ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 80ರಷ್ಟು ಅಂಗವಿಕಲರಿಗೆ ಸಿಗದ ‘ಯುಡಿಐಡಿ’

ರಾಜ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದ ‘ವಿಶಿಷ್ಟ ಗುರುತಿನ ಚೀಟಿ’ ಯೋಜನೆ
Last Updated 3 ಆಗಸ್ಟ್ 2020, 20:50 IST
ಅಕ್ಷರ ಗಾತ್ರ

ಹಾವೇರಿ: ಅಂಗವಿಕಲರಿಗೆ ದೇಶದಾದ್ಯಂತ ಉಪಯೋಗಕ್ಕೆ ಬರುವ ಮತ್ತು ವಿಶೇಷ ಮಾಹಿತಿಯುಳ್ಳ ‘ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ’ (ಯುಡಿಐಡಿ) ನೀಡುವ ಕೇಂದ್ರ ಸರ್ಕಾರದ ಯೋಜನೆ ರಾಜ್ಯದಲ್ಲಿ 2019ರಲ್ಲಿ ಆರಂಭವಾಗಿದ್ದರೂ ಈವರೆಗೆ ಶೇ 80ರಷ್ಟು ಅಂಗವಿಕಲರಿಗೆ ಯೋಜನೆಯ ಸ್ಮಾರ್ಟ್‌ಕಾರ್ಡ್‌ ಲಭ್ಯವಾಗಿಲ್ಲ.

ರಾಜ್ಯದಲ್ಲಿ 9.72 ಲಕ್ಷ ಅಂಗವಿಕಲರಿಗೆಈಗಾಗಲೇ ‘ಅಂಗವೈಕಲ್ಯ ಪ್ರಮಾಣ ಪತ್ರ’ ನೀಡಲಾಗಿತ್ತು. ಪ್ರಮಾಣ ಪತ್ರ ಪಡೆದ ಮತ್ತು ಪಡೆಯದ ಅಂಗವಿಕಲರಿಗೆ ಹೊಸದಾಗಿ ‘ಯುಡಿಐಡಿ ಸ್ಮಾರ್ಟ್‌ ಕಾರ್ಡ್’‌ಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಜುಲೈ ಅಂತ್ಯಕ್ಕೆ 1.75 ಲಕ್ಷ ಅಂಗವಿಕಲರಿಗೆ ಮಾತ್ರ ಯುಡಿಐಡಿ ಕಾರ್ಡ್‌ ಸಿಕ್ಕಿದೆ. 28,554 ಆನ್‌ಲೈನ್‌ ಅರ್ಜಿಗಳು ನಾನಾ ಕಾರಣಗಳಿಂದ ತಿರಸ್ಕೃತಗೊಂಡಿವೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ‘ಯುಡಿಐಡಿ ಕಾರ್ಡ್’‌ ತಲುಪಬೇಕು. ಆದರೆ, ಅರ್ಜಿ ಸಲ್ಲಿಸಿ ಮೂರ್ನಾಲ್ಕು ತಿಂಗಳು ಕಳೆದರೂ ಬಹಳಷ್ಟು ಮಂದಿಗೆ ಕಾರ್ಡ್‌ತಲುಪಿಲ್ಲ. ಆನ್‌ಲೈನ್‌ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ, ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಕಾರ್ಯಗಳು 5 ತಿಂಗಳಿಂದ ಜಿಲ್ಲಾಸ್ಪತ್ರೆಗಳಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂದು ಅಂಗವಿಕಲರು ಆರೋಪಿಸುತ್ತಾರೆ.

ರಾಮನಗರ ಶೇ 49, ಚಾಮರಾಜ ನಗರ ಶೇ 48 ಹಾಗೂ ಚಿತ್ರದುರ್ಗ ಶೇ 47ರಷ್ಟು ಪ್ರಗತಿ ಸಾಧಿಸಿ, ರಾಜ್ಯದಲ್ಲಿ ಮೊದಲ ಮೂರು ಸ್ಥಾನದಲ್ಲಿವೆ. ಹಾವೇರಿಯಲ್ಲಿ ಶೇ 28ರಷ್ಟು ಪ್ರಗತಿಯಾಗಿದೆ. ಬೆಂಗಳೂರು ನಗರ (ಶೇ 3) ಕೊನೆಯ ಸ್ಥಾನದಲ್ಲಿದೆ.

ಯುಡಿಐಡಿ ಯೋಜನೆಯನ್ನು 2018ನೇ ಸಾಲಿನಿಂದ ದೇಶದಾದ್ಯಂತ ಅನುಷ್ಠಾನಗೊಳಿಸಲಾಯಿತು. ಈ ಗಣಕೀಕೃತ ಸ್ಮಾರ್ಟ್‌ ಕಾರ್ಡ್‌, ಅಂಗವಿಕಲರ ಗುರುತು, ಅಂಗವೈಕಲ್ಯದ ಪ್ರಮಾಣ ಹಾಗೂ ಅಗತ್ಯ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಕಾರ್ಡ್‌ ನೆರವಿನಿಂದ ಎಲ್ಲ ಹಂತಗಳಲ್ಲಿ ಫಲಾನುಭವಿಗಳ ದೈಹಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಬಹುದು.

* ಕೊರೊನಾ ಸೋಂಕು ವ್ಯಾಪಕವಾಗಿರುವುದರಿಂದ ಅಂಗವಿಕಲರನ್ನು ಜಿಲ್ಲಾಸ್ಪತ್ರೆಗೆ ಕರೆಸಿ, ವೈದ್ಯಕೀಯ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ

- ಡಾ.ಪಿ.ಆರ್‌.ಹಾವನೂರ, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ, ಹಾವೇರಿ

* ಅರ್ಜಿಗಳನ್ನು ಜಿಲ್ಲಾ ಮಟ್ಟದ ತಜ್ಞರ ಸಮಿತಿಗೆ ರವಾನಿಸಲಾಗಿದೆ. ಅಂಗವಿಕಲರಿಗೆ ‘ಯುಡಿಐಡಿ ಕಾರ್ಡ್‌’ಗಳು ಶೀಘ್ರದಲ್ಲೇ ತಲುಪಲಿವೆ

- ಮಲ್ಲಿಕಾರ್ಜುನ ಮಠದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಹಾವೇರಿ

* ಅಧಿಕಾರಿಗಳ ನಿರ್ಲಕ್ಷ್ಯದಿಂದ ‘ಯುಡಿಐಡಿ’ ಸಿಗುವುದು ವಿಳಂಬವಾಗಿದೆ. ಅರ್ಜಿ ಸಲ್ಲಿಸಿದ ಎಲ್ಲ ಅಂಗವಿಕಲರಿಗೂ ಸ್ಮಾರ್ಟ್‌ ಕಾರ್ಡ್‌ ಕೊಡಲು ಶೀಘ್ರ ಕ್ರಮ ಕೈಗೊಳ್ಳಬೇಕು

-ಮೌನೇಶ ಬಡಿಗೇರ, ಅಂಗವಿಕಲ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT