ಶನಿವಾರ, ಮಾರ್ಚ್ 6, 2021
32 °C
ತೆಲಂಗಾಣದಲ್ಲಿ ಮತ್ತೆ ಟಿಆರ್‌ಎಸ್ ಸರ್ಕಾರ, ಮಿಜೋರಾಂನಲ್ಲಿ ಎಂಎನ್‌ಎಫ್‌ ಅಧಿಪತ್ಯ

ಎರಡು ರಾಜ್ಯ ‘ಕೈ’ ಪಾಲು, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಪೂರ್ಣ ಫಲಿತಾಂಶವನ್ನು ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ನಡೆದಿತ್ತು.

(ಚುನಾವಣೆ ಫಲಿತಾಂಶದ ಆಂಕಿಅಂಶಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಛತ್ತೀಸಗಡದಲ್ಲಿ ನಿರೀಕ್ಷೆಗೂ ಮೀರಿ ಭರ್ಜರಿ ಸ್ಥಾನ ಗಳಿಸಿರುವ ಕಾಂಗ್ರೆಸ್ ರಾಜಸ್ಥಾನದಲ್ಲಿ ಸರಳ ಬಹುಮತ ಗಳಿಸಿದೆ. ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಮುಂದಾಗಿದೆ. ಉಳಿದಂತೆ, ಮಿಜೋರಾಂನಲ್ಲಿ ಮಿಜೊ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ಬಹುಮತ ಗಳಿಸಿದ್ದು, ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಬಿಜೆಪಿಗೆ ಪಾಠ: ಚೇತರಿಕೆಹಾದಿಯಲ್ಲಿ ಕಾಂಗ್ರೆಸ್

ಪೂರ್ಣ ಫಲಿತಾಂಶ ಘೋಷಣೆಗೆ ಯಾಕೆ ತಡ?: ಸಾಮಾನ್ಯವಾಗಿ ಮತ ಎಣಿಕೆಯ ದಿನವೇ ಚುನಾವಣಾ ಆಯೋಗ ಪೂರ್ಣ ಫಲಿತಾಂಶ ಘೋಷಣೆ ಮಾಡುತ್ತದೆ. ಆದರೆ ಈ ಬಾರಿ ಆಯಾ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರತಿ ಅಭ್ಯರ್ಥಿಯಿಂದ ಮತಗಳ ಪ್ರಮಾಣವನ್ನು ಲಿಖಿತವಾಗಿ ದೃಢೀಕರಿಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದ್ದರಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಯಿತು. ಅಲ್ಲದೆ, ಮಧ್ಯಪ್ರದೇಶದ ಶೇ 15ರಷ್ಟು ಮತಗಟ್ಟೆಗಳಲ್ಲಿ ಬಳಸಿರುವ ಇವಿಎಂ ಯಂತ್ರಗಳೊಂದಿಗೆ ಅಳವಡಿಸಿದ್ದ ವಿ.ವಿ. ಪ್ಯಾಟ್‌ಗಳ ಮತಗಳನ್ನು ತಾಳೆ ಹಾಕುವುದನ್ನೂ ಕಡ್ಡಾಯ ಗೊಳಿಸಿದ್ದು ಮತ ಎಣಿಕೆಯ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ.

ಛತ್ತೀಸಗಡದಲ್ಲಿ ಕಾಂಗ್ರೆಸ್‌ ವನವಾಸ ಅಂತ್ಯ

ಬುಡಕಟ್ಟು ಸಮುದಾಯಗಳ ಪ್ರಾಬಲ್ಯದ ಛತ್ತೀಸಗಡದಲ್ಲಿ 15 ವರ್ಷಗಳ ವನವಾಸದ ಬಳಿಕ ಕಾಂಗ್ರೆಸ್‌ ಪಕ್ಷ ಮೂರನೇ ಎರಡು ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದೆ. 90 ಕ್ಷೇತ್ರಗಳ ವಿಧಾನಸಭೆಯಲ್ಲಿ 68 ಕ್ಷೇತ್ರಗಳನ್ನು ಗೆದ್ದಿದೆ. ಹೇಳಿಕೊಳ್ಳುವಂತಹ ಜನನಾಯಕರೇ ಇಲ್ಲದ ಕಾಂಗ್ರೆಸ್ ಪಕ್ಷ ಅಲ್ಲಿ ದಾಖಲೆಯ ಜಯ ಪಡೆದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಈ ಬಾರಿ 16 ಸ್ಥಾನಗಳನ್ನು ಗೆಲ್ಲಲು ಮಾತ್ರ ಬಿಜೆಪಿಗೆ ಸಾಧ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 39 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಇದನ್ನೂ ಓದಿ: ಛತ್ತೀಸಗಡ: ನಾಯಕರಿಲ್ಲದ ‘ಕೈ’ಗೆ ದಾಖಲೆ ಜಯ​

ರಾಜಸ್ಥಾನದಲ್ಲಿ ಮುದುಡಿದ ತಾವರೆ

200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ 199 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಸರಳ ಬಹುಮತಕ್ಕೆ 100 ಕ್ಷೇತ್ರಗಳಲ್ಲಿ ಗೆಲುವು ಅಗತ್ಯವಾಗಿದ್ದು, ಇದನ್ನು ಕಾಂಗ್ರೆಸ್ ಸಾಧಿಸಿದೆ. ಬಿಜೆಪಿಗೆ 73 ಸ್ಥಾನ ದೊರೆತಿವೆ.

13 ಸಚಿವರಿಗೆ ಸೋಲು: ರಾಜಸ್ಥಾನದ ಬಿಜೆಪಿ ಸರ್ಕಾರದಲ್ಲಿದ್ದ 19 ಸಚಿವರ ಪೈಕಿ 13 ಮಂದಿ ಸೋಲುಂಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ‘ಬಂಡಾಯಗಾರರ’ ಕೈಯಲ್ಲಿ ಸರ್ಕಾರದ ಕೀಲಿ​

ಎಂಎನ್‌ಎಫ್‌ ಪಾಲಾದ ಮಿಜೋರಾಂ

ಹತ್ತು ವರ್ಷಗಳ ಬಳಿಕ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಎಂಎನ್‌ಎಫ್‌ ಅದ್ಭುತ ಜಯ ಗಳಿಸಿದೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 26 ಸ್ಥಾನಗಳನ್ನು ಪಡೆದಿದೆ. ಎಂಎನ್‌ಎಫ್‌ 20 ವರ್ಷಗಳ ಹಿಂದೆ 21 ಸ್ಥಾನ ಪಡೆದಿತ್ತು. 2008ರಲ್ಲಿ ಎಂಎನ್‌ಎಫ್‌ದಿಂದ ಅಧಿಕಾರ ಕಿತ್ತುಕೊಂಡಿದ್ದ ಕಾಂಗ್ರೆಸ್‌ ಕೇವಲ ಐದು ಸ್ಥಾನ ಪಡೆದಿದೆ. ಮೂರನೇ ಬಾರಿ ಅಧಿಕಾರ ಹಿಡಿಯಬೇಕು ಎಂಬ ಕಾಂಗ್ರೆಸ್‌ ಆಸೆ ಈಡೇರಲಿಲ್ಲ.

ಇದನ್ನೂ ಓದಿ: ಮಿಜೋರಾಂ: ಎಂಎನ್‌ಎಫ್‌ಗೆ ಅಧಿಕಾರ​

ಎರಡೂ ಕಡೆ ಸೋತ ಸಿಎಂ: ಮಿಜೋರಾಂನ ಸತತ ಎರಡುವ ಅವಧಿಯ ಮುಖ್ಯಮಂತ್ರಿ ಲಾಲ್‌ ಥನ್‌ಹವ್ಲಾ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಅವರು ಸೋತಿದ್ದಾರೆ.

ಖಾತೆ ತೆರ ಬಿಜೆಪಿ: ಇದೇ ಮೊದಲ ಬಾರಿ ಮಿಜೋರಾಂನಲ್ಲಿ ಬಿಜೆಪಿ ಖಾತೆ ತೆರೆದಿದೆ. ಟ್ವಿಚ್ವಾಂಗ್‌ ಕ್ಷೇತ್ರದಲ್ಲಿ ಬಿಜೆಪಿಯ ಬುದ್ಧ ಧನ್‌ ಚಕ್ಮಾ ಅವರು ಗೆದ್ದಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಬುದ್ಧ ಅವರು ಮೀನುಗಾರಿಕೆ ಸಚಿವರಾಗಿದ್ದರು. ಚುನಾವಣೆಗೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಬಿಜೆಪಿ ಸೇರಿದ್ದರು.

ತೆಲಂಗಾಣದಲ್ಲಿ ಕೆಸಿಆರ್ ಪಾರಮ್ಯ

ತೆಲಂಗಾಣದಲ್ಲಿ ಟಿಆರ್‌ಎಸ್‌ ಪ್ರಚಂಡ ಬಹುಮತ ಗಳಿಸಿದ್ದು, 88 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ನಾಲ್ಕನೇ ಮೂರರಷ್ಟು ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಕಾಂಗ್ರೆಸ್‌ ನೇತೃತ್ವದ ‘ಪ್ರಜಾ ಮಹಾಕೂಟ’ ಇನ್ನಿಲ್ಲದಂತೆ ನೆಲಕ್ಕಚ್ಚಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಬೆಳಗಿದ ‘ಚಂದ್ರ’​

ಮಧ್ಯಪ್ರದೇಶ ಅತಂತ್ರ, ಸರ್ಕಾರ ರಚನೆಗೆ ‘ಕೈ’ ತಂತ್ರ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ತೂಗುಯ್ಯಾಲೆ ಕೊನೆ ಕ್ಷಣದವರೆಗೂ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಕೊನೆಗೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, 114 ಸ್ಥಾನ ಗಳಿಸಿದೆ. ಬಹುಮತಕ್ಕೆ ಇನ್ನೆರಡು ಸ್ಥಾನಗಳ ಅವಶ್ಯಕತೆ ಇದೆ. ಬಿಜೆಪಿಯನ್ನು ಆಡಳಿತದಿಂದ ದೂರವಿಡುವುದಕ್ಕಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಘೋಷಿಸಿದ್ದಾರೆ. ಎಸ್‌ಪಿ ಮತ್ತು ಪಕ್ಷೇತರರು ಬೆಂಬಲ ನೀಡಿರುವುದರಿಂದ ಕಾಂಗ್ರೆಸ್‌ ಸರ್ಕಾರ ರಚಿಸುವ ಪ್ರಕ್ರಿಯೆ ಆರಂಭಿಸಿದೆ. 

ಇದನ್ನೂ ಓದಿ: ಮಧ್ಯಪ್ರದೇಶ ಪೂರ್ಣ ಫಲಿತಾಂಶ ಪ್ರಕಟ: ಕಾಂಗ್ರೆಸ್‌ಗೆ ಬಹುಮತಕ್ಕೆ 2 ಸ್ಥಾನ ಕೊರತೆ

ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ?

ರಾಜಸ್ಥಾನ

ಒಟ್ಟು ಕ್ಷೇತ್ರಗಳು – 199

ಬಹುಮತಕ್ಕೆ ಬೇಕಿರುವ ಸ್ಥಾನಗಳು – 100

ಕಾಂಗ್ರೆಸ್ – 100

ಬಿಜೆಪಿ – 73

ಬಿಎಸ್‌ಪಿ – 6

ಇತರರು – 20

ಛತ್ತೀಸಗಡ

ಒಟ್ಟು ಕ್ಷೇತ್ರಗಳು – 90

ಬಹುಮತಕ್ಕೆ ಬೇಕಿರುವ ಸ್ಥಾನಗಳು – 46

ಕಾಂಗ್ರೆಸ್ – 68

ಬಿಜೆಪಿ – 15

ಬಿಎಸ್‌ಪಿ – 7

ಇತರರು – 0

ತೆಲಂಗಾಣ

ಒಟ್ಟು ಕ್ಷೇತ್ರಗಳು – 119

ಬಹುಮತಕ್ಕೆ ಬೇಕಿರುವ ಸ್ಥಾನಗಳು – 60

ಟಿಆರ್‌ಎಸ್ – 88

ಕಾಂಗ್ರೆಸ್ – 21

ಬಿಜೆಪಿ – 1

ಇತರರು – 9

ಮಿಜೋರಾಂ

ಒಟ್ಟು ಕ್ಷೇತ್ರಗಳು – 40

ಬಹುಮತಕ್ಕೆ ಬೇಕಿರುವ ಸ್ಥಾನಗಳು – 21

ಎಂಎನ್‌ಎಫ್ – 26

ಕಾಂಗ್ರೆಸ್ – 5

ಬಿಜೆಪಿ – 1

ಇತರರು – 8

ಮಧ್ಯಪ್ರದೇಶ

ಒಟ್ಟು ಕ್ಷೇತ್ರಗಳು – 230

ಬಹುಮತಕ್ಕೆ ಬೇಕಿರುವ ಸ್ಥಾನಗಳು – 116

ಕಾಂಗ್ರೆಸ್ – 114

ಬಿಜೆಪಿ – 109

ಬಿಎಸ್‌ಪಿ – 2

ಇತರರು – 5

ವಿವರವಾದ ಓದು: ಮುದುಡಿದ ತಾವರೆ, ‘ಕೈ’ಗೆ ಆಸರೆ

ಇನ್ನಷ್ಟು ಸುದ್ದಿಗಳು...

ಪಂಚ ರಾಜ್ಯಗಳ ಚುನಾವಣೆ: ನೀವು ಓದಲೇಬೇಕಾದ 10 ಸುದ್ದಿಗಳು

ತಲೆ ಕೆಳಗಾದ ಮತಗಟ್ಟೆ ಸಮೀಕ್ಷೆ

ಬಿಜೆಪಿ ಹಿನ್ನಡೆಗೆ ಕಾರಣವಾಯಿತೇ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಯಂತ್ರಣ?

ಜನರ ಹೃದಯ ಬಡಿತಕ್ಕೆ ಕಿವಿಗೊಡದ ಮೋದಿ: ರಾಹುಲ್‌ ಗಾಂಧಿ ಕಟಕಿ

ಕಾಂಗ್ರೆಸ್ ಕೈ ಹಿಡಿದ ಜನರು: ರಾಹುಲ್‌‍ಗೆ ಅಚ್ಛೇ ದಿನ್ 

ಛತ್ತೀಸಗಡದಲ್ಲಿ ಕಾಂಗ್ರೆಸ್‌: ನೀವು ತಿಳಿಯಬೇಕಾದ 10 ಅಂಶಗಳು

ಮಿಜೋರಾಂನಲ್ಲಿ ಎಂಎನ್‌ಎಫ್: ನೀವು ತಿಳಿಯಬೇಕಾದ 10 ಅಂಶಗಳು

ಮಧ್ಯಪ್ರದೇಶದಲ್ಲಿ ಅತಂತ್ರ: ನೀವು ತಿಳಿಯಬೇಕಾದ 10 ಅಂಶಗಳು

ತೆಲಂಗಾಣದಲ್ಲಿ ಟಿಆರ್‌ಎಸ್: ನೀವು ತಿಳಿಯಬೇಕಾದ 10 ಅಂಶಗಳು

ಮಿಜೋರಾಂನಲ್ಲಿ ಎಂಎನ್‌ಎಫ್: ನೀವು ತಿಳಿಯಬೇಕಾದ 10 ಅಂಶಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು