ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯದ ಅಪಾಯಮಟ್ಟ: ಶಾಲೆಗಳಿಗೆ ರಜೆ, ಉಸಿರಾಟವೂ ಕಷ್ಟ

ದೆಹಲಿ ಜನರಲ್ಲಿ ಆತಂಕ l ವಿಮಾನಗಳ ಮಾರ್ಗ ಬದಲಾವಣೆ
Last Updated 4 ನವೆಂಬರ್ 2019, 3:51 IST
ಅಕ್ಷರ ಗಾತ್ರ

ನವದೆಹಲಿ ದೆಹಲಿ ಹಾಗೂ ಅದರ ಉಪನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಭಾನುವಾರ ಗಂಭೀರ ಸ್ಥಿತಿಗೆ ತಲುಪಿತ್ತು.ಪ್ರತಿ ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ (ಪಿಎಂ 2.5) ಮಾಲಿನ್ಯಕಾರಕ ಕಣಗಳ ಸಂಖ್ಯೆ ಬೆಳಿಗ್ಗೆ 11 ಗಂಟೆ ವೇಳೆಗೆ 483ರಷ್ಟಿತ್ತು. ಇದು ‘ವಿಪರೀತ ಅಪಾಯಕಾರಿ’ (500+) ಮಟ್ಟವನ್ನು ತಲುಪುವ ಆತಂಕ ತಲೆದೋರಿದೆ.

ಶನಿವಾರ ಗಾಳಿಯಲ್ಲಿ ಕೊಂಚ ಚಲನೆ ಹಾಗೂ ಸ್ವಲ್ಪ ಮಳೆ ಬಿದ್ದ ಕಾರಣ ಮಾಲಿನ್ಯ ಸ್ವಲ್ಪ ತಗ್ಗಿತ್ತು. ಪಿಎಂ 2.5 ಕಣಗಳ ಸಂಖ್ಯೆ ಸಂಜೆ ವೇಳೆಗೆ 399 ಇತ್ತು. ಆದರೆ ರಾತ್ರಿ ವೇಳೆ ಗಾಳಿಯ ಚಲನೆ ಸ್ಥಗಿತಗೊಂಡಿದ್ದರಿಂದ ಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳದ ಕೆಲ ಭಾಗಗಳ ಮೇಲೆ ಹೊಗೆಯ ಮೋಡ ಆವರಿಸಿರುವುದನ್ನು ನಾಸಾದ ಉಪಗ್ರಹ ಸೆರೆಹಿಡಿದಿದೆ.

ಭಾನುವಾರ ಸಂಜೆಯಿಂದ ಮಂಗಳವಾರವರೆಗೆ ಗಂಟೆಗೆ 20–25 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವುದು ದೆಹಲಿ ನಿವಾಸಿಗಳಲ್ಲಿ ಕೊಂಚ ನಿರಾಳ ಮೂಡಿಸಿದೆ.ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ 7, 8ರಂದು ‘ಮಹಾ’ ಚಂಡಮಾರುತದ ಪ್ರಭಾವದಿಂದ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಅಲ್ಪ ಪ್ರಮಾಣದ ಮಳೆ ಸುರಿದರೂ, ಕೃಷಿ ತ್ಯಾಜ್ಯ ಸುಡುವಿಕೆಯಿಂದ ಉಂಟಾಗಿರುವ ಮಾಲಿನ್ಯ ಕೊಂಚ ತಗ್ಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

32 ವಿಮಾನಗಳ ಮಾರ್ಗ ಬದಲಾವಣೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ದಟ್ಟ ‘ಹೊಂಜು’ ಆವರಿಸಿದ ಕಾರಣ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 32 ವಿಮಾನಗಳು ಬೇರೆಡೆಗೆ ಹೋದವು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಅಮೃತಸರ, ಜೈಪುರ, ಮುಂಬೈ ಹಾಗೂ ಲಖನೌ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು.

ದಟ್ಟವಾದ ದೂಳಿನ ಮೋಡ ಕವಿದಿದ್ದರಿಂದ ಬೆಳಿಗ್ಗೆ 9 ಗಂಟೆಯ ಬಳಿಕ ಏರ್ ಇಂಡಿಯಾದ 12 ವಿಮಾನಗಳು, ‘ವಿಸ್ತಾರ’ ಸಂಸ್ಥೆಯ 5 ವಿಮಾನಗಳು ದೆಹಲಿಯಲ್ಲಿ ಇಳಿಯಲು ಆಗಲಿಲ್ಲ. ಬೆಂಗಳೂರು, ಅಹಮದಾಬಾದ್, ಚೆನ್ನೈ, ಗೋವಾದಿಂದ ಬರುತ್ತಿದ್ದ ವಿಸ್ತಾರ ಸಂಸ್ಥೆಯ ವಿಮಾನಗಳನ್ನು ಅಮೃತಸರದಲ್ಲಿ ಇಳಿಸಲಾಯಿತು. ಕೋಲ್ಕತ್ತ, ಮುಂಬೈ, ಚೆನ್ನೈ, ಅಹಮದಾಬಾದ್ ಹಾಗೂ ಲಂಡನ್‌ನಿಂದ ಬಂದ ಏರ್ ಇಂಡಿಯಾ ವಿಮಾನಗಳಿಗೆ ಜೈಪುರದ ಮಾರ್ಗ ತೋರಿಸಲಾಯಿತು.

ಶಾಲೆಗಳಿಗೆ ಇಂದು, ನಾಳೆ ರಜೆ: ಗಾಜಿಯಾಬಾದ್, ನೊಯಿಡಾ ಮತ್ತು ಗ್ರೇಟರ್ ನೊಯಿಡಾದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ನವೆಂಬರ್ 4 ಮತ್ತು 5ರಂದು ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ವಾಯುಗುಣಮಟ್ಟ ತೀರಾ ಕಳಪೆ ಹಂತ ತಲುಪಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮಲಿನಗೊಂಡ ರಾಜಧಾನಿ
* ಮಾಲಿನ್ಯ ಸಹಿಸಲಸಾಧ್ಯ ಮಟ್ಟ ಮುಟ್ಟಿದೆ: ಮುಖ್ಯಮಂತ್ರಿ ಕೇಜ್ರಿವಾಲ್ ಟ್ವೀಟ್
* 1000 ಸಿಬ್ಬಂದಿಗೆ ಮುಖಗವಸು ವಿತರಿಸಿದಕೇಂದ್ರೀಯ ಕೈಗಾರಿಕಾ ಭದ್ರತಾಪಡೆ (ಸಿಐಎಸ್‌ಎಫ್)
* ಸೋಮವಾರದಿಂದ ಜಾರಿಗೆ ಬರಲಿರುವ ಸಮ–ಬೆಸ ವಾಹನ ಸಂಚಾರ ವ್ಯವಸ್ಥೆಯಿಂದ ಬ್ಯಾಟರಿಚಾಲಿತ ವಾಹನಗಳನ್ನು ಹೊರಗಿಡುವಂತೆ ಸರ್ಕಾರಕ್ಕೆ ಮನವಿ
* ಮುಂದಿರುವ ವಸ್ತುಗಳನ್ನು ನೋಡಲು ಕಷ್ಟವಾಗುತ್ತಿದೆ ಎಂದ ದೆಹಲಿ ಜನ
* ಕೃಷಿ ತ್ಯಾಜ್ಯ, ಕಸ, ಪಾಲಿಥೀನ್ ಸುಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಉತ್ತರ ಪ್ರದೇಶ ಸರ್ಕಾರ

ಕೃಷಿ ತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಮಾರ್ಗ
* ದೆಹಲಿ, ಹರಿಯಾಣಕ್ಕೆ 63 ಸಾವಿರ ಕೃಷಿ ತ್ಯಾಜ್ಯ ನಿರ್ವಹಣೆ ಯಂತ್ರ ಒದಗಿಸಲಾಗಿದೆ.
* ಎರಡೂ ರಾಜ್ಯಗಳ ರೈತರ ಸಂಖ್ಯೆ 27 ಲಕ್ಷ ಇದೆ. ಹಾಗಾಗಿ ಈಗ ಪೂರೈಸಿರುವ ಯಂತ್ರ ಸಾಲದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.
* ಕೃಷಿ ತ್ಯಾಜ್ಯವನ್ನು ಕೈಗಾರಿಕೆಗಳಲ್ಲಿ ಹಲವು ಉತ್ಪನ್ನಗಳ ತಯಾರಿಕೆಗೆ ಬಳಸಬಹುದು.
* ದನಗಳಿಗೆ ಮೇವು, ಫೈಬರ್‌ಬೋರ್ಡ್ ತಯಾರಿಕೆ, ಇಂಧನ ಉತ್ಪಾದನೆ, ಕಾಗದ ತಯಾರಿಕೆಗೆ
ಬಳಸಬಹುದು.

ಪಿ.ಎಂ 2.5 ಕಣಗಳ ಸಂಖ್ಯೆ (ಭಾನುವಾರ)
ನೊಯಿಡಾ: 487
ಗಾಜಿಯಾಬಾದ್: 483
ಗ್ರೇಟರ್ ನೊಯಿಡಾ: 470
ಗುರುಗ್ರಾಮ: 457
ಪೂಸಾ: 495
ಒಟಿಐ: 495
ಮುಂಡಕ: 493

ದೆಹಲಿ
483: (ಬೆಳಿಗ್ಗೆ 11)
489: (ಮಧ್ಯಾಹ್ನ 2)
484: (ಶುಕ್ರವಾರ)

ದೆಹಲಿ ಜನ ಏನು ಹೇಳುತ್ತಾರೆ..?
13%:
ಒಬ್ಬರು ಅಥವಾ ಹೆಚ್ಚಿನವರು ಈಗಾಗಲೇ ಆಸ್ಪತ್ರೆಗೆಹೋಗಿಬಂದಿದ್ದಾರೆ
29%:ಒಬ್ಬರು ಅಥವಾ ಹೆಚ್ಚಿನವರು ಈಗಾಗಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ
44%:ಮಾಲಿನ್ಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿದೆ, ಆದರೆ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಿಲ್ಲ
14%:ವಾಯುಮಾಲಿನ್ಯವು ತಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ

ಊರು ತೊರೆಯುತ್ತಿರುವ ದೆಹಲಿ ಮಂದಿ
ಗಾಳಿಯ ಗುಣಮಟ್ಟ ಹಾಳಾಗಿರುವುದರಿಂದ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಶೇ 40ರಷ್ಟು ಜನರು ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ‘ಲೋಕಲ್‌ ಸರ್ಕಲ್ಸ್‌’ ಎಂಬ ಆನ್‌ಲೈನ್ ತಾಣ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ. ಸಮೀಕ್ಷೆಯಲ್ಲಿ 17,000ಜನರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

40%:ಬೇರೆ ನಗರಗಳಿಗೆ ವಲಸೆ ಹೋಗಲು ಇಚ್ಛಿಸಿರುವ ಜನರ ಪ್ರಮಾಣ
31%:ಗಾಳಿ ಶುದ್ಧೀಕರಣ ಉಪಕರಣ, ಮುಖಗವಸು ಬಳಸಿದೆಹಲಿಯಲ್ಲೇ ಇರಲು ಬಯಸಿದವರು
16%:ನಗರದಲ್ಲೇ ವಾಸ. ಆದರೆ ಈ ಅವಧಿಯಲ್ಲಿ ತಾತ್ಕಾಲಿಕವಾಗಿ ಹೊರನಡೆಯತ್ತೇವೆ ಎಂದವರು
13%:ಮಾಲಿನ್ಯ ಹೆಚ್ಚುತ್ತಿದ್ದರೂ ತಮಗೆ ಬೇರೆ ಆಯ್ಕೆಗಳಿಲ್ಲ ಎಂದ ಜನರ ಪ್ರಮಾಣ

**

ದೆಹಲಿ ಸರ್ಕಾರವೊಂದರಿಂದಲೇ ಮಾಲಿನ್ಯ ತಡೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಬೇಕು
–ಅಶೋಕ್ ಗೆಹ್ಲೋಟ್, ರಾಜಸ್ಥಾನ ಮುಖ್ಯಮಂತ್ರಿ

**

ದೆಹಲಿ, ಅಕ್ಕಪಕ್ಕದ ರಾಜ್ಯಗಳು, ಕೇಂದ್ರ ಸರ್ಕಾರ ಸೇರಿ ಕೃಷಿತ್ಯಾಜ್ಯ ದಹನ ತಡೆಗೆ ಪರಿಹಾರ ಹುಡುಕಬೇಕಿದೆ. ಇದರಲ್ಲಿ ರಾಜಕೀಯ ಬೇಡ.
–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT