ಶುಕ್ರವಾರ, ಜೂನ್ 5, 2020
27 °C

'ಆಸ್ಪತ್ರೆ ಯುದ್ಧಭೂಮಿಯಂತಿತ್ತು'- ಮುಂಬೈಯ ನರ್ಸ್ ಹೇಳಿದ ಅನುಭವ ಕಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Nurse

ಮುಂಬೈ:  ಕೊರೊನಾ ಸೋಂಕು ಬಾಧಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶವ್ಯಾಪಿ ಲಾಕ್‍ಡೌನ್ ಆಗಿದ್ದರೂ ಮನೆಯಿಂದ ಹೊರಡುವ ಜನ ಒಂದೆಡೆಯಾದರೆ ರೋಗ ಲಕ್ಷಣಗಳು ಕಂಡು ಬಂದು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಹ್ಯೂಮನ್ಸ್ ಆಫ್ ಬಾಂಬೆ ಎಂಬ ಫೇಸ್‍ಬುಕ್ ಪುಟದಲ್ಲಿ ಮುಂಬೈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಾದಿಯೊಬ್ಬರ ಸಂದರ್ಶನವನ್ನು ಪ್ರಕಟಿಸಿದ್ದು ಇದು ವೈರಲ್ ಆಗಿದೆ. ಮುಂಬೈಯ ನರ್ಸ್ ಹೇಳಿದ ಅನುಭವ ಕಥನ ಹೀಗಿದೆ.

ಪ್ರಾಮಾಣಿಕವಾಗಿ ಹೇಳುವುದಾದರೆ ಕೋವಿಡ್ -19 ರೋಗಿಗಳ ಸೇವೆಗಾಗಿ ಕರೆ ಬಂದಾಗ ನನಗೆ ನಿಜ ಭಯವಾಗಿತ್ತು. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಗಂಡ ಇದ್ದಾನೆ. ಅವರ ಆರೋಗ್ಯದ ಬಗ್ಗೆಯೂ ನನಗೆ ಕಾಳಜಿ ಇದೆ. ನಾಲ್ಕನೇ  ತರಗತಿಯಲ್ಲಿ ಕಲಿಯುತ್ತಿರುವ ನನ್ನ ಒಬ್ಬ  ಮಗಳು ಶಾಲಾ ಪರೀಕ್ಷೆಗಳು ರದ್ದಾಗಿರುವ ಖುಷಿಯಲ್ಲಿದ್ದರೆ ಇನ್ನೊಬ್ಬಳು ಡ್ಯೂಟಿಗೆ ಹೋಗಬೇಡಿ ಎಂದು ಹೇಳಿದಳು. ನನ್ನ ಬಗ್ಗೆ ಚಿಂತೆ ಮಾಡಬೇಡಿ ಎಂದು ಕುಟುಂಬದವರಿಗೆ ಹೇಳುವುದಷ್ಟೇ ಆ ಹೊತ್ತಿನಲ್ಲಿ ನನ್ನಿಂದ ಸಾಧ್ಯವಾಗಿದ್ದು. ಕರ್ತವ್ಯದ ಕರೆ ಬಂದಾಗ ಅಲ್ಲಿ ಬೇರೊಂದು ವಿಷಯದ ಬಗ್ಗೆ ಯೋಚಿಸುವುದಿಲ್ಲ. ಮನೆಯ ಜವಾಬ್ದಾರಿಯನ್ನು ಗಂಡನಿಗೆ ಒಪ್ಪಿಸಿ ನಾನು ಕೆಲಸಕ್ಕೆ ಹೋದೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುವುದಕ್ಕಿಂತ ಆಸ್ಪತ್ರೆಗೆ ತಲುಪುವುದು ಸವಾಲು ಆಗಿತ್ತು. ಟ್ಯಾಕ್ಸಿ ಬಳಸುವುದು ರಿಸ್ಕ್ ಸಂಗತಿ. ನನ್ನ ಗಂಡ ನನ್ನನ್ನು ಆಸ್ಪತ್ರೆಗೆ ಡ್ರಾಪ್ ಮಾಡುವುದೂ ರಿಸ್ಕ್ ಆಗಿತ್ತು. ಹಾಗಾಗಿ ನಾನು ಮತ್ತು ನನ್ನೊಂದಿಗೆ ಇದ್ದ ದಾದಿಯರು ಕಾರ್ ಪೂಲ್ ಮಾಡುವುದಾಗಿ ನಿರ್ಧರಿಸಿದೆವು. ಆಮೇಲೆ ಆಸ್ಪತ್ರೆಯಲ್ಲಿ ತಂಗುವುದೇ ಒಳ್ಳೆಯದೆಂದು ನಮಗನಿಸಿತು.

ಮೊದಲ ದಿನ ನನಗಿನ್ನೂ ನೆನಪಿದೆ. ರೋಗಿಗಳನ್ನು ದಾಖಲು ಮಾಡುವುದು, ರೋಗಿಗಳಿಗೆ ಬೆಡ್ ಒದಗಿಸುವುದು, ಆತಂಕಕ್ಕೊಗಾಗಿರುವ ರೋಗಿಗಳಿಗೆ ಸಮಾಧಾನ ಹೇಳುವುದು ಅದೊಂಥರಾ ಯುದ್ಧ ಭೂಮಿಯಂತಿತ್ತು. ವಿಶ್ರಾಂತಿ ಮಾಡಲು ನಮಗೆ ಒಂದು ನಿಮಿಷವೂ ಸಿಗುತ್ತಿರಲಿಲ್. ಅದಕ್ಕಿಂತ  ದೊಡ್ಡ ನೋವು ಎಂದರೆ ರೋಗಿಗಳನ್ನು ಅವರ ಕುಟುಂಬದಿಂದ ದೂರ ಇರಿಸುವುದು. ಪುಣೆಯ ದಂಪತಿಯೊಬ್ಬರ ಆರೈಕೆ ಮಾಡುತ್ತಿದ್ದೆ. ಅವರು ತಮ್ಮ ಮಕ್ಕಳನ್ನು ಭೇಟಿಯಾಗಲು ಬಿಡಿ ಎಂದು ವಿನಂತಿಸುತ್ತಿದ್ದರು. ಆದರೆ ನಮಗೆ ಆ ರೀತಿ ಅವರನ್ನು ಬಿಡಲಾಗುವುದಿಲ್ಲ. ಅದು ಹೃದಯವಿದ್ರಾವಕ ಗಳಿಗೆ. ನನ್ನ ಮಕ್ಕಳು ನನ್ನನ್ನು ಯಾವ ರೀತಿ ಮಿಸ್ ಮಾಡಿಕೊಳ್ಳುತ್ತಿರಬಹುದು ನಾನು ಯಾವ ರೀತಿ ಅವರನ್ನು ಮಿಸ್  ಮಾಡಿಕೊಳ್ಳುತ್ತಿದ್ದೇನೆ ಎಂಬುದು ಕಣ್ಣ ಮುಂದೆ ಬಂತು. ನಾನು ಮನೆಗೆ ಹೋಗದೆ 5 ದಿನ ಆಯ್ತು. ನೀನು ಸರಿಯಾಗಿ ಮಾಸ್ಕ್ ಧರಿಸಿದ್ದೀಯಾ? ಊಟ ಮಾಡಿದ್ದೀಯಾ ಎಂದು ನನ್ನ ಮಗಳು ಕರೆ ಮಾಡಿ ಕೇಳುತ್ತಾಳೆ. ಆ ಮಾತುಗಳು ಕೇವಲ ಸೆಕೆಂಡುಗಳ ಕಾಲ ಮಾತ್ರ ಕೇಳಿಸಿಕೊಳ್ಳಬಹುದು.

ತುಂಬಾ  ಕೆಲಸ ಇರುವ ಕಾರಣ ನಾವು ಹೆಚ್ಚಿನ ಶಿಫ್ಟ್‌ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ನಾವು ಪರಸ್ಪರ ಪ್ರಚೋದನೆ ನೀಡುವ ಸಂದೇಶಗಳನ್ನು ಕಳಿಸುತ್ತಾ ನಾನು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತೇವೆ. ನಮ್ಮಲ್ಲೊಬ್ಬರು ನರ್ಸ್ ಬೆಳಗ್ಗೆ  6 ಗಂಟೆಗೆ ಹೋಗಿ ಮರುದಿನ ಬೆಳಗ್ಗೆ 9ಗಂಟೆಗೆ ವಾಪಸ್ ಬಂದಿದ್ದರು. ಪ್ರಯಾಣಿಕರ ಹೊಸ ತಂಡವೊಂದು ದಾಖಲಾಗಿದ್ದರಿಂದ ಮಧ್ಯರಾತ್ರಿಯವರೆಗೆ ಮತ್ತೆ ಕೆಲಸ ಮಾಡಬೇಕಾಗಿ ಬಂದಿತ್ತು. ನಾವು ಇಷ್ಟೆಲ್ಲ  ಕೆಲಸ ಮಾಡಿ ಕೊನೆಗೆ ರೋಗಿಯ ವೈದ್ಯಕೀಯ ವರದಿಯಲ್ಲಿ ಸೋಂಕು ಇಲ್ಲ ಎಂದು ಗೊತ್ತಾದಾಗ ರೋಗಿಯ ಮುಖದಲ್ಲಿ ಕಾಣುವ ಖುಷಿ ನಮಗೆ ಸಮಾಧಾನ ನೀಡುತ್ತದೆ. ಕಳೆದ ವಾರ ದಾಖಲಾಗಿದ್ದ ಪ್ರಯಾಣಿಕರ ಗುಂಪು ನಮ್ಮ ಮುಂದೆ ಬಂದು ನಿಂತು ಕೈಜೋಡಿಸಿ ನಮಗೆ ಧನ್ಯವಾದ ಹೇಳಿದರು. ಇಂಥಾ ಪರಿಸ್ಥಿತಿಯಲ್ಲಿ ನಾನು ಹೇಳುವುದೊಂದೇ, ಸೇವೆಯೇ ನಮ್ಮ ಮೊದಲ ಕರ್ತವ್ಯ ಮತ್ತು ಇದೊಂದೇ ನಮ್ಮ ಕರ್ತವ್ಯ ಎಂಬುದು.

ಇದು ಪರೀಕ್ಷೆಯ ಕಾಲ. ಇದೆಲ್ಲವನ್ನೂ ನಾವು  ಜತೆಯಾಗಿ ನಿಯಂತ್ರಿಸಬಹುದು. ವಿಶ್ವಾಸಾರ್ಹ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಿ. ನಮ್ಮ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ, ಮನೆಯೊಳಗೇ ಇರಿ. ಅತ್ಯಗತ್ಯವಾಗಿದ್ದರೆ ಅಥವಾ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊರಗೆ ಹೋಗಿ.

ಇದೆಲ್ಲ ಮುಗಿದಾದ ಮೇಲೆ ನಾವೆಲ್ಲರೂ ಸಂಭ್ರಮಿಸೋಣ. ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ನಾವು ನಮ್ಮವರ ಜತೆ ಸಂಭ್ರಮಿಸುವೆವು. ನೀವು ಮನೆಯಲ್ಲಿರುವುದಾದರೆ ನಾವೆಲ್ಲರೂ ಜತೆಯಾಗಿ ಸಂಭ್ರಮಿಸಬಹುದು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು