ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ

ಹಾರಂಗಿಯಿಂದ ನದಿಗೆ 5,500 ಕ್ಯುಸೆಕ್‌ ನೀರು l ಆಗುಂಬೆಯಲ್ಲಿ 19 ಸೆಂ.ಮೀ. ಮಳೆ ದಾಖಲು
Last Updated 17 ಜುಲೈ 2020, 19:45 IST
ಅಕ್ಷರ ಗಾತ್ರ

ಮಡಿಕೇರಿ/ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಾವೇರಿ ಕಣಿವೆಯ ಹಾರಂಗಿ ಜಲಾಶಯವು ಬಹುತೇಕ ಭರ್ತಿಯಾಗುವ ಮಟ್ಟಕ್ಕೆ ತಲುಪಿದ್ದು,ನದಿಗೆ ಶುಕ್ರವಾರ 5,500 ಕ್ಯುಸೆಕ್‌ ನೀರು ಬಿಡಲಾಗಿದೆ.

ಜಲಾಶಯದ ಗರಿಷ್ಠ ಮಟ್ಟ 2,859 ಅಡಿಯಾಗಿದ್ದು, ಪ್ರಸ್ತುತ 2,853.42 ಅಡಿ ನೀರು ಸಂಗ್ರಹವಿದೆ. ಒಳಹರಿವು 8,590 ಕ್ಯುಸೆಕ್‌ ಇದೆ. ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಭರ್ತಿಗೆ 5 ಅಡಿ ಬಾಕಿ ಇರುವಾಗಲೇ ಕ್ರೆಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.

‘ಹಾರಂಗಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಇದೇ ರೀತಿ ಮುಂದುವರಿದರೆ ಒಳಹರಿವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಒಳಹರಿವು ಆಧರಿಸಿ, ಹಂತ ಹಂತವಾಗಿ ನದಿಗೆ ನೀರು ಹರಿಸಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಂದ್ರ ತಿಳಿಸಿದರು.

ಇನ್ನು ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಕಾವೇರಿ ನದಿ ಮತ್ತಷ್ಟು ಮೈದುಂಬಿ ಹರಿಯುತ್ತಿದೆ. ನೆಲ್ಯಹುದಿಕೇರಿಯಲ್ಲಿ ಮನೆಯ ಮೇಲೆ ಮರವೊಂದು ಬಿದ್ದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ನಾಪೋಕ್ಲುವಿನಲ್ಲಿ 12 ಸೆಂ.ಮೀ, ಹುದಿಕೇರಿಯಲ್ಲಿ 9.7, ಶ್ರೀಮಂಗಲದಲ್ಲಿ 7.1, ಭಾಗಮಂಡಲದಲ್ಲಿ 5.8 ಸೆಂ.ಮೀ ಮಳೆ ದಾಖಲಾಗಿದೆ. ಹಾಸನ ಜಿಲ್ಲೆಯ ಹೆತ್ತೂರು, ಅರಕಲಗೂಡಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಮನೆಗಳಿಗೆ ಹಾನಿ: ಕರಾವಳಿಯಲ್ಲೂ ಮುಂಗಾರು ಚುರುಕಾಗಿದ್ದು, ಹಲವೆಡೆ ಮನೆಗಳಿಗೆ ಹಾನಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಸೆಂ.ಮೀ. ಮಳೆ ದಾಖಲಾಗಿದ್ದು, ಬೊಂಡಂತಿಲ, ಸುಳ್ಯ ತಾಲ್ಲೂಕಿನ ಜಾಲ್ಸೂರು, ಬಜ್ಪೆ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಪುತ್ತೂರು– ಪಾಣಾಜೆ ಸಂಪರ್ಕದ ಚೆಲ್ಯಡ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಹೆಚ್ಚಿನ ಮಳೆಯಾಗಿದೆ. ನೇತ್ರಾವತಿ, ಕುಮಾರಧಾರ, ಫಲ್ಗುಣಿ, ನಂದಿನಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಉಡುಪಿ ನಗರದ ಮೂಡನಿಡಂಬೂರು, ಬನ್ನಂಜೆ, ಮಠದಬೆಟ್ಟು, ಕಲ್ಸಂಕ ಪರಿಸರ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲ್ಲೂಕುಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ.

ತಡೆಗೋಡೆಗೆ ಹಾನಿ: ಪಡುಬಿದ್ರಿ ಬೀಚ್‌ನಲ್ಲಿ ಕಡಲ್ಕೊರೆತ ಉಂಟಾಗಿದ್ದು, ಬೀಚ್‌ಗೆ ಅಳವಡಿಸಲಾಗಿದ್ದ ಇಂಟರ್‌ ಲಾಕ್‌, ತಡೆಗೋಡೆಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮೂಡಿಗೆರೆ– ತತ್ಕೊಳ ಮಾರ್ಗದ ಬನದೇದಿ ಎಸ್ಟೇಟ್‌ ಬಳಿ ರಸ್ತೆಯ ಮಣ್ಣು ಕುಸಿದಿದೆ. ಮೂಡಿಗೆರೆ ಸಮೀಪದ ಭೂತನಕಾಡು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮರ ಬಿದ್ದು ಒಂದು ಗಂಟೆ ಸಂಚಾರ ಸ್ಥಗಿತವಾಗಿತ್ತು. ಶಿವಮೊಗ್ಗ ನಗರ ಸುತ್ತಮುತ್ತ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಕೋಣಂದೂರು, ಹೊಸನಗರ, ರಿಪ್ಪನ್‌ಪೇಟೆ, ಸಾಗರ, ಭದ್ರಾವತಿ ಸುತ್ತಮುತ್ತ ರಭಸವಾಗಿ ಮಳೆ ಸುರಿದಿದೆ.

(ಹುಬ್ಬಳ್ಳಿ ವರದಿ): ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಶುಕ್ರವಾರ ದಿನವಿಡೀ ಮಳೆಯಾಗಿದೆ. ಕಾರವಾರ ಜಿಲ್ಲೆಯಾದ್ಯಂತ ದಿನವಿಡೀ ಜೋರಾಗಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT