ಭಾನುವಾರ, ಸೆಪ್ಟೆಂಬರ್ 26, 2021
27 °C
ಅಮೆರಿಕ, ಪಾಕಿಸ್ತಾನ ಮತ್ತು ಚೀನಾದಲ್ಲಿ ಯೋಗ ದಿನಾಚರಣೆ

ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ: ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಯೋಗವು ಒಂದುಗೂಡಿಸುವ ಶಕ್ತಿಯಾಗಿದ್ದು, ಅದರ ಅಕ್ಷರಶಃ ಅರ್ಥಕ್ಕನುಗುಣವಾಗಿದೆ. ವಿಶ್ವದಾದ್ಯಂತ ಜನರು ತಮ್ಮ ರಾಷ್ಟ್ರೀಯತೆ ಮತ್ತು ಸಂಸ್ಕೃತಿಗಳನ್ನು ಮೀರಿ ಯೋಗದ ಪ್ರಯೋಜನಗಳನ್ನು ಗುರುತಿಸಿ, ತಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅಭಿಪ್ರಾಯಪಟ್ಟರು. 

ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಫ್ರೆಂಡ್ಸ್ ಆಫ್ ಯೋಗ ಮತ್ತು ಅಮೆರಿಕದಲ್ಲಿ ಯೋಗವನ್ನು ಬೆಂಬಲಿಸುವ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ 6ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವರ್ಚುವಲ್ ಯೋಗ ಅಧಿವೇಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ವಾಷಿಂಗ್ಟನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಆಯೋಜಿಸಿದ್ದ ವರ್ಚುವಲ್ ಯೋಗ ಅಧಿವೇಶನದಲ್ಲಿ ಹಾಲಿವುಡ್‌ನ ಹಲವು ನಟ–ನಟಿಯರು ಪಾಲ್ಗೊಂಡಿದ್ದರು.  ‘ಇಂದಿನ ಯೋಗ ಕಾರ್ಯಕ್ರಮ ಅದ್ಭುತವಾಗಿತ್ತು. ರಾಯಭಾರಿಗಳೇ...’ ಎಂದು ಅಮೆರಿಕದ ಜನಪ್ರಿಯ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್ ಟ್ವೀಟ್ ಮಾಡಿದ್ದಾರೆ. 

ಅಮೆರಿಕದಾದ್ಯಂತ ಜನರು ಫೇಸ್‌ಬುಕ್ ಮತ್ತು ಯೂಟ್ಯೂಬ್ ಸಾಮಾಜಿಕ ಜಾಲತಾಣಗಳ ಮೂಲಕ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

ಚೀನಾದಲ್ಲಿ ಸರಳವಾಗಿ ಯೋಗ ದಿನಾಚರಣೆ

ಬೀಜಿಂಗ್: ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಆವರಣದಲ್ಲಿ 6ನೇ ಅಂತರರಾಷ್ಟ್ರೀಯ ಯೋಗದಿನದ ಪ್ರಯುಕ್ತ ಯೋಗಾಭ್ಯಾಸ ಮಾಡಲಾಯಿತು. ಸದ್ಯ ಕೋವಿಡ್–19 ಸೋಂಕು ಭೀತಿ ಇರುವುದರಿಂದ ಸುರಕ್ಷತೆ ದೃಷ್ಟಿಯಿಂದ ಅಂತರ ನಿಯಮವನ್ನು ಅನುಸರಿಸಲಾಯಿತು.

‘ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗದಿನದ ಪ್ರಯುಕ್ತ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಶಿಷ್‌ ಬಹುಗುಣ ಅವರ ನೇತೃತ್ವದಲ್ಲಿ ಸರಳವಾಗಿ ಯೋಗ ದಿನ ಆಚರಿಸಲಾಯಿತು. ಈ ವೇಳೆ ಸುರಕ್ಷತೆಯ ದೃಷ್ಟಿಯಿಂದ ಅಂತರ ಕಾಯ್ದುಕೊಳ್ಳಲಾಗಿದೆ’ ಎಂದು ಭಾರತದ ರಾಯಭಾರಿ ವಿಕ್ರಮ್‌ ಮಿಸ್ರಿ ಟ್ವೀಟ್ ಮಾಡಿದ್ದಾರೆ.

ಬೀಜಿಂಗ್‌ನ ಜನಪ್ರಿಯ ‘ಯೋಗಿ–ಯೋಗ’ ಯೋಗ ಸಂಸ್ಥೆಯು ಚೀನಾದಾದ್ಯಂತ ಶಾಖೆಗಳನ್ನು ಹೊಂದಿದ್ದು, ಆನ್‌ಲೈನ್‌ನಲ್ಲಿ ಯೋಗ ಸಮ್ಮೇಳನವನ್ನು ನಡೆಸಿತು ಎಂದು ಸಂಸ್ಥೆಯ ಸಂಸ್ಥಾಪಕ ಮೋಹನ್ ಸಿಂಗ್ ಭಂಡಾರಿ ಹೇಳಿದ್ದಾರೆ. 

ಯೋಗದ ಜನಪ್ರಿಯತೆಯನ್ನು ಪರಿಗಣಿಸಿ, ಚೀನಾವು ಭಾರತದ ಜಂಟಿ ಸಹಯೋಗದಲ್ಲಿ ನೈರುತ್ಯ ಚೀನಾದ ಯುನ್ನಾನ್‌ ಪ್ರಾಂತ್ಯದ ರಾಜಧಾನಿ ಕುನ್ಮಿಂಗ್‌ನಲ್ಲಿ ಯುನ್ನಾನ್ ಮಿನ್ಜು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಯೋಗ ಕಾಲೇಜೊಂದನ್ನು ಸ್ಥಾಪಿಸಿದೆ. ಚೀನಾದ ಕೆಲವೆಡೆ ಸಂಘ–ಸಂಸ್ಥೆಗಳು ಯೋಗ ದಿನ ನಿಮಿತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. 

ಭಾರತ ಮತ್ತು ಚೀನಾದ ಸೇನೆಗಳ ನಡುವೆ ನಡೆದ ಬಡಿದಾಟದ ಕಾರಣ, ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮಗಳು ಕಡಿಮೆ ಸಂಖ್ಯೆಯಲ್ಲಿ ನಡೆದವು. 

ಪಾಕಿಸ್ತಾನದಲ್ಲಿ ಯೋಗ ದಿನಾಚರಣೆ:

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮೀಷನ್ ಕಚೇರಿಯ ಸದಸ್ಯರು ಭಾನುವಾರ ಯೋಗ ದಿನದ ನಿಮಿತ್ತ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿದರು. ‌‌‌‌

‘ಆರೋಗ್ಯಕರ ಮನಸು ಮತ್ತು ದೇಹವನ್ನು ಸಾಧಿಸಲು ಯೋಗ ಸಹಾಯ ಮಾಡುತ್ತದೆ’ ಎಂದು ಹೈಕಮಿಷನ್ ಕಚೇರಿ ಟ್ವೀಟ್ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು