ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಸಂಸದ ಪ್ರತಾಪ ಸಿಂಹ ಎಲ್ಲಿದ್ಯಪ್ಪ: ಕಾಂಗ್ರೆಸ್‌ ವ್ಯಂಗ್ಯ

‘ಕೇವಲ ಬೆಂಕಿ ಹಚ್ಚಲು, ಶಾಂತಿ ಕದಡಲು ಕೊಡಗಿಗೆ ಆಗಮನ’: ಮಂಜುನಾಥ್‌ ಆರೋಪ
Last Updated 24 ಜುಲೈ 2020, 13:04 IST
ಅಕ್ಷರ ಗಾತ್ರ

ಮಡಿಕೇರಿ: ‘ಸಂಸದ ಪ್ರತಾಪ ಸಿಂಹ ಅವರು ಕೊಡಗು ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ‘ಸಂಸದ ಎಲ್ಲಿದ್ಯಪ್ಪ’ ಅನ್ನುವ ಕಾಲ ಬಂದಿದೆ’ ಎಂದು ಕಾಂಗ್ರೆಸ್‌ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ವ್ಯಂಗ್ಯವಾಡಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇವಲ ಬೆಂಕಿ ಹಚ್ಚಲು, ಶಾಂತಿ ಕದಡಲು ಬರುವ ಸಂಸದರು, ಕೊಡಗಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಕಿಡಿಕಾರಿದರು.

‘ಸಮಾಜದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ‘ಆರೋಗ್ಯ ಅಭಯ ಹಸ್ತ’ ಯೋಜನೆಯನ್ನು ಜಿಲ್ಲೆಯ 104 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ವಾರದೊಳಗೆ ಆರಂಭಿಸಲಾಗುವುದು’ ಎಂದು ಮಂಜುನಾಥ್ ಕುಮಾರ್ ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರ ₹ 4 ಸಾವಿರ ಕೋಟಿಯನ್ನು ಕೋವಿಡ್ ಪರಿಸ್ಥಿತಿಗಾಗಿ ಖರ್ಚು ಮಾಡಿದ್ದು ₹ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ನಮ್ಮ ನಾಯಕರು ಬಹಿರಂಗಗೊಳಿಸಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಬಿಜೆಪಿ ಸರ್ಕಾರ ದುಡ್ಡು ಹೊಡೆದಿದೆ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಇದು ಕೈಗನ್ನಡಿ‘ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪ್ತಿಸುತ್ತಿದೆ. ರಾಜ್ಯ, ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿದ್ದು ಅವೈಜ್ಞಾನಿಕವಾಗಿ ಸೀಲ್‌ಡೌನ್ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ’ ಎಂದು ಆರೋಪಿಸಿದರು.

‘ಕೊರೊನಾ ವೈರಸ್‌ಗೆ ಔಷಧಿ ಇಲ್ಲ. ಆದರೆ, 5 ದಿನದೊಳಗೆ ಸೋಂಕಿತನಿಗೆ ಸೂಕ್ತ ಚಿಕಿತ್ಸೆ ನೀಡದೆ ಬಿಡುಗಡೆಗೊಳಿಸುತ್ತಿರುವುದು ಸರಿಯಲ್ಲ. ನಾಮಕಾವಸ್ಥೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಪರೀಕ್ಷೆ ಕೂಡ ನಡೆಸದೆ, ನೆಗಟಿವ್ ವರದಿ ಬಾರದೆ ಬಿಡುಗಡೆಗೊಳಿಸುತ್ತಿರುವ ಕ್ರಮ ಸರಿಯಲ್ಲ. ಸೋಂಕಿತ ವಾಸಿಸುತ್ತಿದ್ದ ಮನೆಗಳ ಸುತ್ತಮುತ್ತ ಸೀಲ್‌ಡೌನ್ ಮಾಡುತ್ತಿರುವ ಕ್ರಮ ಕೂಡ ಅವೈಜ್ಞಾನಿಕ. ಪೂರ್ವ ತಯಾರಿ ಇಲ್ಲದೆ, ಅಗತ್ಯ ಸಾಮಗ್ರಿ ನೀಡದೆ ಸೀಲ್‌ಡೌನ್ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿದರು.

ಕೆಪಿಸಿಸಿ ವೀಕ್ಷಕ ವೆಂಕಪ್ಪ ಗೌಡ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಪ್ರಮಾಣ ಏರಿಕೆಯಾಗಿದೆ. ಆದರೆ, ಸರ್ಕಾರ ಪರಿಸ್ಥಿತಿ ಎದುರಿಸುವುದನ್ನು ಬಿಟ್ಟು ಅವ್ಯವಹಾರದಲ್ಲಿ ತೊಡಗಿದೆ ಎಂದು ದೂರಿದರು.

‘ಅವೈಜ್ಞಾನಿಕ ಲಾಕ್‌ಡೌನ್ ಮೂಲಕ ಕೊರೊನಾ ವ್ಯಾಪಿಸಲು ಕೇಂದ್ರ ಸರ್ಕಾರ ಕಾರಣವಾಗಿದೆ. ಜನರ ಆರೋಗ್ಯಕ್ಕಿಂತ ಆರ್ಥಿಕ ಪರಿಸ್ಥಿತಿ ಸರ್ಕಾರಕ್ಕೆ ಮುಖ್ಯವಾಗಿರುವುದು ವಿಷಾದನೀಯ. ಪ್ರತಿ ಬೂತ್‌ಮಟ್ಟದಲ್ಲಿ ಸರ್ಕಾರ ಟಾಸ್ಕ್‌ಫೋರ್ಸ್ ರಚಿಸುವ ಕಾರ್ಯಕ್ರಮ ರೂಪಿಸಿದರು ಅನುಷ್ಠಾನಕ್ಕೆ ಬಂದಿಲ್ಲ. ಗ್ರಾಮೀಣ ಪ್ರದೇಶದ ಆರೋಗ್ಯವನ್ನು ಸರ್ಕಾರ ಮರೆತಿದೆ. ಬಿಜೆಪಿ ಸಚಿವರು ಬೆಂಗಳೂರು ಬಿಟ್ಟ ಹೋಗಿ ಎಂದು ಹೇಳುತ್ತಿರುವುದು ಆಡಳಿತ ವೈಫಲ್ಯವನ್ನು ಪ್ರದರ್ಶಿಸುತ್ತಿದೆ. ಒಂದೇ ಸಂಸ್ಥೆಯ ಮಾಸ್ಕ್, ಸ್ಯಾನಿಟೈಜರ್‌ ಅನ್ನು ಎರಡು ದಿನದ ಅಂತರದಲ್ಲಿ ಖರೀದಿಸಿದ ರಾಜ್ಯ ಸರ್ಕಾರ ದುಪ್ಪಟ್ಟು ಬಿಲ್ ಹಾಕಿದೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಗರಾಧ್ಯಕ್ಷ ಅಬ್ದುಲ್ ರಜಾಕ್, ಸಾಮಾಜಿಕ ಜಾಲತಾಣ ಘಟಕದ ಸಂಚಾಲಕ ಸೂರಾಜ್, ಪ್ರಮುಖ ತೆನ್ನೀರ ಮೈನಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT