರುವುದನ್ನುಸಹಿಸಲು ಆಗದು. ತೈವಾತ್‌ನಭವಿಷ್ಯವನ್ನು ದ್ವೀಪದ 2.38 ಕೋಟಿ ನಿವಾಸಿಗಳು ಮಾತ್ರ ನಿರ್ಧರಿಸಬಹುದು ಎಂಬ ಕಲ್ಪನೆಯನ್ನು ಗೌರವಿಸುವುದಾಗಿ ಹೇಳಿದರು.

‘ಶಾಂತಿ, ಸಮಾನತೆ, ಪ್ರಜಾಪ್ರಭುತ್ವ ಮತ್ತು ಮಾತುಕತೆಯು ಸ್ಥಿರತೆಯ ಕೀಲಿಗಳಾಗಿವೆ ಎಂದು ಇಂದು ನಾನು ಮತ್ತೊಮ್ಮೆ ಬೀಜಿಂಗ್ ಅಧಿಕಾರಿಗಳಿಗೆ ನೆನಪಿಸಲು ಬಯಸುತ್ತೇನೆ. ಪ್ರಜಾಪ್ರಭುತ್ವದ ತೈವಾನ್ ಮತ್ತು ಪ್ರಜಾಪ್ರಭುತ್ವದಿಂದಲೇ ಚುನಾಯಿತವಾದ ನಮ್ಮ ಸರ್ಕಾರವು ಎಂದಿಗೂ ಬೆದರಿಕೆಗಳನ್ನು ಒಪ್ಪುವುದಿಲ್ಲ ಎಂಬುದನ್ನು ಬೀಜಿಂಗ್ ಅಧಿಕಾರಿಗಳು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದರು.

ಚೀನಾದಲ್ಲಿ ತೈವಾನ್ ವ್ಯವಹಾರಗಳ ಕಚೇರಿ ವಕ್ತಾರ ಮಾ ಕ್ಸಿಯಾಂಗುವಾಂಗ್, ‘ತೈವಾನ್‌ನಲ್ಲಿ ಯಾವುದೇ ರೀತಿಯ ಸ್ವಾತಂತ್ರ್ಯ ಘೋಷಣೆ ಮತ್ತು ಚೀನಾದಿಂದ ಪ್ರತ್ಯೇಕಗೊಳಿಸುವಪ್ರಯತ್ನಗಳನ್ನು ಬೀಜಿಂಗ್ ವಿರೋಧಿಸುತ್ತದೆ. ‘ಶಾಂತಿಯುತ ಪುನರ್ ಏಕೀಕರಣ’, ‘ಒಂದು ದೇಶ, ಎರಡು ವ್ಯವಸ್ಥೆಗಳು’ಮತ್ತು ‘ಒಂದು ಚೀನಾ ನೀತಿ’ಯ ಮೂಲ ತತ್ವಗಳನ್ನು ಎತ್ತಿಹಿಡಿಯುವುದನ್ನು ನಮ್ಮ ಸರ್ಕಾರ ಮುಂದುವರಿಸುತ್ತದೆ. ಶಾಂತಿಯುತ ಸಂಬಂಧಗಳನ್ನು ಉತ್ತೇಜಿಸಲು ಮತ್ತು ತಾಯಿನಾಡಿನ ಶಾಂತಿಯುತ ಪುನರ್‌ ಏಕೀಕರಣ ಪ್ರಕ್ರಿಯೆಯನ್ನು ಮುನ್ನಡೆಸಲು ನಾವು ತೈವಾನ್ ನಿವಾಸಿಗಳೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಚೀನಾ ವಿರುದ್ಧದ ಪ್ರಬಲ ದನಿ ತ್ಸೈ ಇಂಗ್‌–ವೆನ್‌

ಯಾರಿವರು ತ್ಸೈ ಇಂಗ್‌–ವೆನ್‌

2016ರಲ್ಲಿ ತೈವಾನ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ ತ್ಸೈ ಇಂಗ್ ವೆನ್ ಅವರ ಹಾದಿ ಸುಗಮವಾಗಿರಲಿಲ್ಲ.ಹಸಿರು ಶಕ್ತಿಯನ್ನು ಉತ್ತೇಜಿಸುವ ಪ್ರಯತ್ನಗಳು ವಿದ್ಯುತ್ ಕೊರತೆಯನ್ನು ಉಂಟುಮಾಡಿತು ಎನ್ನುವ ಆರೋಪಕ್ಕೆ ಕಾರಣವಾಯಿತು. ಕಾರ್ಮಿಕರ ಗಳಿಕೆ ಮತ್ತು ರಜೆಯನ್ನು ಹೆಚ್ಚಿಸುವ ಬದಲು ಎಲ್ಲ ಕಾರ್ಮಿಕರಿಗೆ ವಾರದಲ್ಲಿ ಎರಡು ದಿನ ರಜೆ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಲಾಯಿತು. ಇವರ ನಾಯಕತ್ವದಲ್ಲಿಯೇ ತೈವಾನ್ ಸಲಿಂಗಕಾಮಿಗಳ ವಿವಾಹವನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ಸಮಾಜವಾಯಿತು. ಈ ಯತ್ನಕ್ಕೆವಿಶ್ವದಾದ್ಯಂತ ಪ್ರಶಂಸೆ ಸಿಕ್ಕಿತಾದರೂ,ಆಕೆಯ ಮನೆಯಲ್ಲಿಯೇ ವಿರೋಧ ವ್ಯಕ್ತವಾಯಿತು.

ಎರಡನೇ ಅವಧಿಗೆ ವೆನ್ ಸ್ಪರ್ಧಿಸುತ್ತಾರೆಯೇ ಎಂಬುದೇ ಅನಿಶ್ಚಿತವಾಗಿತ್ತು. ಪಕ್ಷದ ನಾಮನಿರ್ದೇಶನಕ್ಕೆ ಈ ಹಿಂದೆ ಪಕ್ಷದಲ್ಲಿ ವೆನ್ ಬೆಂಬಲಿಗಾರಿದ್ದ ಅನುಯಾಯಿಯೊಬ್ಬರಿಂದಲೇಸವಾಲು ಎದುರಾಗಿತ್ತು. ಒಂದು ಹಂತದಲ್ಲಿ ಅವರ ಅನುಮೋದನೆ ಶೇ 15ರಷ್ಟು ರೇಟಿಂಗ್ತಲುಪಿತ್ತು. ಈ ಸಮಸ್ಯೆಯನ್ನು ವೆನ್ ಹೇಗೋ ನಿವಾರಿಸಿಕೊಂಡರು. ಕೊನೆಯವರೆಗೂ ಅವರಿಗೆ ಅತಿದೊಡ್ಡ ತಲೆನೋವಾಗಿ ಕಾಡಿದ್ದುಚೀನಾ ದೇಶ. ಆದರೆ ಚೀನಾ ಕೊಟ್ಟ ಕಾಟವೇವೆನ್ 2020ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ನಿರ್ಣಾಯಕವಾಗಿ ಗೆಲ್ಲಲು ಸಹಾಯ ಮಾಡಿತು.

ತೈವಾನ್ ಸ್ವಾಂತತ್ರ್ಯದ ಜತೆಗೆ ನಿಂತ ವೆನ್

63 ವರ್ಷದ ವೆನ್, ಒಂದು ದಿನ ದ್ವೀಪವನ್ನು ಚೀನಾದ ಮುಖ್ಯ ಭೂಭಾಗದೊಂದಿಗೆ ಏಕೀಕರಿಸಬೇಕು ಎಂಬ ಚೀನಾದ ದೃಷ್ಟಿಕೋನಕ್ಕೆ ವಿರುದ್ಧವಾಗಿ ತೈವಾನ್‌ನ ಸಾರ್ವಭೌಮತ್ವದ ರಕ್ಷಣೆಗಾಗಿ ತನ್ನನ್ನು ತಾನು ಮುಡಿಪಾಗಿಟ್ಟುಕೊಂಡವರು.

2019ರಲ್ಲಿ ಚೀನಾ ವಿರುದ್ಧ ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಭವಿಷ್ಯದಲ್ಲಿ ತೈವಾನ್‌ ಕೂಡ ಇಂತದ್ದಕ್ಕೆ ಸಾಕ್ಷಿಯಾಗಬಹುದೆನ್ನುವ ಆತಂಕಗಳು ಹೆಚ್ಚಾಗತೊಡಗಿದವು. ಇದು ವೆನ್ ಅವರಿಗೆ ವರದಾನವಾಯಿತು. ಈ ಬೆನ್ನಲ್ಲೇ ವೆನ್ ಅವರ ಪಕ್ಷ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿಯು ಬೀಜಿಂಗ್‌ಗೆ ಎದುರಾಗಿ ನಿಲ್ಲುತ್ತದೆ ಮತ್ತು ತೈವಾನ್‌ ಅನ್ನು ಉದಾರವಾದಿ ಪ್ರಜಾಪ್ರಭುತ್ವವಾಗಿರಿಸುತ್ತದೆ ಎಂಬ ಕಲ್ಪನೆಯನ್ನು ಮುಂದಿಟ್ಟಿತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ವೆನ್ ಪ್ರಚಾರ ನಡೆಸಿದರು.

‘ಜನರು ನನ್ನನ್ನುಆಯ್ಕೆ ಮಾಡುವುದರ ಮೂಲಕ ನಮ್ಮ ಭವಿಷ್ಯವನ್ನು ನಾವು ರೂಪಿಸಿಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ನಮಗೆ ಬೇಕಾಗಿದೆ ಎಂಬ ಸಂದೇಶ ನೀಡಿದ್ದಾರೆ’ ಎಂದು ವೆನ್ ಚುನಾವಣೆಯ ಹಿಂದಿನ ದಿನ ಸುದ್ದಿಗಾರರಿಗೆ ತಿಳಿಸಿದ್ದರು.

ತ್ಸೈ ಇಂಗ್‌–ವೆನ್‌

ವೆನ್ ಬಾಲ್ಯ ಮತ್ತು ಶಿಕ್ಷಣ

ದಕ್ಷಿಣ ತೈವಾನ್‌ನ ಕರಾವಳಿ ಗ್ರಾಮವೊಂದರಲ್ಲಿ ನೆಲಿಸಿದ್ದ ಕುಟುಂಬದ11 ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು ವೆನ್ (ಜನನ 31ನೇ ಆಗಸ್ಟ್, 1956). 11 ವರ್ಷದವರಿದ್ದಾಗ ತೈವಾನ್ ರಾಜಧಾನಿ ತೈಪೆಗೆ ತೆರಳಿದರು. ಹಕ್ಕಾ ಪ್ರಾಂತ್ಯದ ತಂದೆ ಮತ್ತು ತೈವಾನ್‌ನ ತಾಯಿಯ ಕೂಸಾದ ಕಾರಣ ವೆನ್ ಅವರ ಚಹರೆಯಲ್ಲಿಮಿಶ್ರ ಜನಾಂಗೀಯತೆಯ ಸ್ಪರ್ಶ ಬಂದಿತ್ತು. ತಮ್ಮ ಬೆಂಬಲಿಗರೊಂದಿಗೆ ಸಂಪರ್ಕ ಸಾಧಿಸಲು ಇದು ಕೂಡ ಸಹಾಯ ಮಾಡಿದ ಗುಣಲಕ್ಷಣಗಳಲ್ಲಿ ಒಂದಾಗಿದೆ. ವೆನ್‌ನ ಅಜ್ಜಿಯೂ ಕೂಡ ತೈವಾನ್‌ನ ಚೀನೀಯೇತರ ಸ್ಥಳೀಯ ಗುಂಪಿನಲ್ಲಿ ಒಬ್ಬರಾಗಿದ್ದರು.

ತೈವಾನ್ ರಾಷ್ಟ್ರೀಯವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ವೆನ್, ಕಾರ್ನೆಲ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ 1980ರಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ಡಾಕ್ಟರೇಟ್ ಪದವಿಯನ್ನು 1984ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ನಿಂದ ಪಡೆದರು. 1990ರ ದಶಕದಲ್ಲಿ ಅವರು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ತೈವಾನ್‌ನ ಸ್ಥಾನಮಾನಕ್ಕಾಗಿ ಸಮಾಲೋಚಕರಾಗಿದ್ದರು. ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಾಜಿ ಅಧ್ಯಕ್ಷ ಲೀ ಟೆಂಗ್-ಹುಯಿ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಲು ವೆನ್ ಅವರಿಗೆ ಅವಕಾಶ ಲಭ್ಯವಾಗಿತ್ತು.

ಅಧಿಕಾರ ಏಣಿ

ನಾಲ್ಕು ವರ್ಷಗಳ ನಂತರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಪಕ್ಷವು ಭಾರಿ ಸೋಲನ್ನು ಅನುಭವಿಸಿದಾಗ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಹಿಂದೆ ಅಧ್ಯಕ್ಷರಾಗಿದ್ದ ಚೆನ್ ಶೂಯಿ-ಬಿಯಾನ್ 2008ರಲ್ಲಿ ನಡೆದ ಚುನಾವಣೆಯಲ್ಲಿ ಮಾ ಯಿಂಗ್-ಜಿಯೋ ವಿರುದ್ಧ ಸೋತರು ಮತ್ತು ನಂತರ ಭ್ರಷ್ಟಾಚಾರಕ್ಕಾಗಿ ಜೈಲಿನಲ್ಲಿದ್ದರು.

ಪಕ್ಷದ ಅಧ್ಯಕ್ಷೆಯಾಗಿ ರಾಜಕೀಯದ ಅಖಾಡದಲ್ಲಿ ಕಾಣಿಸಿಕೊಂಡ ವೆನ್ ಅವರ ಶೈಲಿ ಮತ್ತು ವರ್ತನೆಯು ವಿಶೇಷವಾಗಿ ಕಂಡಿತ್ತು. ಇದು ಡಿಪಿಪಿಯ ಹಳೆಯ ಮುಖಗಳಿಂದ ಅವರನ್ನು ಬೇರ್ಪಡಿಸುವಂತೆ ಮಾಡಿದ್ದಲ್ಲದೆ ಯುವ ಮತದಾರರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಬಳಿಕ ಪಕ್ಷದಲ್ಲಿ ಒಡಕು ಮತ್ತು ಬಣ ರಾಜಕೀಯದ ನಡುವೆಯೂವೆನ್ ಅವರು ಡಿಪಿಪಿಯನ್ನು ಮರಳಿ ಪುನಶ್ಚೇತನಗೊಳಿಸಲು ಅಗತ್ಯವಾದ ಬೆಂಬಲವನ್ನು ಒಟ್ಟುಗೂಡಿಸಲು ಸಾಧ್ಯವಾಯಿತು. ಅವರ ನಾಯಕತ್ವದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನವನ್ನು ಪಕ್ಷ ತೋರಿತು.
2012ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವರ ಮೊದಲ ಪ್ರಯತ್ನ ವಿಫಲವಾಯಿತು. ಆದರೆ ತಮ್ಮ ಯಶಸ್ಸನ್ನು ಹೆಚ್ಚಿಸಿಕೊಂಡ ವೆನ್ ನಾಲ್ಕು ವರ್ಷಗಳ ನಂತರ ಅಂದರೆ 2016ರಲ್ಲಿ ತೈವಾನ್‌ ಅಧ್ಯಕ್ಷೆಯಾಗಿ ಆಯ್ಕೆಯಾದರು.

ತೈವಾನ್‌ ಅಧ್ಯಕ್ಷೆ ತ್ಸೈ ಇಂಗ್‌–ವೆನ್‌

ಆಡಳಿತ ವೈಖರಿ

ಮೊದಲ ಅಧಿಕಾರಾವಧಿಯಲ್ಲಿ ತೈವಾನ್‌ನ ಕನಿಷ್ಠ ವೇತನ, ಹೂಡಿಕೆಗಳು ಮತ್ತು ಷೇರುಗಳ ಏರಿಕೆ ಕಂಡಿತು. ಶಿಶುಪಾಲನೆಮತ್ತು ವೃದ್ಧರ ಆರೈಕೆ ಮತ್ತು ಸಾರ್ವಜನಿಕ ವಸತಿ ಸೇರಿದಂತೆ ಸಾಮಾಜಿಕ ಸೇವೆಗಳು ಕೂಡ ಉತ್ತೇಜನ ಪಡೆದಿವೆ. ಆದರೆ ರಫ್ತು ಕುಸಿದಿದೆ. ಮೊದಲ ನಾಲ್ಕು ವರ್ಷಗಳಲ್ಲಿಜಿಡಿಪಿ (ಶೇ 2.7)ಸುಧಾರಿಸಿದೆ. ಜಾಗತಿಕ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿರುವ ಜಿಡಿಪಿ ಈಚೆಗೆ ಕುಸಿತದತ್ತ ಸಾಗಿರುವುದು ಸುಳ್ಳಲ್ಲ.

ಸರಾಸರಿ ನೈಜ ಮಾಸಿಕ ವೇತನ ಸ್ವಲ್ಪ ಹೆಚ್ಚಾಗಿದೆ.ಆದರೆ ಹಣದುಬ್ಬರದಿಂದಾಗಿ 16 ವರ್ಷಗಳ ಹಿಂದೆ ಇದ್ದಂತೆಯೇ ಇದೆ ಮತ್ತು ನಾಲ್ಕು ಪುಟ್ಟ ಏಷ್ಯನ್ ಡ್ರ್ಯಾಗನ್ ಆರ್ಥಿಕತೆಗಳಲ್ಲಿಯೇ ಅತ್ಯಂತ ಕಡಿಮೆಯದ್ದಾಗಿದೆ. ಹೆಚ್ಚಿದ ವಸತಿ ಬೆಲೆಗಳು ಮತ್ತು ಸಂಪತ್ತಿನ ಅಂತರದ ಪ್ರಮುಖ ಕಾರಣಗಳನ್ನು ನಿಭಾಯಿಸಲು, ಆಸ್ತಿ ಹೂಡಿಕೆದಾರರಿಗೆ ಸಮರ್ಪಕವಾಗಿ ತೆರಿಗೆ ವಿಧಿಸಲು ಉತ್ತಮ ತೆರಿಗೆ ವ್ಯವಸ್ಥೆ ತರುವಲ್ಲಿ ವೆನ್ ವಿಫಲರಾಗಿದ್ದಾರೆ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು. ಬರಹ: ರಮ್ಯಶ್ರೀ ಜಿ.ಎನ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT