ಸೋಮವಾರ, ಜನವರಿ 20, 2020
23 °C

ಪ್ರಾದೇಶಿಕ ಶಕ್ತಿಗಳನ್ನು ಒಗ್ಗೂಡಿಸಿದ್ದ 'ಸುಲೇಮಾನಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇ. ಜ. ಖಾಸಿಂ ಸುಲೇಮಾನಿ ಸಾಮಾನ್ಯ ವ್ಯಕ್ತಿಯಲ್ಲ. ಎರಡು ದಶಕಗಳಿಂದ ಇರಾನ್‌ ನಡೆಸಿದ ಪ್ರತಿಯೊಂದು ಸೇನಾ ಕಾರ್ಯಾಚರಣೆಯ ರೂವಾರಿ. ಅಮೆರಿಕ ನೇತೃತ್ವದ ಮಿತ್ರಕೂಟದ (ಸೌದಿ ಅರೇಬಿಯಾ ಮತ್ತು ಇಸ್ರೇಲ್‌ ಪ್ರಮುಖ ಸದಸ್ಯ ರಾಷ್ಟ್ರಗಳು) ಜತೆಗೆ ಭಾರಿ ‘ಛಾಯಾ ಯುದ್ಧ’ದ ನಡುವಿನಲ್ಲಿ ಸುಲೇಮಾನಿಯ ಸಾವು ಇರಾನ್‌ಗೆ ಬಲುದೊಡ್ಡ ನಷ್ಟ. 

ಸಿರಿಯಾದ ಆಂತರಿಕ ಸಂಘರ್ಷದಲ್ಲಿ ಅಲ್ಲಿನ ಅಧ್ಯಕ್ಷ ಬಷರ್‌ ಅಲ್‌ ಅಸದ್‌ಗೆ ಬಹುದೊಡ್ಡ ರಕ್ಷಾ ಕವಚವಾಗಿ ಇದ್ದವರು ಸುಲೇಮಾನಿ. ಈ ಒಂದು ಕ್ರಮವು, ಭಿನ್ನ ಸಿದ್ಧಾಂತಗಳ ಗುಂಪುಗಳನ್ನು ಜತೆಗೂಡಿಸಿತು. ಪ್ರಾದೇಶಿಕ ಶಕ್ತಿಗಳನ್ನು ಇದು ಒಂದುಗೂಡಿಸಿತು, ಕೊನೆಗೆ ಈ ಕೂಟಕ್ಕೆ ರಷ್ಯಾದ ಬೆಂಬಲವೂ ದೊರೆಯಿತು. 

ಬಂಡುಕೋರ ಗುಂಪುಗಳಿಗೆ ಅತ್ಯಾಧುನಿಕ ಬಾಂಬ್‌ ತಯಾರಿಕೆ ತಂತ್ರಜ್ಞಾನ ಮತ್ತು ತರಬೇತಿ ನೀಡಿ, ಅವರ ಮೂಲಕ ಅಮೆರಿಕದ ನೂರಾರು ಯೋಧರ ಸಾವಿಗೆ ಸುಲೇಮಾನಿ ಕಾರಣ. ಅಷ್ಟೇ ಅಲ್ಲದೆ, ಮಧ್ಯ ಪ್ಯಾಚ್ಯ ಮತ್ತು ಅಮೆರಿಕ, ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ ಅನ್ನು ಗುರಿಯಾಗಿಸಿ ಇರಾನ್‌ ನಡೆಸುತ್ತಿದ್ದ ವಿಧ್ವಂಸಕ ಕೃತ್ಯಗಳ ಸೂತ್ರಧಾರ ಈತನೇ ಆಗಿದ್ದ ಎಂದು ಅಮೆರಿಕ ಹೇಳಿದೆ. 

ಸುಲೇಮಾನಿ ಅವರು ಇರಾನ್‌ನ ಛಾಯಾ ಕಮಾಂಡರ್‌ ಎಂದೇ ಪ್ರಸಿದ್ಧರಾಗಿದ್ದವರು. ಸೇನೆಗೆ ಸೇರುವ ಮೊದಲು ನಿರ್ಮಾಣ ಕಾರ್ಮಿಕರಾಗಿದ್ದರು. ಅವರು ಮುಸ್ಲಿಂ ಧಾರ್ಮಿಕ ವಿದ್ವಾಂಸ ಅಲ್ಲ. ಹಾಗಿದ್ದರೂ, ಇರಾನ್‌ನ ಅತ್ಯುಚ್ಚ ನಾಯಕ ಅಲಿ ಖೊಮೇನಿಯ ಅತ್ಯಂತ ಆಪ್ತ ವ್ಯಕ್ತಿಯಾಗಿದ್ದರು. ರೆವಲ್ಯೂಷನರಿ ಕೋರ್‌ಗೆ ಅವರು 1998ರಿಂದಲೂ ಮುಖ್ಯಸ್ಥರಾಗಿದ್ದರು. 

ಇರಾಕ್‌, ಸಿರಿಯಾ ಮತ್ತು ಇತರ ದೇಶಗಳಿಗೆ ಸಂಬಂಧಿಸಿ ಇರಾನ್‌ನ ಸೇನಾ ಕಾರ್ಯತಂತ್ರವನ್ನು ಸುಲೇಮಾನಿ ಅವರೇ ರೂಪಿಸುತ್ತಿದ್ದರು. ಹಾಗಾಗಿ,  ಮಧ್ಯಪ್ರಾಚ್ಯದ ಅತ್ಯಂತ ಜನಪ್ರಿಯ ವ್ಯಕ್ತಿಯೂ ಆಗಿದ್ದರು. ಇರಾನ್‌ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಅವರು ಹಲವು ಬಾರಿ ಬಿಂಬಿತರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸುಲೇಮಾನಿಯ ಹತ್ಯೆ ಭಾರಿ ಚರ್ಚೆಗೆ ಕಾರಣವಾಗಿದೆ. ‘ಒಸಾಮಾ ಬಿನ್‌ ಲಾದೆನ್‌ನ ಹತ್ಯೆಯು ಇದರ ಹತ್ತಿರಕ್ಕೂ ಸುಳಿಯುವುದಿಲ್ಲ. ಸುಲೇಮಾನಿಯ ಹತ್ಯೆ, ಮಧ್ಯಪ್ರಾಚ್ಯದಲ್ಲಿ ದಶಕಗಳಲ್ಲಿ ನಡೆದ ಅತ್ಯಂತ ದೊಡ್ಡ ಘಟನೆ’ ಎಂದು ಒಬ್ಬರು ಬಣ್ಣಿಸಿದ್ದಾರೆ. 

ಇದನ್ನೂ ಓದಿ... ಅಮೆರಿಕ– ಇರಾನ್‌: ಪ್ರತೀಕಾರದ ಬೆದರಿಕೆ, ಕದನದ ಭೀತಿ

ಹತ್ಯೆ ಹೇಗೆ...
ಬಾಗ್ದಾದ್‌ನ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಾಗ ಖಾಸಿಂ ಸುಲೇಮಾನಿ ಮತ್ತು ಇತರರು ಇದ್ದ ಎರಡು ವಾಹನಗಳ ಮೇಲೆ ಅಮೆರಿಕವು ದಾಳಿ ನಡೆಸಿತ್ತು. ಕ್ಷಿಪಣಿ ದಾಳಿಯಲ್ಲಿ ಸುಲೇಮಾನಿ, ಇರಾನ್‌ನ ಮತ್ತೊಬ್ಬ ಸೇನಾಧಿಕಾರಿ ಮತ್ತು ಇರಾಕ್‌ನ ಸೇನಾ ಕಮಾಂಡರ್ ಸೇರಿ 8 ಮಂದಿ ಮೃತಪಟ್ಟಿದ್ದರು.

‘ಇರಾಕ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಕಳೆದ ವಾರ ಪ್ರತಿಭಟನಕಾರರು ಮುತ್ತಿಗೆ ಹಾಕಿದ್ದರು. ಇರಾಕ್‌ನಲ್ಲಿರುವ ಅಮೆರಿಕನ್ನರ ಮೇಲೆ ದಾಳಿ ನಡೆಸಲು ಸುಲೇಮಾನಿ ಸಂಚು ರೂಪಿಸಿದ್ದ. ಹೀಗಾಗಿ ದಾಳಿ ನಡೆಸಿದ್ದೇವೆ’ ಎಂದು ಅಮೆರಿಕ ಹೇಳಿದೆ.


ಸುಲೇಮಾನಿ ಹತ್ಯೆಯನ್ನು ಖಂಡಿಸಿ ಇರಾನ್‌ ಜನರು ಟೆಹ್ರಾನ್‌ನಲ್ಲಿ ಅಮೆರಿಕದ ಧ್ವಜವನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು –ಎಎಫ್‌ಪಿ ಚಿತ್ರ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು