ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ‘ದುಬಾರಿ’ ಶುಲ್ಕಕ್ಕೆ ವಿರೋಧ; ಸುತ್ತೋಲೆ ಹಿಂಪಡೆದ ಕೆಎಲ್‌ಇ ಆಸ್ಪತ್ರೆ

Last Updated 24 ಜುಲೈ 2020, 13:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕೋವಿಡ್‌–19 ರೋಗಿಗಳಿಗೆ ‘ಜಿ ಪ್ಲಸ್ 4’ ಮತ್ತು ‘ಸೆಮಿ ಪ್ರೈವೇಟ್‌ ವಾರ್ಡ್‌’ಗಳಲ್ಲಿ ಚಿಕಿತ್ಸೆಗೆ ದುಬಾರಿ ಶುಲ್ಕ ನಿಗದಿಪಡಿಸಿರುವ ಸುತ್ತೋಲೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಜಿಲ್ಲಾಡಳಿತದ ಸೂಚನೆ ಮೇರೆಗೆ ಸುತ್ತೋಲೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ವಾಪಸ್ ಪಡೆದಿದೆ.

ಜುಲೈ 22ರಂದು ಸಿದ್ಧಪಡಿಸಿರುವ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರ ಸಹಿಯುಳ್ಳ ಸುತ್ತೋಲೆಯ ಪ್ರಕಾರ ದಿನದ ಶುಲ್ಕ ನಿಗದಿಪಡಿಸಲಾಗಿತ್ತು. ಸೆಮಿ ಪ್ರೈವೇಟ್ ವಾರ್ಡ್‌ನಲ್ಲಿ ವೆಂಟಿಲೇಟರ್‌ ರಹಿತ ₹ 35ಸಾವಿರ, ಸಹಿತ ₹ 50ಸಾವಿರ, ಪ್ರೈವೇಟ್ ವಾರ್ಡ್‌ನಲ್ಲಿ ವೆಂಟಿಲೇಟರ್‌ ರಹಿತ ₹ 50ಸಾವಿರ, ಸಹಿತ ₹ 65ಸಾವಿರ ಮತ್ತು ಡಿಲಕ್ಸ್‌ ವಾರ್ಡ್‌ನಲ್ಲಿ ವೆಂಟಿಲೇಟರ್‌ ರಹಿತ ₹ 60ಸಾವಿರ, ಸಹಿತ ₹ 75ಸಾವಿರ ಪಡೆಯುವಂತೆ ತಿಳಿಸಲಾಗಿತ್ತು.

‘ಇಷ್ಟೊಂದು ದುಬಾರಿ ಶುಲ್ಕ ಕಟ್ಟಿ ಚಿಕಿತ್ಸೆ ಪಡೆಯುವ ಬದಲಿಗೆ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ’ಎಂಬ ಸಂದೇಶಗಳು ಹರಿದಾಡಿದ್ದವು.

ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಲ್ಲಿಕಾರ್ಜುನ ವಿ. ಜಾಲಿ, ‘ಆ ಸುತ್ತೋಲೆಯು ಆಂತರಿಕ ಚರ್ಚೆಗಾಗಿ ಸಿದ್ಧಪಡಿಸಿದ್ದಾಗಿತ್ತು. ಅದು ಅಂತಿಮ ಪಟ್ಟಿಯಾಗಿರಲಿಲ್ಲ. ಆಕಸ್ಮಿಕವಾಗಿ ಬಹಿರಂಗಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ ನಿಗದಿಪಡಿಸಿರುವ ಶುಲ್ಕವನ್ನಷ್ಟೇ ಪಡೆಯಲಾಗುವುದು. ಈ ವಿಷಯದಲ್ಲಿ ಮಾರ್ಗಸೂಚಿ ಉಲ್ಲಂಘಿಸುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.

‘ಕೋವಿಡ್‌ಗೆ 36 ಹಾಸಿಗೆಗಳ ವಾರ್ಡ್‌ನಲ್ಲಿ 27 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರದ ಆದೇಶದಂತೆ ಆರೋಗ್ಯ ಹಾಗೂ ವಿಮಾ ಯೋಜನೆಗಳನ್ನು ಕೂಡ ಪರಿಗಣಿಸಲಾಗುವುದು. ಈ ಜನರಲ್‌ ವಾರ್ಡ್‌ನಲ್ಲಿ ಜಿಲ್ಲಾಸ್ಪತ್ರೆಯಿಂದ ಕಳುಹಿಸಲಾದ (ರೆಫರ್) ರೋಗಿಗಳಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನಷ್ಟೇ ಪಡೆಯಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಜನರಲ್ ವಾರ್ಡ್‌ ಬೇಡ ಎನ್ನುವವರಿಗಾಗಿ ಜಿ ಪ್ಲಸ್ 4’ ಮತ್ತು ‘ಸೆಮಿ ಪ್ರೈವೇಟ್‌ ವಾರ್ಡ್‌’ಗಳನ್ನು ಪ್ರತ್ಯೇಕವಾಗಿ ಆರಂಭಿಸಲಾಗಿದೆ. ಆ ವಾರ್ಡ್‌ಗಳಲ್ಲೂ ಸರ್ಕಾರ ನಿಗದಿ‍‍ಪಡಿಸಿದ ಶುಲ್ಕವನ್ನಷ್ಟೇ ಪಡೆಯಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಪಟ್ಟಿ ಕೇಳಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT