ಬಿಹಾರ: 175 ಕಾನ್‌ಸ್ಟೆಬಲ್‌ಗಳ ಸಾಮೂಹಿಕ ವಜಾ

7
ಸಹೋದ್ಯೋಗಿ ಸಾವಿನ ಬಳಿಕ ಗಲಭೆಯಲ್ಲಿ ಭಾಗಿಯಾಗಿದ್ದಕ್ಕೆ ಕಠಿಣ ಶಿಸ್ತುಕ್ರಮ

ಬಿಹಾರ: 175 ಕಾನ್‌ಸ್ಟೆಬಲ್‌ಗಳ ಸಾಮೂಹಿಕ ವಜಾ

Published:
Updated:
Deccan Herald

ಪಟ್ನಾ: ಮಹಿಳಾ ಸಹೋದ್ಯೋಗಿಯ ಸಾವಿನ ಬಳಿಕ ಇಲ್ಲಿ ಭಾರಿ ಪ್ರತಿಭಟನೆ ಹಾಗೂ ಗಲಭೆಯಲ್ಲಿ ತೊಡಗಿದ್ದ 175 ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು.

ಪಟ್ನಾ ವಲಯದ ಐಜಿಪಿ ನಯ್ಯರ್ ಹಸ್ನೇನ್ ಖಾನ್ ಅವರ ಅನುಮತಿ ದೊರೆತ ಬಳಿಕ ಈ ಕ್ರಮ ಕೈಗೊಳ್ಳಲಾಗಿದ್ದು, ವಜಾಗೊಂಡವರಲ್ಲಿ 167 ಮಂದಿ ತರಬೇತಿನಿರತ ಕಾನ್‌ಸ್ಟೆಬಲ್‌ಗಳು. ಜೊತೆಗೆ, 23 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಒಬ್ಬರು ಹೆಡ್‌ ಕಾನ್‌ಸ್ಟೆಬಲ್‌, ಇಬ್ಬರು ತರಬೇತಿ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ಎಂದು ಪಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ.

ಈ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಡಿಜಿಪಿ ಕೆ.ಎಸ್. ದ್ವಿವೇದಿ ಅವರಿಗೆ ಸೂಚಿಸಿದ್ದಾರೆ.

ಗುರುವಾರ ಕರ್ತವ್ಯ ನಿರತರಾಗಿದ್ದಾಗ ತೀವ್ರ ಹೊಟ್ಟೆನೋವಿಗೆ ಒಳಗಾಗಿದ್ದ ಕಾನ್‌ಸ್ಟೆಬಲ್‌ ಸವಿತಾ ಪಾಠಕ್ (22) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು.

ಸವಿತಾ ಅನಾರೋಗ್ಯಕ್ಕೀಡಾಗಿದ್ದರೂ ಅವರನ್ನು ಸೇವೆಗೆ ನಿಯೋಜಿಸಿದ್ದ ಹಿರಿಯ ಅಧಿಕಾರಿಗಳ ಕ್ರಮ ಖಂಡಿಸಿ ಕಾನ್‌ಸ್ಟೆಬಲ್‌ಗಳು ರಸ್ತೆಗಿಳಿದು, ಪೊಲೀಸ್ ಅಧಿಕಾರಿಗಳ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. ಅಲ್ಲದೆ ಪಟ್ನಾ ವಲಯದ ಸಂಚಾರ ಪೊಲೀಸ್‌ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ವಾಹನಗಳಿಗೆ ಹಾನಿಯುಂಟಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಹಿರಿಯ ಅಧಿಕಾರಿಗಳಿಗೆ ಹಲವು ಗಂಟೆಗಳೇ ಬೇಕಾಗಿತ್ತು.

ಸೋಂಕಿನಿಂದ ಸಾವು?: ಡೆಂಗಿ ಜ್ವರದಿಂದಾಗಿ ಸವಿತಾ ಸಾವಿಗೀಡಾಗಿರುವಂತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಆದರೆ, ಅವರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಆಸ್ಪತ್ರೆ ಸಿಬ್ಬಂದಿ, ಸವಿತಾ ಯಾವುದೋ ಸೋಂಕಿನಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ. 

‘‍ಅನಾರೋಗ್ಯಕ್ಕೀಡಾಗಿದ್ದ ಸವಿತಾ ಅಕ್ಟೋಬರ್‌ನಲ್ಲಿ ಮೂರು ದಿನ ರಜೆಯಲ್ಲಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಸೇವೆಗೆ ನಿಯೋಜಿಸಬಾರದಿತ್ತು’ ಎಂದು ಖಾನ್ ಅವರು ಹೇಳಿದ್ದಾರೆ. 

ನಾಲ್ಕು ಎಫ್ಐಆರ್‌
ಪ್ರಕರಣದ ಸಂಬಂಧ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಇದರ ಹೊರತಾಗಿ, ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಕಾನ್‌ಸ್ಟೆಬಲ್‌ಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಟ್ನಾ ವಲಯದ ಐಜಿಪಿ ನಯ್ಯರ್ ಹಸ್ನೇನ್ ಖಾನ್ ತಿಳಿಸಿದ್ದಾರೆ. 

ಇದರಲ್ಲಿ ಒಂದು ಎಫ್‌ಐಆರ್‌ ದಾಖಲಿಸಿರುವುದು ಉಪಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಮಸಲುದ್ದೀನ್‌ ಎಂದು ಅವರು ಹೇಳಿದ್ದಾರೆ. 

ಪಾಠಕ್ ಸಾವಿಗೆ ಮಸಲುದ್ದೀನ್ ಕಾರಣ ಎಂದು ಆರೋಪಿಸಿ, ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಮನೆಯವರೆಗೆ ಹಿಂಬಾಲಿಸಿಕೊಂಡು ಹೋಗಿ ಅವರ ಮನೆಯನ್ನು ಲೂಟಿ ಮಾಡಿ, ಕುಟುಂಬ ಸದಸ್ಯರ ಜತೆಗೆ ಅಸಭ್ಯವಾಗಿ ವರ್ತಿಸಿತ್ತು.

ಮಸಲುದ್ದೀನ್‌ ಅವರ ವಿರುದ್ಧ ಕಾನ್‌ಸ್ಟೆಬಲ್‌ಗಳ ಗುಂಪು ಮಾಡಿರುವ ಆರೋಪವನ್ನು ಖಾನ್ ಅಲ್ಲಗಳೆದಿದ್ದಾರೆ. 

ಹಿಂದೆ ಮಸಲುದ್ದೀನ್ ಅವರಿಂದ ಶಿಸ್ತುಕ್ರಮಕ್ಕೆ ಒಳಗಾಗಿದ್ದ ಸಿಬ್ಬಂದಿ ಪ್ರತಿಭಟನಾಕಾರರಿಂದ ಈ ರೀತಿ ಮಾಡಿಸಿರುವ ಶಂಕೆ ಇದೆ ಎಂದು ಖಾನ್ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !