ಶನಿವಾರ, ಜುಲೈ 2, 2022
26 °C
ಅಲೋಕ್‌ ವಿರುದ್ಧ ತನಿಖೆಗೆ ಎರಡೇ ವಾರ: ರಾವ್‌ಗಿಲ್ಲ ಯಾವುದೇ ಅಧಿಕಾರ

ಸಿಬಿಐ: ಸುಪ್ರೀಂ ಸಮತೋಲನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ‍್ರವೇಶಿಸಿದೆ. ವರ್ಮಾ ಅವರ ವಿರುದ್ಧ ಇರುವ ಎಲ್ಲ ಆರೋಪಗಳ ತನಿಖೆಯನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ನಿರ್ದೇಶನ ನೀಡಿದೆ.

ವರ್ಮಾ ಮತ್ತು ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರ ನಡುವಣ ಕಚ್ಚಾಟದಿಂದಾಗಿ ಇಬ್ಬರೂ ಅಧಿಕಾರಿಗಳ ಅಧಿಕಾರಗಳನ್ನು ವಾಪಸ್‌ ಪಡೆದು ಅವರನ್ನು ಕೇಂದ್ರ ಸರ್ಕಾರ ರಜೆ ಮೇಲೆ ಕಳುಹಿಸಿತ್ತು. 

ಸಿಬಿಐನ ಮಧ್ಯಂತರ ನಿರ್ದೇಶಕರಾಗಿ ನೇಮಕವಾಗಿರುವ ಎಂ. ನಾಗೇಶ್ವರ ರಾವ್‌ ಅವರು ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ, ಯಾವುದೇ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವಂತಿಲ್ಲ. ಸಿಬಿಐಯ ಕೆಲಸ ಕಾರ್ಯಗಳು ಸ್ಥಗಿತಗೊಳ್ಳದಿರುವುದಕ್ಕೆ ಎಷ್ಟು ಕೆಲಸ ಮಾಡಬೇಕೋ ಅಷ್ಟನ್ನು ಮಾತ್ರ ಮಾಡಬೇಕು ಎಂದು ಶುಕ್ರವಾರ ಪೀಠವು ಸ್ಪಷ್ಟವಾಗಿ ಹೇಳಿದೆ. 

ಮಂಗಳವಾರ ಬೆಳಗ್ಗಿನ ಜಾವ ಎರಡು ಗಂಟೆಗೆ ಅಧಿಕಾರ ವಹಿಸಿಕೊಂಡಾಗಿನಿಂದ ಶುಕ್ರವಾರದವರೆಗೆ ರಾವ್‌ ಅವರು ಕೈಗೊಂಡ ಎಲ್ಲ ನಿರ್ಧಾರಗಳ ಪಟ್ಟಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು. ಅಸ್ತಾನಾ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ವರ್ಗಾವಣೆ ಮತ್ತು ಇತರ ಎಲ್ಲ ವರ್ಗಾವಣೆಗಳ ಮಾಹಿತಿಯನ್ನೂ ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಪೀಠವು ಸೂಚಿಸಿದೆ. ಈ ಮಾಹಿತಿಯನ್ನು ಪರಿಶೀಲಿಸಿದ ನಂತರ ತೀರ್ಪು ಪ್ರಕಟಿಸಲಾಗುವುದು ಎಂದು ಪೀಠ ಹೇಳಿದೆ. 

ಕಾಮನ್‌ ಕಾಸ್‌ ಎನ್‌ಜಿಒ ಸಲ್ಲಿಸಿದ ಅರ್ಜಿಯನ್ನೂ ಪೀಠವು ವಿಚಾರಣೆಗೆ ಎತ್ತಿಕೊಂಡಿತು. ಅಸ್ತಾನಾ ಸೇರಿ ಸಿಬಿಐನ ವಿವಿಧ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಮತ್ತು ನ್ಯಾಯಾಲಯದ ಉಸ್ತುವಾರಿಯಲ್ಲಿ ಈ ತನಿಖೆ ನಡೆಯಬೇಕು ಎಂದು ಈ ಅರ್ಜಿಯಲ್ಲಿ ಕೋರಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಸಿಬಿಐ, ಸಿವಿಸಿ, ಅಸ್ತಾನಾ, ವರ್ಮಾ ಮತ್ತು ರಾವ್‌ ಅವರಿಗೆ ಪೀಠ ಸೂಚಿಸಿದೆ. ನವೆಂಬರ್‌ 12ರೊಳಗೆ ಪ್ರತಿಕ್ರಿಯೆ ನೀಡಬೇಕಿದೆ. 

ಹಸ್ತಕ್ಷೇಪ ಅಲ್ಲ

ಸಿವಿಸಿಯ ತನಿಖೆಯ ಉಸ್ತುವಾರಿಯನ್ನು ಯಾವುದೇ ವ್ಯಕ್ತಿಗೆ ವಹಿಸಬಾರದು. ಸಿವಿಸಿ ಸ್ವಾಯತ್ತ ಸಂಸ್ಥೆ. ಇದರ ವಾರ್ಷಿಕ ವರದಿಯನ್ನು ರಾಷ್ಟ್ರಪತಿಗೆ ನೇರವಾಗಿ ಸಲ್ಲಿಸಲಾಗುತ್ತದೆ. ಬಳಿಕ ಇದನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಸಿವಿಸಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು. 

ಈ ವಾದವನ್ನು ಪೀಠ ಒಪ್ಪಿಕೊಂಡರೂ ಈ ಪ್ರಕರಣದಲ್ಲಿ ಅದಕ್ಕೆ ವಿನಾಯಿತಿ ಅಗತ್ಯ ಎಂದು ತಿಳಿಸಿತು. ‘ಈ ಪ್ರಕರಣದ ವಿಚಿತ್ರ ವಾಸ್ತವವನ್ನು ಗಮನದಲ್ಲಿ ಇರಿಸಿಕೊಂಡು ಈ ಒಂದು ಬಾರಿ ಉಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸುವುದು ಅನಿವಾರ್ಯವಾಗಿದೆ. ಇದು ಕೇಂದ್ರ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಎಂದು ಯಾರೂ ಅರ್ಥ ಮಾಡಿಕೊಳ್ಳಬಾರದು’ ಎಂದು ಪೀಠ ಸ್ಪಷ್ಟಪಡಿಸಿತು. 

ಕಾಂಗ್ರೆಸ್‌ ಪ್ರತಿಭಟನೆ ತೀವ್ರ

ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ರಜೆಯ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧದ ಪ್ರತಿಭಟನೆಯನ್ನು ವಿರೋಧ ಪಕ್ಷಗಳು ತೀವ್ರಗೊಳಿಸಿವೆ. ವಿವಿಧ ರಾಜ್ಯಗಳಲ್ಲಿರುವ ಸಿಬಿಐ ಕಚೇರಿಗಳ ಮುಂದೆ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ನಡೆಸಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಹಿಸಿದ್ದರು. ದೆಹಲಿಯ ಪ್ರತಿಭಟನೆಯಲ್ಲಿ ಸಿಪಿಐ, ತೃಣಮೂಲ ಕಾಂಗ್ರೆಸ್‌ ಮತ್ತು ಶರದ್‌ ಯಾದವ್‌ ನೇತೃತ್ವದ ಲೋಕ ತಾಂತ್ರಿಕ ಜನತಾದಳದ ಮುಖಂಡರು ಭಾಗಿಯಾಗಿದ್ದರು. 

* ಆದೇಶ ಅತ್ಯಂತ ಸಕಾರಾತ್ಮಕ. ತನಿಖೆಗೆ ಸಮಯಮಿತಿ ಹೇರುವ ಮೂಲಕ ನ್ಯಾಯಸಮ್ಮತತೆಯ ಮಾನದಂಡವನ್ನು ಇನ್ನಷ್ಟು ಗಟ್ಟಿಗೊಳಿಸಲಾಗಿದೆ

ಅರುಣ್‌ ಜೇಟ್ಲಿ, ಕೇಂದ್ರ ಸಚಿವ 

ಮುಖ್ಯಾಂಶಗಳು

* ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ಅವರಿಗೆ ಸಿವಿಸಿ ತನಿಖೆಯ ಉಸ್ತುವಾರಿ

* ಎರಡು ವಾರಗಳಲ್ಲಿ ತನಿಖೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವ ಹೊಣೆ ಪಟ್ನಾಯಕ್‌ಗೆ

* ಮಧ್ಯಂತರ ನಿರ್ದೇಶಕ ನಾಗೇಶ್ವರ ರಾವ್‌ ಅವರಿಗೆ ಆಡಳಿತಾತ್ಮಕ ಹೊಣೆ ಮಾತ್ರ, ಮಹತ್ವದ ನಿರ್ಧಾರ ಕೈಗೊಳ್ಳುವಂತಿಲ್ಲ

* ರಾಕೇಶ್‌ ಅಸ್ತಾನಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ

* ನವೆಂಬರ್‌ 12ಕ್ಕೆ ವಿಚಾರಣೆ ಮುಂದೂಡಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು