ಭಾನುವಾರ, ಜುಲೈ 25, 2021
21 °C
ಸಿಗ್ನಲ್ ಕೊರತೆಯ ಜೊಯಿಡಾದ ಗ್ರಾಮದಲ್ಲಿ ವಿಶಿಷ್ಟ ‘ಆನ್‌ಲೈನ್ ತರಗತಿ’

ಕಾರವಾರ: ಕುಗ್ರಾಮದ ಚಿಣ್ಣರಿಗೆ ‘ಟೆಲಿ’ ಶಾಲೆ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ದಟ್ಟಕಾಡಿನ ನಡುವಿನ ಈ ಊರಿನಲ್ಲಿ ನಿತ್ಯವೂ ‘ಮೊಬೈಲ್ ಫೋನ್‌’ ಇಂಗ್ಲಿಷ್ ತರಗತಿ ನಡೆಯುತ್ತದೆ. 500 ಕಿಲೋ ಮೀಟರ್‌ಗೂ ಅಧಿಕ ದೂರದ ನಗರದಲ್ಲಿರುವ ಶಿಕ್ಷಕಿಯ ಧ್ವನಿಗೆ ಮಕ್ಕಳು ಕಿವಿಯಾಗುತ್ತಾರೆ, ಸಂವಹನ ನಡೆಸುತ್ತಾರೆ. ಆದರೆ, ಶಿಕ್ಷಕಿ ಮಾತ್ರ ‘ಅದೃಶ್ಯ’ವಾಗಿಯೇ ಇರುತ್ತಾರೆ!

ಈ ರೀತಿಯ ತರಗತಿ ನಡೆಯುತ್ತಿರುವುದು ಜೊಯಿಡಾ ತಾಲ್ಲೂಕಿನ ಡೇರಿಯಾ ಎಂಬ ಕುಗ್ರಾಮದಲ್ಲಿ. ಇಲ್ಲಿನ ಬುಡಕಟ್ಟು ಜನಾಂಗದ 10 ವಿದ್ಯಾರ್ಥಿಗಳಿಗೆ ಮೈಸೂರಿನ ಒಂಟಿಕೊಪ್ಪಲು ನಿವಾಸಿ ಡಾ.ಆರ್.ಪೂರ್ಣಿಮಾ, ನಿತ್ಯವೂ ಮೊಬೈಲ್ ಫೋನ್ ಕರೆಯ ಮೂಲಕ ಇಂಗ್ಲಿಷ್ ಭಾಷೆ, ಮಗ್ಗಿ ಹಾಗೂ ಸಸ್ಯಶಾಸ್ತ್ರದ ಬಗ್ಗೆ ಬೋಧಿಸುತ್ತಿದ್ದಾರೆ. ನಾಲ್ಕನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ತಾಲ್ಲೂಕು ಕೇಂದ್ರದಿಂದ 12 ಕಿಲೋ ಮೀಟರ್ ದೂರದ ಈ ಗ್ರಾಮದಲ್ಲಿ ಒಂದೆರಡು ಮನೆಗಳ ಬಳಿ ಮಾತ್ರ ಮೊಬೈಲ್ ಸಿಗ್ನಲ್  ಸಿಗುತ್ತದೆ. ಅದೂ ಒಂದೆರಡು ‘ಕಡ್ಡಿ’ಗಳಿಗೆ ಸೀಮಿತವಾಗಿರುತ್ತದೆ. ಇಲ್ಲಿ ಇಂಟರ್‌ನೆಟ್ ಸಂಪರ್ಕವಂತೂ ದೂರದ ಮಾತು. ಹಾಗಾಗಿ ಆನ್‌ಲೈನ್ ತರಗತಿ ಹಮ್ಮಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಪೂರ್ಣಿಮಾ, ಮೊಬೈಲ್ ಫೋನ್ ಮೂಲಕವೇ ಜ್ಞಾನಧಾರೆ ಎರೆಯುತ್ತಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿರುವ ಅವರ ಹುಮ್ಮಸ್ಸಿಗೆ, ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್ ಜೊತೆಯಾದರು. ಒಂದು ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಖರೀದಿಸಿ ತಂದರು. ಸಿಗ್ನಲ್ ಸಿಗುವ ಮನೆಯೊಂದರ ಕಿಟಕಿಯಲ್ಲಿಟ್ಟು  ಬ್ಲೂಟೂಥ್ ಮೂಲಕ ಸ್ಪೀಕರ್‌ಗೆ ಸಂಪರ್ಕ ನೀಡಿ ಧ್ವನಿವರ್ಧಿಸಿದರು. ಈ ರೀತಿ ಸುಮಾರು ಒಂದು ತಿಂಗಳಿನಿಂದ ನಿತ್ಯವೂ ಸಂಜೆ 4.30ರಿಂದ ಒಂದು ತಾಸು ತರಗತಿ ನಡೆಯುತ್ತಿದೆ.

‘ಈ ವರ್ಷ ಜೊಯಿಡಾದಲ್ಲಿ ಒಂದು ತಿಂಗಳಿದ್ದು ತರಗತಿ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಲಾಕ್‌ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ. ಈಗ ಮಕ್ಕಳು ಈ ತರಗತಿಗೆ ಚೆನ್ನಾಗಿ ಸ್ಪಂದಿಸುತ್ತಿರುವುದು ಖುಷಿ ತಂದಿದೆ’ ಎಂದು ಆರ್.ಪೂರ್ಣಿಮಾ ಹೇಳುತ್ತಾರೆ.

‘ನಾನು ಜಯಾನಂದ ಅವರಿಗೆ ಇ–ಮೇಲ್ ಮಾಡಿದ್ದ ಪಠ್ಯದ ಒಂದು ಪ್ರತಿಯನ್ನು ಮುದ್ರಿಸಿ ಮಕ್ಕಳಿಗೆ ನೀಡಲಾಗಿದೆ. ತರಗತಿಯಲ್ಲಿ ಅದನ್ನು ನೋಡಿಕೊಂಡು ಮಕ್ಕಳು ಪುನರುಚ್ಚರಿಸುತ್ತಾರೆ. ಅನುಮಾನಗಳಿದ್ದರೆ ಕೇಳಿ ಬಗೆಹರಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು.

ನಾಟಕದ ಮೂಲಕ ಕಲಿಕೆ: ‘ನಾನು ರಂಗಕರ್ಮಿಯೂ ಆಗಿದ್ದು, ನಾಟಕಗಳ ಮೂಲಕವೂ ಇಂಗ್ಲಿಷ್ ವ್ಯಾಕರಣವನ್ನು ಕಲಿಸುತ್ತಿದ್ದೇನೆ. ಸಂಭಾಷಣೆಗಳನ್ನು ಹೇಳಿಸಿ ಅದರಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲದಲ್ಲಿ ವಾಕ್ಯ ರಚಿಸುವುದನ್ನು ಮನವರಿಕೆ ಮಾಡಿಸುತ್ತಿದ್ದೇನೆ. ಇದು ಮಕ್ಕಳ ಪರಿಣಾಮಕಾರಿ ಕಲಿಕೆಗೆ ಸಹಕಾರಿಯಾಗಿದೆ. ಚಿಲ್ಡ್ರನ್ಸ್ ಲಿಟರರಿ ಕ್ಲಬ್ ಮೂಲಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಉಚಿತವಾಗಿ ಆಯೋಜಿಸುತ್ತಿದ್ದೇನೆ’ ಎನ್ನುತ್ತಾರೆ ಆರ್.ಪೂರ್ಣಿಮಾ.

‘ಪೂರ್ಣಿಮಾ ಅವರು ಕಳೆದ ವರ್ಷ ಜೊಯಿಡಾಕ್ಕೆ ಬಂದಿದ್ದಾಗ ಇಂಗ್ಲಿಷ್‌ನ ಮೂಲ ಪಾಠವನ್ನು ಮಕ್ಕಳಿಗೆ ಬೋಧಿಸಿದ್ದರು. ಅದರ ಮುಂದುವರಿದ ಭಾಗವನ್ನು ಈ ವರ್ಷ ಹೇಳಿಕೊಡುತ್ತಿದ್ದಾರೆ’ ಎಂದು ಜಯಾನಂದ ಡೇರೇಕರ್ ಸಂತಸ ವ್ಯಕ್ತಪಡಿಸುತ್ತಾರೆ.

***

ಲಾಕ್‌ಡೌನ್‌ ನೆಪದಲ್ಲಿ ಹಳ್ಳಿಯ ಮಕ್ಕಳ ಕಲಿಕೆಯೂ ನಿಲ್ಲಬಾರದು. ಪೂರ್ಣಿಮಾ ಅವರಂಥ ನಿವೃತ್ತ ಇಂಗ್ಲಿಷ್ ಪ್ರೊಫೆಸರ್ ಮೂಲಕ ಮಕ್ಕಳಿಗೆ ಶಿಕ್ಷಣ ಸಿಗುತ್ತಿರುವುದು ಅದೃಷ್ಟ.

- ಡಾ.ಜಯಾನಂದ ಡೇರೇಕರ್, ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ

***

ಹಳ್ಳಿಯ ಮಕ್ಕಳೂ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು. ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಂಡಾಗ ಅವರಿಗೆ ಕೀಳರಿಮೆ ಕಾಡಬಾರದು ಎಂಬುದು ನನ್ನ ಆಶಯ.

- ಡಾ.ಆರ್.ಪೂರ್ಣಿಮಾ, ನಿವೃತ್ತ ಪ್ರೊಫೆಸರ್

***

ಶಿಕ್ಷಕರು ಎದುರು ಇಲ್ಲದಿದ್ದರೂ ಮೊಬೈಲ್ ಫೋನ್ ಮೂಲಕ ಇಂಗ್ಲಿಷ್ ಕಲಿಕೆ ಹೊಸ ಅನುಭವ ನೀಡುತ್ತಿದೆ. ಶಾಲಾ ತರಗತಿಯಲ್ಲೂ ಇದು ಅನುಕೂಲವಾಗಲಿದೆ.

- ನೇಹಾ ಡೇರೇಕರ್, 9ನೇ ತರಗತಿ ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು