ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸು, ಟಿಪ್ಪು ಪಠ್ಯ ಕೈಬಿಟ್ಟಿರುವುದಕ್ಕೆ ಎಚ್.ಡಿ. ದೇವೇಗೌಡ ಆಕ್ರೋಶ

Last Updated 31 ಜುಲೈ 2020, 21:53 IST
ಅಕ್ಷರ ಗಾತ್ರ

ಬೆಂಗಳೂರು: ಏಸುಕ್ರಿಸ್ತ ಮತ್ತು ಟಿಪ್ಪು ಸುಲ್ತಾನ್ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಿಂದ ಕೈಬಿಟ್ಟಿರುವುದಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆಹೊರೆಯವರನ್ನು ತನ್ನಂತೆ ಕಾಣಬೇಕು ಎಂದು ಬೋಧಿಸಿದ ಶಾಂತಿದೂತ ಏಸುಕ್ರಿಸ್ತ. ಇಂತಹ ಮಹಾತ್ಮರ ಜೀವನ ಚರಿತ್ರೆಯನ್ನು ಮಕ್ಕಳು ತಿಳಿದುಕೊಳ್ಳಲು ಅವಕಾಶ ಇಲ್ಲದಂತೆ ಮಾಡಿರುವುದು ಸರಿಯಲ್ಲ’ ಎಂದರು.

‘ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಎಂಬುದನ್ನು ನಾವು ಪ್ರಾಥಮಿಕ ಶಾಲೆಯಿಂದ ಓದಿಕೊಂಡು ಬಂದಿದ್ದೇವೆ. ಅವರ ಹೆಸರಿನಲ್ಲಿಕಲಬುರ್ಗಿ, ವಿಜಯಪುರ, ಶ್ರೀರಂಗಪಟ್ಟಣ, ರಾಮನಗರ, ಧಾರವಾಡದಲ್ಲಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಆಗಯಾರೂ ವಿರೋಧ ಮಾಡಿರಲಿಲ್ಲ. ಈಗ ಈ ವಿಚಾರವನ್ನು ಅನಗತ್ಯವಾಗಿ ಸೃಷ್ಟಿ ಮಾಡುವ ಅಗತ್ಯ ಸರ್ಕಾರಕ್ಕೆ ಇರಲಿಲ್ಲ. ಸರ್ಕಾರ ಪುನರ್ ಪರಿಶೀಲನೆ ನಡೆಸಬೇಕು. ಎಲ್ಲರಿಗೂ ಸಮಾಧಾನ ಆಗುವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ರಾಜ್ಯದಾದ್ಯಂತ ಹೋರಾಟ: ರಾಜ್ಯ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಲು ಇದೇ 4ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ದೇವೇಗೌಡ ಹೇಳಿದರು.

ಪಿಎಸ್‌ಐ ಆತ್ಮಹತ್ಯೆ: ತನಿಖೆಗೆ ಆಗ್ರಹ

‘ಹಾಸನ ಜಿಲ್ಲೆಚನ್ನರಾಯಪಟ್ಟಣದ ಸಬ್‌ಇನ್‌ಸ್ಪೆಕ್ಟರ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಬೇಕು’ ಎಂದು ದೇವೇಗೌಡ ಆಗ್ರಹಿಸಿದರು.

‘ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಅವರಿಗೆ ಹಿಂಸೆ ನೀಡಲಾಗಿದೆ ಎಂಬ ಆರೋಪಗಳಿವೆ. ಗೃಹ ಸಚಿವರು ಯಾವುದೇ ಒತ್ತಡಕ್ಕೂ ಮಣಿಯದೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT