ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ನಾಡಿಗೆ ‘ಅಭಿ’ವಂದನೆ, ಆತಂಕ ಸೃಷ್ಟಿಸಿದ ವಿಳಂಬ

ಶುಕ್ರವಾರ ರಾತ್ರಿ 9.20ಕ್ಕೆ ಭಾರತಕ್ಕೆ ‍ಪೈಲಟ್‌ ಹಸ್ತಾಂತರ
Last Updated 1 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ವಾಘಾ/ಅಟ್ಟಾರಿ: ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಹಲವು ತಾಸುಗಳ ಅನಿಶ್ಚಿತತೆಯ ಆತಂಕದ ಬಳಿಕ ಶುಕ್ರವಾರ ರಾತ್ರಿ 9.20ಕ್ಕೆ ತಾಯ್ನೆಲಕ್ಕೆ ಹೆಜ್ಜೆಯಿಟ್ಟರು. ಮೂರು ದಿನ ಪಾಕಿಸ್ತಾನದ ವಶದಲ್ಲಿದ್ದ ಅವರು ತಾಯ್ನಾಡಿಗೆ ಕಾಲಿಟ್ಟು ಪುಳಕಿತರಾದರು. ಪಾಕಿಸ್ತಾನದಲ್ಲಿದ್ದ ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರದ ಮೇಲೆ ಭಾರತದವಾಯುಪಡೆ ದಾಳಿಯ ಬಳಿಕ ಸೃಷ್ಟಿಯಾಗಿದ್ದ ಸಮರ ಸನ್ನಿಹಿತ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.

ಅಭಿನಂದನ್‌ ಅವರಿಗೆ ಅದ್ದೂರಿ ಸ್ವಾಗತ ನೀಡಬೇಕು ಎಂಬ ಹಂಬಲದಿಂದ ಸಾವಿರಾರು ಜನರು ಶುಕ್ರವಾರ ಬೆಳಿಗ್ಗಿಯಿಂದಲೇ ವಾಘಾ– ಅಟ್ಟಾರಿ ಗಡಿಯಲ್ಲಿ ಸೇರಿದ್ದರು. ಅವರ ಕೈಗಳಲ್ಲಿ ತ್ರಿವರ್ಣ ಧ್ವಜಗಳು ಮತ್ತು ಹೂಮಾಲೆಗಳಿದ್ದವು. ಸಂಜೆ ಕಳೆದು ಕತ್ತಲು ಕವಿಯಲಾರಂಭಿಸಿದರೂ ಪೈಲಟ್‌ ಸುಳಿವಿಲ್ಲದೆ ಜನರು ಕಳವಳಗೊಂಡಿದ್ದರು.

ರಾತ್ರಿ 9.10ರ ಹೊತ್ತಿಗೆ ಅಭಿನಂದನ್‌ ಅವರು ಪಾಕಿಸ್ತಾನ ಕಡೆಯ ಗಡಿ ಭಾಗ ವಾಘಾದಲ್ಲಿ ಕಾಣಿಸಿಕೊಂಡರು. ಜತೆಗೆ ಪಾಕಿಸ್ತಾನದ ಅಧಿಕಾರಿಗಳು ಮತ್ತು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಯ ಮಹಿಳಾ ಅಧಿಕಾರಿಯೊಬ್ಬರೂ ಇದ್ದರು. ನಾಗರಿಕ ದಿರಿಸಿನಲ್ಲಿದ್ದ ಅಭಿನಂದನ್‌, ಗಡಿಯ ಗೇಟು ತೆರೆದುಕೊಳ್ಳುತ್ತಿದ್ದಂತೆಯೇ ಹೆಮ್ಮೆಯಿಂದ ಭಾರತದೊಳಕ್ಕೆ ಪ್ರವೇಶಿಸಿದರು.

‘ಪಾಕಿಸ್ತಾನದ ಅಧಿಕಾರಿಗಳು ಅಭಿನಂದನ್‌ ಅವರನ್ನು ಅಟ್ಟಾರಿಯ ಜಂಟಿ ತಪಾಸಣಾ ಠಾಣೆಗೆ ಕರೆತಂದರು. ವಾಘಾ–ಅಟ್ಟಾರಿ ಗಡಿಯಲ್ಲಿ ಕೆಲವು ಶಿಷ್ಟಾಚಾರಗಳ ಬಳಿಕ ಗಡಿ ಭದ್ರತಾ ಪಡೆಯ ಅಧಿಕಾರಿಗಳಿಗೆ ಅವರನ್ನು ಹಸ್ತಾಂತರಿಸಲಾಯಿತು. ನಂತರ, ಭಾರತೀಯ ವಾಯುಪಡೆಯ ಅಧಿಕಾರಿಗಳು ಅವರನ್ನು ಕರೆದೊಯ್ದರು’ ಎಂದು ಅಮೃತಸರ ಜಿಲ್ಲಾಧಿಕಾರಿ ಶಿವ ದುಲರ್‌ ಸಿಂಗ್ ದಿಲ್ಲೋನ್‌ ವಿವರಿಸಿದ್ದಾರೆ. ಅಭಿನಂದನ್‌ ಹೆತ್ತವರು ಗಡಿ ಠಾಣೆಯಲ್ಲಿ ಉಪಸ್ಥಿತರಿರಲಿಲ್ಲ ಎಂದೂ ಅವರು ಹೇಳಿದರು.

ಫೆ. 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನದ ಮೂಲದ ಜೈಷ್‌ ಎ ಮೊಹಮ್ಮದ್‌ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗುವುದರೊಂದಿಗೆ ಭಾರತ–ಪಾಕಿಸ್ತಾನ ನಡುವಣ ಸಂಬಂಧ ವಿಷಮಗೊಂಡಿತ್ತು.

ಈ ಆಕ್ರೋಶದ ಮಧ್ಯದಲ್ಲೇ, ಭಾರತದ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಷ್‌ನದ್ದೆಂದು ಹೇಳಲಾದ ಶಿಬಿರದ ಮೇಲೆ ಫೆ. 26ರಂದು ದಾಳಿ ನಡೆಸಿತ್ತು. ಮರುದಿನ ಎಫ್‌ 16 ವಿಮಾನಗಳೂ ಇದ್ದ 24 ಯುದ್ಧ ವಿಮಾನಗಳೊಂದಿಗೆ ಭಾರತದ ಮೇಲೆ ದಾಳಿಗೆ ಬಂದಿತ್ತು. ಈ ದಾಳಿಯನ್ನು ಭಾರತದ ವಾಯುಪಡೆಯ ಎಂಟು ಮಿಗ್‌ 21 ವಿಮಾನಗಳು ಹಿಮ್ಮೆಟ್ಟಿಸಿದ್ದವು. ಈ ಪ್ರಯತ್ನದಲ್ಲಿ ಅಭಿನಂದನ್‌ ಪೈಲಟ್‌ ಆಗಿದ್ದ ವಿಮಾನ ಪತನವಾಗಿತ್ತು. ಅವರು ಪ್ಯಾರಾಚೂಟ್‌ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು. ಅವರನ್ನು ಪಾಕಿಸ್ತಾನದಸೇನೆ ವಶಕ್ಕೆ ಪಡೆದಿತ್ತು. ಭಾರತ ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿದೆ.

* ತಾಯ್ನಾಡಿಗೆ ಮರಳಿದ್ದಕ್ಕೆ ಬಹಳ ಸಂತಸವಾಗಿದೆ
-ವಿಂಗ್‌ ಕಮಾಂಡರ್‌ ಅಭಿನಂದನ್‌

* ತಾಯ್ನೆಲಕ್ಕೆ ಸ್ವಾಗತ ವಿಂಗ್‌ ಕಮಾಂಡರ್‌ ಅಭಿನಂದನ್‌! ನಿಮ್ಮ ಅಸಾಧಾರಣ ದೈರ್ಯದಿಂದಾಗಿ ಇಡೀ ದೇಶ ಹೆಮ್ಮೆಪಟ್ಟಿದೆ. ನಮ್ಮ ಸಶಸ್ತ್ರ ಪಡೆಗಳು 130 ಕೋಟಿ ಭಾರತೀಯರಿಗೆ ಸ್ಫೂರ್ತಿ. ಎರಡು ದಿನಗಳಿಂದ ನಡೆದ ಘಟನೆಗಳು ಭಾರತೀಯರನ್ನು ಒಗ್ಗೂಡಿಸಿದೆ. ಅಭಿನಂದನ್‌ ಬಿಡುಗಡೆಗೆ ಎಲ್ಲರೂ ಒಟ್ಟಾಗಿ ಪ್ರಾರ್ಥಿಸಿದ್ದಾರೆ
-ನರೇಂದ್ರ ಮೋದಿ, ಪ್ರಧಾನಿ

ದೇಶ ಭಕ್ತಿಯ ಸುಧೆ...
ದೇಶದ ಮೂಲೆ ಮೂಲೆಯಲ್ಲಿಯೂ ಕಳೆದ ಕೆಲವು ದಿನಗಳಿಂದ ದೇಶದ ಯೋಧರ ಮೇಲಿನ ಪ್ರೀತಿ ಉಕ್ಕಿ ಹರಿದಿದೆ. ಬೆಂಗಳೂರಿನ ಬೀದಿಗಳಲ್ಲಿ ಜನರು ಕುಣಿದರೆ, ಅಹಮದಾಬಾದ್‌ನಲ್ಲಿ ಜನರು ಗಾರ್ಭಾ ನೃತ್ಯ ಮಾಡಿದ್ದಾರೆ. ದೇಶದ ಎಲ್ಲ ನಗರಗಳು, ಪಟ್ಟಣಗಳ ಸ್ಥಿತಿಯೂ ಹೀಗೆಯೇ ಇತ್ತು. ವಾಘಾ ಗಡಿಯಲ್ಲಿ ಬೆಳಗ್ಗಿನಿಂದಲೇ ತ್ರಿವರ್ಣ ಧ್ವಜಗಳು ಸಾಲು ಸಾಲಾಗಿ ರಾರಾಜಿಸಿವೆ. ಹಲವು ಮಂದಿ ತಮ್ಮ ಮುಖಕ್ಕೇ ತ್ರಿವರ್ಣ ಬಳಿದುಕೊಂಡು ಬಂದಿದ್ದರು.

ಭದ್ರತೆಗೆ ಸಾಹಸ
ಅಟ್ಟಾರಿ ಗಡಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಸೇನೆಯ ನೂರಾರು ಸಿಬ್ಬಂದಿ, ಪೊಲೀಸರು ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು. ಆದರೆ, ಗಡಿಯಲ್ಲಿ ಶುಕ್ರವಾರ ಸೇರಿದ್ದ ಜನರ ಸಂಖ್ಯೆ 20 ಸಾವಿರಕ್ಕೂ ಹೆಚ್ಚಿತ್ತು. ಭದ್ರತೆಯಲ್ಲಿ ಲೋಪ ಆಗದಂತೆ ಸಿಬ್ಬಂದಿ ಹರಸಾಹಸಪಟ್ಟರು.

ಮಾಹಿತಿ ಕೊರತೆ, ವದಂತಿಗಳದ್ದೇ ಸಾಮ್ರಾಜ್ಯ
ಅಭಿನಂದನ್‌ ಅವರನ್ನು ಎಷ್ಟು ಗಂಟೆಗೆ ಹಸ್ತಾಂತರಿಸಲಾಗುವುದು ಎಂಬ ಪ್ರಶ್ನೆ ದೇಶದ ಎಲ್ಲರ ಮನದಲ್ಲಿಯೂ ಇತ್ತು. ಇಡೀ ದಿನ ಅದಕ್ಕೆ ಸಮಂಜಸ ಉತ್ತರವೇ ಸಿಗಲಿಲ್ಲ. ಅಟ್ಟಾರಿ ಗಡಿಯಿಂದ ಹಲವು ಕಾರುಗಳು ಸಂಜೆಯ ಹೊತ್ತಿಗೆ ಸಾಲಾಗಿ ಸಾಗಿದವು. ‘ಯಾರಿಗೂ ಕಾಣದಂತೆ ಅಭಿನಂದನ್‌ ಅವರನ್ನು ದೆಹಲಿಗೆ ಕರೆದೊಯ್ಯಲಾಯಿತೇ’ ಎಂಬ ಪ್ರಶ್ನೆಗಳು ಅಟ್ಟಾರಿಯಲ್ಲಿ ಸೇರಿದ್ದ ಜನರಲ್ಲಿ ಮೂಡಿದವು. ಶುಕ್ರವಾರ ರಾತ್ರಿಯ ವರೆಗೂ ಅಭಿನಂದನ್‌ ಬಿಡುಗಡೆಗೆ ಸಂಬಂಧಿಸಿದ ಮಾಹಿತಿ ತಿಳಿಯದೆ ಜನರು ಆತಂಕಗೊಂಡಿದ್ದರು. ರಾತ್ರಿ 9.20ಕ್ಕೆ ಅವರ ಬಿಡುಗಡೆಯಾದಾಗ ನಿರಾಳರಾದರು.

ಹೇಳಿಕೆ ಪಡೆದಿದ್ದೇ ವಿಳಂಬಕ್ಕೆ ಕಾರಣ
ಪಾಕಿಸ್ತಾನದ ಗಡಿ ದಾಟಿ ಭಾರತ ಪ್ರವೇಶಿಸುವ ಮುನ್ನ ಅಲ್ಲಿನ ಅಧಿಕಾರಿಗಳು ಹೇಳಿಕೆ ಪಡೆದುಕೊಂಡದ್ದೇ ಬಿಡುಗಡೆ ವಿಳಂಬಕ್ಕೆ ಕಾರಣ. ಅವರು ನೀಡಿದ ಹೇಳಿಕೆಯನ್ನು ವಿಡಿಯೊ ದಾಖಲೆ ಮಾಡಿಕೊಳ್ಳಲಾಗಿದೆ. ಅವರ ಮೇಲೆ ಒತ್ತಡ ಹೇರಿ ಹೇಳಿಕೆ ಪಡೆಯಲಾಗಿದೆಯೇ ಎಂಬುದು ಗೊತ್ತಾಗಿಲ್ಲ.

ಶುಕ್ರವಾರ ರಾತ್ರಿ 8.30ರ ಹೊತ್ತಿಗೆ ಈ ವಿಡಿಯೊವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ತಮ್ಮನ್ನು ಹೇಗೆ ಸೆರೆ ಹಿಡಿಯಲಾಗಿದೆ ಎಂಬುದನ್ನು ಅಭಿನಂದನ್‌ ಹೇಳುತ್ತಿರುವ ಈ ವಿಡಿಯೊ ಪಾಕಿಸ್ತಾನದ ಮಾಧ್ಯಮಗಳಲ್ಲಿ ಬಿತ್ತರವಾಗಿದೆ.

ದೆಹಲಿಯಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿ, ಘೋಷಣೆ ಕೂಗುವ ಮೂಲಕ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದ ಜನ
ದೆಹಲಿಯಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿ, ಘೋಷಣೆ ಕೂಗುವ ಮೂಲಕ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದ ಜನ

* ಎದುರಾಳಿಗಳ ವಶದಲ್ಲಿದ್ದರೂ ಅಭಿನಂದನ್ ಧೈರ್ಯದಿಂದ ವರ್ತಿಸಿದ್ದಾನೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬ ಸೈನಿಕ ಹೇಗಿರಬೇಕೋ ಹಾಗೆ ಆತ ನಡೆದುಕೊಂಡಿದ್ದಾನೆ. ಅವನು ನಿಜವಾದ ಸೈನಿಕ. ಆತನ ಬಗ್ಗೆ ಹೆಮ್ಮೆಯಿದೆ
-ಏರ್‌ ಮಾರ್ಷಲ್ (ನಿ) ಸಿಂಹಕುಟ್ಟಿ ವರ್ಧಮಾನ್, ಅಭಿನಂದನ್ ಅವರ ತಂದೆ

* ಅಭಿನಂದನ್ ಅವರ ಹಸ್ತಾಂತರವು ಸ್ವಾಗತಾರ್ಹ ನಡೆ. ಶಾಂತಿ ನೆಲೆಸಲು ಪಾಕಿಸ್ತಾನವು ತೆಗೆದುಕೊಳ್ಳಬೇಕಾದ ಹಲವು ಕ್ರಮಗಳಲ್ಲಿ ಇದು ಮೊದಲನೆಯದು. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನವು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು
-ವಿ.ಕೆ.ಸಿಂಗ್, ಕೇಂದ್ರ ಸಚಿವ

ಬಿಡುಗಡೆಗೆ ಮುನ್ನ

ಫೆಬ್ರುವರಿ 27:
* ಭಾರತದ ಗಡಿಯೊಳಗೆ ಪ್ರವೇಶಿಸಿ ದಾಳಿಗೆ ಯತ್ನಿಸಿದ ಪಾಕಿಸ್ತಾನದ ಎಫ್‌–16 ಯುದ್ಧವಿಮಾನಗಳು. ಅವುಗಳ ಮೇಲೆ ಭಾರತೀಯ ವಾಯುಪಡೆಯಿಂದ (ಐಎಎಫ್‌) ಪ್ರತಿದಾಳಿ. ಪ್ರತಿದಾಳಿ ವೇಳೆ ಐಎಎಫ್‌ನ ಮಿಗ್–21 ಯುದ್ಧವಿಮಾನ ಪತನ. ವಿಂಗ್ ಕಮಾಂಡರ್ ಅಭಿನಂದನ್ ಅನ್ನು ವಶಕ್ಕೆ ಪಡೆದ ಪಾಕಿಸ್ತಾನ ಸೈನಿಕರು

* ಅಭಿನಂದನ್ ಬಂಧನ, ಸಾಗಾಟ ಮತ್ತು ವಿಚಾರಣೆಯ ವಿಡಿಯೊಗಳ ಬಿಡುಗಡೆ. ಅಭಿನಂದನ್‌ ಅವರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಭಾರತದಿಂದ ಎಚ್ಚರಿಕೆ

* ಅಭಿನಂದನ್ ಅವರು ಪಾಕಿಸ್ತಾನದ ವಶದಲ್ಲಿದ್ದಾರೆ ಎಂಬುದನ್ನು ದೃಢಪಡಿಸಿದ ವಿದೇಶಾಂಗ ಸಚಿವಾಲಯ. ಅಭಿನಂದನ್ ಬಿಡುಗಡೆಗೆ ದೇಶದೆಲ್ಲೆಡೆ ಆಗ್ರಹ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

ಫೆಬ್ರುವರಿ 28:
* ವಿಂಗ್ ಕಮಾಂಡರ್‌ ಅವರ ಬಿಡುಗಡೆ ವಿಚಾರವಾಗಿ ಮಾತುಕತೆಗೆ ಅವಕಾಶವೇ ಇಲ್ಲ. ತಕ್ಷಣವೇ ಅವರನ್ನು ಬಿಡುಗಡೆ ಮಾಡಿ ಎಂದು ಪಾಕಿಸ್ತಾನಕ್ಕೆ ಸೂಚಿಸಿದ ಭಾರತ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗೊಂಡ ಅಭಿಯಾನ

* ಸೌದಿ ಅರೇಬಿಯಾ ರಾಯಭಾರಿಯ ಜತೆ ಪ್ರಧಾನಿ ಮೋದಿ ಭೇಟಿ, ಚರ್ಚೆ. ಅಮೆರಿಕ–ಭಾರತದ ಭದ್ರತಾ ಸಲಹೆಗಾರರ ಮಾತುಕತೆ

* ಭಾರತ–ಪಾಕಿಸ್ತಾನದ ಕಡೆಯಿಂದ ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೆ

* ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನದ ಸಂಸತ್‌ನಲ್ಲಿ ಘೋಷಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಮಾರ್ಚ್ 1:
* ಅಟ್ಟಾರಿ–ವಾಘಾ ಗಡಿಯಲ್ಲಿ ಜಮಾಯಿಸಿದ ಭಾರತೀಯರು. ಅಭಿನಂದನ್ ವಾಪಸಾಗುವಿಕೆಗೆ ಕಾತರ

ಮುಂದೇನು?
*ಏನೇನು ನಡೆಯಿತು ಎಂಬ ವಿಚಾರಣೆ ಶನಿವಾರ ನಡೆಯಲಿದೆ
*ಇಡೀ ಘಟನೆಯನ್ನು ಮರುರೂಪಿಸುವಂತೆ ಅಭಿನಂದನ್‌ ಅವರನ್ನು ಕೇಳಲಾಗುವುದು
*ಸೇನೆ ಮತ್ತು ಗುಪ್ತಚರ ಅಧಿಕಾರಿಗಳು ಈ ವಿಚಾರಣೆ ನಡೆಸಲಿದ್ದಾರೆ
*ಅಭಿನಂದನ್‌ ಅವರನ್ನು ಮಾನಸಿಕ ಮತ್ತು ದೈಹಿಕ ತಪಾಸಣೆಗೆ ಒಳಪಡಿಸಲಾಗುವುದು

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT