ಸೋಮವಾರ, ಆಗಸ್ಟ್ 2, 2021
23 °C

ಕೋವಿಡ್-19 | ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕೋವಿಡ್‌ಗೆ ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಮಂಗಳವಾರ ಮೃತಪಟ್ಟಿದ್ದಾರೆ. ಈ ಸೋಂಕಿಗೆ ಪಾಲಿಕೆ ಅಧಿಕಾರಿಗಳು ಸಾವಿಗೀಡಾಗಿರುವುದು ಇದೇ ಮೊದಲು.

ಯಲಹಂಕ ಹಳೆಪಟ್ಟಣ ಉಪವಿಭಾಗದ ಕಂದಾಯ ಮೌಲ್ಯಮಾಪಕ ನಟರಾಜ್ (58) ಹಾಗೂ ಚಾಮರಾಜಪೇಟೆ ಉಪವಿಭಾಗದ ಕಂದಾಯ ಮೌಲ್ಯಮಾಪಕ ತಿಮ್ಮಯ್ಯ (54) ಮೃತರು.

ನಟರಾಜ್‌ ಅವರು ಕೋವಿಡ್‌ ಲಕ್ಷಣಗಳು ಕಂಡು ಬಂದಿದ್ದರಿಂದ ಜೂನ್‌ 27ರಂದು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ನಟರಾಜ್‌ ಅವರು ನಾಗೇನಹಳ್ಳಿ ನಾರಾಯಣಪುರದ ನಿವಾಸಿ. ಬಿಬಿಎಂಪಿಯಲ್ಲಿ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಂದಾಯ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

ಅವರ ಪುತ್ರಿ ವೈದ್ಯೆಯಾಗಿದ್ದು, ಮೊದಲು ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಅವರ ಪತ್ನಿಗೂ ಸೋಂಕು ಹರಡಿತ್ತು. ಪುತ್ರಿ ಹಾಗೂ ಪತ್ನಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮನೆಯವರಿಗೆ ಕೋವಿಡ್ ಸೋಂಕು ಕಂಡುಬಂದಿದ್ದರಿಂದ ನಟರಾಜ್‌ ಅವರು ಅವರು ಸುಮರು 25 ದಿನಗಳಿಂದ ಕಚೇರಿಗೆ ಹಾಜರಾಗಿರಲಿಲ್ಲ.


ತಿಮ್ಮಯ್ಯ

ತಿಮ್ಮಯ್ಯ ಅವರು ಶನಿವಾರದವರೆಗೂ ಕಚೇರಿಗೆ ಹೋಗಿದ್ದರು. ಮೂರು ದಿನಗಳಿಂದವರಿಗೆ ಸೋಂಕುನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ ಸೋಮವಾರವಷ್ಟೇ ಅವರು ದಾಖಲಾಗಿದ್ದರು.

ತಿಮ್ಮಯ್ಯ ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರು ಜಗಜೀವನರಾಂ ನಗರದಲ್ಲಿ ವಾಸವಿದ್ದರು ಎಂದು ಅವರ ಸಹೋದ್ಯೊಗಿಗಳು ತಿಳಿಸಿದ್ದಾರೆ.

ನಟರಾಜ್‌ ಹಾಗೂ ತಿಮ್ಮಯ್ಯ ಕುಟುಂಬಕ್ಕೆ ಕೋವಿಡ್‌ ವಿಮೆಯ ಮೊತ್ತವಾದ ₹ 30 ಲಕ್ಷವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ.ಅಮೃತರಾಜ್‌ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಘವು ಪತ್ರ ಬರೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು