ಶನಿವಾರ, ಜುಲೈ 24, 2021
21 °C

ಮಾಸ್ಕೊದಿಂದ ಬೆಂಗಳೂರಿಗೆ ಬರಲಿದ್ದಾರೆ ಕನ್ನಡಿಗ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸತತ ಮೂರು ತಿಂಗಳುಗಳ ಪ್ರಯತ್ನದ ನಂತರ, ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ರಷ್ಯಾದ ಮಾಸ್ಕೊದಿಂದ ಮಂಗಳವಾರ ನಸುಕಿನ ಜಾವ ನಗರಕ್ಕೆ ಬಂದಿಳಿಯಲಿದೆ. 

ರಷ್ಯಾದಲ್ಲಿಯೂ ಕೋವಿಡ್‌–19 ಬಿಕ್ಕಟ್ಟಿನ ಕಾಲೇಜು, ಹಾಸ್ಟೆಲ್‌ಗಳೆಲ್ಲ ಸ್ಥಗಿತಗೊಂಡಿದ್ದು, ರಾಜ್ಯಕ್ಕೆ ಮರಳಲು ವೈದ್ಯಕೀಯ ವಿದ್ಯಾರ್ಥಿಗಳು ಶತಪ್ರಯತ್ನ ನಡೆಸಿದ್ದರು. ಕೇಂದ್ರ ಸಚಿವರು, ಸಂಸದರು, ರಾಜ್ಯದ ಮಂತ್ರಿಗಳು, ಶಾಸಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದರು. 

ಸೋಮವಾರ ಸಂಜೆ 6ಕ್ಕೆ ಮಾಸ್ಕೊದಿಂದ ಹೊರಟಿರುವ ರಾಯಲ್‌ ಫ್ಲೈಟ್‌ ಏರ್‌ಲೈನ್ಸ್‌ನ ವಿಶೇಷ ವಿಮಾನದಲ್ಲಿ ಒಟ್ಟು 237 ಜನ ರಾಜ್ಯಕ್ಕೆ ಬರುತ್ತಿದ್ದು, ಈ ಪೈಕಿ 170 ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಮಂಗಳವಾರ ಬೆಳಿಗ್ಗೆ 4ಗಂಟೆಯ ವೇಳೆಗೆ ವಿಮಾನವು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. 

‘ವಿಮಾನದಲ್ಲಿ ಬೆಂಗಳೂರು, ದಾವಣಗೆರೆ, ತುಮಕೂರು, ಹುಬ್ಬಳ್ಳಿ, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇದ್ದೇವೆ. ದೇಶ ಹಾಗೂ ರಾಜ್ಯದ ಬಹುತೇಕ ಜನಪ್ರತಿನಿಧಿಗಳಿಗೆ ಮೂರು ತಿಂಗಳುಗಳಿಂದ ಟ್ವಿಟ್ಟರ್‌ ಮೂಲಕ ಮನವಿ ಸಲ್ಲಿಸಿದ್ದೆವು. ಈ ಮೊದಲು ವಿಮಾನಗಳು ಬಂದಿದ್ದರೂ, ದೇಶದ ಎಲ್ಲ ರಾಜ್ಯಗಳ ಜನ ಅದರಲ್ಲಿ ಹೋಗಿದ್ದರು. ನಾವು ದೆಹಲಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಬರಬೇಕಿತ್ತು. ನೇರವಾಗಿ ಬೆಂಗಳೂರಿಗೇ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೆವು. ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದೆ’ ಎಂದು ಪ್ರಯಾಣಿಕ, ದಾವಣಗೆರೆಯ ಪರಶುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ವಿಶ್ವವಿದ್ಯಾಲಯಗಳು, ಕಾಲೇಜುಗಳು ಎಲ್ಲ ಮುಚ್ಚಿವೆ. ಸ್ವದೇಶಕ್ಕೆ ಮರಳುವಂತೆ ಕಾಲೇಜಿನವರು ತಿಳಿಸಿದರು. ಮರಳಿ ಬರುವ ದಿನಾಂಕವನ್ನು ಹೇಳಿಲ್ಲ. ಕೊರೊನಾ ಬಿಕ್ಕಟ್ಟು ಮುಗಿದ ನಂತರ, ಮತ್ತೆ ವ್ಯಾಸಂಗಕ್ಕೆ ಮಾಸ್ಕೊಗೆ ಮರಳುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು