ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧದ ಸಮರ ದಾರಿ ತಪ್ಪಿಸುವುದೇ ಕಾಂಗ್ರೆಸ್‌ ಉದ್ದೇಶ: ಅಶ್ವತ್ಥನಾರಾಯಣ

ಖರೀದಿಯಲ್ಲ ಅಕ್ರಮ ನಡೆದಿಲ್ಲ: ಅಂಕಿ–ಅಂಶ ನೀಡಿದ ಸರ್ಕಾರ
Last Updated 20 ಜುಲೈ 2020, 10:25 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ನಿರ್ವಹಣೆಗಾಗಿ ಆರೋಗ್ಯ ಇಲಾಖೆಯಿಂದ ₹290 ಕೋಟಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ₹33 ಕೋಟಿಯಷ್ಟು ವೈದ್ಯಕೀಯ ಉಪಕರಣಗಳನ್ನು ಮಾತ್ರ ಖರೀದಿಸಲಾಗಿದ್ದು, ವಿರೋಧ ಪಕ್ಷಗಳ ನಾಯಕರು ಹೇಳಿದಂತೆ ಸಾವಿರಾರು ಕೋಟಿ ಮೌಲ್ಯದ ಖರೀದಿ ಆಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಖರೀದಿಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದರು.

ಖರೀದಿಯಲ್ಲಿ ಒಂದು ರುಪಾಯಿಯಷ್ಟು ದುರ್ಬಳಕೆ ಆಗಿಲ್ಲ. ವಿರೋಧಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರ ಗಮನ ಬೇರೆಡೆ ಸೆಳೆದು, ಕೋವಿಡ್‌ ವಿರುದ್ಧದ ಹೋರಾಟವನ್ನು ವಿಫಲಗೊಳಿಸುವುದು ಅವರ ಏಕೈಕ ಉದ್ದೇಶವಾಗಿದೆ ಎಂದು ಅಶ್ವತ್ಥನಾರಾಯಣ ದೂರಿದರು.

ಕೋವಿಡ್‌ ಹೋರಾಟದಲ್ಲಿ ಸ್ಪಂದಿಸದೇ ಬೇಜವಾಬ್ದಾರಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಾ, ಕೋವಿಡ್‌ ಹೋರಾಟ ನಿಷ್ಕ್ರಿಯೆಗೊಳಿಸುವುದು ಕಾಂಗ್ರೆಸ್‌ ನಾಯಕರ ಹುನ್ನಾರವಾಗಿದೆ. ಇವರಿಗೆ ಕೋವಿಡ್‌ ಬಗ್ಗೆಯಾಗಲಿ, ಜನರ ಬಗ್ಗೆಯಾಗಲಿ ಕಾಳಜಿ ಇಲ್ಲ ಎಂದು ಅವರು ದೂರಿದರು.

ರಾಜ್ಯದಲ್ಲಿ ಮೊದಲ ಕೋವಿಡ್‌ ಪ್ರಕರಣ ವರಿಯಾದಾಗ,ಎನ್‌ 95 ಮಾಸ್ಕ್‌, ಪಿಪಿಇ ಕಿಟ್‌ಗಳು ಲಭ್ಯವಿರಲಿಲ್ಲ. ಹ್ಯಾಂಡ್‌ ಸ್ಯಾನಿಟೈಸರ್‌ ಕೂಡಾ ಸೀಮಿತವಾಗಿ ಲಭ್ಯವಾಗುತ್ತಿತ್ತು. ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಬಹುದು, ಅದಕ್ಕೆ ತಯಾರಾಗಿರಬೇಕು. ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಚೀನಾದಿಂದ ತರಿಸುವ ಸ್ಥಿತಿ ಇತ್ತು. ಆಗ ಇಡೀ ಜಗತ್ತಿಗೆ ಚೀನಾ ಮಾತ್ರ ಈ ಸಲಕರಣೆಗಳನ್ನು ಪೂರೈಕೆ ಮಾಡುತ್ತಿತ್ತು. ಚೀನಾ ರಾಯಭಾರಿ ಜತೆ ಮಾತನಾಡಿ ಪಿಪಿಇ ಕಿಟ್‌ಗಳ ಪೂರೈಕೆಗಾಗಿ ಮನವಿ ಮಾಡಿದ್ದೆವು ಎಂದರು.

ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೆಂಟಿಲೇಟರ್‌ಗಳು ₹ 4 ಲಕ್ಷದಿಂದ ₹50 ಲಕ್ಷದವರೆಗೆ ಬೆಲೆ ಇದೆ. ಪ್ರತಿಯೊಂದು ವೆಂಟಿಲೇಟರ್‌ಗಳ ನಿರ್ಧಿಷ್ಟತೆ(ಸ್ಪೆಸಿಫಿಕೇಷನ್‌) ಭಿನ್ನವಾಗಿರುತ್ತದೆ. ಅವುಗಳ ಕಾರ್ಯಕ್ಷಮತೆ ಮತ್ತು ಬಳಕೆಯೂ ಭಿನ್ನವಾಗಿರುತ್ತದೆ. ತಮಿಳುನಾಡಿನಲ್ಲಿ ಕಡಿಮೆ ವೆಚ್ಚಕ್ಕೆ ಸಿಗುತ್ತದೆ, ಇಲ್ಲಿ ಏಕೆ ಜಾಸ್ತಿ ಎಂದರೆ, ಅದು ಆಂಬುಲೆನ್ಸ್‌ನಲ್ಲಿ ರೋಗಿಯನ್ನು ಸಾಗಿಸಲು ಬಳಸುವ ವೆಂಟಿಲೇಟರ್‌ ಅದರ ಬಳಕೆ ಸೀಮಿತ. ಹಾಗಾಗಿ ಅದರ ಬೆಲೆ ಕಡಿಮೆ. ಐಸಿಯುನಲ್ಲಿ ಬಳಸುವ ವೆಂಟಿಲೇಟರ್‌ ಬೆಲೆ ಹೆಚ್ಚು, ಅದರ ಕಾರ್ಯ ಲಕ್ಷಣವೇ ಬೇರೆ. ಈ ತಾಂತ್ರಿಕ ವ್ಯತ್ಯಾಸಗಳು ಗೊತ್ತಿಲ್ಲದೇ ಆರೋಪ ಮಾಡುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

9.65 ಲಕ್ಷ ಪಿಪಿಇ ಕಿಟ್‌ ತರಿಸಲಾಗಿದ್ದು, ಇದಕ್ಕಾಗಿ ₹79.35 ಕೋಟಿ ವೆಚ್ಚವಾಗಿದೆ. ಸಿದ್ದರಾಮಯ್ಯ ₹150 ಕೋಟಿ ಎಂದು ಹೇಳಿದ್ದಾರೆ. ಅದು ಸುಳ್ಳು ಮಾಹಿತಿ. ಎನ್‌ 95 ಮಾಸ್ಕ್‌ಗಳ ಖರೀದಿಗೆ ಆಗಿರುವ ಮೊತ್ತ ₹11.51 ಕೋಟಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT