ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಕ್ಕೆ ಭದ್ರತೆ ಇಲ್ಲ, ವಿಮೆ ಸೌಲಭ್ಯವೂ ಇಲ್ಲ: ಕಾರ್ಮಿಕರ ಆರೋಪ

ಕ್ವಾರಂಟೈನ್‌ ಕೇಂದ್ರದಲ್ಲಿ ತಣ್ಣೀರನಲ್ಲೇ ಸ್ನಾನ * ವಿಕ್ಟೋರಿಯಾ ಆಸ್ಪತ್ರೆ ಸ್ವಚ್ಛತಾ ಕಾರ್ಮಿಕರ ಪ್ರತಿಭಟನೆ
Last Updated 20 ಜುಲೈ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮನ್ನು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ವಾರ್ಡ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಮಗಾಗಲೀ, ನಮ್ಮ ಕುಟುಂಬಕ್ಕಾಗಲೀ ಸರ್ಕಾರ ಯಾವುದೇ ಭದ್ರತೆ ಕಲ್ಪಿಸಿಲ್ಲ. ಕೋವಿಡ್‌ ವಿಮೆಯ ಸೌಲಭ್ಯವೂ ನಮಗಿಲ್ಲ. ಸದಾ ಆತಂಕದಲ್ಲೇ ಕಾರ್ಯ ನಿರ್ವಹಿಸಬೇಕಾಗಿದೆ...‘

ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿರುವ ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕರ ಆರೋಪವಿದು.

ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗುಂಪಿನ ಕಾರ್ಮಿಕರು ತಮಗೂ ಭದ್ರತೆ ಕಲ್ಪಿಸಬೇಕು ಹಾಗೂ ಹೆಚ್ಚಿನ ಸವಲತ್ತು ಕಲ್ಪಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎಐಸಿಸಿಟಿಯು) ಅಧೀನದ ಕರ್ನಾಟಕ ಜನರಲ್‌ ಲೇಬರ್‌ ಯೂನಿಯನ್‌ನ ನೇತೃತ್ವದಲ್ಲಿ ಆಸ್ಪತ್ರೆ ಅವರಣದಲ್ಲಿ ಧರಣಿ ನಡೆಸಿದರು.

’ಸುಮಾರು 80 ಮಂದಿ ವಾರ್ಡ್‌ ಅಟೆಂಡರ್‌ಗಳು ಹಾಗೂ 120 ಮಂದಿ ಸ್ವಚ್ಛತಾ ಕಾರ್ಮಿಕರು ಇಲ್ಲಿ ನಾಲ್ಕು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಇದಾಗಿದ್ದರಿಂದ ನಮ್ಮಲ್ಲಿ ಬಹುತೇಕರು ಪಾಳಿಯ ಕರ್ತವ್ಯ ಮುಗಿಸಿದ ಬಳಿಕವೂ ಇಲ್ಲೇ ಕ್ವಾರಂಟೈನ್‌ ಕೇಂದ್ರದಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಈ ಕೇಂದ್ರಗಳಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಯೂ ಇಲ್ಲ. ಊಟ ತಿಂಡಿಯೂ ಸಮರ್ಪಕವಾಗಿ ಪೂರೈಕೆ ಆಗುವುದಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ನಮಗೆ ತಿಂಗಳಿಗೆ ಕೇವಲ ₹ 9ಸಾವಿರ ನೀಡುತ್ತಾರೆ. ವೈದ್ಯರಿಗೆ ಹಾಗೂ ಶುಶ್ರೂಷಕಿಯರಿಗೆ ಕಲ್ಪಿಸಿದಂತೆ ನಮಗೆ ಕೋವಿಡ್‌ ವಿಮೆ ಸೌಲಭ್ಯವಿಲ್ಲ. ಮನೆ ಮಂದಿಯಿಂದ ದೂರವಾಗಿ ನಾವು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿದ್ದೇವೆ. ಕೋವಿಡ್‌ ರೋಗಿಗಳಿರುವ ವಾರ್ಡ್‌ಗಳನ್ನು ಸ್ವಚ್ಛಗೊಳಿಸುವುದು, ಶೌಚಾಲಯ ಹಾಗೂ ಸ್ನಾನದ ಕೊಠಡಿಗಳನ್ನು ಶುಚಿಗೊಳಿಸುವುದು, ರೋಗಿಗಳಿಗೆ ಆಹಾರ ಪೂರೈಕೆ, ಅವರಿಗೆ ನೆರವಾಗುವುದು... ಮುಂತಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಜೀವದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕಲ್ಲವೇ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸ್ವಚ್ಛತಾ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

’ನಮಗೆ ಒದಗಿಸುವ ವೈಯಕ್ತಿಕ ಸುರಕ್ಷತಾ ಸಾಧನದ (ಪಿಪಿಇ ಕಿಟ್‌) ಗುಣಮಟ್ಟದ ಬಗ್ಗೆಯೂ ಸಂದೇಹವಿದೆ. ಅದನ್ನು ಧರಿಸಿ ಕೆಲಸ ಮಾಡಿದರೆ ತುರಿಕೆ ಉಂಟಾಗುತ್ತದೆ. ಕರ್ತವ್ಯ ಮುಗಿಸಿ ಕ್ವಾರಂಟೈನ್‌ಗೆ ತೆರಳುವವರಿಗೆ ಸ್ಯಾನಿಟೈಸರ್‌ ಕೂಡ ನೀಡುವುದಿಲ್ಲ. ಬಿಸಿನೀರು ವ್ಯವಸ್ಥೆ ಬೇಕೆಂದರೆ ವಾರ್ಡ್‌ಗಳಲ್ಲಿರುವುದನ್ನೇ ಬಳಸಿ’ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ನಾವು ನಮ್ಮ ಪುಟ್ಟ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿರಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಮ್ಮಲ್ಲಿ ಅನೇಕರು ಮನೆಗೆ ತೆರಳದೇ ತಿಂಗಳ ಮೇಲಾಯಿತು. ಮನೆ ಮಠ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಲಿ. ನಮ್ಮ ಸೇವೆಯನ್ನು ಕಾಯಂಗೊಳಿಸಿ, ಕನಿಷ್ಠ ವೇತನದ ನಿಯಮ ಪ್ರಕಾರವಾದರೂ ವೇತನ ನೀಡಲಿ’ ಎಂದು ಸ್ವಚ್ಛತಾ ಕಾರ್ಮಿಕರೊಬ್ಬರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT