ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯಂ ಎಫ್‌ಎಆರ್‌ಗೆ ಅನುಮತಿ

Last Updated 1 ಆಗಸ್ಟ್ 2020, 19:22 IST
ಅಕ್ಷರ ಗಾತ್ರ

ಬೆಂಗಳೂರು: ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತ (ಪ್ರೀಮಿಯಂ ಎಫ್‌ಎಆರ್‌) ಬಳಕೆಗೆ ಅನುಮತಿ ನೀಡುವ ಸಲುವಾಗಿ ರಾಜ್ಯ ಸರ್ಕಾರವು 1961ರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಗೆ ತಿದ್ದುಪಡಿ ತಂದಿದೆ.

ಈ ಕುರಿತು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆಯು ಶುಕ್ರವಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿದೆ. ಇದರ ಪ್ರಕಾರ ಕಾಯ್ದೆಗೆ 18– ಬಿ ಸೆಕ್ಷನ್‌ ಅನ್ನು ಸೇರ್ಪಡೆಗೊಳಿಸಲಾಗಿದೆ. ಪ್ರೀಮಿಯಂ ಎಫ್‌ಎಆರ್‌ ಮಂಜೂರಾತಿಗಾಗಿ ಪ್ರೀಮಿಯಂ ದರ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ನಗರ ಮಹಾ ಯೋಜನೆಯಲ್ಲಿ ನಿರ್ದಿಷ್ಟ ಉದ್ದೇಶಗಳಿಗೆ ಗುರುತಿಸಿರುವ ಪ್ರದೇಶಗಳಲ್ಲಿ ಪ್ರೀಮಿಯಂ ಎಫ್‌ಎಆರ್‌ಗೆ ಅನುಮತಿ ನೀಡಬಹುದು. ಇದರ ಮಂಜೂರಾತಿಗೆ ವಿಧೀಸುವ ಪ್ರೀಮಿಯಂ ದರವು ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸುವ ಭೂಮಿ ಮತ್ತು ಕಟ್ಟಡದ ಮೌಲ್ಯದಲ್ಲಿ ಅಂದಾಜು ಮಾಡಿದ ಹೆಚ್ಚಳದ ಮೂರನೇ ಒಂದಕ್ಕಿಂತ ಹೆಚ್ಚು ಇರುವಂತಿಲ್ಲ.

2015ರ ನಗರ ಮಹಾಯೋಜನೆಯಲ್ಲಿ ವಸತಿ ಕಟ್ಟಡಗಳಿಗೆ 1.75ರಿಂದ 3.25ರಷ್ಟು ಮೂಲ ಎಫ್‌ಎಆರ್‌ ನಿಗದಿಪಡಿಸಲಾಗಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರ (ಬಿಡಿಎ) ರೂಪಿಸಿದ್ದ ಪರಿಷ್ಕೃತ ನಗರ ಮಹಾಯೋಜನೆ (ಆರ್‌ಎಂಪಿ) 2031ರ ಕರಡಿನಲ್ಲಿ ನಗರದಲ್ಲಿ ಎ– ಯೋಜನಾ ವಲಯದಲ್ಲಿ ವಸತಿ ಕಟ್ಟಡಗಳಿಗೆ ಮೂಲ ಎಫ್‌ಎಆರ್‌ ಮಿತಿಯನ್ನು 1.80ಕ್ಕೆ ಹಾಗೂ ಬಿ–ಯೋಜನಾ ವಲಯದಲ್ಲಿ (ಹೊರವರ್ತುಲ ರಸ್ತೆಗಿಂತ ಹೊರಗೆ) ) 2ಕ್ಕೆ ಇಳಿಸಲಾಗಿತ್ತು. ಆದರೆ, ಮೆಟ್ರೊ ನಿಲ್ದಾಣ ಹಾಗೂ ಮೆಟ್ರೊ ಟರ್ಮಿನಲ್‌ಗಳ 150 ಮೀಟರ್‌ ವ್ಯಾಪ್ತಿಯ ಪ್ರದೇಶದಲ್ಲಿ ಸಾಮಾನ್ಯ ಎಫ್‌ಎಆರ್‌ಗಿಂತ ಹೆಚ್ಚು ಎಫ್‌ಎಆರ್‌ ಹೊಂದಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದಕ್ಕೆ ಗರಿಷ್ಠ 4ರ ಮಿತಿ ನಿಗದಿಪಡಿಸಲಾಗಿತ್ತು. ಆದರೆ, ಈ ಕರಡನ್ನು ಒಪ್ಪಿರದ ಸರ್ಕಾರ ಅದನ್ನು ಮತ್ತೆ ಪರಿಷ್ಕರಿಸುವಂತೆ ಸೂಚಿಸಿದೆ.

ಮೆಟ್ರೊ ನಿಲ್ದಾಣಗಳ 150 ಮೀ. ವ್ಯಾಪ್ತಿಯಲ್ಲಿ ಪ್ರೀಮಿಯಂ ಎಫ್‌ಎಆರ್‌ ಮಾರಾಟ ಮಾಡುವ ಮೂಲಕ ಮೆಟ್ರೊ ಯೋಜನೆಗೆ ಬಂಡವಾಳ ಕ್ರೋಡೀಕರಿಸುವ ಚಿಂತನೆ ಸರ್ಕಾರದ ಮುಂದಿದೆ. ಹಾಗಾಗಿ ಸಮಗ್ರ ಸಂಚಾರ ಯೋಜನೆ (ಸಿಎಂಪಿ) 2019ರಲ್ಲಿ ನಗರ ಸಂಚಾರ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ‘ಬೆಂಗಳೂರು ಮೂಲಸೌಕರ್ಯ ನಿಧಿ’ಯನ್ನು ಸ್ಥಾಪಿಸುವ ಬಗ್ಗೆ ಹಾಗೂ ಇದಕ್ಕಾಗಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.

ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಉತ್ತೇಜನ:

ಕಾಯ್ದೆಯ ಈ ತಿದ್ದುಪಡಿಯಿಂದಾಗಿ ಸರ್ಕಾರ ಅನುಮತಿ ನೀಡುವ ಸ್ಥಳಗಳಲ್ಲಿ ಬಹು ಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಉತ್ತೇಜನ ಸಿಗಲಿದೆ. ‘ಪ್ರೀಮಿಯಂ ಎಫ್‌ಎಆರ್‌ಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆಯೇ. ಆದರೆ, ಕಟ್ಟಡಗಳ ಎತ್ತರಕ್ಕೆ ಮಿತಿ ನಿಗದಿ ಪಡಿಸುವ ಸರ್ಕಾರ ಸಂಪನ್ಮೂಲ ಕ್ರೋಢೀಕರಣಕ್ಕೆ ಪ್ರೀಮಿಎಂ ಎಫ್‌ಎಆರ್‌ ದುರ್ಬಳಕೆ ಮಾಡಿಕೊಳ್ಳಬಾರದು’ ಎನ್ನುತ್ತಾಋಎ ಬಿಲ್ಡರ್‌ಗಳು.

‘ಪ್ರೀಮಿಯಂ ಎಫ್‌ಎಆರ್‌ಗೆ ಸಂಬಂಧಿಸಿದ ನಿಯಮ ರೂಪಿಸುವಾಗ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿರುವವರನ್ನು ವಿಶ್ವಾಸಕ್ಕೆ ಪಡೆಯಬೇಕು. ದುಬಾರಿ ಪ್ರೀಮಿಯಂ ದರ ನಿಗದಿ ಪಡಿಸಿದರೆ ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಪ್ರೀಮಿಯಂ ದರವು ಸರ್ಕಾರಕ್ಕೆ, ನಗರದ ನಿವಾಸಿಗಳಿಗೆ ಹಾಗೂ ಬಿಲ್ಡರ್‌ಗಳೆಲ್ಲರಿಗೂ ಒಪ್ಪಿಗೆಯಾಗುವಂತಿರಬೇಕು’ ಎಂದು ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಕ್ರೆಡೈ) ಬೆಂಗಳೂರು ಘಟಕದ ಅಧ್ಯಕ್ಷ ಎಸ್‌.ಸುರೇಶ ಹರಿ ಒತ್ತಾಯಿಸಿದರು.

ಎಫ್‌ಎಆರ್‌ ಎಂದರೇನು?

ನಿವೇಶನದ ಅಳತೆ ಆಧರಿಸಿ ನಿರ್ಮಿಸಬಹುದಾದ ಕಟ್ಟಡದ ವಿಸ್ತೀರ್ಣ ಮತ್ತು ಅಂತಸ್ತುಗಳ ಪ್ರಮಾಣವೇ ಎಫ್‌ಎಆರ್‌.

ನಿವೇಶನದ ವಿಸ್ತೀರ್ಣ ಮತ್ತು ಅದರ ಪಕ್ಕದ ಅಥವಾ ಸಮೀಪದ ರಸ್ತೆ ಅಗಲವನ್ನು ಆಧರಿಸಿ ಎಷ್ಟು ಮಹಡಿಗಳ ಕಟ್ಟಡ ನಿರ್ಮಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ.

ಎಫ್‌ಎಆರ್‌ಗಳನ್ನು ಮೂಲ ಎಫ್‌ಎಆರ್‌ (ನಿವೇಶನದ ಅಳತೆ ಆಧರಿಸಿದ್ದು), ಟಿಡಿಆರ್‌ (ಅಭಿವೃದ್ಧಿ ಹಕ್ಕು ವರ್ಗಾವಣೆ) ಆಧಾರದ ಎಫ್‌ಎಆರ್‌ ಹಾಗೂ ಪ್ರೀಮಿಯಂ ಎಫ್‌ಎಆರ್‌ ಎಂದು ವರ್ಗೀಕರಿಸಬಹುದು. ಪ್ರೀಮಿಯಂ ಎಫ್‌ಎಆರ್‌ಗಳನ್ನು ಸರ್ಕಾರವೇ ಮಾರಾಟ ಮಾಡುತ್ತದೆ.

ಕಟ್ಟಡ ನಿರ್ಮಿಸುವವರು ಪ್ರೀಮಿಯಂ ಎಫ್‌ಎಆರ್‌ಗಳನ್ನು ಖರೀದಿಸಿ ಕಟ್ಟಡದಲ್ಲಿ ನಿವೇಶನದ ಅಳತೆಗೆ ನಿಗದಿಪಡಿಸಿದ ಎಫ್‌ಎಆರ್‌ಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಬಹುದು. ನಿರ್ದಿಷ್ಟ ಪ್ರದೇಶದಲ್ಲಿ ಎಲ್ಲ ರೀತಿಯ ಎಫ್‌ಎಆರ್‌ಗಳನ್ನು ಸೇರಿಸಿ ಗರಿಷ್ಠ ಎಷ್ಟು ಅಂತಸ್ತುಗಳ ಅಥವಾ ವಿಸ್ತೀರ್ಣದ ಕಟ್ಟಡ ನಿರ್ಮಿಸಬಹುದು ಎಂಬ ಕುರಿತು ನಗರ ಮಹಾಯೋಜನೆಯಲ್ಲಿ ಮಿತಿ ನಿಗದಿಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT