ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ವೀಸಾ ನಿಯಮ ಪ್ರಕಟಿಸಿದ್ದು, ಕೋವಿಡ್–19 ಸಾಂಕ್ರಾಮಿಕಗೊಳ್ಳುತ್ತಿರುವ ಈ ಸಮಯದಲ್ಲಿ ತಮ್ಮ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಿಸುವ, ಹಿಂದೇಟು ಹಾಕುವ ರಾಷ್ಟ್ರಗಳ ನಾಗರಿಕರಿಗೆ ವೀಸಾ ನಿರ್ಬಂಧಿಸಿದ್ದಾರೆ.
ವೀಸಾ ನಿರ್ಬಂಧಕ್ಕೆ ಸಂಬಂಧಿಸಿದಂತೆ ಟ್ರಂಪ್ ಈಗಾಗಲೇ ಜ್ಞಾಪಕ ಪತ್ರ ಹೊರಡಿಸಿದ್ದಾರೆ. ವಿಸಾ ನಿರಾಕರಣೆಯು ತಕ್ಷಣದಿಂದಲೇ ಜಾರಿಯಾಗಲಿದ್ದು, ಈ ವರ್ಷದ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರಲಿದೆ. ದೇಶಗಳು ತಮ್ಮ ನಾಗರಿಕರನ್ನು ವಾಪಸ್ ಕರೆಸಿಕೊಳ್ಳದೇ ಇರುವುದು ಅಥವಾ ಅನಗತ್ಯ ವಿಳಂಬ ಮಾಡುವುದು ‘ಅಮೆರಿಕನ್ನರಿಗೆ ಒಪ್ಪಿತವಲ್ಲದ ಸಾರ್ವಜನಿಕ ಆರೋಗ್ಯ ಅಪಾಯಕ್ಕೆ ಕಾರಣವಾಗುತ್ತದೆ,’ ಎಂದು ಅವರು ಹೇಳಿದ್ದಾರೆ.
ಆಂತರಿಕ ಭದ್ರತಾ ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿಗಳನ್ನು ಉದ್ದೇಶಿ ಮಾತನಾಡಿರುವ ಟ್ರಂಪ್, ‘ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿ ಪ್ರಜೆಗಳ ವಾಪಸಾತಿಗೆ ದೇಶ ಸಮರ್ಥವಾಗಿರಬೇಕು,’ಎಂದಿದ್ದಾರೆ.
‘ಈ ವಿಷಯದಲ್ಲಿ ದೇಶದ ಆಂತರಿಕ ಭದ್ರತಾ ಕಾರ್ಯದರ್ಶಿಯು ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದ್ದಾರೆ. ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಅಮೆರಿಕದ ಕೋರಿಕೆಯನ್ನು ಮನ್ನಿಸದ ರಾಷ್ಟ್ರಗಳನ್ನು ಅವರು ಗುರುತಿಸಲಿದ್ದಾರೆ,’ ಎಂದು ಟ್ರಂಪ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.