ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ: ತಲಾ 38 ಸ್ಥಾನಗಳಲ್ಲಿ ಸ್ಪರ್ಧೆ

Last Updated 12 ಜನವರಿ 2019, 8:48 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಡುವಣದ ಬಹುನಿರೀಕ್ಷಿತ ಮಹಾಮೈತ್ರಿಯನ್ನು ಉಭಯ ಪಕ್ಷಗಳು ಶನಿವಾರ ಅಧಿಕೃತವಾಗಿಘೋಷಣೆ ಮಾಡಿದವು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮಾಧ್ಯಮಗೋಷ್ಠಿ ನಡೆಸುವ ಮೂಲಕ ಮೈತ್ರಿಯ ವಿವರಗಳನ್ನು ಪ್ರಕಟಿಸಿದರು. ಇಲ್ಲಿನ ಖಾಸಗಿ ಹೋಟೇಲ್‌ನಲ್ಲಿ ನಡೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಮಾತನಾಡಿದರು.

2019 ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ತಲಾ 38 ಸ್ಥಾನಗಳಲ್ಲಿ ಸ್ಫರ್ಧೆ ಮಾಡಲಿವೆ. ಉಳಿದ ನಾಲ್ಕು ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿರುವುದಾಗಿ ಮಾಯಾವತಿ ಪ್ರಕಟಿಸಿದರು. ರಾಯ್‌ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಮಾಯಾವತಿ ಸ್ಪಷ್ಟಪಡಿಸಿದರು.

2018ರಲ್ಲಿ ಲೋಕಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಈ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಿತ್ತು.

ಮಾಧ್ಯಮ ಗೋಷ್ಠಿಯಲ್ಲಿ ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ವಿರುದ್ಧ ಹರಿಹಾಯ್ದರು.

ಬಿಜೆಪಿ ಧರ್ಮ ಮತ್ತು ಜಾತಿ ಆಧಾರಿತ ರಾಜಕಾರಣ ಮಾಡುತ್ತಿದೆ ಆಗಾಗಿ ಬಿಜೆಪಿ ಆಡಳಿತವನ್ನು ಕೊನೆಗಾಣಿಸಬೇಕಿದೆ ಎಂದರು. ಕಾಂಗ್ರೆಸ್‌ ಹಲವು ವರ್ಷಗಳ ಕಾಲ ದೇಶವನ್ನು ಆಳ್ವಿಕೆ ಮಾಡಿದೆ ಆದರೂ ಬಡತನ ಮತ್ತು ನಿರುದ್ಯೋಗ ನಿವಾರಣೆಯಾಗಿಲ್ಲ, ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು. ಈ ಎರಡು ಪಕ್ಷಗಳು ದೇಶದ ಅಭಿವೃದ್ಧಿಯನ್ನು ಮರೆತಿವೆ ಎಂದು ವಾಗ್ದಾಳಿ ನಡೆಸಿದರು.

ನಾವು ಅಂಬೇಡ್ಕರ್‌ ಕಂಡ ಕನಸನ್ನು ನನಸು ಮಾಡಲಿದ್ದೇವೆ, ದಲಿತರು, ಹಿಂದುಳಿದವರು, ರೈತರು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ನೀಡಲಿದ್ದೇವೆ. ಶ್ರೀಮಂತರ ಸಾಲ ಮನ್ನಾ ಮಾಡುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಈ ಮಹಾಮೈತ್ರಿಯಿಂದಾಗಿ ಮೋದಿ ಮತ್ತು ಅಮಿತ್‌ ಶಾ ನಿದ್ದೆ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಖಿಲೇಶ್ ಯಾದವ್‌ ಮಾತನಾಡಿ, ಉತ್ತರ ಪ್ರದೇಶ ರಾಜ್ಯ ದೇಶಕ್ಕೆ ಹಲವು ಪ್ರಧಾನಿಗಳನ್ನು ನೀಡಿದೆ. ಈ ಬಾರಿ ಉತ್ತರ ಪ್ರದೇಶದವರು ಪ್ರಧಾನಿಯಾಗಲಿದ್ದಾರೆ ಎಂದು ಮಾಯಾವತಿ ಪ್ರಧಾನಿ ಎಂಬುದನ್ನು ಅಖಿಲೇಶ್‌ ಪರೋಕ್ಷವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT