ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಸಿಲುಕಿದ್ದ ರಾಜ್ಯದ ಹಕ್ಕಿಪಿಕ್ಕಿ ಜನಾಂಗದ 15 ಮಂದಿ ತವರಿಗೆ

ಹೈದರಾಬಾದ್‌ಗೆ ಕರ್ನಾಟಕದ ಬಿಷಪ್ ಸೇರಿದಂತೆ 340 ಮಂದಿ
Last Updated 22 ಜೂನ್ 2020, 7:39 IST
ಅಕ್ಷರ ಗಾತ್ರ

ಜೊಹಾನ್ಸಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಸಿಲುಕಿದ್ದ ಕರ್ನಾಟಕದ ಬಿಷಪ್‌ ಮತ್ತು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 15 ಮಂದಿ ಸೇರಿದಂತೆ 340 ಮಂದಿಯನ್ನು ಇಥಿಯೊಪಿಯನ್‌ ಏರ್‌ಲೈನ್ಸ್‌ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ.

ಜೊಹಾನ್ಸ್‌ಬರ್ಗ್‌ನಿಂದ ಇಥಿಯೊಪಿಯಾದ ಅಡ್ಡಿಸ್‌ ಅಬಬಾ ಮೂಲಕ ಹೈದರಾಬಾದ್‌ಗೆ ಇವರನ್ನು ಕಳುಹಿಸಲಾಯಿತು. ಇವರಲ್ಲಿ ಬಹುತೇಕ ಮಂದಿ ದಕ್ಷಿಣ ಭಾರತದವರಾಗಿದ್ದು, ಅರ್ಧದಷ್ಟು ಮಂದಿ ಹೈದರಾಬಾದ್‌ ನಗರದವರು ಎಂದು ಜೊಹಾನ್ಸ್‌ಬರ್ಗ್‌ನಲ್ಲಿರುವ ಕಾನ್ಸಲ್‌ ಜನರಲ್‌ ಅಂಜು ರಂಜನ್‌ ತಿಳಿಸಿದ್ದಾರೆ.

ತವರಿಗೆ ಮರಳಲು ಅನುಕೂಲವಾಗುವಂತೆ ಅಂಜು ರಂಜನ್‌ ಅವರೇ ನೇತೃತ್ವ ವಹಿಸಿ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು. ಸದ್ಗುರು ಟ್ರಾವೆಲ್ಸ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ‘ಇಂಡಿಯನ್‌ ಕ್ಲಬ್’ ಸದಸ್ಯರು ಸಹ ರಂಜನ್‌ ಅವರಿಗೆ ಎಲ್ಲ ರೀತಿಯ ನೆರವು ನೀಡಿದರು.

ಕ್ಯಾನ್ಸರ್‌ಗೆ ತುತ್ತಾಗಿದ್ದ ಬಿಷಪ್‌ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಲಾಕ್‌ಡೌನ್‌ನಿಂದಾಗಿ ಇಲ್ಲಿಯೇ ಸಿಲುಕಿಕೊಂಡಿದ್ದರು. ತವರಿನಲ್ಲೇ ಕೊನೆಯುಸಿರೆಳೆಯುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದರು ಎಂದು ಇಂಡಿಯನ್‌ ಕ್ಲಬ್‌ನ ಅಧಿಕಾರಿಗಳು ತಿಳಿಸಿದ್ದಾರೆ.

‘ಜೊಹಾನ್ಸ್‌ಬರ್ಗ್ ಮತ್ತು ಕೇಪ್‌ಟೌನ್‌ನಲ್ಲಿ ಕಳೆದ ಐದು ತಿಂಗಳಿಂದ ಕರ್ನಾಟಕದ 15 ಮಂದಿ ಸೇರಿದಂತೆ ಹಕ್ಕಿಪಿಕ್ಕಿ ಜನಾಂಗದ ಒಟ್ಟು 40 ಮಂದಿ ಸಿಲುಕಿದ್ದರು. ಇವರಿಗೆ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಭಾರತೀಯ ಹೈಕಮಿಷನರ್‌ ಮತ್ತು ಡರ್ಬನ್‌, ಕೇಪ್‌ಟೌನ್‌ ಹಾಗೂ ಜೊಹಾನ್ಸ್‌ಬರ್ಗ್‌ನಲ್ಲಿರುವ ಕಾನ್ಸಲೇಟ್‌ ಜನರಲ್‌ಗಳು ಹಾಗೂ ಉದ್ದಿಮೆದಾರರ ನೆರವಿನೊಂದಿಗೆ 12 ಮಂದಿಗೆ ಟಿಕೆಟ್‌ ಖರೀದಿಸಿ ನೀಡಲಾಯಿತು’ ಎಂದು ಅಂಜು ರಂಜನ್‌ ವಿವರಿಸಿದ್ದಾರೆ.

‘ಧಾರ್ಮಿಕ ಸೆಮಿನಾರ್‌ನಲ್ಲಿ ಪಾಲ್ಗೊಳ್ಳಲು ಗೋವಾದಿಂದ ಕ್ರೈಸ್ತ ಸಮುದಾಯದ ಎಂಟು ಮಂದಿಯ ತಂಡವೂ ಇಲ್ಲಿಗೆ ಬಂದಿತ್ತು. ಇವರಿಗೂ ಲಾಕ್‌ಡೌನ್‌ನಿಂದ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಹೋಟೆಲ್‌ನಲ್ಲಿ ತಂಗಿದ್ದಕ್ಕಾಗಿ ಹಣ ನೀಡಲು ಸಾಧ್ಯವಾಗದ ಕಾರಣ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದರು. ಭಾರತದ ಕಾನ್ಸಲೇಟ್‌ ಜನರಲ್‌ ಅವರ ಪ್ರಯತ್ನದಿಂದಾಗಿ ಇವರೆಲ್ಲರನ್ನೂ ಬಿಡುಗಡೆ ಮಾಡಿಸಿ ತವರಿಗೆ ಕಳುಹಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT