ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ತಾಪಮಾನ: ಇನ್ನೂ ಮೂಡದ ತೀರ್ಮಾನ

ಮಾಡ್ರಿಡ್‌ನಲ್ಲಿ ನಡೆಯುತ್ತಿರುವ ಸಿಒಪಿ 25 ಶೃಂಗಸಭೆ
Last Updated 14 ಡಿಸೆಂಬರ್ 2019, 19:36 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಜಾಗತಿಕ ತಾಪಮಾನ ಕುರಿತಂತೆ ನಾಳಿನ ಸವಾಲು ಎದುರಿಸಲು ಸಜ್ಜಾಗಬೇಕು ಎಂಬ ವಿಜ್ಞಾನಿಗಳ ಎಚ್ಚರಿಕೆಗಳ ನಡುವೆಯೂ ಇಲ್ಲಿ ನಡೆಯುತ್ತಿರುವ ‘ಸಿಒಪಿ25’ ಶೃಂಗಸಭೆ ಇನ್ನೂ ಈ ಸಂಬಂಧ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ.

ಚಂಡಮಾರುತ, ಭೀಕರ ಬರಗಾಲ, ದಾಖಲೆಯ ಬಿಸಿಗಾಳಿ ಸೇರಿದಂತೆ ಭೂಮಿಯ ಮೇಲೆ ಹವಾಮಾನ ಸಂಬಂಧಿತ ಅವಘಡಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಇಲ್ಲಿ ಶೃಂಗಸಭೆ ಸಮಾವೇಶಗೊಂಡಿದ್ದು, ಜಗತ್ತಿನ ಗಮನಸೆಳೆದಿದೆ.

ಚರ್ಚೆ, ಸಂವಾದ ಡಿ.2ರಂದು ಆರಂಭವಾಗಿದ್ದು, ಶುಕ್ರವಾರದ (ಡಿ.13) ವೇಳೆಗೆ ಮುಗಿಯಬೇಕಿತ್ತು. ಆದರೆ, ಚರ್ಚೆ ಶನಿವಾರವೂ ಮುಂದುವರಿಯಿತು. ಭವಿಷ್ಯದ ಸವಾಲುಗಳನ್ನು ಎದುರಿಸುವ ರೂಪುರೇಷೆ ಕುರಿತ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದೆ.

ಭೂಮಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಲು ಒಂದೆಡೆ ವಿಜ್ಞಾನಿಗಳು ಪರ್ವತದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರೆ, ಇನ್ನೊಂದೆಡೆ ಸರ್ಕಾರಗಳಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಯುವ ಹೋರಾಟಗಾರರು ಬೀದಿಗಿಳಿದಿದ್ದಾರೆ.

ಶೃಂಗಸಭೆಯ ಚರ್ಚೆ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಆತಿಥೇಯ ಚಿಲಿಯ ಸಂಯೋಜನಾಧಿಕಾರಿ ಆಂಡ್ರೀಸ್‌ ಲ್ಯಾಂಡ್ರೆಚೆ ಅವರು, ‘ವಿಶ್ವದ ದೃಷ್ಟಿ ನಮ್ಮ ಮೇಲಿದೆ. ಅನಿರೀಕ್ಷಿತ ಸವಾಲು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ತಿಳಿಸಬೇಕಿದೆ‘ ಎಂದರು.

ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಶ್ರೀಮಂತ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಯಾರು, ಎಷ್ಟು ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂಬ ಕುರಿತ ತಿಕ್ಕಾಟವು ಮುನ್ನೆಲೆಗೆ ಬಂದಿದೆ.

ಈ ಮಧ್ಯೆ, ಬಡ ಮತ್ತು ದುರ್ಬಲ ರಾಷ್ಟ್ರಗಳು ಹಾಗೂ ತ್ವರಿತಗತಿಯಲ್ಲಿ ಬೆಳೆಯುತ್ತಿರುವ, ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿರುವ ಪಟ್ಟಿಯಲ್ಲಿ ಕ್ರಮವಾಗಿ ನಂ. 1 ಮತ್ತು ನಂ. 4ನೇ ಸ್ಥಾನದಲ್ಲಿರುವ ಚೀನಾ, ಭಾರತದಂಥ ದೇಶಗಳ ನಡುವೆ ಕಂದಕ ಹೆಚ್ಚುತ್ತಿದೆ.

ಮ್ಯಾಡ್ರಿಡ್‌ ಶೃಂಗಸಭೆ ಚರ್ಚೆಯ ಉದ್ದೇಶ 2015ರ ಪ್ಯಾರಿಸ್‌ನಲ್ಲಿ ಕೈಗೊಂಡ ಒಪ್ಪಂದ ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಗ್ಗಿಸಲು ಒತ್ತು ನೀಡಬೇಕು ಎಂಬುದಕ್ಕೆ ಸಂಬಂಧಿಸಿದ ನಿಯಮಾವಳಿ ಕೈಪಿಡಿ ಅಂತಿಮಗೊಳಿಸುವುದೇ ಆಗಿದೆ

ಭೂಮಿಯಲ್ಲಿನ ತಾಪಮಾನ ಕೈಗಾರಿಕಾ ಕ್ರಾಂತಿಯ ನಂತರ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. 2100ರ ವೇಳೆಗೆ ಇನ್ನು ಎರಡು ಅಥವಾ ಮೂರು ಡಿಗ್ರಿ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ.

‘ಎಲ್ಲ ರಾಷ್ಟ್ರಗಳು ಸ್ಷಪ್ಟವಾದ ತೀರ್ಮಾನ, ನಿಲುವು ಪ್ರಕಟಿಸುವವರೆಗೂ ನಾವು ಕದಲುವುದಿಲ್ಲ’ ಎಂದು ಮಾರ್ಷಲ್‌ ದ್ವೀಪದ ತಾಪಮಾನ ರಾಯಭಾರಿ ಟಿನಾ ಸ್ಟೀಜ್‌ ಹೇಳಿದರು.

ಈ ನಡುವೆ ಸಣ್ಣ, ದ್ವೀಪ ರಾಷ್ಟ್ರಗಳ ಒಕ್ಕೂಟವು ಹೇಳಿಕೆಯನ್ನು ನೀಡಿದ್ದು, ‘ಅಮೆರಿಕ, ಕೆನಡಾ, ರಷ್ಯಾ, ಭಾರತ, ಚೀನಾ ಮತ್ತು ಬ್ರೆಜಿಲ್‌ ದೇಶಗಳಿಗೆ ಮಹಾತ್ಮಾಕಾಂಕ್ಷೆಯ ಕೊರತೆ ಇದೆ’ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT