ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಆತಂಕದ ಪರಿಸ್ಥಿತಿ: ಜಗತ್ತಿನಾದ್ಯಂತ 6 ಲಕ್ಷಕ್ಕೂ ಹೆಚ್ಚು ಸೋಂಕಿತರು

Last Updated 28 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಬರ್ಲಿನ್, ವಾಷಿಂಗ್ಟನ್‌, ಲಂಡನ್‌ (ಎಪಿ, ಪಿಟಿಐ): ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕು ದೃಢಪಟ್ಟ ಪ್ರಕರಣಗಳು ಶನಿವಾರ 6 ಲಕ್ಷ ದಾಟಿದೆ. ಯುರೋಪ್ ಹಾಗೂ ಅಮೆರಿಕದಲ್ಲಿ ಸೋಂಕಿನ ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.

ಕೋವಿಡ್‌ನಿಂದ ತತ್ತರಿಸುವ ಇಟಲಿಯಲ್ಲಿ ಸಾವಿನ ಸಂಖ್ಯೆ ಶನಿವಾರ 10,023ಕ್ಕೆ ತಲುಪಿದೆ. ಇಲ್ಲಿ ಶನಿವಾರ ಒಂದೇ ದಿನ 889 ಜನರು ಈ ಮಹಾಮಾರಿಗೆ ಬಲಿಯಾಗಿದ್ದು, ಆತಂಕವನ್ನೂ ಮತ್ತಷ್ಟೂ ಹೆಚ್ಚಿಸಿದೆ.

ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು, ಈವರೆಗೆ 1 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಇಲ್ಲಿ ವರದಿಯಾಗಿದೆ. ಮೃತರ ಸಂಖ್ಯೆ 1,800 ದಾಟಿದ್ದು, ದೇಶದಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ, ಅಮೆರಿಕ ಸರ್ಕಾರ, ಕ್ಷಿಪ್ರ ಸಿದ್ಧತಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ.

ಬ್ರಿಟನ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 1,019ಕ್ಕೆ ಏರಿದ್ದು, 17 ಸಾವಿರ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಸ್ಪೇನ್‌ನಲ್ಲಿ ಶುಕ್ರವಾರ ಮತ್ತು ಶನಿವಾರ 832 ಮಂದಿ ಮೃತಪಟ್ಟಿದ್ದು, ಈವರೆಗೆ ಸತ್ತವರ ಸಂಖ್ಯೆ 5,812ಕ್ಕೆ ಏರಿಕೆಯಾಗಿದೆ. ಇಟಲಿಯ ನಂತರ ಅತಿ ಹೆಚ್ಚಿನ ಸಾವು ಕಂಡಿರುವ ದೇಶ ಸ್ಪೇನ್‌.ಸೋಂಕಿತರ ಸಂಖ್ಯೆಯೂ 72,248ಕ್ಕೆ ಏರಿಕೆಯಾಗಿರುವುದು ಆತಂಕ ಉಂಟುಮಾಡಿದೆ.

ದಿನವೊಂದಕ್ಕೆ ಎಂಟು ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜಧಾನಿಮ್ಯಾಡ್ರಿಡ್‌ನಲ್ಲಿ ಅಪಾರ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ, ಈ ನಗರದಲ್ಲೇ 2,757 ಮಂದಿ ಮೃತಪಟ್ಟಿದ್ದು, 21,520 ಮಂದಿಗೆ ಸೋಂಕು ತಗುಲಿದೆ.

ಆಸ್ಪತ್ರೆಗಳಲ್ಲಿ ಸ್ಥಳಾವಕಾಶವಿಲ್ಲ. ಶವಾಗಾರಗಳು ತುಂಬಿ ಹೋಗಿವೆ. ಹಾಗಾಗಿ ವಿಮಾನ ನಿಲ್ದಾಣ ಬಳಿ ಇರುವ ಬಳಕೆಯಾಗದ ಸಾರ್ವಜನಿಕ ಕಟ್ಟಡಗಳನ್ನು ತಾತ್ಕಾಲಿಕವಾಗಿ ಶವಾಗಾರವನ್ನಾಗಿ ಮಾಡಲು ಸ್ಥಳೀಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಶವವನ್ನು ಸಾಗಿಸಲು ಸೇನೆಯ ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ಸ್ಪೇನ್‌ ಸರ್ಕಾರ ತಿಳಿಸಿದೆ.

ಅಮೆರಿಕ ನೆರವು: ಕೊರೊನಾ ಸೋಂಕು ಪರಿಣಾಮಗಳನ್ನು ಎದುರಿಸಲು ಭಾರತ ಸೇರಿ ವಿವಿಧ ರಾಷ್ಟ್ರಗಳಿಗೆ ಒಟ್ಟು ₹ 1302.8 ಕೋಟಿ ಆರ್ಥಿಕ ನೆರವನ್ನು ಅಮೆರಿಕ ಪ್ರಕಟಿಸಿದೆ.

ಈ ಪೈಕಿ ಭಾರತಕ್ಕೆ ಸುಮಾರು ₹ 21.71 ಕೋಟಿ ನೆರವು ಪ್ರಕಟಿಸಲಾಗಿದೆ. ಅಮೆರಿಕ ಕಳೆದ ಫೆಬ್ರುವರಿ ತಿಂಗಳಲ್ಲಿಯೂ ವಿವಿಧ ರಾಷ್ಟ್ರಗಳಿಗೆ ಒಟ್ಟು ₹ 748.76 ಕೋಟಿ ನೆರವು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT