ಶುಕ್ರವಾರ, ಜೂನ್ 25, 2021
21 °C
ಜಾಗತಿಕ ರಾಜಕೀಯ ಸಮಸ್ಯೆಗಳ ವಿಶ್ಲೇಷಣಾ ಸಂಸ್ಥೆ ಯುರೇಷ್ಯಾ ಗ್ರೂಪ್‌ನ ವರದಿ

ಬಿಕ್ಕಟ್ಟು ತರಬಲ್ಲ 10 ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

2020ರಲ್ಲಿ ಕಂಡು ಬರಬಹುದಾದ 10 ಕಳವಳಕಾರಿ ವಿಚಾರಗಳು ಈ ವರ್ಷ ಜಗತ್ತಿನಲ್ಲಿ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಬಹುದು– ಹೀಗೆಂದು ರಾಜಕೀಯ ಸಮಸ್ಯೆಗಳ ವಿಶ್ಲೇಷಣೆ, ಸಲಹೆ ಮತ್ತು ಸಮಾಲೋಚನಾ ಸಂಸ್ಥೆ ಯುರೇಷ್ಯಾ ಗ್ರೂಪ್‌ನ ವರದಿ ಹೇಳಿದೆ. 

ಕಳೆದ ಒಂದು ದಶಕದಿಂದ ಭೌಗೋಳಿಕ–ರಾಜಕೀಯ ಕಳವಳಗಳ ಮಟ್ಟ ಏರುತ್ತಲೇ ಇದೆ. ಆದರೆ, ಇದಕ್ಕೆ ಅಂತರರಾಷ್ಟ್ರೀಯ ಬಿಕ್ಕಟ್ಟಿನ ಸ್ವರೂಪ ಇರಲಿಲ್ಲ. ಈ ಭೌಗೋಳಿಕ ರಾಜಕಾರಣವನ್ನು ಹೊರಗಿಟ್ಟು ನೋಡಿದರೆ ಜಾಗತಿಕ ಮಟ್ಟದ ಇತರ ಅಂಶಗಳು ಅನುಕೂಲಕಾರಿಯೇ ಆಗಿದ್ದವು. ಆದರೆ, ಈಗ ಇವೂ ಬದಲಾಗುತ್ತಿವೆ. 

ಹವಾಮಾನ ಬದಲಾವಣೆಯು ಆರ್ಥಿಕ ಪ್ರಗತಿಗೆ ಬಹುದೊಡ್ಡ ತೊಡಕಾಗಲಿದೆ ಎಂಬುದು ಹೆಚ್ಚು ಕಳವಳ ಮೂಡಿಸಿದೆ. ಜಾಗತಿಕ ಮಟ್ಟದ ರಾಜಕೀಯ ವೇದಿಕೆಗಳಲ್ಲಿ ಈ ವಿಚಾರವೇ ಮುಖ್ಯ ಚರ್ಚೆಯಾಗುತ್ತಿದೆ. ಅರ್ಥ ವ್ಯವಸ್ಥೆಯ ಏರಿಳಿತ ಸರಪಣಿ ಮತ್ತು ಭೌಗೋಳಿಕ ರಾಜಕಾರಣದ ಪ್ರವೃತ್ತಿಗಳು ಒಂದಲ್ಲ ಒಂದು ದಿನ ಅನುಕೂಲಕಾರಿಯಾಗಿ ಬದಲಾಗಬಹುದು. ಆದರೆ, ಹವಾಮಾನ ಬದಲಾವಣೆಯ ವಿಚಾರದಲ್ಲಿ ಅಂತಹ ಆಶಾವಾದ ಇಲ್ಲ. 

2020ರಲ್ಲಿ, ಇತ್ತೀಚಿನ ತಲೆಮಾರುಗಳಲ್ಲಿ ನಾವು ಕಂಡಿಲ್ಲದ ಹಲವು ನಕಾರಾತ್ಮಕ ಅಂಶಗಳು ನಮ್ಮ ಮುಂದಿವೆ. ಹದಗೆಡುತ್ತಿರುವ ಹವಾಮಾನವು ಜಾಗತಿಕ ಬಿಕ್ಕಟ್ಟು ಸೃಷ್ಟಿಸುವ ಅಪಾಯ ಎದ್ದು ಕಾಣಿಸುತ್ತಿದೆ. ಸರ್ಕಾರ ಮತ್ತು ಖಾಸಗಿ ವಲಯವು ಹೊಂದಿರುವ ಸಂಪನ್ಮೂಲವನ್ನು ಬಳಸಿಕೊಂಡು ಸಮಸ್ಯೆಯನ್ನು ನಿಭಾಯಿಸುವುದು ಹಿಂದಿಗಿಂತ ಈಗ ಸುಲಭ. ಆದರೆ, ಭೌಗೋಳಿಕ–ರಾಜಕೀಯ ಹಿಂಜರಿತವು ಜಾಗತಿಕ ಸಹಕಾರ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಿಸಿದೆ. ಒಟ್ಟಿನಲ್ಲಿ, 2020 ಕಳವಳಕಾರಿ ಎಂದು ಯುರೇಷ್ಯಾ ಗ್ರೂಪ್‌ನ ವರದಿ ಇಡೀ ಜಗತ್ತನ್ನು ಚಿಂತನೆಗೆ ಹಚ್ಚಿದೆ. 

ಅಮೆರಿಕದಲ್ಲಿ ಅಪನಂಬಿಕೆ

ಕಳವಳಗಳ ಪಟ್ಟಿಯಲ್ಲಿ ಅಮೆರಿಕದ ಆಂತರಿಕ ರಾಜಕಾರಣವನ್ನು ಸೇರಿಸಿಕೊಂಡಿಲ್ಲ. ಅಮೆರಿಕದ ಸಂಸ್ಥೆಗಳು ಎಂತಹ ಬಿಕ್ಕಟ್ಟನ್ನೂ ಎದುರಿಸಿ ನಿಲ್ಲಬಲ್ಲಷ್ಟು ಶಕ್ತ ಎಂಬುದು ಇದಕ್ಕೆ ಕಾರಣ. ಆದರೆ, ಈ ವರ್ಷ ಈ ಸಂಸ್ಥೆಗಳು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪರೀಕ್ಷೆಗೆ ಒಳಗಾಗಲಿವೆ. ಅಮೆರಿಕದ ಈ ಬಾರಿಯ ಚುನಾವಣೆಯು ಅಸಿಂಧು ಎಂದು ದೊಡ್ಡ ಸಂಖ್ಯೆಯ ಜನರು ಭಾವಿಸುವ ಅಪಾಯ ಇದೆ. ಚುನಾವಣಾ ಫಲಿತಾಂಶದ ಬಳಿಕವೂ ಅನಿಶ್ಚಿತ ಸ್ಥಿತಿ ಮುಂದುವರಿಯಲಿದೆ. ಇದು ಸೃಷ್ಟಿಸುವ ಶೂನ್ಯವು ವಿದೇಶಾಂಗ ನೀತಿಯ ಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಾರ್ಯಸೂಚಿ ಜಾರಿಗೆ ದೊಡ್ಡ ತಡೆಯಾಗಿ ನಿಂತದ್ದು ಅಲ್ಲಿನ ಸಂಸ್ಥೆಗಳು. ಆದರೆ, ದೇಶವನ್ನು ವಿಭಜಿಸುವುದರಿಂದ ಅವರನ್ನು ತಡೆಯಲು ಈ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಈ ಪ್ರಮಾಣದಲ್ಲಿ ವಿಭಜನೆಗೊಂಡ ದೇಶವು ಮುಂದಕ್ಕೆ ಸಾಗಲು ಸಾಧ್ಯವೇ? ಜನಪ್ರತಿನಿಧಿ ಸಭೆಯು ಟ್ರಂಪ್‌ ಅವರನ್ನು ವಾಗ್ದಂಡನೆಗೆ ಒಳಪಡಿಸಿದೆ. ಆದರೆ, ಸೆನೆಟ್‌ ಅವರನ್ನು ಖುಲಾಸೆಗೊಳಿಸಲಿದೆ. ಅಧ್ಯಕ್ಷರು ಕಾನೂನಿಗಿಂತ ಮೇಲೆ ಎಂದು ತೋರಿಸುವುದಕ್ಕಾಗಿಯೇ ಟ್ರಂಪ್‌ ಮೇಲಿನ ವಾಗ್ದಂಡನೆಯನ್ನು ರದ್ದು ಮಾಡಿದ್ದು ರಾಜಕೀಯ ಕ್ರಮ ಎಂದು ಡೆಮಾಕ್ರಟ್‌ ಪಕ್ಷದ ಬೆಂಬಲಿಗರು ಭಾವಿಸಬಹುದು. ಇದರಿಂದಾಗಿ, ಚುನಾವಣಾ ಫಲಿತಾಂಶದಲ್ಲಿ ಹಸ್ತಕ್ಷೇಪ ಮಾಡಲು ತಮಗೆ ಅವಕಾಶ ಹೆಚ್ಚು ಎಂದು ಟ್ರಂಪ್‌ ಭಾವಿಸಬಹುದು. ಪರಿಣಾಮವಾಗಿ, ಅಧ್ಯಕ್ಷೀಯ ಚುನಾವಣೆಯ ಸಿಂಧುತ್ವವೇ ಪ್ರಶ್ನಾರ್ಹ ಆಗಬಹುದು.

ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಪ್ರಶ್ನೆಯೂ ಇದೆ. ಭದ್ರತೆಯನ್ನು ಇನ್ನಷ್ಟು ಕಟ್ಟುನಿಟ್ಟು ಮಾಡುವ ಮೂಲಕ, ಆಗಬಹುದಾದ ಹಾನಿಯನ್ನು ಕನಿಷ್ಠಗೊಳಿಸಲು ಟ್ರಂಪ್‌ ಆಗಲಿ, ಸೆನೆಟ್‌ ಆಗಲಿ ಪ್ರಯತ್ನಿಸುವ ಸಾಧ್ಯತೆ ಇಲ್ಲ.

ಚುನಾವಣೆಯನ್ನು ‘ತಿರುಚಲಾಗಿದೆ’ ಎಂಬ ಭಾವನೆ ದೊಡ್ಡ ವರ್ಗದಲ್ಲಿ ಚುನಾವಣೆಗೂ ಮುನ್ನವೇ ಇದೆ. ಈಗಾಗಲೇ ಹಲವು ಸಮೀಕ್ಷೆಗಳು ಇದನ್ನು ಪುಷ್ಟೀಕರಿಸಿವೆ. 2019ರಲ್ಲಿ ಐಪಿಎಸ್‌ಒಎಸ್‌ ನಡೆಸಿದ ಸಮೀಕ್ಷೆ ಪ್ರಕಾರ, ಅಮೆರಿಕದ ಶೇ 53ರಷ್ಟು ಮಂದಿ ಮಾತ್ರ ಚುನಾವಣೆ ಮುಕ್ತವಾಗಿದೆ ಎಂಬ ಭಾವನೆ ಹೊಂದಿದ್ದಾರೆ. ಡೆಮಾಕ್ರಟ್‌ ಪಕ್ಷದ ಬೆಂಬಲಿಗರಲ್ಲಿ ಈ ಅಪನಂಬಿಕೆ ತೀವ್ರವಾಗಿದೆ. ಚುನಾವಣೆ ಮುಕ್ತವಾಗಿದೆ ಎಂದು 2016ರಲ್ಲಿ ಡೆಮಾಕ್ರಟ್‌ ಪಕ್ಷದ ಬೆಂಬಲಿಗರಲ್ಲಿ ಶೇ 84ರಷ್ಟು ಮಂದಿ ಭಾವಿಸಿದ್ದರು. ಈ ಬಾರಿ ಅದು ಶೇ 39ಕ್ಕೆ ಇಳಿದಿದೆ.

ತಾಂತ್ರಿಕ ಧ್ರುವೀಕರಣ

ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರವು 2020ರಲ್ಲಿ ಜಾಗತಿಕ ವಾಣಿಜ್ಯ ಧ್ರುವೀಕರಣಕ್ಕೆ ಕಾರಣವಾಗುವ ಅಪಾಯವಿದೆ. ಚೀನಾದ ತಾಂತ್ರಿಕ ಸೇವೆ ಮತ್ತು ಉಪಕರಣಗಳನ್ನು ಅಮೆರಿಕ ನಿಷೇಧಿಸಿದೆ. ಹುವಾವೆಯ 5ಜಿ ತಂತ್ರಜ್ಞಾನದ ನಿಷೇಧ ಇದಕ್ಕೆ ಸ್ಪಷ್ಟ ಉದಾಹರಣೆ. ಅಂತೆಯೇ, ಅಮೆರಿಕದ ತಂತ್ರಾಂಶಗಳು ಮತ್ತು ತಾಂತ್ರಿಕ ಉಪಕರಣಗಳ ಮೇಲೆ ಚೀನಾ ನಿಷೇಧ ಹೇರಿದೆ. ಎರಡೂ ದೇಶಗಳ ಕಂಪನಿಗಳು ಈ ತಂತ್ರಾಂಶ ಮತ್ತು ಉಪಕರಣಗಳನ್ನು ತಾವೇ ಆಭಿವೃದ್ಧಿಪಡಿಸಬೇಕಾದ ಅನಿವಾರ್ಯಕ್ಕೆ ಬಿದ್ದಿವೆ. ಅಮೆರಿಕದ ಸಿಲಿಕಾನ್ ವ್ಯಾಲಿಯಂಥದ್ದೇ ಸೆಮಿಕಂಡಕ್ಟರ್ ನಿರ್ಮಾಣ ವಲಯವನ್ನು ದಕ್ಷಿಣ ಚೀನಾದಲ್ಲಿ ಅಭಿವೃದ್ಧಿಪಡಿಸಲು ಚೀನಾ ಮುಂದಾಗಿದೆ. ಅಲ್ಲದೆ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿ.ವಿ.ಗಳಿಗಾಗಿ ನೂತನ ಕಾರ್ಯಚರಣೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಚೀನಾ ರೂಪುರೇಷೆ ಸಿದ್ಧಪಡಿಸಿದೆ. ಇದರಿಂದ ಮುಕ್ತ ಮಾರುಕಟ್ಟೆಯ ದೇಶಗಳಲ್ಲಿ ಅಮೆರಿಕ ನಿರ್ಮಿತ ತಂತ್ರಜ್ಞಾನಗಳು ಮತ್ತು ಚೀನಾ ನಿರ್ಮಿತ ತಂತ್ರಜ್ಞಾನಗಳು ಪೈಪೋಟಿ ನಡೆಸಲಿವೆ. ಇದು ಆಯಾ ದೇಶಗಳಲ್ಲಿ ಆಂತರಿಕ ಸಂಘರ್ಷಕ್ಕೂ ಕಾರಣವಾಗುವ ಅಪಾಯವಿದೆ. ಇದು ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಎರಡು ಬಣಗಳ ಸೃಷ್ಟಿಗೆ ಕಾರಣವಾಗಲಿದೆ.

* ಭಾರತವು ಹಲವು ತಂತ್ರಜ್ಞಾನ ಮತ್ತು ತಂತ್ರಜ್ಞಾನ ಆಧರಿತ ಉಪಕರಣಗಳಿಗಾಗಿ ಅಮೆರಿಕ ಮತ್ತು ಚೀನಾವನ್ನು ಅವಲಂಬಿಸಿದೆ. ಈ ಎರಡೂ ರಾಷ್ಟ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯ ಭಾರತಕ್ಕೆ ಎದುರಾಗಲಿದೆ

ಅಮೆರಿಕ–ಚೀನಾ ಶೀತಲ ಸಮರ

ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರವು, ಶೀತಲ ಸಮರವಾಗುವ ಎಲ್ಲಾ ಅಪಾಯಗಳಿವೆ. ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳು ತಂತ್ರಜ್ಞಾನ ದೈತ್ಯ ದೇಶಗಳಾದ ಅಮೆರಿಕ ಅಥವಾ ಚೀನಾವನ್ನು ಅವಲಂಬಿಸಲೇಬೇಕಾದ ಅನಿವಾರ್ಯಕ್ಕೆ ಸಿಲುಕುತ್ತವೆ. ಚೀನಾವನ್ನು ಅವಲಂಬಿಸುವ ರಾಷ್ಟ್ರಗಳು ಅಮೆರಿಕದ ಆರ್ಥಿಕ ನಿರ್ಬಂಧಕ್ಕೆ ಗುರಿಯಾಗಬೇಕಾಗುತ್ತದೆ. ಅಮೆರಿಕವನ್ನು ಅವಲಂಬಿಸುವ ರಾಷ್ಟ್ರಗಳು ಚೀನಾದ ಆರ್ಥಿಕ ನಿರ್ಬಂಧ ಎದುರಿಸಬೇಕಾಗುತ್ತದೆ.

* ಇರಾನ್ ಮೇಲೆ ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧದ ಪರಿಣಾಮವಾಗಿ ಭಾರತವು ಕಚ್ಚಾತೈಲಕ್ಕಾಗಿ ಸೌದಿ ಅರೇಬಿಯಾವನ್ನು ನೆಚ್ಚಿಕೊಂಡಿದೆ. ಚೀನಾ–ಅಮೆರಿಕದ ನಿರ್ಬಂಧಗಳು ಹೇರಿಕೆಯಾದರೆ, ಭಾರತದ ಜಾಗತಿಕ ವಾಣಿಜ್ಯ ಸಂಬಂಧಕ್ಕೆ ಧಕ್ಕೆಯಾಗಲಿದೆ. ಭಾರತವು ಈಗ ಆಮದು ಮಾಡಿಕೊಳ್ಳುತ್ತಿರುವ ಎಲ್ಲಾ ಸರಕುಗಳ ಪೂರೈಕೆ ಮತ್ತು ಬೆಲೆಯಲ್ಲಿ ಏರುಪೇರು ಆಗಲಿದೆ

ಎಂಎನ್‌ಸಿಗಳಿಗೆ ಸಂಕಷ್ಟ

ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಪರಿಕಲ್ಪನೆಗಳಿಂದ ಬಹುತೇಕ ರಾಷ್ಟ್ರಗಳು ದೂರ ಸರಿಯುತ್ತಿವೆ. ಜಾಗತಿಕ ಮಟ್ಟದ ಸಹಕಾರ ಮತ್ತು ವಾಣಿಜ್ಯ ಒಪ್ಪಂದಗಳು ಈಗ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಹಲವು ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದಕ್ಕಷ್ಟೇ ಒಲವು ತೋರುತ್ತಿವೆ. ಜಾಗತೀಕರಣದ ಕಾರಣದಿಂದಾಗಿ ಏಕ ಸ್ವರೂಪದ ನಿಯಮಗಳು ಮತ್ತು ಏಕದರದ ತೆರಿಗೆಗಳು ಬಹುರಾಷ್ಟ್ರೀಯ ಕಂಪನಿಗಳಿಗೆ (ಎಂಎನ್‌ಸಿ) ಅನ್ವಯವಾಗುತ್ತಿದ್ದವು. ಆದರೆ ಹಲವು ರಾಷ್ಟ್ರಗಳು ಈಗ ದ್ವಿಪಕ್ಷೀಯ ಒಪ್ಪಂದಕ್ಕೆ ಒಲವು ತೋರುತ್ತಿರುವ ಕಾರಣ, ಏಕ ನಿಯಮ ಮತ್ತು ಏಕದರದ ತೆರಿಗೆ ಅನುಕೂಲಗಳು ಇಲ್ಲವಾಗುತ್ತಿವೆ. ಜಾಗತಿಕ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಈ ಕಂಪನಿಗಳು, ಇದರಿಂದಲೂ ಮತ್ತಷ್ಟು ಸಂಕಷ್ಟ ಎದುರಿಸಬೇಕಿದೆ.

* ಭಾರತದ ಬಹುರಾಷ್ಟ್ರೀಯ ಕಂಪನಿಗಳೂ ಈ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ವಿವಿಧ ಎಂಎನ್‌ಸಿಗಳಲ್ಲಿ ದುಡಿಯುತ್ತಿರುವ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ

ಮೋದಿಮಯ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯಲ್ಲಿ ವಿವಾದಾತ್ಮಕ ವಿಚಾರಗಳಲ್ಲಿಯೇ ಹೆಚ್ಚು ಆಸಕ್ತಿ ತೋರಿದ್ದಾರೆ. ಇದಕ್ಕಾಗಿ ಆರ್ಥಿಕ ಕಾರ್ಯಸೂಚಿಯನ್ನು ಕೈಬಿಟ್ಟಿದ್ದಾರೆ. 2020ರ ಇಡೀ ವರ್ಷ ಇದರ ಪರಿಣಾಮ ಇರಲಿದೆ. ಕೋಮು ಮತ್ತು ಜನಾಂಗೀಯ ಸಂಘರ್ಷ ತೀವ್ರಗೊಳ್ಳಲಿದೆ; ವಿದೇಶಾಂಗ ನೀತಿಯಲ್ಲೂ ಅದು ಪ್ರತಿಫಲಿಸಲಿದೆ. ಅರ್ಥ ವ್ಯವಸ್ಥೆಗೆ ಹಿನ್ನಡೆ ಆಗಲಿದೆ.

ಮೋದಿ ನೇತೃತ್ವದ ಸರ್ಕಾರವು ಇತ್ತೀಚಿನ ತಿಂಗಳಲ್ಲಿ ಹಲವು ವಿಚಾರಗಳಲ್ಲಿ ವ್ಯಸ್ತವಾಗಿತ್ತು. ಜಮ್ಮು–ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನವನ್ನು ರದ್ದು ಮಾಡಲಾಗಿದೆ. ಅಸ್ಸಾಂನಲ್ಲಿ ಎನ್‌ಆರ್‌ಸಿಯಿಂದಾಗಿ 19 ಲಕ್ಷ ಮಂದಿ ಪೌರತ್ವ ಕಳೆದುಕೊಂಡಿದ್ದಾರೆ. ಭಾರತದ ಪೌರತ್ವ ಪಡೆಯಲು (ವಲಸಿಗರಿಗೆ) ಧರ್ಮವು ಮಾನದಂಡವಾಗಿರುವ ಕಾಯ್ದೆಯನ್ನು ಇದೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಇದರ ಹಿಂದೆ ಇರುವುದು ಗೃಹ ಸಚಿವ ಅಮಿತ್‌ ಶಾ.

ಭಾರತದ ಜಾತ್ಯತೀತ ಅಸ್ತಿತ್ವವೇ ನಷ್ಟವಾಗಲಿದೆ ಎಂಬ ಭಯ ಹಲವು ಭಾರತೀಯರಲ್ಲಿ ಇದೆ. ಪ್ರತಿಭಟನೆಗಳೂ ನಡೆಯುತ್ತಿವೆ. ಸರ್ಕಾರದ ಕಠಿಣ ಪ್ರತಿಕ್ರಿಯೆ ಪ್ರತಿಭಟನೆಗಳಿಗೆ ಇನ್ನಷ್ಟು ಪ್ರೇರಣೆ ನೀಡಲಿದೆ. ಮೋದಿ ಅವರು ಹಿಂದೆ ಸರಿಯುವುದಿಲ್ಲ. ಸರ್ಕಾರವು ತನ್ನ ಹೊಸ ಕಾರ್ಯಸೂಚಿಯನ್ನು ಜಾರಿ ಮಾಡಲಿದೆ. ರಾಜ್ಯ ಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ಕೇಂದ್ರ ಸರ್ಕಾರಕ್ಕೆ ನೇರ ಸವಾಲು ಒಡ್ಡಲಿದ್ದಾರೆ.

ಸಾಮಾಜಿಕ ಕಾರ್ಯಸೂಚಿಯ ಮೇಲಿನ ಈ ಒತ್ತು ವಿದೇಶಾಂಗ ನೀತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಮಾನವ ಹಕ್ಕುಗಳ ವಿರುದ್ಧದ ಕ್ರಮಗಳನ್ನು ಹಲವು ದೇಶಗಳು ಹತ್ತಿರದಿಂದ ಗಮನಿಸುತ್ತಿವೆ. ಪರಿಣಾಮವಾಗಿ ಭಾರತದ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು. ಅಮೆರಿಕದ ಜತೆಗಿನ ಸಂಬಂಧವೂ ಸವಾಲಾಗಬಹುದು. ಅಮೆರಿಕ ಕಾಂಗ್ರೆಸ್‌ನ ಹಲವು ಸದಸ್ಯರಿಗೆ ಭಾರತದ ನೀತಿಗಳ ಬಗ್ಗೆ ಕಳವಳ ಇದೆ. ರಷ್ಯಾದಿಂದ ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸುತ್ತಿರುವುದಕ್ಕೆ ಆಕ್ಷೇಪ ಇದೆ. ಇದು ನಿರ್ಬಂಧಗಳಿಗೂ ಕಾರಣವಾಗಬಹುದು. ಎಸ್‌–400 ಖರೀದಿಯು ಅಮೆರಿಕವು ಭಾರತಕ್ಕೆ ಇತರ ಸೇನಾ ಸಲಕರಣೆ ಪೂರೈಸುವುದರ ಮೇಲೆ ಪರಿಣಾಮ ಬೀರಬಹುದು. ಭಾರತ–ಅಮೆರಿಕ ದ್ವಿಪಕ್ಷೀಯ ಸಂಬಂಧದಲ್ಲಿ ಶಸ್ತ್ರಾಸ್ತ್ರ ಮಾರಾಟ ಬಹುದೊಡ್ಡ ಅಂಶ.

ಆರ್ಥಿಕ ವಿಚಾರಗಳೇ ಹೆಚ್ಚು ಗಮನಾರ್ಹ. ಮೋದಿಯನ್ನು ಬೆಳೆಸಿದ ಆರ್‌ಎಸ್‌ಎಸ್‌ಗೆ ಮುಕ್ತ ಮಾರುಕಟ್ಟೆಯ ಬಗ್ಗೆ ಒಲವಿಲ್ಲ. ಆರ್ಥಿಕ ರಾಷ್ಟ್ರೀಕರಣವನ್ನು ಈ ಸಂಘಟನೆ ಬೆಂಬಲಿಸುತ್ತಿದೆ. ಆರ್‌ಎಸ್‌ಎಸ್‌ ಪ್ರಭಾವ ಹೆಚ್ಚಾದಷ್ಟು ಅರ್ಥ ವ್ಯವಸ್ಥೆಯ ಸುಧಾರಣೆಗಳಿಗೆ ಅವಕಾಶ ಕಡಿಮೆ. ಅರ್ಥ ವ್ಯವಸ್ಥೆ ಕುಂಟುತ್ತಿದೆ. ತ್ರೈಮಾಸಿಕ ಪ್ರಗತಿಯು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 4.5ಕ್ಕೆ ಇಳಿದಿದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್‌ಸಿಇಪಿ) ಭಾರತ ಹಿಂದಕ್ಕೆ ಸರಿಯಲು ಆರ್‌ಎಸ್‌ಎಸ್‌ ಪ್ರಭಾವವೇ ಕಾರಣ.

ಭಾರತದ ಹಣಕಾಸು ಸ್ಥಿತಿಯು ಸಮತೋಲನದಲ್ಲಿ ಇಲ್ಲ. ಆರ್ಥಿಕ ಕೊರತೆಯು ಹೆಚ್ಚುತ್ತಿದೆ. ಜಿಎಸ್‌ಟಿ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ. ದುರ್ಬಲ ಅರ್ಥವ್ಯವಸ್ಥೆಯಿಂದಾಗಿ ಆರ್ಥಿಕ ರಾಷ್ಟ್ರೀಕರಣ ಮತ್ತು ರಕ್ಷಣಾವಾದ ಮೇಲುಗೈ ಪಡೆಯಬಹುದು. 2020ರ ಉದ್ದಕ್ಕೂ ಸಮಸ್ಯೆ ಇರಬಹುದು.

ಯುರೋಪ್‌ನ ದ್ವಂದ್ವ

ತನ್ನದೇ ಆದ ವಿದೇಶಾಂಗ ಮತ್ತು ವ್ಯಾಪಾರ ನೀತಿ ರೂಪಿಸುವುದಾಗಿ ಯುರೋಪ್‌ ಹಲವು ವರ್ಷಗಳಿಂದ ಹೇಳುತ್ತಲೇ ಇದೆ. ಆದರೆ, ಅಮೆರಿಕ ಅಥವಾ ಚೀನಾವನ್ನು ಹಿಂದಕ್ಕೆ ತಳ್ಳಲು ಯುರೋಪ್‌ಗೆ ಸಾಧ್ಯವಾಗಿಲ್ಲ. ಆದರೆ, ಈಗ, ತಮಗೆ ಪ್ರತಿಸ್ಪರ್ಧಿಯಾಗಿರುವ ಆರ್ಥಿಕ ಮತ್ತು ರಾಜಕೀಯ ಮಾದರಿಗಳ ಮುಂದೆ ಐರೋಪ್ಯ ಒಕ್ಕೂಟವು ತನ್ನನ್ನು ಹೆಚ್ಚು ಆಕ್ರಮಣಕಾರಿಯಾಗಿ ಸಮರ್ಥಿಸಿಕೊಳ್ಳಲಿದೆ ಎಂಬುದು ಯುರೋಪ್‌ನ ಅಧಿಕಾರಿಗಳ ನಂಬಿಕೆ. ಇದರ ಜತೆಗೆ, ತಮ್ಮ ವಾಣಿಜ್ಯ ಪಾಲುದಾರರು ನಿಯಮಬದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಭಾವಿಸುವುದು ಮುಗ್ಧತೆ ಎಂಬ ಅರಿವು ಒಕ್ಕೂಟದಲ್ಲಿ ಉಂಟಾಗಿದೆ. ಹಾಗಾಗಿ, ಒಕ್ಕೂಟವು ನ್ಯಾಯಯುತವಲ್ಲದ ಪದ್ಧತಿ, ಏಕಪಕ್ಷೀಯ ನಿರ್ಧಾರಗಳಿಗೆ ಮುಂದಾಗಬಹುದು. ಒಕ್ಕೂಟದ ಬಗ್ಗೆ ಟ್ರಂಪ್‌ ಅವರಿಗೆ ಅಂತಹ ಒಲವು ಇಲ್ಲ. ಚೀನಾದ ಆಕ್ರಮಣಕಾರಿ ವ್ಯಾಪಾರ ಧರ್ಮವನ್ನು ಒಕ್ಕೂಟವು ಹೇಗೆ ವಿರೋಧಿಸಬಹುದು ಎಂಬುದು ಈ ವರ್ಷದಲ್ಲಿ ನಿಚ್ಚಳವಾಗಬಹುದು. ಇವೆಲ್ಲವೂ ಬಿಕ್ಕಟ್ಟುಗಳಾಗಿಯೂ ಸೃಷ್ಟಿಯಾಗಬಹುದು.

ಹವಾಮಾನ ವೈಪರೀತ್ಯ: ರಾಜಕಾರಣ ಮತ್ತು ಆರ್ಥಿಕತೆ

ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಸಂಬಂಧಿಸಿದ 2017ರ ಪ್ಯಾರಿಸ್ ಶೃಂಗಸಭೆಯ ಪ್ರತಿಜ್ಞೆಗಳಿಗೆ ಬದ್ಧವಾಗಿರಲು ಅಮೆರಿಕ, ಚೀನಾ ಮತ್ತು ರಷ್ಯಾಗಳು ವಿಫಲವಾಗಿವೆ. ಈ ಮೂರು ರಾಷ್ಟ್ರಗಳು ಇಚ್ಛಾಪೂರ್ವಕವಾಗೇ ಪ್ಯಾರಿಸ್‌ ಶೃಂಗಸಭೆಯ ಪ್ರತಿಜ್ಞೆಗಳನ್ನು ಕಡೆಗಣಿಸಿವೆ. ಈ ರಾಷ್ಟ್ರಗಳು ಈಗ ಉಗುಳುತ್ತಿರುವಷ್ಟೇ ಪ್ರಮಾಣದ ಇಂಗಾಲದ ಡೈ ಆಕ್ಸೈಡ್‌ ಉಗುಳುವಿಕೆ ಮುಂದುವರಿದರೆ 2100ರ ವೇಳೆಗೆ ಜಾಗತಿಕ ತಾಪಮಾನದಲ್ಲಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಲಿದೆ. ಇದರ ಪರಿಣಾಮವಾಗಿ ಜಗತ್ತಿನ ಎಲ್ಲೆಡೆ ಪ್ರಕೃತಿ ವಿಕೋಪಗಳು ಪದೇಪದೇ ಸಂಭವಿಸಲಿವೆ. ಇವುಗಳ ಪರಿಣಾಮವನ್ನು ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳು ಅನುಭವಿಸಬೇಕಾಗುತ್ತದೆ.

* ಭಾರತವೂ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಮುದ್ರದ ಮಟ್ಟ ಏರಿಕಯಾದರೆ, ದೇಶದ ಹಲವು ಕರಾವಳಿ ನಗರಗಳು ಮುಳುಗಡೆಯಾಗಲಿವೆ. ಅತಿವೃಷ್ಟಿ, ಅನಾವೃಷ್ಟಿಯನ್ನು ಎದುರಿಸಬೇಕಾಗುತ್ತದೆ

ಮಧ್ಯಪ್ರಾಚ್ಯ ವಿಭಜನೆ

ಜಗತ್ತಿನ ತೈಲ ಸಂಪತ್ತಿನ ತೊಟ್ಟಿಲಾದ ಕೊಲ್ಲಿ ರಾಷ್ಟ್ರಗಳು ಶಿಯಾ–ಸುನ್ನಿ ಬಣಗಳಾಗಿ ವಿಭಜನೆಯಾಗಿವೆ. ಶಿಯಾ ಮುಸ್ಲಿಮರು ಅಧಿಕವಾಗಿರುವ ಇರಾನ್ ಮತ್ತು ಇರಾಕ್‌ ಪ್ರಾಮುಖ್ಯವನ್ನು ಕುಗ್ಗಿಸುವ ಅಮೆರಿಕದ ಯತ್ನ ವಿಫಲವಾಗಿದೆ. ಇರಾನ್ ಮತ್ತು ಇರಾಕ್ ಜತೆಗೆ ಯೆಮನ್ ಮತ್ತು ಲೆಬನಾನ್ ಸಹ ಅಮೆರಿಕದ ವಿರುದ್ಧ ಸೇಡು ತೀರಿಸಿಕೊಳ್ಳುವ ಮಾತನಾಡಿವೆ. ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಸುನ್ನಿ ಮುಸ್ಲಿಮರ ಪ್ರಾಬಲ್ಯವಿರುವ ಇಸ್ರೇಲ್, ಸೌದಿ ಅರೇಬಿಯಾ, ಯುಎಇಗಳು ಸಹ ಶಿಯಾ ಪ್ರಾಬಲ್ಯವಿರುವ ರಾಷ್ಟ್ರಗಳ ಜತೆ ಸಂಬಂಧ ಕೆಡಿಸಿಕೊಂಡಿವೆ. ಅಮೆರಿಕವೂ ಈ ರಾಷ್ಟ್ರಗಳ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ನಂಬಿಕೆ ಆ ರಾಷ್ಟ್ರಗಳಲ್ಲಿ ಇಲ್ಲ. ಆದರೆ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. ಇದು ಮಧ್ಯಪ್ರಾಚ್ಯದಲ್ಲಿ ದೀರ್ಘಾವಧಿವರೆಗೆ ಅಶಾಂತಿ ಸೃಷ್ಟಿಸಬಹುದು. ಇದು ಜಗತ್ತಿಗೆ ತೈಲ ಪೂರೈಕೆಯಲ್ಲಿ ವ್ಯತ್ಯಯಕ್ಕೂ ಕಾರಣವಾಗಲಿದೆ.

* ಭಾರತಕ್ಕೆ ಕಚ್ಚಾತೈಲ ಪೂರೈಕೆಯನ್ನು ಇದು ಬಾಧಿಸುತ್ತದೆ. ಇದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಾಗಲಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸದಲ್ಲಿರುವ ಭಾರತೀಯರ ಭವಿಷ್ಯ ಅತಂತ್ರವಾಗಲಿದೆ

ಲ್ಯಾಟಿನ್ ಅಮೆರಿಕ; ಅಸಮಾಧಾನದ ಬೇಗುದಿ

ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗಿದೆ. ಆರ್ಥಿಕತೆಯೂ ಕುಂಟುತ್ತಿರುವ ಕಾರಣ, ಜನರಲ್ಲಿ ವೆಚ್ಚ ಮಾಡುವ ಶಕ್ತಿ ದಿನೇದಿನೇ ಕುಸಿಯುತ್ತಿದೆ. ಭ್ರಷ್ಟಾಚಾರ, ಕಳಪೆ ಮಟ್ಟದ ಸರ್ಕಾರಿ ಸೇವೆ ಈ ದೇಶಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರವು ಮಾಡುತ್ತಿರುವ ವೆಚ್ಚವನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಈ ಎಲ್ಲಾ ರಾಷ್ಟ್ರಗಳಲ್ಲಿ ಕೇಳಿಬರುತ್ತಿದೆ. ಇದು ಬಜೆಟ್‌ ಕೊರತೆಯನ್ನು ಹಿಗ್ಗಿಸುತ್ತಿದೆ. ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ ಉಂಟಾಗಲಿದೆ. ಸರ್ಕಾರಗಳ ವಿರುದ್ಧ ಜನರು ದಂಗೆಯೇಳುವ ಅಪಾಯವಿದೆ

ಟರ್ಕಿ ಬಿಕ್ಕಟ್ಟು

ಟರ್ಕಿ ಅಧ್ಯಕ್ಷ ರಿಸೆಪ್‌ ತಯ್ಯಿಪ್‌ ಎರ್ಡೊಗನ್ ಅವರ ರಾಜಕೀಯ ಪತನ ಆರಂಭವಾಗಿದೆ. ಅಮೆರಿಕದ ಜತೆಗಿನ ಅವರ ಸಂಬಂಧ ಬಿಗಡಾಯಿಸಿರುವ ಕಾರಣ, ಟರ್ಕಿ ಮೇಲೆ ಅಮೆರಿಕವು ಆರ್ಥಿಕ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಇದೇ ಮಾರ್ಚ್‌ನಿಂದ ಜಾರಿಗೆ ಬರಲಿವೆ. ಇದು ಟರ್ಕಿಗೆ ಧಕ್ಕೆ ಉಂಟು ಮಾಡಬಹುದು. ಟರ್ಕಿಯ ಜತೆ ರಾಜತಾಂತ್ರಿಕ, ವಾಣಿಜ್ಯ ಸಂಬಂಧ ಹೊಂದಿರುವ ರಾಷ್ಟ್ರಗಳೂ ಈ ನಿರ್ಬಂಧದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

* ಭಾರತ ಮತ್ತು ಟರ್ಕಿ ನಡುವೆ ವಾರ್ಷಿಕ ವಾಣಿಜ್ಯ ವಹಿವಾಟು ಸುಮಾರು ₹ 47,000 ಕೋಟಿ. ಅಮೆರಿಕದ ನಿರ್ಬಂಧವು ಭಾರತದ ವಾಣಿಜ್ಯ ಹಿತಾಸಕ್ತಿಗೆ ಧಕ್ಕೆ ತರಲಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು