ಶನಿವಾರ, ಜೂನ್ 6, 2020
27 °C

ವಿವಿಧೆಡೆ ಲಾಕ್‌ಡೌನ್ ಸಡಿಲಿಕೆ: ಡಬ್ಲ್ಯುಎಚ್‌ಒ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾವೈರಸ್ ಮತ್ತು ಕೋವಿಡ್–19 ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ವಿಶ್ವದ ಬಹುತೇಕ ದೇಶಗಳು ಆಂತರಿಕ ದಿಗ್ಬಂಧನ/ಲಾಕ್‌ಡೌನ್ ಹೇರಿಕೊಂಡಿವೆ. ಆದರೆ, ಎಲ್ಲೆಡೆ ಲಾಕ್‌ಡೌನ್ ಏಕರೂಪದಲ್ಲಿ ಇಲ್ಲ. ಕೊರೊನಾ ಹಾವಳಿಗೆ ತತ್ತರಿಸಿದ್ದ ದೇಶಗಳಲ್ಲೂ, ಸೋಂಕಿತರ ಸಂಖ್ಯೆಯ ಏರಿಕೆ ಗತಿಯಲ್ಲಿ ಸ್ಥಿರತೆ ಕಾಣುತ್ತಿದೆ. ಹೀಗಾಗಿ ಬೆನ್ನಲ್ಲೇ ಕೆಲವು ದೇಶಗಳು ಲಾಕ್‌ಡೌನ್‌ ಅನ್ನು ಸಡಿಲಿಸುತ್ತಿವೆ. ಕೆಲವು ದೇಶಗಳು ಲಾಕ್‌ಡೌನ್ ಅನ್ನು ವಿಸ್ತರಿಸುತ್ತಿವೆ. ಇದರ ಬೆನ್ನಲ್ಲೇ, ‘ಲಾಕ್‌ಡೌನ್ ಹಿಂಪಡೆದರೆ ಸೋಂಕುಹರಡುವಿಕೆ ಸ್ಫೋಟಗೊಳ್ಳುವ ಅಪಾಯವಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಸ್ಪೇನ್‌ ಮತ್ತು ಇಟಲಿಯಲ್ಲಿ ಸಡಿಲಿಕೆ

ಸ್ಪೇನ್‌ನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯ ಏರಿಕೆ ಪ್ರಮಾಣದಲ್ಲಿ ಸ್ಥಿರತೆ ಕಂಡು ಬಂದಿದೆ. ಅಲ್ಲದೆ ಕೋವಿಡ್‌ನಿಂದ ಪ್ರತಿದಿನ ಮೃತಪಡುವವರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಹೀಗಾಗಿ ಲಾಕ್‌ಡೌನ್‌ನಲ್ಲಿ ಕೆಲವಾರು ಸಡಿಲಿಕೆಗಳನ್ನು ಸ್ಪೇನ್ ಸರ್ಕಾರ ಘೋಷಿಸಿದೆ. ನಿರ್ಮಾಣ ಕಾಮಗಾರಿ ಮತ್ತು ಕೆಲವಾರು ಆಯ್ದ ಕೈಗಾರಿಕೆಗಳ ಕಾರ್ಯಾಚರಣೆಯನ್ನು ಸೋಮವಾರದಿಂದ ಆರಂಭಿಸಲು ಅನುಮತಿ ನೀಡಿದೆ. ಆದರೆ, ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.

ಇಟಲಿಯಲ್ಲೂ ಸೋಂಕಿನ ಹರಡುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಇಟಲಿ ಸರ್ಕಾರವು ಲಾಕ್‌ಡೌನ್‌ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸಡಿಲಿಸಿದೆ. ಸಣ್ಣಪುಟ್ಟ ದಿನಸಿ ಅಂಗಡಿಗಳು ತೆರೆಯಲು ಅನುಮತಿ ನೀಡಿದೆ. ಆದರೆ, ಮೇ 3ರವರೆಗೆ ಲಾಕ್‌ಡೌನ್‌ ಅನ್ನು ವಿಸ್ತರಿಸಿದೆ.

ಇರಾನ್

ಮಧ್ಯಪ್ರಾಚ್ಯದಲ್ಲಿ ಕೋವಿಡ್‌ನ ತೀವ್ರ ಹೊಡೆತಕ್ಕೆ ಸಿಲುಕಿದ್ದ ಇರಾನ್‌ನಲ್ಲಿ ಲಾಕ್‌ಡೌನ್ ಬಳಿಕ ನಿರ್ಬಂಧಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಶುರುವಾಗಿದೆ. ರಾಜಧಾನಿ ಟೆಹರಾನ್ ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಶನಿವಾರದಿಂದ ಸರ್ಕಾರಿ ಕಚೇರಿಗಳು ಆರಂಭಗೊಂಡಿವೆ. ಮೂರನೇ ಎರಡರಷ್ಟು ಉದ್ಯೋಗಿಗಳು ಕಚೇರಿಗೆ ಹಾಜರಾಗಿದ್ದು, ಉಳಿದವವರು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ವ್ಯಾಪಾರ ಕೇಂದ್ರಗಳ ಪುನರಾರಂಭಕ್ಕೂ ಅನುಮತಿ ನೀಡಲಾಗಿದೆ. ಟೆಹರಾನ್‌ನಲ್ಲಿ ಮುಂದಿನ ವಾರದಿಂದ ಅನುಮತಿ ದೊರೆಯಲಿದೆ. 

ದಕ್ಷಿಣ ಆಫ್ರಿಕಾ

ಮಾರ್ಚ್ 26ರಿಂದ ಇಲ್ಲಿ 21 ದಿನಗಳ ಲಾಕ್‌ಡೌನ್ ಜಾರಿಯಲ್ಲಿದೆ. ಏಪ್ರಿಲ್ ಕೊನೆಯವರೆಗೂ ಇದನ್ನು ವಿಸ್ತರಿಸಲಾಗಿದೆ. ಅಗತ್ಯ ಸೇವೆಗಳು ಮಾತ್ರ ತೆರೆದಿದ್ದು, ಸೇನಾ ಯೋಧರು ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜನಜೀವನ, ಆರ್ಥಿಕತೆ ಮೇಲೆ ಲಾಕ್‌ಡೌನ್‌ ಉಂಟು ಮಾಡಲಿರುವ ಪರಿಣಾಮ ಅಪಾರ ಎಂದು ಅಧ್ಯಕ್ಷ ಸಿರಿಲ್ ರಾಮಪೊಸಾ ಹೇಳಿದ್ದಾರೆ. ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ, ಈ ಪಿಡುಗು ಇಡೀ ದೇಶವನ್ನೇ ಆಪೋಷನ ತೆಗೆದುಕೊಳ್ಳವ ಅಪಾಯವಿದೆ ಎಂದು ಅವರು ಹೇಳಿದ್ದಾರೆ. 

ಸೌದಿ ಅರೇಬಿಯಾ

ರಾಜಧಾನಿ, ಜಿದ್ದಾ, ಎರಡು ಪವಿತ್ರ ಸ್ಥಳಗಳನ್ನು ಮಾರ್ಚ್‌ 29ರಿಂದ ಅನ್ವಯವಾಗುವಂತೆ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ. ಮೆಕ್ಕಾ, ಮದೀನಾಗಳಲ್ಲಿ 24 ಗಂಟೆಗಳ ಕರ್ಫ್ಯೂ ಜಾರಿಯಲ್ಲಿದೆ. ಎಲ್ಲ ನಗರಗಳನ್ನು ಏಪ್ರಿಲ್ 6ರಿಂದ ಲಾಕ್‌ಡೌನ್ ಮಾಡಲಾಗಿದೆ. ಅಂತರರಾಷ್ಟ್ರೀಯ ವಿಮಾನ ಸಂಚಾರ, ಮಸೀದಿ, ಶಾಲೆ, ಹೋಟೆಲ್‌ಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಸಮಯ ನಿಗದಿಪಡಿಸಲಾಗಿದೆ. ಜುಲೈನಲ್ಲಿ ನಡೆಯುವ ವಾರ್ಷಿಕ ಹಜ್ ಯಾತ್ರೆಯ ಸಿದ್ಧತೆಯನ್ನು ವಿಳಂಬ ಮಾಡುವಂತೆ ಹಜ್ ಮತ್ತು ಉಮ್ರಾ ಸಚಿವರು ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.  

ಆಸ್ಟ್ರೇಲಿಯಾ

ಮಾರ್ಚ್ 23ರಂದು ಘೋಷಿಸಿದ್ದ ದಿಗ್ಬಂಧವನ್ನು ಮಾರ್ಚ್ 31ರಂದು ಇನ್ನಷ್ಟು ಕಠಿಣಗೊಳಿಸಲಾಯಿತು. ಕಡಲತೀರಗಳನ್ನು ಬಂದ್ ಮಾಡಲಾಗಿದೆ. ಖಚಿತ ಉದ್ದೇಶವಿಲ್ಲದೆ ಮನೆಯಿಂದ ಹೊರಬರುವವರ ಮೇಲೂ ಮೊಕದ್ದಮೆ ದಾಖಲಿಸಲಾಗುತ್ತಿದೆ. ಮದುವೆಗೆ 5 ಜನ, ಅಂತ್ಯಸಂಸ್ಕಾರಕ್ಕೆ 10 ಜನರ ಹಾಜರಾತಿ ನಿಗದಿಪಡಿಸಲಾಗಿದೆ. ಬರುವ ದಿನಗಳಲ್ಲಿ,  ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡು ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. 

ಅಮೆರಿಕದಲ್ಲಿಲ್ಲ ಏಕರೂಪದ ಲಾಕ್‌ಡೌನ್

ಅಮೆರಿಕದಲ್ಲಿ ಕೊರೊನಾ ಸೋಂಕು ಸುಮಾರು 5 ಲಕ್ಷ ಜನರಿಗೆ ತಗುಲಿದೆ. ಅಮೆರಿಕದಾದ್ಯಂತ ಕೋವಿಡ್–19ಗೆ 18 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದರೆ, ನ್ಯೂಯಾರ್ಕ್ ನಗರವೊಂದರಲ್ಲೇ 5,800 ಜನ ಬಲಿಯಾಗಿದ್ದಾರೆ. ಹೀಗಿದ್ದೂ ಅಮೆರಿಕದ 22 ರಾಜ್ಯಗಳಲ್ಲಿ ಮಾತ್ರ ಲಾಕ್‌ಡೌನ್ ಇದೆ. 28 ರಾಜ್ಯಗಳಲ್ಲಿ ಸಾಮಾಜಿಕ ಅಂತರವನ್ನು ಮಾತ್ರ ಜಾರಿ ಮಾಡಲಾಗಿದೆ. ಇದೂ ಸಂಪೂರ್ಣ ಲಾಕ್‌ಡೌನ್ ಅಲ್ಲ. ಅಲ್ಲದೆ, ರಾಜ್ಯದಿಂದ ರಾಜ್ಯಕ್ಕೆ ಲಾಕ್‌ಡೌನ್ ಸ್ವರೂಪದಲ್ಲಿ ವ್ಯತ್ಯಾಸವಿದೆ. ನ್ಯೂಯಾರ್ಕ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ಇದ್ದರೂ, ಅತ್ಯಗತ್ಯ ವಸ್ತುಗಳ ವಹಿವಾಟು ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಜಾರ್ಜಿಯಾ ರಾಜ್ಯದಲ್ಲಿ ಸಾಮಾಜಿಕ ಅಂತರ ಘೋಷಿಸಲಾಗಿದೆ. ಬಾರ್–ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಹತ್ತು ಜನಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಇತರ ರಾಜ್ಯಗಳಲ್ಲೂ ಇಂಥಹದ್ದೇ ಲಾಕ್‌ಡೌನ್ ಜಾರಿಯಲ್ಲಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಜಿಮ್‌ಗಳನ್ನು ಮುಚ್ಚಲಾಗಿದೆ. ನಾಗರಿಕರು ದಿನಕ್ಕೆ ಒಂದು ಬಾರಿ ವಾಕಿಂಗ್ ಹೋಗಲು ಅವಕಾಶ ನೀಡಲಾಗಿದೆ. ಆದರೆ, ಕೆಲವೆಡೆ ನಾಗರಿಕರು ಸಂಪೂರ್ಣವಾಗಿ ಮನೆಯಲ್ಲೇ ಇರಲು ಸೂಚಿಸಲಾಗಿದೆ

ಸ್ಪೇನ್‌ ಮತ್ತು ಇಟಲಿಯಲ್ಲಿ ಸಡಿಲಿಕೆ

ಸ್ಪೇನ್‌ನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯ ಏರಿಕೆ ಪ್ರಮಾಣದಲ್ಲಿ ಸ್ಥಿರತೆ ಬಂದಿದೆ. ಅಲ್ಲದೆ ಕೋವಿಡ್–19ನಿಂದ ಪ್ರತಿದಿನ ಮೃತಪಡುವವರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಹೀಗಾಗಿ ಲಾಕ್‌ಡೌನ್‌ನಲ್ಲಿ ಕೆಲವಾರು ಸಡಿಲಿಕೆಗಳನ್ನು ಸ್ಪೇನ್ ಸರ್ಕಾರ ಘೋಷಿಸಿದೆ. ನಿರ್ಮಾಣ ಕಾಮಗಾರಿ ಮತ್ತು ಕೆಲವಾರು ಆಯ್ದ ಕೈಗಾರಿಕೆಗಳ ಕಾರ್ಯಾಚರಣೆಯನ್ನು ಸೋಮವಾರದಿಂದ ಆರಂಭಿಸಲು ಅನುಮತಿ ನೀಡಿದೆ. ಆದರೆ, ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದೆ.

ಇಟಲಿಯಲ್ಲೂ ಸೋಂಕಿನ ಹರಡುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಇಟಲಿ ಸರ್ಕಾರವು ಲಾಕ್‌ಡೌನ್‌ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸಡಿಲಿಸಿದೆ. ಸಣ್ಣಪುಟ್ಟ ದಿನಸಿ ಅಂಗಡಿಗಳು ತೆರೆಯಲು ಅನುಮತಿ ನೀಡಿದೆ. ಆದರೆ, ಮೇ 3ರವರೆಗೆ ಲಾಕ್‌ಡೌನ್‌ ಅನ್ನು ವಿಸ್ತರಿಸಿದೆ.

* ಚೀನಾದ ವುಹಾನ್ ನಗರದಲ್ಲಿ 76 ದಿನಗಳ ಲಾಕ್‌ಡೌನ್ ಅನ್ನು ಈಚೆಗಷ್ಟೇ ತೆಗೆಯಲಾಗಿದೆ. ಆದರೆ, ನಗರದ ಕೆಲವು ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಸೋಂಕು ತಗುಲದೇ ಇರುವವರ ಓಡಾಡಲು ಡಿಜಿಟಲ್ ಪಾಸ್ ನೀಡಲಾಗಿದೆ. ಅವರು ಎಲ್ಲಿಯೇ ಓಡಾಡಿದರೂ, ಅದು ಸರ್ಕಾರದ ಗಮನಕ್ಕೆ ಬರಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಜನರು ಮನೆಯಿಂದ ಒಮ್ಮೆ ಮಾತ್ರ ಹೊರಗೆ ಬರಲು ಅವಕಾಶವಿದೆ. ದಿನಸಿ ಅಂಗಡಿಗಳು ತೆರೆಯಲು ಅವಕಾಶ ನೀಡಲಾಗಿದೆ

* ಲಾಕ್‌ಡೌನ್‌ ಅನ್ನು ಹಿಂಪಡೆಯುವುದು ಹೇಗೆ ಎಂಬುದರ ಬಗ್ಗೆ ಬ್ರಿಟನ್ ಚಿಂತನೆ ನಡೆಸಿದೆ. ಇದಕ್ಕಾಗಿ ಹಲವು ಸುತ್ತಿನ ಸಭೆಗಳನ್ನೂ ನಡೆಸಲಾಗಿದೆ

* ಟರ್ಕಿ ತನ್ನ ಹಲವು ನಗರಗಳಲ್ಲಿ ಕರ್ಫ್ಯೂ ವಿಧಿಸಿದೆ

* ಪೋರ್ಚುಗಲ್ ಲಾಕ್‌ಡೌನ್ ಅನ್ನು ಮೇ 1ರವರೆಗೆ ವಿಸ್ತರಿಸಿದೆ

* ಐರಿಷ್ ಲಾಕ್‌ಡೌನ್ ಅನ್ನು ಮೇ 2ರವರೆಗೆ ವಿಸ್ತರಿಸಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು