ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ | ಸಂಸತ್ ನಿರ್ಣಯದ ವಿರೋಧಕ್ಕೆ ಪ್ರಚೋದನೆ 'ಅರಾಜಕತೆ'ಗೆ ನಾಂದಿ: ಮೋದಿ

Last Updated 6 ಫೆಬ್ರುವರಿ 2020, 12:27 IST
ಅಕ್ಷರ ಗಾತ್ರ

ನವದೆಹಲಿ: "ಪೌರತ್ವ ನೋಂದಣಿ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಈ ಪರಿಯಾಗಿ ಕೋಲಾಹಲ ಸೃಷ್ಟಿ ಮಾಡಿರುವುದಕ್ಕೆ ಕಾಂಗ್ರೆಸ್ ಮತ್ತು ಅವರ ಇಕೋಸಿಸ್ಟಮ್‌ಗೆ ಧನ್ಯವಾದಗಳು. ಅವರು ಅದನ್ನು ವಿರೋಧಿಸದೇ ಹೋಗಿದ್ದರೆ, ಅವರ ನಿಜವಾದ ಮುಖವು ಜನರಿಗೆ ತಿಳಿಯುತ್ತಿರಲಿಲ್ಲ! ಈಗ ಯಾರು ಒಂದು ಪಕ್ಷದ ಪರವಾಗಿದ್ದಾರೆ ಮತ್ತು ಯಾರು ದೇಶದ ಪರವಾಗಿದ್ದಾರೆ ಎಂಬುದನ್ನು ಈ ದೇಶವೇ ನೋಡಿದಂತಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಕಾಯ್ದೆಯಿಂದ (ಪೌರತ್ವ ತಿದ್ದುಪಡಿ - ಸಿಎಎ) ಅಲ್ಪಸಂಖ್ಯಾತರೂ ಸೇರಿದಂತೆ ಯಾವೊಬ್ಬ ಭಾರತೀಯನಿಗೂ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ನಾನು 130 ಕೋಟಿ ಭಾರತೀಯರಿಗೆ ಮತ್ತೊಮ್ಮೆ ಹೇಳಲಿಚ್ಛಿಸುತ್ತೇನೆ ಎಂದು ಗುರುವಾರ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಪ್ರಧಾನಿ ಮೋದಿ ಹೇಳಿದರು.

ಸಂಸತ್ ನಿರ್ಣಯದ ವಿರುದ್ಧ ಜನರನ್ನು ಎತ್ತಿ ಕಟ್ಟುವುದರ ವಿರುದ್ಧ ಎಚ್ಚರಿಸಿದ ಮೋದಿ, ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಬೇರೆಯೇ ದಾರಿ ಹಿಡಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಿಎಎ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಕೈಗೊಂಡ ನಿರ್ಣಯದ ವಿರುದ್ಧ ಈ ರೀತಿ ಬೀದಿ ಹೋರಾಟಗಳಿಗೆ ಕುಮ್ಮಕ್ಕು ನೀಡುವುದು ಅರಾಜಕತೆಗೆ ಕಾರಣವಾಗುತ್ತವೆ. (ಕಾಂಗ್ರೆಸ್ ಅಧಿಕಾರದಲ್ಲಿರುವ) ರಾಜಸ್ಥಾನ ಅಥವಾ ಮಧ್ಯಪ್ರದೇಶದಲ್ಲಿ ವಿಧಾನಸಭೆಯು ಕೈಗೊಂಡ ನಿರ್ಣಯದ ವಿರುದ್ಧ ಜನರು ಇದೇ ರೀತಿಯಾಗಿ ಪ್ರತಿಭಟನೆ ನಡೆಸಿದರೆ ಹೇಗಿರುತ್ತದೆ? ದೇಶವನ್ನು ಈ ರೀತಿ ಮುನ್ನಡೆಸುವುದಾದರೂ ಹೇಗೆ ಸಾಧ್ಯ? ಈ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದ ಪ್ರಧಾನಿ, ಇಂಥ ಮಾರ್ಗ ಅನುಸರಿಸಿದರೆ ನೀವೂ (ವಿರೋಧ ಪಕ್ಷಗಳೂ) ತೊಂದರೆಯಲ್ಲಿ ಸಿಲುಕಿವಿರಿ. ಇದೊಂದು ಎಚ್ಚರಿಕೆಯೂ ಹೌದು ಅಂತೆಯೇ ದೇಶದ ಬಗೆಗಿನ ಕಳಕಳಿಯೂ ಹೌದು ಎಂದು ಮೋದಿ ಹೇಳಿದರು.

ವಿರೋಧ ಪಕ್ಷಗಳು ಈ ಕಾನೂನಿನ ಬಗ್ಗೆ ಮುಸ್ಲಿಮರಲ್ಲಿ 'ಕಲ್ಪಿತ' ಭಯ ಸೃಷ್ಟಿ ಸೃಷ್ಟಿಸಲು ಶ್ರಮಿಸುತ್ತಿವೆ. ಈ ಕಾಯ್ದೆಯು ನೆರೆಯ ಮುಸ್ಲಿಂ ರಾಷ್ಟ್ರಗಳ ಅಲ್ಪಸಂಖ್ಯಾತರಿಗಷ್ಟೇ ಪೌರತ್ವ ನೀಡುತ್ತದೆ ಹೊರತು ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಅಭಿಪ್ರಾಯ ಮಂಡಿಸಲು ಎಲ್ಲರಿಗೂ ಹಕ್ಕಿದೆ, ಆದರೆ ಸುಳ್ಳು ಮತ್ತು ಗಾಳಿ ಸುದ್ದಿ ಹಬ್ಬಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದ ಮೋದಿ, ಸಂವಿಧಾನ ರಚನೆಯಾಗುವ ವರ್ಷದ ಮೊದಲು ನೆಹರು ಅವರು ಅಂದಿನ ಅಸ್ಸಾಂ ಮುಖ್ಯಮಂತ್ರಿ ಗೋಪಿನಾಥ್‌ಜೀಗೆ ಪತ್ರವೊಂದನ್ನು ಬರೆಯುತ್ತಾರೆ. ಹಿಂದೂ ಶರಣಾರ್ಥಿಗಳು ಮತ್ತು ಮುಸ್ಲಿಂ ವಲಸಿಗರ ಮಧ್ಯೆ ವ್ಯತ್ಯಾಸವನ್ನು ಗುರುತಿಸಿ, ಅಗತ್ಯ ಬಿದ್ದರೆ ನಿರಾಶ್ರಿತರಿಗೆ ಪೌರತ್ವ ನೀಡುವ ನಿಟ್ಟಿನಲ್ಲಿ ಕಾಯ್ದೆ ರೂಪಿಸುವಂತೆ ಸಲಹೆ ನೀಡಿದ್ದರು ಎಂದು ಮೋದಿ ಹೇಳಿದರು.

ಪಾಕಿಸ್ತಾನದ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರೂ ಈ ರೀತಿ ಕಾಳಜಿ ವ್ಯಕ್ತಪಡಿಸಿದ್ದರು. ಹಾಗಿದ್ದರೆ ಕಾಂಗ್ರೆಸಿಗರೇ, ಪಂಡಿತ್ ನೆಹರು ಅವರು ಕೋಮುವಾದಿಯೇ? ಅವರೂ ಹಿಂದೂ ರಾಷ್ಟ್ರವನ್ನು ಬಯಸಿದ್ದರೇ? ಅವರೇನಾದರೂ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗಿದರೇ? ಎಂದು ಪ್ರಧಾನಿ ಪ್ರಶ್ನಿಸಿದರು.

ಸಂವಿಧಾನ ಉಳಿಸಿ ಎಂಬ ಕೂಗು ಕೇಳಿಬರುತ್ತಿದೆ. ಕಾಂಗ್ರೆಸ್ ಇದನ್ನು ದಿನಕ್ಕೆ ನೂರು ಬಾರಿ ಹೇಳಬೇಕೆಂಬುದನ್ನು ನಾನೂ ಒಪ್ಪುತ್ತೇನೆ. ಬಹುಶಃ ಅವರಿಗೆ ತಮ್ಮ ಹಿಂದಿನ ತಪ್ಪುಗಳು ಅರಿವಾಗಬಹುದು. ತುರ್ತು ಪರಿಸ್ಥಿತಿ ಹೇರಿದಾಗ, ಅದೆಷ್ಟೋ ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವಾಗ, ಸಂಪುಟದ ನಿರ್ಣಯಗಳನ್ನೇ ಹರಿದುಹಾಕಿದಾಗ ಈ ಸ್ಲೋಗನ್ ಮರೆತಿರೇಕೆ ಎಂದು ಮೋದಿ ಪ್ರಶ್ನಿಸಿದರು.

ತುರ್ತು ಪರಿಸ್ಥಿತಿ ಹೇರಿದ್ದು ಯಾರು? ನ್ಯಾಯಾಂಗವನ್ನು ದಮನಿಸಿದ್ದು ಯಾರು? ಸಂವಿಧಾನಕ್ಕೆ ಅತೀ ಹೆಚ್ಚು ತಿದ್ದುಪಡಿಗಳನ್ನು ತಂದವರು ಯಾರು? ಇವೆಲ್ಲವನ್ನೂ ಮಾಡಿದವರಿಗೆ ನಮ್ಮ ಸಂವಿಧಾನದ ಬಗ್ಗೆ ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ ಎಂದು ಮೋದಿ ಹೇಳಿದರು.

ಭಾರತವು ಟುಕ್ಡೇ ಟುಕ್ಡೇ ಆಗಲು ಬಯಸುವ ಜನರ ಗುಂಪಿನೊಂದಿಗೆ ಫೋಟೋ ತೆಗೆಸಿಕೊಳ್ಳಲು ಇಷ್ಟ ಪಡುವವರಿಂದ ಸಿಎಎ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ ಎಂದ ಮೋದಿ, 1984ರ ಸಿಖ್ ವಿರೋಧಿ ದಂಗೆಯೊಂದಿಗೆ ಸಂಬಂಧವಿರುವವರನ್ನು ಮುಖ್ಯಮಂತ್ರಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜಾತ್ಯತೀತತೆ ಬಗ್ಗೆ ಮಾತನಾಡುವವರಿಗೆ 1984ನ್ನು ಮತ್ತು ಸಿಖ್ ವಿರೋಧಿ ದಂಗೆ ನೆನಪಾಗುವುದಿಲ್ಲವೇ? ಇದು ನಾಚಿಕೆಗೇಡು ಎಂದು ಪ್ರಧಾನಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT