ಭಾನುವಾರ, ಏಪ್ರಿಲ್ 18, 2021
31 °C
ರಾಜ್ಯದಾದ್ಯಂತ ಕಟ್ಟೆಚ್ಚರ l ಯಾವುದೇ ಸ್ಥಿತಿ ಎದುರಿಸಲು ಸಜ್ಜು l ಹೆಚ್ಚುವರಿ ಪಡೆ ನಿಯೋಜನೆಗೆ ಸರ್ಕಾರ ಸೂಚನೆ

ತೀರ್ಪು ನಿರೀಕ್ಷೆ: ಅಯೋಧ್ಯೆಗೆ ಕಣ್ಗಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ:  ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಕಾಯ್ದಿರಿಸಿದ್ದು, ತೀರ್ಪು ಪ್ರಕಟವಾದ ಬಳಿಕ ಎದುರಾಗುವ ಎಂತಹುದೇ ಪರಿಸ್ಥಿತಿಯನ್ನು ಎದು
ರಿಸಲು ಉತ್ತರ ಪ್ರದೇಶ ಸರ್ಕಾರ ಸಜ್ಜಾಗಿದೆ. ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಎಲ್ಲ ಪೊಲೀಸ್ ಅಧಿಕಾರಿಗಳ ರಜೆಗಳನ್ನು ರದ್ದುಪಡಿಸಲಾಗಿದ್ದು, ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲು ಸರ್ಕಾರ ಸೂಚಿಸಿದೆ. 

ಇದನ್ನೂ ಓದಿ: ಅಯೋಧ್ಯೆ ಪ್ರಕರಣ: ‘ಬಾಬರ್ ಮಾಡಿದ್ದ ಐತಿಹಾಸಿಕ ಪ್ರಮಾದ ಸರಿಪಡಿಸಬೇಕು’

ಮುಂದಿನ ತಿಂಗಳು 17ರೊಳಗೆ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಯೋಧ್ಯೆ ಪಟ್ಟಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಪಕ್ಕದ ಗೋರಖಪುರ, ಗೊಂಡಾ, ಬಾರಾಬಂಕಿ, ಬಸ್ತಿ  ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ಅಯೋಧ್ಯೆಗೆ  ಬರಲಿದ್ದಾರೆ. ನವೆಂಬರ್ 30ರವರೆಗೆ ಪೊಲೀಸ್ ಅಧಿಕಾರಿಗಳಿಗೆ ರಜೆ ನೀಡದಿರಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

‘ಭದ್ರತಾ ಸಿಬ್ಬಂದಿ ಗುರುವಾರದಿಂದ ಅಯೋಧ್ಯೆಗೆ ಬರಲು ಆರಂಭಿಸಲಿದ್ದು, ಪಟ್ಟಣದ ಎಲ್ಲ ಧಾರ್ಮಿಕ ಸ್ಥಳಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಅವರನ್ನು ನಿಯೋಜಿಸಲಾಗುವುದು’ ಎಂದು ಅಧಿಕಾರಿ ತಿಳಿಸಿದ್ದಾರೆ. ಸ್ಥಳೀಯಾಡಳಿತವು ಜಿಲ್ಲೆಯಲ್ಲಿ ಈಗಾಗಲೇ ನಿಷೇಧಾಜ್ಞೆ (ಸೆಕ್ಷನ್ 144) ವಿಧಿಸಿದ್ದು, ಡಿಸೆಂಬರ್ 10ರವರೆಗೆ ಅದು ಜಾರಿಯಲ್ಲಿರಲಿದೆ. 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್‌.ಕೆ. ತಿವಾರಿ, ಪೊಲೀಸ್ ಮುಖ್ಯಸ್ಥ ಒ.ಪಿ. ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಕುರಿತಂತೆ ಸ್ಥಳೀಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ನಿರ್ದೇಶಿಸಲಾಗಿದೆ. 

ಇದನ್ನೂ ಓದಿ: ಅಯೋಧ್ಯೆ ವಿವಾದ: ಮುಸ್ಲಿಂ ಕಕ್ಷಿದಾರರಿಗೆ ಮಾತ್ರ ಪ್ರಶ್ನೆ ಏಕೆ?

ಹಿಂದೂ ಹಾಗೂ ಮುಸ್ಲಿಮರು ತೀರ್ಪನ್ನು ಕುತೂಹಲದಿಂದ ಎದುರು ನೀಡುತ್ತಿದ್ದು, ತಮ್ಮ ಪರವಾಗಿ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಎರಡೂ ಕಡೆಯವರು ಇದ್ದಾರೆ.

ಸತತ ವೈಫಲ್ಯ ಕಂಡ ಸಂಧಾನ ಯತ್ನ

* 1990: ಹಿಂದೂ ಹಾಗೂ ಮುಸ್ಲಿಮರ ನಡುವೆ ಒಮ್ಮತ ಮೂಡಿಸಿ ಅಯೋಧ್ಯೆ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸಿದವರಲ್ಲಿ ಎಸ್‌. ಚಂದ್ರಶೇಖರ್ ಮೊದಲಿಗರು. ಆಗ ಅವರು ಪ್ರಧಾನಿಯಾಗಿದ್ದರು. ಒಂದು ವರ್ಷದ ಬಳಿಕ ಮಾತುಕತೆ ಮುರಿದುಬಿದ್ದಿತು

* 1992: ಪ್ರಧಾನಿ ನರಸಿಂಹ ರಾವ್ ಅವರು ನಿವೃತ್ತ ನ್ಯಾಯಮೂರ್ತಿ ಎಂ.ಎಸ್. ಲಿಬರ್‍ಹಾನ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದರು. ಎರಡೂ ಕಡೆಯವರ ಜತೆ ಮಾತುಕತೆ ನಡೆಸಿದರೂ, ವಿವಾದ ತಾರ್ಕಿಕ ಅಂತ್ಯ ಕಾಣಲು ವಿಫಲವಾಯಿತು

* 2001: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಮ್ಮ ಕಚೇರಿಯಲ್ಲಿ ಅಯೋಧ್ಯೆ ಘಟಕ ಸ್ಥಾಪಿಸಿದ್ದರು. ಮಾತುಕತೆ ಪ್ರಕ್ರಿಯೆಯ ಮೇಲೆ ನಿಗಾ ವಹಿಸುವುದು ಈ ಘಟಕದ ಕೆಲಸವಾಗಿತ್ತು. ಆದರೆ ಈ ಯತ್ನವೂ ವೈಫಲ್ಯ ಕಂಡಿತು

* 2002: ಕಂಚಿಯ ಜಯೇಂದ್ರ ಸರಸ್ವತಿ ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಮುಂದಾದರು. ಅಯೋಧ್ಯೆ ವಿಚಾರದಲ್ಲಿ ನ್ಯಾಯಾಲಯದ ಆದೇಶಕ್ಕೆ ಬದ್ಧವಿರುವುದಾಗಿ ವಿಎಚ್‌ಪಿ ಹಾಗೂ ರಾಮ ಜನ್ಮಭೂಮಿ ನ್ಯಾಸದಿಂದ ಲಿಖಿತ ಹೇಳಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯೂ ಆಗಿದ್ದರು. ಆದರೆ ಮಸೀದಿ ಒಳಗಡೆ ಪೂಜೆಗೆ ನಿರ್ಬಂಧ ವಿಧಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದ್ದರಿಂದ ವಿಎಚ್‌ಪಿ ತನ್ನ ಮಾತನ್ನು ವಾಪಸ್ ಪಡೆಯಿತು

* 2003: ಶಂಕರಾಚಾರ್ಯ ಅವರೂ ಸಂಧಾನಕ್ಕೆ ಯತ್ನಿಸಿದ್ದರು. ಶ್ರೀಗಳ ಪ್ರಸ್ತಾವವನ್ನು ಒಪ್ಪಲಾಗದು ಎಂದು ಕಕ್ಷಿದಾರರಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತಿರಸ್ಕರಿಸಿತ್ತು. ಈ ಬಳಿಕ ಶ್ರೀಗಳು ಮಧ್ಯಸ್ಥಿಕೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು 

* 2004: ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ಅವರೂ ವಿವಾದ ಬಗೆಹರಿಸಲು ಯತ್ನಿಸಿ ವಿಫಲರಾದರು 

*2015: ಅತ್ಯಂತ ಹಳೆಯ ಅರ್ಜಿದಾರರಲ್ಲಿ ಒಬ್ಬರಾಗಿರುವ ಮೊಹಮ್ಮದ್ ಹಾಶಿಂ ಅನ್ಸಾರಿ ಅವರು ಹಿಂದೂಗಳ ಜೊತೆ ಎರಡು ಬಾರಿ ಸಂಧಾನಕ್ಕೆ ಮುಂದಾಗಿದ್ದರು. ಆದರೆ 2016ರಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ಅವರು ನಿಧನರಾದ ಬಳಿಕ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಮಸೀದಿಯೊಳಗೆ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದನ್ನು ವಿರೋಧಿಸಿ 1949ರಲ್ಲಿ ಪ್ರತಿಭಟನೆ ನಡೆಸಿದ್ದ ಅನ್ಸಾರಿ ಬಂಧನಕ್ಕೆ ಒಳಗಾಗಿದ್ದರು 

* 2017: ರವಿಶಂಕರ್ ಗುರೂಜಿ ಮೂರು ಅಂಶಗಳ ಸಂಧಾನಸೂತ್ರ ಮಂಡಿಸಿದ್ದರು. ಅರ್ಜಿದಾರರು ತಿರಸ್ಕರಿಸಿದ ಕಾರಣ ಶಾಂತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿತು

* 2018: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೌಲಾನಾ ಸಲ್ಮಾನ್ ಅವರು ನ್ಯಾಯಾಲಯದ ಹೊರಗಡೆ ವಿವಾದ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದರು. ಶ್ರೀಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿ ಸಂಧಾನಸೂತ್ರ ರಚನೆಯಲ್ಲಿ ತೊಡಗಿದ್ದರು. ಆದರೆ ಇವರ ಸಲಹೆಗಳು ತಿರಸ್ಕೃತಗೊಂಡವು 

* 2019: ವಿವಾದದ ಸೌಹಾರ್ದಯುತ ಪರಿಹಾರಕ್ಕಾಗಿ ಮಾಜಿ ನ್ಯಾಯಮೂರ್ತಿ ಎಫ್‌ಎಂಐ ಖಲೀಫುಲ್ಲಾ ನೇತೃತ್ವದಲ್ಲಿ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತು. ಶ್ರೀಶ್ರೀ ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ ಪಂಚು ಅವರು ಸಮಿತಿಯ ಇತರ ಸದಸ್ಯರಾಗಿದ್ದರು. ಯಾವುದೇ ಸೌಹಾರ್ದಯುತ ಪರಿಹಾರ ಲಭ್ಯವಾಗದ ಕಾರಣ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಿತು 

ವ್ಯಾಜ್ಯದ ಹಿನ್ನೋಟ

* 1859 ವಿವಾದಿತ ಸ್ಥಳವನ್ನು ಹಿಂದೂ–ಮುಸ್ಲಿಮರಿಗೆ ಹಂಚಿಕೆ ಮಾಡಿ ಪೂಜೆ ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ ಬ್ರಿಟಿಷ್ ಸರ್ಕಾರ

* 1885 ಕೋರ್ಟ್ ಮೆಟ್ಟಿಲೇರಿದ ಮಂದಿರ–ಮಸೀದಿ ವಿಚಾರ. ವಿವಾದಿತ ಸ್ಥಳದ ಮಾಲೀಕತ್ವಕ್ಕಾಗಿ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಮಹಾಂತ ರಘುವರ್ ದಾಸ್ ಅರ್ಜಿ

* 1949 ಡಿಸೆಂಬರ್‌ನಲ್ಲಿ ವಿವಾದಿತ ಸ್ಥಳದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಕೆಲವು ಹಿಂದೂಗಳು. ಅಂದಿನಿಂದ ಪೂಜೆ ಆರಂಭ

* 1950 ರಾಮನ ವಿಗ್ರಹವನ್ನು ಅಲ್ಲೇ ಉಳಿಸಿಕೊಳ್ಳಲು ಮತ್ತು ಪೂಜೆ ಮುಂದುವರಿಸಲು ಹಿಂದೂಗಳಿಗೆ ಅವಕಾಶ ನೀಡುವಂತೆ ಕೋರಿ ಮಹಾಂತ ರಾಮಚಂದ್ರ ಪರಮಹಂಸ ದಾಸ್ ನ್ಯಾಯಾಲಯಕ್ಕೆ ಅರ್ಜಿ

*1959 ವಿವಾದಿತ ಸ್ಥಳದ ಮಾಲೀಕತ್ವವನ್ನು ತಮಗೆ ವರ್ಗಾಯಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಿರ್ಮೋಹಿ ಅಖಾಡ

* 1961 ವಿವಾದಿತ ಸ್ಥಳದ ಮಾಲೀಕತ್ವ ತಮ್ಮದು ಎಂದು ಪ್ರತಿಪಾದಿಸಿ ನ್ಯಾಯಾಲಯದ ಮೊರೆ ಹೋದ ಸುನ್ನಿ ವಕ್ಫ್ ಮಂಡಳಿ

* 1986 ಪೂಜೆ ಮುಂದುವರಿಸಲು ಹಿಂದೂಗಳಿಗೆ ಅವಕಾಶ ನೀಡಿದ ಫೈಜಾಬಾದ್ ನ್ಯಾಯಾಲಯ 

* 1990– ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ‘ರಥಯಾತ್ರೆ’ ಆರಂಭಿಸಿದ ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ

* 1992 ಡಿಸೆಂಬರ್ 6 ಅಯೋಧ್ಯೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ

* 2002 ರಾಮ ಜನ್ಮಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಆರಂಭಿಸಿದ ಅಲಹಾಬಾದ್ ಹೈಕೋರ್ಟ್

* 2005 ವಿವಾದಿತ ಸ್ಥಳದಲ್ಲಿ ದಾಳಿ ನಡೆಸಲು ಯತ್ನಿಸಿದ ಐವರು ಉಗ್ರರ ಹತ್ಯೆ

* 2010 ಮಾಲೀಕತ್ವ ಪ್ರಕರಣದ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್. ರಾಮಲಲ್ಲಾ (ಬಾಲರಾಮ), ನಿರ್ಮೋಹಿ ಅಖಾಡ ಮತ್ತು ಸುನ್ನಿ ಮಂಡಳಿಗೆ ನಿವೇಶನ ಸಮಾನವಾಗಿ ಹಂಚಿಕೆ

* 2010 ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದ ಮೂವರು ಅರ್ಜಿದಾರರು

* 2011 ಹೈಕೋರ್ಟ್‌ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

* 2018 ಪ್ರಕರಣದ ವಿಚಾರಣೆಗೆ 2019ರಲ್ಲಿ ಪೀಠ ನಿಗದಿಪಡಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್

* 2019 ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯ ಯತ್ನ ವಿಫಲ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ನಲವತ್ತು ದಿನಗಳ ವಿಚಾರಣೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು