ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಲಾಕ್‌ಡೌನ್‌ ವಿಸ್ತರಣೆ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

‘ಕೃಷ್ಣಾ’ದಲ್ಲಿ ನಡೆದ ಸಚಿವರು, ಸಂಸದರ ಸಭೆಯಲ್ಲಿ ತೀರ್ಮಾನ l ಕಠಿಣ ಕ್ರಮಗಳ ಮೂಲಕ ಕೋವಿಡ್‌ ನಿಯಂತ್ರಿಸಲು ಕಟ್ಟಪ್ಪಣೆ
Last Updated 17 ಜುಲೈ 2020, 20:53 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಮುಂದುವರಿಸಬೇಕು ಎಂಬ ಪ್ರಬಲ ಒತ್ತಡಗಳ ನಡುವೆಯೂ ಅದನ್ನು‌ ಮತ್ತೊಂದು ಅವಧಿಗೆ ಮುಂದುವರಿಸದೇ ಇರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಕೋವಿಡ್‌ ನಿಯಂತ್ರಿಸಲು ಲಾಕ್‌ಡೌನ್‌ನಿಂದ ಹೆಚ್ಚಿನ ಪ್ರಯೋಜನ ಆಗದ ಕಾರಣ, ಅದನ್ನು ಮುಂದುವರಿಸುವ ಆಲೋಚನೆ ಸರ್ಕಾರಕ್ಕಿಲ್ಲ. ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆಯೇ ಕೊರೊನಾ ಮಣಿಸಲು ಇರುವ ಏಕೈಕ ಮಾರ್ಗ’ ಎಂಬ ದೃಢ ಮಾತುಗಳನ್ನು ಅವರು ಆಡಿದ್ದಾರೆ.

ಬೆಂಗಳೂರಿನ ಎಂಟು ವಲಯಗಳಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪರಿಸ್ಥಿತಿ ನಿರ್ವಹಣೆಯ ಮಾಹಿತಿ ಪಡೆಯಲು ‘ಕೃಷ್ಣಾ’ದಲ್ಲಿ ಕರೆದಿದ್ದ ಸಚಿವರು ಹಾಗೂ ಸಂಸದರ ಸಭೆಯಲ್ಲಿ, ‘ಲಾಕ್‌ಡೌನ್‌ ಮುಂದುವರಿಸಲು ಯಾರೂ ಒತ್ತಡ ಹೇರಬಾರದು. ಕಠಿಣ ಕ್ರಮಗಳ ಮೂಲಕ ಕೊರೊನಾ ಹಿಮ್ಮೆಟ್ಟಿ ಸಬೇಕು. ಇದು ನಿಮ್ಮ ಜವಾಬ್ದಾರಿ’ ಎಂಬ ಸಂದೇಶವನ್ನು ಅವರು ನೀಡಿದರು.

2 ಗಂಟೆಯೊಳಗೆ ಆಸ್ಪತ್ರೆಗೆ: ‘ಕೊರೊನಾ ಸೋಂಕಿನ ಪರೀಕ್ಷೆಯ ಫಲಿತಾಂಶ ಸಿಕ್ಕಿದ 2 ಗಂಟೆಯೊಳಗೆ ಹಾಸಿಗೆ ವ್ಯವಸ್ಥೆ ಮಾಡಿ, ಆಂಬುಲೆನ್ಸ್‌ ಮೂಲಕ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಬೇಕು. ಇದು ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‌ ಮಟ್ಟದಲ್ಲೂ ಜಾರಿ ಆಗಬೇಕು. ಹಾಸಿಗೆಗಾಗಿ ಅಲೆದಾಡುವ ಸ್ಥಿತಿ ಇರಬಾರದು’ ಎಂದು ಅವರು ಸಚಿವರಿಗೆ ತಾಕೀತು ಮಾಡಿದರು.

ಇದಕ್ಕಾಗಿ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ, ವಲಯವಾರು ಮೇಲ್ವಿಚಾರಣೆ ನಡೆಸಬೇಕು. ವಿಶೇಷವಾಗಿ ಸೋಂಕಿತರಿಗೆ ವಾರ್ಡ್‌ ಮಟ್ಟದಲ್ಲೇ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಪ್ರತಿ ವಾರ್ಡ್‌ಗಳಲ್ಲಿರುವ ಕಲ್ಯಾಣ ಮಂಟಪಗಳು, ವಸತಿ ಗೃಹಗಳು ಮತ್ತು ಸರ್ವಿಸ್ ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಬೇಕು. ಹೋಂ ಐಸೋಲೇಶನ್‌ಗೆ ಒಳಗಾದವರಿಗೆ ಪ್ರತ್ಯೇಕವಾಗಿ ವಾಸಿಸಲು ಕೊಠಡಿಗಳು ಇಲ್ಲದವರಿಗೆ ಅವುಗಳನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.

ರೋಗ ಲಕ್ಷಣ ಇರುವ 65 ವರ್ಷ ವಯಸ್ಸಿಗೆ ಮೇಲ್ಪಟ್ಟ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಹಾಸಿಗೆಗಳನ್ನು ಹಂಚಿಕೆ ಮಾಡಬೇಕು. ರೋಗ ಲಕ್ಷಣ ಇಲ್ಲದವರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು. ಇದರಿಂದ ತೀವ್ರ ರೋಗಲಕ್ಷಣದಿಂದ ಬಳಲುತ್ತಿರುವ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರು ಹಾಗೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ವೈದ್ಯರು ಮತ್ತು ಇತರ ಸಿಬ್ಬಂದಿ ಕೊರತೆ ನಿವಾರಿಸಲು ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಾರ್ಡಿನಲ್ಲೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಆಂಬುಲೆನ್ಸ್‌ ಕೂಡ ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ನೀಡದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದರು.

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಂಕಿತರು ಅಲ್ಲೇ ಚಿಕಿತ್ಸೆ ಪಡೆಯುವಂತಾಗಬೇಕು. ವಾರ್ಡ್‌ ಮಟ್ಟದಲ್ಲೂ ಈ ಕೆಲಸ ಆಗಬೇಕು. ಒಂದು ವಿಧಾನಸಭಾ ಕ್ಷೇತ್ರದವರು ಅಥವಾ ವಾರ್ಡ್‌ನವರು ಬೇರೆ ಕಡೆ ಅಲೆದಾಡುವಂತೆ ಆಗಬಾರದು. ರೋಗಿಗಳಿಗೆ ಅವರ ಮನೆಯ ಸಮೀಪದಲ್ಲೇ ಚಿಕಿತ್ಸೆ ಸಿಗುವಂತಾಗಬೇಕು. ರಾಜ್ಯದ ಬೇರೆ ಕಡೆ ಬೆಂಗಳೂರಿನಷ್ಟು ಸಮಸ್ಯೆ ಆಗಿಲ್ಲ. ಆದ್ದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಚಿವರಿಗೆಸೂಚಿಸಿದರು.

‘ಶವವನ್ನು ಕೂಡಲೇ ಹಸ್ತಾಂತರಿಸಬೇಕು’
‘ಸೋಂಕಿನಿಂದ ಆಸ್ಪತ್ರೆಗಳಲ್ಲಿ ಮೃತರಾದವರಿಗೆ ರ್‍ಯಾಪಿಡ್‌ ಆಂಟಿಜೆನ್‌ ಪರೀಕ್ಷೆ ನಡೆಸಿ ಶವವನ್ನು ಕೂಡಲೇ ಹಸ್ತಾಂತರಿಸಬೇಕು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲು ಅವಕಾಶ ಕಲ್ಪಿಸಬೇಕು. ಇದಕ್ಕೆ ಯಾರೂ ಅಡ್ಡಿಪಡಿಸಬಾರದು. ಮನೆಗಳಲ್ಲಿ ಮೃತಪಟ್ಟವರಿಗೂರ್‍ಯಾಪಿಡ್‌ ಆಂಟಿಜೆನ್ ಪರೀಕ್ಷೆ ನಡೆಸಿ, ತುರ್ತಾಗಿ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡಬೇಕು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT