ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Analysis | ಕೇಜ್ರಿವಾಲ್ ರೂಢಿಸಿಕೊಂಡ ಜಾಣ ಮೌನವೂ ಚುನಾವಣಾ ತಂತ್ರ

ದೆಹಲಿ ರಾಜಕೀಯ ವಿಶ್ಲೇಷಣೆ
Last Updated 14 ಜನವರಿ 2020, 11:11 IST
ಅಕ್ಷರ ಗಾತ್ರ
ADVERTISEMENT
""
""
""
""
""
""

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಇತ್ತೀಚಿನವರ್ತನೆ ಗಮನಿಸಿದ್ದೀರಾ? ಅವರೊಳಗಿದ್ದ ಫೈರ್‌ಬ್ರಾಂಡ್‌ ನಾಯಕ ಹಿನ್ನೆಲೆಗೆ ಸರಿದು, ಅಳೆದು ಸುರಿದು ರೂಪಿಸಿಕೊಂಡ ಸಮಚಿತ್ತದ ಹೊಸನಾಯಕ ಮುನ್ನೆಲೆಗೆ ಬಂದಂತೆ ಭಾಸವಾಗುವುದಿಲ್ಲವೇ? ಒಂದು ಥರ ಇಂಟರ್‌ವಲ್‌ಗೆ ಮೊದಲು ಥ್ರಿಲ್ಲರ್‌, ಇಂಟರ್‌ವಲ್ ನಂತರ ಫ್ಯಾಮಿಲಿ ಸಿನಿಮಾ ಇದ್ದಂತೆ ಇದು!ಅವರ ವ್ಯಕ್ತಿತ್ವವೂ ಎರಡನೇ ಘಟ್ಟಕ್ಕೆ ಮಗ್ಗುಲು ಬದಲಿಸಿದೆ ಎನಿಸುವುದಿಲ್ಲವೇ?

ಪೌರತ್ವ ತಿದ್ದುಪಡಿ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ, ದೆಹಲಿ ಕಾಲೊನಿ ವಾಸಿಗಳ ವಿಚಾರಸೇರಿದಂತೆ ಈಚೆಗೆ ರಾಷ್ಟ್ರ ಮತ್ತು ದೆಹಲಿ ರಾಜಕಾರಣದಲ್ಲಿಪ್ರಸ್ತಾಪವಾದ ಬಹುತೇಕ ವಿಚಾರಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ರ ಪ್ರತಿಕ್ರಿಯೆ ಮೊದಲಿನಂತೆಇರಲಿಲ್ಲ. ಮಾಗಿದ ರಾಜಕಾರಣಿಯಂತೆ ಅಲ್ಲೊಂದು ಇಲ್ಲೊಂದು ಟ್ವೀಟ್ ಮಾಡುತ್ತಾ, ಭಾಷಣಗಳಲ್ಲಿ ಪ್ರಸ್ತಾಪಿಸುತ್ತಾ ಮುಂದೆ ಸಾಗುತ್ತಿದ್ದರು. ಅವರ ಲಕ್ಷ್ಯ ಇದ್ದುದು ದೆಹಲಿ ಚುನಾವಣೆಯ ಕಡೆಗೆ ಮಾತ್ರ.

ಪಂಜಾಬ್‌ನಲ್ಲಿಗೆಲುವಿನ ಹೊಸಿಲಲ್ಲಿ ಮುಗ್ಗರಿಸಿದ್ದ ಕೇಜ್ರಿವಾಲ್‌ರಿಗೆ ಈಗ ಒಂದೊಂದಾಗಿ ಎಲ್ಲವೂ ಅರ್ಥವಾದಂತೆ ಇದೆ. ನಿಧಾನವಾಗಿ ಅವರೊಳಗಿನ ರಾಜಕಾರಣಿ ಮತ್ತು ಆಡಳಿತಗಾರ ಮಾಗುತ್ತಿದ್ದಾನೆ.2015ರಲ್ಲಿ ಬೆಂಕಿಯುಗುಳುವ ಮಾತುಗಳಿಂದದೇಶವ್ಯಾಪಿ ಸುದ್ದಿಯಾಗುತ್ತಿದ್ದ ಫೈರ್‌ಬ್ರಾಂಡ್‌ ಕೇಜ್ರಿವಾಲ್ ಈಗ ಬದಲಾಗಿದ್ದಾರೆ. ದೆಹಲಿಯೇ ನನ್ನ ನೆಲೆ ಎಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದಾರೆ.

ಅದಕ್ಕೇ ಇರಬಹುದು ಈಗ ದೆಹಲಿ ಪತ್ರಕರ್ತರ ವಲಯದಲ್ಲಿ ‘ಬದಲಾದ ಕೇಜ್ರಿವಾಲ್‌ರನ್ನು ಎದುರಿಸುವುದುನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಕಷ್ಟ. ಹಿಂದಿದ್ದ ಕೂಗುಮಾರಿ ಕೇಜ್ರಿವಾಲ್ ಈಗಿಲ್ಲ. ಈಗಿರುವುದು ಲೆಕ್ಕಾಚಾರದ ಚಾಣಕ್ಷ’ ಎಂಬ ಮಾತುಗಳು ಕೇಳಿಬರುತ್ತಿವೆ.

ಅರವಿಂದ್ ಕೇಜ್ರಿವಾಲ್

ರಾಜಕಾರಣ ಬದಲಾಯ್ತೋ? ಕೇಜ್ರಿವಾಲ್ ಬದಲಾದರೋ?

ಕೇಜ್ರಿವಾಲ್ ರಾಜಕಾರಣಕ್ಕೆ ಬಂದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಅಣ್ಣಾ ಹಜಾರೆಯಂಥ ಚಳವಳಿಗಾರ, ಪ್ರಶಾಂತ್ ಭೂಷಣ್‌ರಂಥ ಪ್ರಬಲ ಚಿಂತಕನ ಆಸರೆಯಲ್ಲಿ ರಾಜಕೀಯ ಭವಿಷ್ಯ ಹುಡುಕಲು ಆರಂಭಿಸಿದವರು ಅವರು. ಯುಪಿಎ ಸರ್ಕಾರಕ್ಕೆ ಕೊನೆಯ ಮೊಳೆ ಹೊಡೆದ ದೆಹಲಿ ಸತ್ಯಾಗ್ರಹ ಚಳವಳಿಯಲ್ಲಿ ಸಕ್ರಿಯರಾಗಿದ್ದ ಕೇಜ್ರಿವಾಲ್‌ ದೆಹಲಿ ಗದ್ದುಗೆಯಲ್ಲಿ ಪ್ರತಿಷ್ಠಾಪನೆಯಾದ ನಂತರ ಮುಂದೊಂದು ತಮಗೆ ಸವಾಲು ಹಾಕಬಹುದು ಎಂದುಕೊಂಡವರನ್ನೆಲ್ಲಾ ಪಕ್ಷದಿಂದ ದೂರ ಮಾಡಿದರು.

‘ನಾನು ರಾಜಕೀಯ ಮಾಡಲು ರಾಜಕೀಯಕ್ಕೆ ಬರಲಿಲ್ಲ, ರಾಜಕೀಯ ಕ್ಷೇತ್ರವನ್ನೇ ಬದಲಿಸಲು ಇಲ್ಲಿಗೆ ಬಂದೆ’ ಎಂದು ಘೋಷಿಸಿದ್ದ ಕೇಜ್ರಿವಾಲ್‌ ಅಧಿಕಾರಕ್ಕೆ ಬಂದ ನಂತರ ಮಾಡಿದ್ದು ಶುದ್ಧ ರಾಜಕೀಯವನ್ನೇ. ಅದರಲ್ಲೂ ಗೆರಿಲ್ಲಾ ಪಡೆಗಳಲ್ಲಿ ಬಳಕೆಯಾಗುವ ತಮ್ಮರನ್ನೇ ಇಲ್ಲವಾಗಿಸುವ ‘ಭ್ರಾತೃಹತ್ಯೆ’ಯಂಥ ಕೆಟ್ಟ ರಾಜಕಾರಣವನ್ನು.

ಐದು ವರ್ಷದ ಹಿಂದೆ ಇದ್ದಷ್ಟೇ ಪ್ರಬಲರಾಗಿ ಇಂದಿಗೂ ಕೇಜ್ರಿವಾಲ್ ಇದ್ದಾರೆ ಎಂದರೆ ದೆಹಲಿಯ ಸುಳಿಗಾಳಿ ಅಪನಂಬಿಕೆಯಲ್ಲಿ ನಕ್ಕುಬಿಟ್ಟೀತು. ಏಕೀಕೃತ ಅಧಿಕಾರಕ್ಕೆ ಸವಾಲು ಹಾಕಿ, ಪರ್ಯಾಯ ರಾಜಕಾರಣದ ಭರವಸೆ ಹುಟ್ಟಿಸಿ ಗದ್ದುಗೆ ಏರಿದ ವ್ಯಕ್ತಿ ಹೇಗೆಲ್ಲಾ ಬದಲಾದರು? ತಾವೇ ಹೇಗೆ ಪಕ್ಷ ಮತ್ತು ಸರ್ಕಾರದ ಅಧಿಕಾರದಕೇಂದ್ರವಾಗಿ ಹೇಗೆ ಬದಲಾದರುಎನ್ನುವುದು ದೆಹಲಿಯ ಜನರಿಗೆ ಅರ್ಥವಾಗದ ವಿದ್ಯಮಾನಲ್ಲ.

ಅರವಿಂದ್ ಕೇಜ್ರಿವಾಲ್

ಸಾಲುಸಾಲು ಸೋಲು

2017ರ ದೆಹಲಿ ಮುನಿಸಿಪಾಲಿಟಿ ಚುನಾವಣೆಗಳಲ್ಲಿ ಇದೇ ಸಿಟ್ಟು ಸ್ಫೋಟಗೊಂಡು ಆಪ್ ನೆಲಕಚ್ಚಿತ್ತು. ಒಟ್ಟು 272 ಸದಸ್ಯ ಬಲದ (ಉತ್ತರ, ದಕ್ಷಿಣ ಮತ್ತು ಪೂರ್ವ ದೆಹಲಿ) ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 181 ಸ್ಥಾನ ತನ್ನದಾಗಿಸಿಕೊಂಡ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, 49 ಸ್ಥಾನ ಪಡೆದ ಆಪ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಾಗಿದ್ದು ಕೇವಲ 31 ಸ್ಥಾನಗಳನ್ನು ಮಾತ್ರ.

ಕಳೆದ ಎರಡು ವರ್ಷಗಳಲ್ಲಿ ಆಪ್‌ ತಾನು ಸ್ಪರ್ಧಿಸಿದ ಬಹುತೇಕ ಚುನಾವಣೆಗಳಲ್ಲಿ ಸೋಲನುಭವಿಸಿದೆ. ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನಗಳಲ್ಲಿ ಪಕ್ಷಕ್ಕೆ ಕನಿಷ್ಠ ಶೇ 1ರಷ್ಟು ಮತವನ್ನೂ ಗಳಿಸಲು ಆಗಲಿಲ್ಲ.

2019ರ ಸಂಸತ್ ಚುನಾವಣೆಯಲ್ಲಿಯೂ ದೆಹಲಿಯಲ್ಲಿ ಆಪ್ ಪಕ್ಷದ ಸಾಧನೆ ನಗಣ್ಯ. ದೆಹಲಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯೇ ವಿಜಯಿ. ಬಿಜೆಪಿಯ ಮತಗಳಿಕೆ ಪ್ರಮಾಣ ಶೇ 56.58, ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ 22.46, ಆಪ್‌ ಗಳಿಸಿದ್ದು ಕೇವಲ ಶೇ 18ರಷ್ಟು ಮತಗಳು. 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ದೆಹಲಿಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ 10.18 ಮತ್ತು ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ 7.36ರಷ್ಟು ಹೆಚ್ಚಾಗಿತ್ತು. ಆದರೆ ಆಪ್‌ನ ಮತಗಳಿಕೆ ಪ್ರಮಾಣ ಶೇ 14.9ರಷ್ಟು ಕುಸಿದಿತ್ತು. ಈ ದತ್ತಾಂಶ ಆಧರಿಸಿ ಮುಖ್ಯಮಂತ್ರಿಯ ಜನಪ್ರಿಯತೆ ಕುಸಿದೆ ಎಂದು ವಿಶ್ಲೇಷಿಸಲು ಆಗುವುದಿಲ್ಲವೇ?

ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕಿಂತ ಕಾಂಗ್ರೆಸ್ ಪಕ್ಷವು ಆಪ್‌ಗಿಂತ ಹೆಚ್ಚು ಮತಗಳಿಸಿತು ಎನ್ನುವುದು ಹೆಚ್ಚು ಗಮನ ಸೆಳೆದ ಅಂಶ.

ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ಗೆಲುವು ಸುಲಭವೇ?

ಹಳೆಯ ಲೆಕ್ಕಾಚಾರವನ್ನೇ ಮುಂದಿಟ್ಟುಕೊಂಡು ಲೆಕ್ಕ ಹಾಕಿದರೆಅರವಿಂದ ಕೇಜ್ರಿವಾಲ್‌ರ ಆನ್ ಆದ್ನು ಪಕ್ಷವನ್ನುಮಣಿಸುವುದು ಶಾ–ಮೋದಿ ಜೋಡಿಯ ಬಿಜೆಪಿಗೆ ಬಲು ಸುಲಭ. ದೆಹಲಿಯ ಅನಧಿಕೃತ ಕಾಲೊನಿಗಳಲ್ಲಿ ವಾಸಿಸುತ್ತಿದ್ದ ಲಕ್ಷಾಂತರ ಜನರಿಗೆಹಕ್ಕುಪತ್ರ ಕೊಡುವ ಕಾಯ್ದೆಯ ಜೊತೆಗೆ ಮೆಟ್ರೊ ಯೋಜನೆ ಅನುಷ್ಠಾನದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಈಚೆಗೆ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಸ್ತಾಪಿಸಿದ್ದರು.

ಈ ರ್‍ಯಾಲಿಯಲ್ಲಿ ಮೋದಿ ಪೌರತ್ವ ಕಾಯ್ದೆಯನ್ನು ಸಮರ್ಥಿಸಿಕೊಂಡಷ್ಟೇ ತೀಕ್ಷ್ಣವಾಗಿ, ‘ದೆಹಲಿಯ ದೊಡ್ಡ ಸಮಸ್ಯೆ ಎಂದರೆ ಇಲ್ಲಿನ ಸರ್ಕಾರ. ಯಾವ ಕೆಲಸಕ್ಕೂ ಇದು ಉಪಯೋಗವಿಲ್ಲ’ ಎಂದು ಟೀಕಿಸಿದ್ದರು. ನೆರೆದಿದ್ದ ಜೋರಾಗಿ ಚಪ್ಪಾಳೆ ತಟ್ಟಿ ನಗಾಡಿದ್ದರು. ‘ಮೋದಿ ಮೋದಿ’ ಎಂದು ಆಗಸಕ್ಕೆ ಕೇಳಿಸುವಂತೆ ಹರ್ಷೋದ್ಗಾರ ಮಾಡಿದ್ದರು.

ಆದರೆ ದೆಹಲಿ ಮುಖ್ಯಮಂತ್ರಿ ಗಾದಿ ಬಿಜೆಪಿಗೆ ಒಲಿಯಲು ಇಷ್ಟೇ ಸಾಕೇ? ಪೌರತ್ವ ಕಾಯ್ದೆಯನ್ನು ಪ್ರಸ್ತಾಪಿಸಿ, ಹಿಂದುತ್ವದ ಭಾವನೆ ಕೆರಳಿಸಿದರೆ ಬಿಜೆಪಿಯ ಮತದ ಜೋಳಿಗೆ ತುಂಬುವುದೇ? ಈ ಎರಡೂ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಆದರೆ ಮೊದಲಿನಂತೆ ಹಿಂದುತ್ವದ ಪ್ರಸ್ತಾಪ ಮತ ತಂದುಕೊಡುವ ಶಕ್ತಿಯಾಗಿ ಉಳಿದಿಲ್ಲ ಎಂದು ಮಾತ್ರ ಹೇಳಬಹುದು.

ಬಿಜೆಪಿ–ಕಾಂಗ್ರೆಸ್‌ ನಾಯಕತ್ವ ಗೊಂದಲ

ಸದ್ಯದ ಮಟ್ಟಿಗೆ ರಾಷ್ಟ್ರ ರಾಜಕಾರಣದಲ್ಲಿ ನರೇಂದ್ರ ಮೋದಿ ಎಷ್ಟು ಸುರಕ್ಷಿತರೋ, ದೆಹಲಿ ಸ್ಥಳೀಯ ರಾಜಕಾರಣದಲ್ಲಿಅರವಿಂದ್ಕೇಜ್ರಿವಾಲ್ ಅಷ್ಟೇ ಪ್ರಬಲರು. 2019ರ ಸಂಸತ್ ಚುನಾವಣೆಯಲ್ಲಿ ಮೋದಿ ಅವರೊಬ್ಬರೇ ಇಡೀ ಬಿಜೆಪಿಯ ಮುಖವಾಗಿದ್ದ ಸಂದರ್ಭವನ್ನು ಒಮ್ಮೆ ನೆನಪಿಸಿಕೊಳ್ಳಿ. ‘ನೀವು ನಿಮ್ಮ ಅಭ್ಯರ್ಥಿಗಳಿಗೆ ಮತ ಹಾಕುತ್ತಿಲ್ಲ. ನನ್ನನ್ನು ಪ್ರಧಾನಿ ಮಾಡಲು ಮತ ಹಾಕುತ್ತಿದ್ದೀರಿ’ ಎಂದು ನರೇಂದ್ರ ಮೋದಿ ಹೇಳುತ್ತಿದ್ದರು. ‘ನಿಮ್ಮ ವೋಟ್ ನಮಗಲ್ಲ, ಮೋದಿಗೆ’ ಎಂದು ಅಭ್ಯರ್ಥಿಗಳು ಹೇಳಿದ್ದರು.

ಇದನ್ನೇ ರಾಜಕಾರಣದಲ್ಲಿ‘ನನ್ನನ್ನು ಬಿಟ್ಟರೆ ಇನ್ಯಾರಿಲ್ಲ’ವಿದ್ಯಮಾನ (TINA- There is No Alternative) ಎನ್ನುವುದು. ದೆಹಲಿಯ ಮಟ್ಟಿಗೆ ಈ ವಿದ್ಯಮಾನ ಕೇಜ್ರಿವಾಲ್ ಪರವಾಗಿದೆ. ದೆಹಲಿಯಲ್ಲಿಬಿಜೆಪಿಗೆ ಕೇಜ್ರಿವಾಲ್‌ರನ್ನು ಸರಿಗಟ್ಟುವನಾಯಕರಿಲ್ಲ. ಮನೋಜ್ ತಿವಾರಿ, ವಿಜಯ್ ಗೋಯೆಲ್, ಹರ್ಷವರ್ಧನ್ ಅಥವಾ ಇತರ ಯಾರನ್ನೇ ಹೆಸರಿಸಿದರೂ ಅವರು ಪ್ರಭಾವ ಮತ್ತು ಜನಪ್ರಿಯತೆಯಲ್ಲಿ ಕೇಜ್ರಿವಾಲ್‌ ಸಮಕ್ಕೆ ಬರುವುದಿಲ್ಲ. ಮೋದಿ ಪ್ರಧಾನಿಯಾಗಿ ದೆಹಲಿಯಲ್ಲಿಯೂ ಜನಪ್ರಿಯರು. ಆದರೆ ಅದು ಲೋಕಸಭೆ ಚುನಾವಣೆಯಲ್ಲಿ ಉಪಯೋಗಕ್ಕೆ ಬರಬಹುದು. ವಿಧಾನಸಭೆ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಮತ ತಂದುಕೊಡಬಲ್ಲದು?

ದೆಹಲಿಯ ಮೇಲ್ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಜನರಲ್ಲಿ ಕೇಜ್ರಿವಾಲ್ ಬಗ್ಗೆ ಭ್ರಮನಿರಸನ ಆಗಿರಬಹುದು. ಆದರೆ ಕೆಳ ಮಧ್ಯಮ ಮತ್ತು ಬಡ ವರ್ಗದ ಬಹುತೇಕ ಜನರುಕೇಜ್ರಿವಾಲ್‌ರನ್ನು ಆಶಾಕಿರಣಂತೆ ಭಾವಿಸುತ್ತಾರೆ.ಬಿಜೆಪಿ ನಾಯಕರಂತೆ ಕೆಲಸವಿದ್ದಾಗಲಷ್ಟೇ ಚುರುಕಾಗಿರುವ ಸ್ವಭಾವ ಕೇಜ್ರೀವಾಲ್‌ರದ್ದು ಅಲ್ಲ ಎನ್ನುವುದು ಇದಕ್ಕೆ ಮುಖ್ಯ ಕಾರಣ.ದೆಹಲಿ ಮುನ್ಸಿಪಾಲಿಟಿ ಚುನಾವಣೆ ಸೋತ ನಂತರ ಕೇಜ್ರಿವಾಲ್ಅಕ್ಷರಶಃ ತಮ್ಮ ರಾಜ್ಯದ ಮೂಲೆಮೂಲೆ ಓಡಾಡಿದ್ದಾರೆ. ಪ್ರತಿದಿನ ಎನ್ನುವಂತೆ ರ‍್ಯಾಲಿಗಳಲ್ಲಿ ಮಾತನಾಡುತ್ತಿದ್ದಾರೆ.

ರಾಹುಲ್ ಗಾಂಧಿ

ಮುರಿದ ಮನೆ ಕಾಂಗ್ರೆಸ್‌

ದೆಹಲಿಯಲ್ಲಿ ಕಾಂಗ್ರೆಸ್ ಅಕ್ಷರಶಃ ಮರಣಶಯ್ಯೆಯಲ್ಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪುಟಿದೇಳುವ ಮುನ್ಸೂಚನೆ ನೀಡಿದ್ದ ಕಾಂಗ್ರೆಸ್ಮತಗಳಿಕೆಯಲ್ಲಿ ಬಿಜೆಪಿ ನಂತರದ ಸ್ಥಾನದಲ್ಲಿತ್ತು. ಆದರೆ ಕಾಂಗ್ರೆಸ್ ನಾಯಕರ ಮೃದು ಹಿಂದುತ್ವದ ಧೋರಣೆ, ಪೌರತ್ವ ಕಾಯ್ದೆಯ ವಿರುದ್ಧ ಪ್ರಬಲ ಹೋರಾಟ ಸಂಘಟಿಸುವಲ್ಲಿ ಆದ ವೈಫಲ್ಯದಿಂದ ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತರು ಅದರಿಂದ ದೂರವಾಗಿದ್ದಾರೆ.

‘ದೆಹಲಿಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಬ್ಯಾಂಕ್ ಎನಿಸಿದ್ದಮುಸ್ಲಿಂ ಸಮುದಾಯವು ಈಗ ಅದರಿಂದ ದೂರವಾಗಿ ಆಪ್ ಬೆಂಬಲಿಸುತ್ತಿದೆ’ ಎಂದು ‘ಎನ್‌ಡಿಟಿವಿ’ ಜಾಲತಾಣದ ಅಂಕಣಕಾರ ಆಶುತೋಷ್ ಆಭಿಪ್ರಾಯಪಡುತ್ತಾರೆ.

ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ನಲ್ಲಿ ಒಳಜಗಳಗಳು ಹೆಚ್ಚಾದವು. ಶೀಲಾ ದೀಕ್ಷಿತ್‌ರ ಸಾವು, ರಾಹುಲ್ ಗಾಂಧಿ ರಾಜೀನಾಮೆಯ ನಂತರಪಕ್ಷದ ರಾಜ್ಯ ಘಟಕದಲ್ಲಿ ನಾಯಕತ್ವ ಬಿಕ್ಕಟ್ಟು ತಲೆದೋರಿತು.ಚುನಾವಣೆ ಸಿದ್ಧತೆ ಹಲವು ತಿಂಗಳುಗಳಿಂದ ಯಾವುದೇ ಪ್ರಗತಿ ಸಾಧಿಸಲಿಲ್ಲ. ಕಾರ್ಯಕರ್ತರಲ್ಲಿಉತ್ಸಾಹ ಕಾಪಾಡಲು ನಾಯಕರು ಹೆಚ್ಚೇನೂ ಮಾಡಲಿಲ್ಲ.

ಈಗ ಒಮ್ಮೆಸಾಂಪ್ರದಾಯಿಕ ವಿಶ್ಲೇಷಣೆಯ ಕಡೆಗೆ ಒಮ್ಮೆ ಕಣ್ಣು ಹಾಯಿಸೋಣ.ಬಿಜೆಪಿಗೆ ಮೊದಲಿನಿಂದಲೂ ಸಂಘ ಪರಿವಾರದ ಹಿತೈಷಿಗಳು ಮತ್ತು ಹಿಂದುತ್ವವಾದದ ಒಲವಿರುವವರು ಮತ ನಿಚ್ಚಳ. ಅಲ್ಪಸಂಖ್ಯಾತರು ಮತ್ತು ಜಾತ್ಯತೀತ ನಿಲುವಿನವರ ಬೆಂಬಲವನ್ನುಆಪ್ ಮತ್ತು ಕಾಂಗ್ರೆಸ್‌ ನೆಚ್ಚಿಕೊಂಡಿದೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕತ್ವದೊಂದು ಸಂಘಟನೆ ಚುರುಕಾಗಿದ್ದರೆ ಆಪ್‌ಗೆ ಅದು ಅಕ್ಷರಶಃ ಮರಣಶಾಸನವೇ ಆಗುತ್ತಿತ್ತು. ಆದರೆ ಈಗಿರುವ ಕಳಾಹೀನ ಕಾಂಗ್ರೆಸ್ ಆಪ್‌ ಪಾಲಿಗೆ ಆಶಾಕಿರಣವಾಗಿ ಕಂಗೊಳಿಸುತ್ತಿದೆ. ಈಗ ಬಿಜೆಪಿ ವಿರೋಧಿ ಮತಗಳು ಸಾರಾಸಗಟಾಗಿ ತಮ್ಮದಾಗುತ್ತವೆ ಎನ್ನುವುದು ಆಪ್ ನಾಯಕರ ವಿಶ್ವಾಸ.

ಅರವಿಂದ್ ಕೇಜ್ರಿವಾಲ್

ಮತದಾರರ ಮನವೊಲಿಕೆ

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೆಲಸ ಮಾಡಿ ಸುದ್ದಿಯಾದದ್ದಕ್ಕಿಂತಮಾತನಾಡಿ ಸುದ್ದಿಯಾಗಿದ್ದೇ ಹೆಚ್ಚು. ಪರ ರಾಜ್ಯಗಳ ಚುನಾವಣೆಗಳಲ್ಲಿ ಗೆಲ್ಲುವ ಉತ್ಸಾಹ, ಅವರಿವರ ಟೀಕೆ, ಕೇಂದ್ರವನ್ನು ವಿರೋಧಿಸುವ ಹುಮ್ಮಸ್ಸಿನ ನಡುವೆಯೂ ಅರವಿಂದ್ ಕೇಜ್ರಿವಾಲ್ನೇತೃತ್ವದ ಆಪ್‌ ಸರ್ಕಾರತನ್ನ ಕೈಲಾದಷ್ಟು ಕೆಲಸ ಮಾಡಿದೆ. ಸಾಕಷ್ಟು ಚುನಾವಣಾ ಭರವಸೆಗಳನ್ನು ಈಡೇರಿಸಿದೆ. ವಿಧಾನಸಭಾಚುನಾವಣೆಗೂ ಸಾಕಷ್ಟು ಮೊದಲೇ ಜನರಿಗೆ ಹತ್ತಾರು ಕೊಡುಗೆಗಳನ್ನು ಘೋಷಿಸಿ ಮನವೊಲಿಸಲು ಮುಂದಾಗಿದೆ.

ಉಚಿತ ವಿದ್ಯುತ್ ಮತ್ತು ಅರ್ಧ ಬೆಲೆಯಲ್ಲಿ ನೀರು ಪೂರೈಕೆ ಯೋಜನೆಗಳುಕೆಳ ಮಧ್ಯಮ ವರ್ಗ ಮತ್ತು ಬಡ ಜನರಿಗೆ ಅನುಕೂಲ ಮಾಡಿಕೊಟ್ಟಿವೆ.ದೆಹಲಿಯ ಶೇ 80ರಷ್ಟು ಮತದಾರರು ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎನ್ನುವುದು ಉಲ್ಲೇಖಾರ್ಹ ಅಂಶ.ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಆಪ್ ಸರ್ಕಾರ ಮಾಡಿರುವ ಕೆಲಸಗಳ ಬಗ್ಗೆಯೂ ಜನರು ಖುಷಿಯಾಗಿ ಮಾತನಾಡುತ್ತಿದ್ದಾರೆ.ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಕಲ್ಪಿಸಿದ್ದು, ಶಿಕ್ಷಣದ ಗುಣಮಟ್ಟ ಸುಧಾರಿಸಿದ್ದು ದೆಹಲಿ ಸರ್ಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಲು ಕಾರಣವಾಯಿತು.

ಅರವಿಂದ್ ಕೇಜ್ರಿವಾಲ್

ಮೌನವೇ ಆಭರಣ

2015ರಲ್ಲಿ ವ್ಯಾಪಕ ಜನಬೆಂಬಲದೊಂದಿಗೆ ಗೆಲುವು ಸಾಧಿಸಿದ್ದ ಕೇಜ್ರೀವಾಲ್‌ರಲ್ಲಿ ಬಿಸಿರಕ್ತದ ತರುಣನ ಮುಂಗೋಪ ಎದ್ದು ಕಾಣುತ್ತಿತ್ತು.ಪ್ರತಿ ವಿಚಾರಕ್ಕೂ ನರೇಂದ್ರ ಮೋದಿಯನ್ನು ಟೀಕಿಸುತ್ತಿದ್ದರು. ಕೇಜ್ರಿವಾಲ್‌ರ ಈ ಕೂಗುಮಾರಿ ಸ್ವಭಾವವನ್ನು ಮೋದಿ ಮತ್ತು ಅವರ ತಂಡದ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಾಗಿಸಿ, ಬಳಸಿಕೊಂಡರು.

‘ಆಡಳಿತದತ್ತ ಗಮನಕೊಡಲು ಆಸಕ್ತಿಯಿಲ್ಲದ ಕೇಜ್ರೀವಾಲ್ ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೆ. ಬಿಜೆಪಿಯನ್ನು ಹೊಣೆಯಾಗಿಸುತ್ತಾರೆ’ ಎನ್ನುವ ಭಾವನೆಯನ್ನು ದೆಹಲಿ ಮತದಾರರಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಬಿತ್ತಿತ್ತು.

ಆಡಳಿತ ಕೌಶಲ ಮತ್ತು ರಾಜಕೀಯ ಅನುಭವ ಇಲ್ಲದ ಕೇಜ್ರಿವಾಲ್ಹಿರಿಯ ಅಧಿಕಾರಿಗಳನ್ನು ಗೌರವದಿಂದ ಕಾಣುತ್ತಿರಲಿಲ್ಲ. ಅವರದೇ ಪಕ್ಷದ ರಾಜಕಾರಣಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ. ಕೇಜ್ರಿವಾಲ್‌ರ ಆದೇಶಗಳನ್ನು ಜಾರಿಗೆ ತರಬೇಕಾದವರೇ ತಮ್ಮ ನಾಯಕನ ಬಗ್ಗೆ ಅಸಹನೆ ಕಾರಿಕೊಳ್ಳುತ್ತಿದ್ದರು.

ರಾಜಕಾರಣದಲ್ಲಿ ಬದಲಾವಣೆ ತರುವ ಆಸೆ ಬಿತ್ತಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್‌ ಕೇವಲ ನಾಟಕೀಯ ಮಾತುಗಳು ಮತ್ತು ಬೈದಾಟಕ್ಕೆ ಸೀಮಿತರಾದಾಗ ಮಧ್ಯಮ ವರ್ಗ ಭ್ರಮನಿರಸನಗೊಂಡಿತ್ತು. ಅವಕಾಶ ಸಿಕ್ಕಾಗಲೆಲ್ಲಾ ಕೇಜ್ರಿವಾಲ್‌ರ ಆಪ್ತರು,‘ಹೆಜ್ಜು ಮಾತನಾಡಬೇಡಿ, ಟ್ವಿಟರ್‌ನಲ್ಲಿ ಖಂಡಾಪಟ್ಟೆ ಬರೆಯಬೇಡಿ, ಅಧಿಕಾರಿಗಳೊಂದಿಗೆ ಗೌರವದಿಂದ ವ್ಯವಹರಿಸಿ, ಜೊತೆಯಲ್ಲಿರುವವರನ್ನು ಪ್ರೀತಿಯಿಂದ ಕಾಣಿ’ ಎಂಬ ಸಲಹೆಗಳನ್ನು ಕೊಟ್ಟಿದ್ದರು. ಆದರೆ ಇದ್ಯಾವುದಕ್ಕೂ ಕೇಜ್ರಿವಾಲ್ಸೊಪ್ಪು ಹಾಕದೆ, ತಾನು ಮಾಡಿದ್ದೇ ಸರಿ ಎಂಬಂತೆ ವರ್ತಿಸಿದರು.ಇದೇ ಹೊತ್ತಿಗೆ ಪಂಜಾಬ್‌ನಲ್ಲಿ ಚುನಾವಣೆಗಳು ನಡೆದು ಆಪ್‌ ನೆಲಕಚ್ಚುವಂತಾಯಿತು.ಪಂಜಾನ್‌ನಲ್ಲಿ ಚುನಾವಣೆ ಗೆದ್ದು, ಸರ್ಕಾರ ರಚಿಸುವ ಮಟ್ಟಿಗೆ ಭರವಸೆ ಹುಟ್ಟಿಸಿದ್ದ ಪಕ್ಷ ಧರಾಶಾಯಿಯಾಗಿ ಕುಸಿದ ನಂತರ ಕೇಜ್ರೀವಾಲ್ ಎಚ್ಚೆತ್ತರು.

ಪಂಜಾಬ್‌ ಸೋಲುಕೇಜ್ರಿವಾಲ್‌ಗೆದೊಡ್ಡ ಪಾಠ ಕಲಿಸಿತು. ಮೌನದ ಬೆಲೆ ಈಗ ಅವರಿಗೆ ಅರ್ಥವಾಗಿದೆ. ಇದೇ ಕಾರಣಕ್ಕೇ ಇರಬಹುದು, ‘2015ರಲ್ಲಿ ಗರ್ಜಿಸುತ್ತಿದ್ದ ಕೇಜ್ರಿವಾಲ್‌ಗಿಂತ,2020ರಲ್ಲಿ ಮೌನದ ಮೌಲ್ಯ ಅರಿತ ಕೇಜ್ರಿವಾಲ್ ಹೆಚ್ಚು ಅಪಾಯಕಾರಿ’ ಎಂದು ರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಈ ಬೆಳವಣಿಗೆಯನ್ನು ಮೋದಿ–ಅಮಿತ್‌ ಶಾ ಜೋಡಿ ಅರ್ಥ ಮಾಡಿಕೊಂಡು ಇನ್ನೆಂಥ ಪ್ರತಿತಂತ್ರ ಹೆಣೆಯುತ್ತದೆಯೋ ಕಾದು ನೋಡಬೇಕು.

ದೆಹಲಿ ಚುನಾವಣೆಯ ಸೋಲು ಅಥವಾ ಗೆಲುವು ಮೋದಿ ಸರ್ಕಾರದ ಮೇಲೆ ಹೆಚ್ಚೇನೂ ಪರಿಣಾಮ ಬೀರದು. ಆದರೆ ಅದು ದೇಶಕ್ಕೆ ಒಂದು ಸಂದೇಶ ಕಳಿಸುವುದಂತೂ ನಿಜ. ಆಪ್‌ ಪಾಲಿಗೆ ಸದ್ಯದ ಮಟ್ಟಿಗೆ ಅದು ಅಳಿವು–ಉಳಿವಿನ ಪ್ರಶ್ನೆಯೂ ಹೌದು.

ಫೆ.8ಕ್ಕೆ ದೆಹಲಿ ವಿಧಾನಸಭೆ ಚುನಾವಣೆ

ದೆಹಲಿ ವಿಧಾನಸಭೆ ಚುನಾವಣೆ ಫೆಬ್ರುವರಿ 8ರಂದು ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಲಿ ವಿಧಾನಸಭೆ ಅವಧಿ ಫೆಬ್ರುವರಿ 22ಕ್ಕೆ ಕೊನೆಗೊಳ್ಳಲಿದೆ.

ಜ.14ರಂದು ಆಯೋಗ ಅಧಿಸೂಚನೆ ಹೊರಡಿಸಲಿದೆ.ಜ.21ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ,ಜ. 22ನಾಮಪತ್ರ ಪರಿಶೀಲನೆ,ಜ.24ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಈ ಬಾರಿ ಒಟ್ಟು 1.46 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ.ಈ ಪೈಕಿ 80.55 ಲಕ್ಷ ಪುರುಷರು ಮತ್ತು 66.35 ಲಕ್ಷ ಮಹಿಳಾ ಮತದಾರರಿದ್ದಾರೆ. 13,750 ಬೂತ್‌ಗಳಲ್ಲಿ ಮತದಾನ ನಡೆಯಲಿದೆ.

2015ರ ಚುನಾವಣೆ ಫಲಿತಾಂಶ

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2015ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ (ಎಎಪಿ) 67 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 3 ಸ್ಥಾನ ದಕ್ಕಿಸಿಕೊಂಡಿದ್ದರೆ, ಕಾಂಗ್ರೆಸ್‌ನದ್ದು ಶೂನ್ಯ ಸಂಪಾದನೆ. ಆಪ್‌ ಶೇ 54.3, ಬಿಜೆಪಿ ಶೇ 32.3 ಮತ್ತು ಕಾಂಗ್ರೆಸ್‌ ಶೇ 9.7ರಷ್ಟು ಮತಗಳಿಸಿದ್ದವು. 2013ರ ಚುನಾವಣೆಗೆ ಹೋಲಿಸಿದರೆ ಆಪ್ ಮತಗಳಿಕೆ ಶೇ 24.8ರಷ್ಟು ಹೆಚ್ಚಾಗಿದ್ದರೆಬಿಜೆಪಿ ಮತಗಳಿಕೆ ಶೇ 0.8 ಮತ್ತು ಕಾಂಗ್ರೆಸ್‌ನದ್ದು ಶೇ 14ರಷ್ಟು ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT