ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ದೇಶಗಳಿಗೆ ಡಬ್ಲ್ಯುಎಚ್‌ಒ ಎಚ್ಚರಿಕೆ

ಕೋವಿಡ್–19: ಪ್ರಸರಣ ತಡೆಯಲು ಸಮರ್ಥ ವೈದ್ಯಕೀಯ ಸೌಲಭ್ಯ ಕೊರತೆ
Last Updated 22 ಫೆಬ್ರುವರಿ 2020, 22:58 IST
ಅಕ್ಷರ ಗಾತ್ರ

ಬೀಜಿಂಗ್‌/ಅಡೀಸ್ ಅಬಾಬಾ (ಇಥಿಯೋಪಿಯಾ, ಎಪಿ, ಎಎಫ್‌ಪಿ): ಮಾರಣಾಂತಿಕ ಕೋವಿಡ್‌–19 ಸೋಂಕು ಹರಡುವುದನ್ನು ತಡೆಯಲು, ಸೋಂಕಿತರಿಗೆ ಚಿಕಿತ್ಸೆ ನೀಡಲು ಆಫ್ರಿಕಾದ ದೇಶಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು ಇಲ್ಲ. ಹೀಗಾಗಿ ಆಫ್ರಿಕಾ ಖಂಡದ ರಾಷ್ಟ್ರಗಳು ಈ ಸೋಂಕು ಕುರಿತಂತೆ ಎಚ್ಚರಿಕೆಯಿಂದ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ಎಚ್ಚರಿಸಿದೆ.

ಇಥಿಯೋಪಿಯಾದ ಅಡೀಸ್ ಅಬಾಬಾದಲ್ಲಿನ ಆಫ್ರಿಕಾ ದೇಶಗಳ ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ‘ಉಸಿರಾಟದಲ್ಲಿ ತೊಂದರೆ, ಆಘಾತ ಮತ್ತು ಬಹು ಅಂಗಾಂಗ ವೈಫಲ್ಯದಂತಹ ತೊಂದರೆಗೆ ಚಿಕಿತ್ಸೆ ನೀಡುವಷ್ಟು ವೈದ್ಯಕೀಯ ಸೌಕರ್ಯ ಈ ದೇಶಗಳಲ್ಲಿ ಇಲ್ಲ’ ಎಂದು ಹೇಳಿದ್ದಾರೆ.

ವಿಶ್ವದಲ್ಲಿ 77 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್–19 ಸೋಂಕಿ ಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.

ಫೆ. 22ರವರೆಗೆ ಬೀಜಿಂಗ್‌ನ ಆರೋಗ್ಯ ಪ್ರಾಧಿಕಾರವು ಬಿಡುಗಡೆ ಮಾಡಿದ ಅಂಕಿ–ಅಂಶಗಳಲ್ಲಿ ಚೀನಾ ದಲ್ಲೇ 76,288 ಮಂದಿ ಸೋಂಕಿ ಗೀಡಾಗಿದ್ದಾರೆ. ಈ ಪೈಕಿ 2,345 ಮಂದಿ ಮೃತಪಟ್ಟಿದ್ದು, ಇವರಲ್ಲಿ ಬಹುತೇಕರು ಹುಬೆ ಪ್ರಾಂತ್ಯಕ್ಕೆ ಸೇರಿದವರು.

ಇರಾನ್‌: 5 ಮಂದಿ ಬಲಿ: ಇರಾನ್‌ನಲ್ಲಿ ಹೊಸದಾಗಿ 10 ಕೋವಿಡ್–19 ಪ್ರಕರ ಣಗಳು ದಾಖಲಾಗಿದ್ದು, 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ದುಬೈ: ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ದಲ್ಲಿ ಸೋಂಕಿಗೀಡಾದವರ ಸಂಖ್ಯೆ 11ಕ್ಕೆ ಏರಿದೆ.

ಸೋಂಕಿತರ ಜತೆಗೆ 100 ಪ್ರಯಾಣಿಕರು
ಟೋಕಿಯೊ (ಎಎಫ್‌ಪಿ): ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಸೋಂಕಿತರ ಜತೆ ನಿಕಟ ಸಂಪರ್ಕದಲ್ಲಿದ್ದ ಸುಮಾರು 100 ಪ್ರಯಾಣಿಕರು ಶನಿವಾರ ಹಡಗಿನಿಂದ ಇಳಿದಿದ್ದಾರೆ ಎಂದು ಟೋಕಿಯೊದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಈ ನಡುವೆ ಜಪಾನಿನಲ್ಲಿ ಹೊಸದಾಗಿ 105 ಮಂದಿಗೆ ಈ ಮಾರಕ ಸೋಂಕು ತಗುಲಿದೆ.

ದ. ಕೊರಿಯಾ: ಸೋಂಕಿತರ ಸಂಖ್ಯೆ433ಕ್ಕೆ ಏರಿಕೆ, ಇಟಲಿಯಲ್ಲಿ ಇಬ್ಬರ ಸಾವು

ಸಿಯೋಲ್ (ಎಪಿ): ದಕ್ಷಿಣ ಕೊರಿಯಾದಲ್ಲಿ ಸೋಂಕಿತರ ಸಂಖ್ಯೆ ನಾಲ್ಕು ದಿನಗಳಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದ್ದು, ಸೋಂಕಿಗೀಡಾದವರ ಸಂಖ್ಯೆ 433ಕ್ಕೆ ಏರಿದೆ.ಸೋಂಕಿತರಲ್ಲಿ ಇಬ್ಬರು ಸಾವನ್ನಪ್ಪಿದ್ದು, 19 ಮಂದಿಯ ಸ್ಥಿತಿ ಗಂಭೀರವಾಗಿದೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನುವ ಆತಂಕ ಉಂಟಾಗಿದೆ.

ರೋಮ್ ( ಇಟಲಿ, ಎಎಫ್‌ಪಿ): ಇಟಲಿಯಲ್ಲಿ ಕೋವಿಡ್–19ಕ್ಕೆ ಇದುವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಸಿಂಗಪುರ ಪ್ರಯಾಣ ಕೈಬಿಡಲು ಸಲಹೆ
ನವದೆಹಲಿ(ಪಿಟಿಐ):
ಕೊರೊನಾ ವೈರಸ್‌ ಸೋಂಕು (ಕೋವಿಡ್–19) ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಂಗಪುರಕ್ಕೆ ಪ್ರಯಾಣ ಕೈಗೊಳ್ಳದಂತೆ ಕೇಂದ್ರ ಸರ್ಕಾರ ಶನಿವಾರ ನಾಗರಿಕರಿಗೆ ಸಲಹೆ ನೀಡಿದೆ.

ಕಠ್ಮಂಡು, ಇಂಡೊನೇಷ್ಯಾ, ವಿಯೆಟ್ನಾಂ ಮತ್ತು ಮಲೇಷ್ಯಾದಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನೂ ಸೋಮವಾರದಿಂದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಸದ್ಯ ಚೀನಾ, ಹಾಂಗ್‌ಕಾಂಗ್‌, ಥಾಯ್ಲೆಂಡ್‌, ದಕ್ಷಿಣ ಕೊರಿಯಾ, ಸಿಂಗಪುರ ಮತ್ತು ಜಪಾನ್‌ನಿಂದ ಬರುವ ಪ್ರಯಾಣಿಕರನ್ನು ದೇಶದ 21 ವಿಮಾನನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದುವರೆಗೆ 21,805 ಮಂದಿ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ವಿಮಾನದ ಮೂಲಕ ಬಂದಿರುವ 3,97,152 ಮಂದಿಯನ್ನು ಹಾಗೂ ಬಂದರುಗಳಲ್ಲಿ 9,695 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ವುಹಾನ್‌ಗೆ ಡಬ್ಲ್ಯುಎಚ್‌ಒ ತಂಡ ಭೇಟಿ
ಕೋವಿಡ್–19 ಪೀಡಿತ ಚೀನಾದ ವುಹಾನ್‌ ನಗರಕ್ಕೆ ವಿಶ್ವ ಆರೋಗ್ಯಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞರ ತಂಡ ಶನಿವಾರ ಭೇಟಿ ನೀಡಿದೆ. ಸೀಫುಡ್‌ ಮಾರುಕಟ್ಟೆಯಿಂದ ಈ ವೈರಸ್ ಹರಡಿದೆ ಎಂಬ ವರದಿಯ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಲಿದೆ ಎಂದು ಚೀನಾದ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಸಿಗದ ಅನುಮತಿ: ಸ್ಥಳಾಂತರ ವಿಳಂಬ
ಬೀಜಿಂಗ್:
ಹುಬೆ ಪ್ರಾಂತ್ಯದಲ್ಲಿ ಸಿಲುಕಿಕೊಂಡಿರುವ ಭಾರತದ 100 ಮಂದಿಯನ್ನು ಸ್ಥಳಾಂತರಿಸಲು ವಾಯುಪಡೆಯ ವಿಶೇಷ ವಿಮಾನಕ್ಕೆ ಚೀನಾ ಸರ್ಕಾರ ಅನುಮತಿ ನೀಡದ ಕಾರಣ ಸ್ಥಳಾಂತರ ಕಾರ್ಯ ವಿಳಂಬವಾಗುತ್ತಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT