ಭಾನುವಾರ, ಜುಲೈ 25, 2021
25 °C

ವಿಶ್ವದಲ್ಲಿ ನಿತ್ಯ 1 ಲಕ್ಷ ಕೋವಿಡ್ ದೃಢ: ಡಬ್ಲ್ಯುಎಚ್‌ಒ

ಎಪಿ Updated:

ಅಕ್ಷರ ಗಾತ್ರ : | |

Prajavani

ಜಿನೀವಾ/ಲಂಡನ್: ಜಗತ್ತಿನಾದ್ಯಂತ ಪ್ರತಿನಿತ್ಯ 1 ಲಕ್ಷ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಈ ಪೈಕಿ ಬಹುತೇಕ ಪ್ರಕರಣಗಳು ಅಮೆರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ವರದಿಯಾಗಿವೆ. ವೈರಾಣು ಪಸರಿಸುವಿಕೆಯನ್ನು ನಿಗ್ರಹಿಸಿರುವ ದೇಶಗಳು ಮತ್ತೆ ಅದು ಮರುಕಳಿಸುವ ಸಾಧ್ಯತೆಯ ಬಗ್ಗೆ ಸದಾ ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದೆ.

‘ಒಂದು ಲಕ್ಷ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಲು ಎರಡು ತಿಂಗಳು ಹಿಡಿಯಿತು. ಆದರೆ ಈಗ ನಿತ್ಯ ಒಂದು ಲಕ್ಷ ಪ್ರಕರಣ ದಾಖಲಾಗುತ್ತಿವೆ. ವರದಿಯಾಗುತ್ತಿರುವ ಪ್ರಕರಣಗಳ ಪೈಕಿ ಮುಕ್ಕಾಲು ಪ್ರಕರಣಗಳು 10 ದೇಶಗಳಲ್ಲಿ ಕಂಡುಬರುತ್ತಿವೆ’ ಎಂದು ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರಸ್ ಅಧಾನೊಮ್ ಗೆಬ್ರೆಯೆಸಸ್ ಅವರು ಹೇಳಿದ್ದಾರೆ.

ಕಳೆದ 50 ದಿನಗಳಿಂದ ಹೊಸ ಪ್ರಕರಣ ದಾಖಲಾಗದ ಚೀನಾದಲ್ಲಿ ಇತ್ತೀಚೆಗೆ ಸೋಂಕು ಕಾಣಿಸಿಕೊಂಡಿದೆ. ಹೊಸ ಪ್ರಕರಣಗಳ ಮೂಲದ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. 

‘ಹೊಸ ವೈರಾಣು ಮಾದರಿ ಕಳುಹಿಸಿ’: 

ಹೊಸದಾಗಿ ವರದಿಯಾಗಿರುವ ವೈರಾಣುವಿನ ಜೆನೆಟಿಕ್ ಸೀಕ್ವೆನ್ಸ್ ಮಾದರಿಯನ್ನು ಕಳುಹಿಸಿಕೊಡುವಂತೆ ಸಂಸ್ಥೆಯ ತುರ್ತು ಸೇವೆಗಳ ಮುಖ್ಯಸ್ಥ ಡಾ. ಮೈಕೆಲ್ ರಿಯಾನ್ ಅವರು ಚೀನಾಕ್ಕೆ ಮನವಿ ಮಾಡಿದ್ದಾರೆ. 

ಹೊಸ ಪ್ರಕರಣ ಪತ್ತೆಯಾಗಿರುವ ವಿಚಾರದಲ್ಲಿ ಚೀನಾಕ್ಕೆ ಸಹಕಾರ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧವಿದೆ ಎಂದು ರಿಯಾನ್ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ಅಧಿಕಾರಿಗಳು, ಹೊಸ ವೈರಸ್‌ನ ಮೂಲ ಯುರೋಪ್ ಎಂದು ತಿಳಿಸಿದ್ದಾರೆ. ಅದರ ಮಾದರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಜೊತೆ ಇನ್ನೂ ಹಂಚಿಕೊಂಡಿಲ್ಲ.  

ಕಳೆದ ವರ್ಷ ಚೀನಾದ ವುಹಾನ್‌ನಲ್ಲಿ ಕೊರೊನಾ ಮೊದಲ ಪ್ರಕರಣ ವರದಿಯಾಗಿತ್ತು. ವೈರಾಣು ಮಾದರಿಗಳನ್ನು ಡಬ್ಲ್ಯುಎಚ್‌ಒ ಜತೆ ಹಂಚಿಕೊಳ್ಳಲು ಚೀನಾ ವಿಳಂಬ ಮಾಡುತ್ತಿದೆ ಎಂಬ ವರದಿಗಳು ಪ್ರಕಟವಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು