ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ನಿಲ್ಲದ ದಾಳಿ: 6 ಮಕ್ಕಳು ಸೇರಿ 16 ಸಾವು

ಉಗ್ರರ ಅಡಗುದಾಣದ ಮೇಲೆ ರಕ್ಷಣಾಪಡೆ ದಾಳಿ
Last Updated 27 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಕೊಲಂಬೊ (ಎಎಫ್‌ಪಿ): ಕಲ್ಮುನೈ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಶ್ರೀಲಂಕಾದ ಭದ್ರತಾಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿ ಮತ್ತು ಆನಂತರ ನಡೆದ ಸ್ಫೋಟದಲ್ಲಿ ಆರು ಮಕ್ಕಳೂ ಸೇರಿ ಒಟ್ಟು 16 ಮಂದಿ ಸಾವಿಗೀಡಾಗಿದ್ದಾರೆ. ಸತ್ತವರಲ್ಲಿ ಆರು ಉಗ್ರರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಲಂಕಾದಲ್ಲಿ ಆರು ದಿನಗಳ ಹಿಂದೆ ಸರಣಿ ಬಾಂಬ್‌ ಸ್ಫೋಟ ನಡೆಸಿ, 253 ಜನರ ಸಾವಿಗೆ ಕಾರಣರಾಗಿದ್ದ ಭಯೋತ್ಪಾದಕರು ಕೊಲಂಬೊದಿಂದ 370 ಕಿ.ಮೀ. ದೂರದ ಕಲ್ಮುನೈ ಪಟ್ಟಣದ ಮನೆಯೊಂದರಲ್ಲಿ ಅವಿತುಕೊಂಡಿದ್ದಾರೆ ಎಂಬ ಮಾಹಿತಿ ರಕ್ಷಣಾ ಪಡೆಯವರಿಗೆ ಲಭ್ಯವಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಶುಕ್ರವಾರ ರಾತ್ರಿ ಆ ಮನೆಯನ್ನು ಯೋಧರು ಸುತ್ತುವರಿದಾಗ ಉಗ್ರರು ಅವರತ್ತ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆಯುತ್ತಿರುವಂತೆಯೇ ಮನೆಯೊಳಗಿದ್ದ ಪುರುಷರು ಬಾಂಬ್‌ ಸ್ಫೋಟಿಸಿದರು. ಆಗ ಮನೆಯೊಳಗಿದ್ದ ಮೂವರು ಮಹಿಳೆಯರು ಮತ್ತು ಆರು ಮಕ್ಕಳು ಮೃತಪಟ್ಟಿದ್ದಾರೆ. ಈ ಮೂವರು ಪುರುಷರನ್ನು ಆತ್ಮಹತ್ಯಾ ಬಾಂಬರ್‌ಗಳೆಂದು ಗುರುತಿಸಲಾಗಿದೆ. ಇದೇ ವೇಳೆ ಮನೆಯ ಹೊರಗಿದ್ದ ಮೂವರು ಪುರುಷರೂ ಯೋಧರ ಗುಂಡಿಗೆ ಬಲಿಯಾಗಿದ್ದಾರೆ. ಅವರೂ ಸಹ ಆತ್ಮಹತ್ಯಾ ಬಾಂಬರ್‌ಗಳು. ಮೃತ ಮಹಿಳೆಯರು ಆತ್ಮಹತ್ಯಾ ಬಾಂಬರ್‌ಗಳಾಗಿದ್ದರೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆಯೊಳಗೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಲು ಭದ್ರತಾಪಡೆಯ ಸಿಬ್ಬಂದಿ ಪ್ರಯತ್ನಿಸಿದ್ದರು. ಸ್ಫೋಟಕ್ಕೂ ಮುನ್ನ ಸುಮಾರು ಒಂದು ಗಂಟೆ ಕಾಲ ಉಗ್ರರು ಮತ್ತು ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ.

ಉಗ್ರರು ಅಡಗಿದ್ದ ಮನೆಯೊಳಗೆ ಸ್ಫೋಟಕಗಳು, ಜನರೇಟರ್‌, ಒಂದು ಡ್ರೋನ್‌ ಹಾಗೂ ಭಾರಿ ಪ್ರಮಾಣದಲ್ಲಿ ಬ್ಯಾಟರಿಗಳು ಪತ್ತೆಯಾಗಿವೆ.

ಈ ಘಟನೆಗೂ ಕೆಲವೇ ಗಂಟೆಗಳ ಮೊದಲು ಭದ್ರತಾ ಪಡೆಗಳು ಸಮೀಪದ ಇನ್ನೊಂದು ಮನೆಯಲ್ಲಿ ಶೋಧ ನಡೆಸಿದ್ದವು. ಸರಣಿ ಸ್ಫೋಟಕ್ಕೂ ಮುನ್ನ ಈ ಮನೆಯಲ್ಲೇ ಉಗ್ರರು ವಿಡಿಯೊ ಚಿತ್ರೀಕರಣ ನಡೆಸಿದ್ದರು ಎನ್ನಲಾಗಿದೆ. ಅಲ್ಲಿ ಐಎಸ್‌ ಸಂಘಟನೆಯ ಒಂದು ಧ್ವಜವೂ ಪತ್ತೆಯಾಗಿದೆ. ಸರಣಿ ಸ್ಫೋಟದ ಎರಡು ದಿನಗಳ ನಂತರ ಉಗ್ರರು ಈ ವಿಡಿಯೊವನ್ನು ಬಿಡುಗಡೆ ಮಾಡಿದ್ದರು.

ಕ್ಷಮೆ ಯಾಚಿಸಿದ ಪ್ರಧಾನಿ: ಸರಣಿ ಸ್ಫೋಟಕ್ಕೆ ಸಂಬಂಧಿದಂತೆ ಶ್ರೀಲಂಕಾದ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಶುಕ್ರವಾರ ದೇಶದ ನಾಗರಿಕರ ಕ್ಷಮೆ ಯಾಚಿಸಿದ್ದಾರೆ. ‘ಸರಣಿ ಸ್ಫೋಟದಲ್ಲಿ ನಮ್ಮ ನಾಗರಿಕರು ಹತರಾಗಿದ್ದರ ಬಗ್ಗೆ ನಾವು ಸಾಮೂಹಿಕ ಹೊಣೆ ಹೊರುತ್ತೇವೆ. ನಾಗರಿಕರನ್ನು ರಕ್ಷಿಸಲು ವಿಫಲವಾಗಿದ್ದಕ್ಕೆ ನಾವು ಕ್ಷಮೆ ಯಾಚಿಸುತ್ತೇವೆ’ ಎಂದು ವಿಕ್ರಮಸಿಂಘೆ ಟ್ವೀಟ್‌ ಮಾಡಿದ್ದಾರೆ.

*

ಉಗ್ರ ಸಂಘಟನೆ ಐಎಸ್‌ ಜೊತೆ ಸಂಬಂಧ ಇಟ್ಟುಕೊಂಡಿರುವ 140 ಮಂದಿ ಶ್ರೀಲಂಕಾದಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರೆಲ್ಲರನ್ನೂ ಹೊರಗಟ್ಟುತ್ತೇವೆ.
- ಮೈತ್ರಿಪಾಲ ಸಿರಿಸೇನಾ,ಶ್ರೀಲಂಕಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT