ಮೇಲ್ಜಾತಿ ಮೀಸಲಾತಿ: ಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ

7

ಮೇಲ್ಜಾತಿ ಮೀಸಲಾತಿ: ಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ

Published:
Updated:

ಚೆನ್ನೈ: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ. 

‘ಸರ್ಕಾರದ ಈ ನಿರ್ಧಾರ ನಮ್ಮ ಸಂವಿಧಾನದ ಮೂಲಸ್ವರೂಪದ ಉಲ್ಲಂಘನೆ’ ಎಂದು ದೂರಿರುವ  ಡಿಎಂಕೆಯು ಶುಕ್ರವಾರ ಈ ಅರ್ಜಿ ಸಲ್ಲಿಸಿದೆ. 

‘ಮೀಸಲಾತಿ ಎನ್ನುವುದು ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಶತಮಾನಗಳಿಂದ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳಿಂದ ವಂಚಿತರಾಗಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕಾಗಿ ಮೀಸಲಾತಿ ನೀತಿ ಜಾರಿಗೆ ತರಲಾಗಿದೆ’ ಎಂದು ಅರ್ಜಿದಾರರಾದ  ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್‌. ಭಾರತಿ ಅಭಿಪ್ರಾಯಪಟ್ಟಿದ್ದಾರೆ.

‘ಮೀಸಲಾತಿ ಗರಿಷ್ಠ ಮಿತಿ ಶೇ 50ರಷ್ಟಿರಬೇಕು ಎಂಬುದು ಸಂವಿಧಾನದ ಮೂಲಸ್ವರೂಪದಲ್ಲಿದೆ. ಇದು ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಹಲವು ಪ್ರಕರಣಗಳಲ್ಲಿ ಹೇಳಿದೆ’ ಎಂದು ಅವರು ತಿಳಿಸಿದ್ದಾರೆ. 

‘ಈಗಾಗಲೇ ತಮಿಳುನಾಡಿನಲ್ಲಿ ಮೀಸಲಾತಿ ಗರಿಷ್ಠ ಮಿತಿ ಶೇ 69ರಷ್ಟಿದೆ. ಸಂವಿಧಾನದಲ್ಲಿನ 9ನೇ ಅನುಸೂಚಿಯನ್ವಯ ಈ ಮೀಸಲಾತಿ ಕಲ್ಪಿಸಲಾಗಿದೆ. 9ನೇ ಅನುಸೂಚಿಯಲ್ಲಿರುವ ಅಂಶಗಳನ್ನು ಕಾನೂನಿನಲ್ಲಿ ಪ್ರಶ್ನಿಸುವ ಹಾಗಿಲ್ಲ. ಆದರೆ, ಈಗ ಮತ್ತೆ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ನೀಡಿದರೆ, ರಾಜ್ಯದಲ್ಲಿ ಮೀಸಲಾತಿ ಗರಿಷ್ಠ ಮಿತಿ ಶೇ 79ಕ್ಕೆ ಏರಲಿದೆ. ಇದು ಅಸಂವಿಧಾನಿಕ’ ಎಂದು ಅವರು ಹೇಳಿದ್ದಾರೆ. 

ಅರ್ಜಿಯನ್ನು ಇದೇ 21ಕ್ಕೆ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. 

ಉತ್ತರಪ್ರದೇಶದಲ್ಲಿ ಜಾರಿ

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ, ಸರ್ಕಾರಿ ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿ ಶೇ10ರಷ್ಟು ಮೀಸಲಾತಿ ನೀಡುವ ನೀತಿಯನ್ನು ಜಾರಿಗೊಳಿಸಲು ಉತ್ತರಪ್ರದೇಶ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೀಸಲಾತಿ ನೀತಿ ಜಾರಿಗೆ ಒಪ್ಪಿಗೆ ನೀಡಲಾಯಿತು ಎಂದು ಸಚಿವ ಶ್ರೀಕಾಂತ್ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಶೇ 10ರಷ್ಟು ಮೀಸಲಾತಿ ನೀಡುವುದಕ್ಕೆ ಒಪ್ಪಿಗೆ ಸೂಚಿಸಿರುವ 3ನೇ ರಾಜ್ಯ ಉತ್ತರ ಪ್ರದೇಶ. ಈಗಾಗಲೇ ಗುಜರಾತ್‌ ಹಾಗೂ ಜಾರ್ಖಂಡ್ ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಿವೆ.

ಸಂವಿಧಾನಕ್ಕೆ 124ನೇ ತಿದ್ದುಪಡಿ ತರುವ ಮೂಲಕ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ, ಸರ್ಕಾರಿ ಉದ್ಯೋಗ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಇದಕ್ಕೆ ಸಹಿ ಹಾಕಿದ್ದು, ಕಾಯ್ದೆಯಾಗಿ ಜಾರಿಗೆ ಬಂದಿದೆ.  

     

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !