ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ಲಾಕ್‌ಡೌನ್ | ಬಿಎಸ್‌ವೈ ಬಿಗಿ ನಿಲುವಿಗೆ ಕಾರಣವೇನು?

Last Updated 17 ಜುಲೈ 2020, 21:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮುಂದುವರಿಸಬೇಕು ಎಂಬ ಬಿಬಿಎಂಪಿ ಮೇಯರ್‌ ಮತ್ತು ಆಯುಕ್ತರ ಒತ್ತಡಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಣಿದಿಲ್ಲ.

ಇವರಿಬ್ಬರಲ್ಲದೇ ಕೆಲವು ಶಾಸಕರು, ಪಾಲಿಕೆಯ ಕೆಲವು ಸದಸ್ಯರೂ ಲಾಕ್‌ಡೌನ್‌ ಮುಂದುವರಿಸಲು ಒತ್ತಡ ಹೇರಿದ್ದರು. ಆದರೆ, ರಾಜ್ಯದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿರುವುದರಿಂದ ಲಾಕ್‌ಡೌನ್‌ ಮುಂದುವರಿಸಿದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡುವುದು ಕಷ್ಟವಾಗಬಹುದು. ಸರ್ಕಾರದ ಇತರ ಖರ್ಚು– ವೆಚ್ಚಗಳಿಗೂ ಕಷ್ಟವಾಗಬಹುದು ಎಂಬುವುದು ಅವರ ಆತಂಕಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.

ರಾಜ್ಯದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಹಣಕಾಸು ಸ್ಥಿತಿಯನ್ನು ಸದೃಢಗೊಳಿಸಲು ಬೇರೆ ಮೂಲವೂ ಇಲ್ಲ. ಇಂತಹ ಸ್ಥಿತಿಯಲ್ಲಿ ರಾಜ್ಯ ತನ್ನ ಸಂಪನ್ಮೂಲವನ್ನು ತಾನೇ ಕ್ರೋಡೀಕರಿಸಿಕೊಳ್ಳಬೇಕಾಗುತ್ತದೆ ಎಂಬ ಅಭಿಪ್ರಾಯ ಮುಖ್ಯಮಂತ್ರಿಯವರದು ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ಇದ್ದರೂ ಕೊರೊನಾವೈರಸ್‌ ನಾಶವಾಗುವುದಿಲ್ಲ. ಹರಡುವಿಕೆ ತಾತ್ಕಾಲಿಕವಾಗಿ ನಿಲ್ಲುತ್ತದೆ.ಲಾಕ್‌ಡೌನ್‌ ನಿರ್ಬಂಧ ತೆರವು ಮಾಡಿದ ಬಳಿಕ ಸೋಂಕು ಮತ್ತೆ ಹರಡುತ್ತದೆ. ಅದರ ಬದಲು ಕಟ್ಟುನಿಟ್ಟಿನ ಚಿಕಿತ್ಸಾ ಕ್ರಮದ ಮೂಲಕ ರೋಗಿಗಳಿಗೆ ಚಿಕಿತ್ಸೆನೀಡುವುದು, ಸಾವಿನ ಸಂಖ್ಯೆಯನ್ನು ತಗ್ಗಿಸುವುದಕ್ಕೆ ಒತ್ತು ನೀಡುವುದು ಸೂಕ್ತ ಎಂಬ ಸಲಹೆಯನ್ನೂ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ.

‘ಒಂದು ವಾರ ಲಾಕ್‌ಡೌನ್‌ ವಿಧಿಸುವ ಬಗ್ಗೆ ಮುಖ್ಯಮಂತ್ರಿಯವರಿಗೆ ಮನಸ್ಸಿರಲಿಲ್ಲ. ಕೆಲವು ಶಾಸಕರು, ಪಾಲಿಕೆ ಸದಸ್ಯರು ಮತ್ತು ಭೀತಿ ಹಬ್ಬಿಸುತ್ತಿದ್ದ ಸುದ್ದಿ ವಾಹಿನಿಗಳ ಒತ್ತಡಕ್ಕೆ ಬೇಸತ್ತು ಲಾಕ್‌ಡೌನ್‌ಗೆ ಒಪ್ಪಿಗೆ ನೀಡಿದರು. ಈ ಅವಧಿಯಲ್ಲಿ ಚಿಕಿತ್ಸೆಗೆ ಇನ್ನಷ್ಟು ವ್ಯಾಪಕ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯ ಎಂಬುದು ಅವರ ಉದ್ದೇಶವಾಗಿತ್ತು’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT