ಬುಧವಾರ, ಜುಲೈ 15, 2020
25 °C
ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಘೋಷಣೆ

ನವೆಂಬರ್‌ವರೆಗೆ ಯೋಜನೆ ವಿಸ್ತರಣೆ: 5 ತಿಂಗಳು ಉಚಿತ ಅಕ್ಕಿ–ಬೇಳೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಧಾನ್ಯ ನೀಡುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ
ಯನ್ನು (ಪಿಎಂಜಿಕೆಎವೈ) ಇನ್ನೂ ಐದು ತಿಂಗಳು ವಿಸ್ತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಮಾತನಾಡಿ ಇದನ್ನು ಘೋಷಿಸಿದ್ದಾರೆ. ಯೋಜನೆಯು ನವೆಂಬರ್‌ ವರೆಗೆ ಜಾರಿಯಲ್ಲಿ
ಇರಲಿದೆ.

ಉಚಿತ ಧಾನ್ಯ ವಿತರಣೆ ಯೋಜನೆಯ ವಿಸ್ತರಣೆಗೆ ₹90 ಸಾವಿರ ಕೋಟಿ ಬೇಕಾಗುತ್ತದೆ. ಕಳೆದ ಮೂರು ತಿಂಗಳು ಕೂಡ ಉಚಿತ ಧಾನ್ಯ ವಿತರಿಸಲಾಗಿದೆ. ಅದನ್ನೂ ಸೇರಿಸಿದರೆ ಒಟ್ಟು ವೆಚ್ಚವು ₹1.5 ಲಕ್ಷ ಕೋಟಿಯಾಗುತ್ತದೆ ಎಂದು ಪ್ರಧಾನಿ ವಿವರಿಸಿದರು. 

ಕೋವಿಡ್‌ ಹರಡುವಿಕೆ ತಡೆಗಾಗಿ ಲಾಕ್‌ಡೌನ್‌ ಹೇರಿದ ಬಳಿಕ ಏಪ್ರಿಲ್‌ನಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಜುಲೈ ತಿಂಗಳಿಂದ ಹಬ್ಬದ ಋತು ಆರಂಭವಾಗುತ್ತದೆ. ಜನರ ಅಗತ್ಯಗಳು ಮತ್ತು ಖರ್ಚು ಹೆಚ್ಚುವ ಸಮಯ ಇದು. ಇದನ್ನೆಲ್ಲ ದೃಷ್ಟಿಯಲ್ಲಿ ಇರಿಸಿಕೊಂಡು ಉಚಿತ ಧಾನ್ಯ ವಿತರಣೆಯನ್ನು ದೀಪಾವಳಿ ಮತ್ತು ಛತ್‌ ಪೂಜಾವರೆಗೆ ವಿಸ್ತರಿಸಲಾಗಿದೆ ಎಂದು ಮೋದಿ ತಿಳಿಸಿದರು. ಅನ್‌ಲಾಕ್‌–2 ಆರಂಭದ ಮುನ್ನಾದಿನ ಪ್ರಧಾನಿ ಮಾತನಾಡಿದರು. ಮಾರ್ಚ್‌ 25ರಂದು ವಿಧಿಸಲಾಗಿದ್ದ ಲಾಕ್‌ಡೌನ್‌ ತೆರವು ಪ್ರಕ್ರಿಯೆಯ ಎರಡನೇ ಹಂತವು ಬುಧವಾರ ಆರಂಭವಾಗಲಿದೆ. 

ಕೋವಿಡ್‌ ಪಿಡುಗಿನಿಂದಾಗಿ ಅರ್ಥ ವ್ಯವಸ್ಥೆ ತತ್ತರಿಸಿದೆ. ಉದ್ಯೋಗಗಳಿಗೆ ಕುತ್ತು ಬಂದಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ ಕಳೆದುಕೊಮಡು ತಮ್ಮ ತವರಿಗೆ ಮರಳಿದ್ದಾರೆ. ಉಚಿತ ಧಾನ್ಯ ವಿತರಣೆಯ ವಿಸ್ತರಣೆಯು ಈ ಜನರ ಸಂಕಷ್ಟವನ್ನು ಕಡಿಮೆಗೊಳಿಸಲಿದೆ ಎಂದು ಹೇಳಲಾಗಿದೆ. ಬಿಹಾರದಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ. ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಬಿಹಾರದವರು. ಹಾಗಾಗಿ, ಉಚಿತ ಧಾನ್ಯ ವಿತರಣೆ ವಿಸ್ತರಣೆಯು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

ನಿರ್ಲಕ್ಷ್ಯ: ಪ್ರಧಾನಿ ಎಚ್ಚರಿಕೆ
ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಶುಚಿತ್ವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಧಾನಿ ಸೂಚಿಸಿದ್ದಾರೆ. 

‘ಗ್ರಾಮದ ಮುಖ್ಯಸ್ಥ ಇರಲಿ ಪ್ರಧಾನಿಯೇ ಇರಲಿ, ಕಾನೂನಿಗಿಂತ ಯಾರೂ ಮೇಲೆ ಅಲ್ಲ’ ಎಂದು ಮೋದಿ ಹೇಳಿದರು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದ ಕಾರಣಕ್ಕೆ ಸುಮಾರು ₹13 ಸಾವಿರ ದಂಡ ಕಟ್ಟಿದ ಬಲ್ಗೇರಿಯಾದ ಪ್ರಧಾನಿಯನ್ನು ಮೋದಿ ಉಲ್ಲೇಖಿಸಿದರು. 

ಭಾರತದಲ್ಲಿ ಕೂಡ ಸ್ಥಳೀಯಾಡಳಿತ ಸಂಸ್ಥೆಗಳು ಇದೇ ಉಮೇದಿನಿಂದ ಕೆಲಸ ಮಾಡಬೇಕು. ದೇಶದ 130 ಕೋಟಿ ಜನರ ಜೀವ ರಕ್ಷಿಸುವ ಅಭಿಯಾನ ಇದು ಎಂದು ಮೋದಿ ಹೇಳಿದರು. 

ಸಕಾಲದಲ್ಲಿ ಲಾಕ್‌ಡೌನ್‌ ಹೇರಿಕೆ  ಮತ್ತು ಇತರ ನಿರ್ಧಾರಗಳು ಲಕ್ಷಾಂತರ ಜೀವಗಳನ್ನು ಉಳಿಸಿದೆ. ಆದರೆ, ಅನ್‌ಲಾಕ್‌–1ರ ಆರಂಭದಿಂದಲೇ ಜನರ ಸಾಮಾಜಿಕ ಮತ್ತು ವೈಯಕ್ತಿಕ ವರ್ತನೆಯಲ್ಲಿನ ನಿರ್ಲಕ್ಷ್ಯವು ಆತಂಕಕಾರಿ ಎಂದು ಅವರು ಎಚ್ಚರಿಸಿದ್ದಾರೆ. 

ಆರಂಭದಲ್ಲಿ ನಾವು ಮುಖಗವಸು ಧರಿಸುವುದು, ಕೈ ತೊಳೆಯುವುದು ಮತ್ತು ಅಂತರ ಕಾಯ್ದುಕೊಳ್ಳುವಿಕೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇದ್ದೆವು. ಆದರೆ, ಈಗ ಇನ್ನಷ್ಟು ಎಚ್ಚರದಿಂದ ಇರಬೇಕಾದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಕಳವಳಕಾರಿ ಎಂದು ಹೇಳಿದರು.

ತ್ವರಿತ ವಿತರಣೆಗೆ ಪಾಸ್ವಾನ್‌ ಸೂಚನೆ
ಪಿಎಂಜಿಕೆಎವೈ ಅಡಿಯಲ್ಲಿನ ಜೂನ್‌ ತಿಂಗಳ ಧಾನ್ಯ ವಿತರಣೆಯನ್ನು ತ್ವರಿತವಾಗಿ ನಡೆಸುವಂತೆ ಕೇಂದ್ರ ಆಹಾರ ಸಚಿವ ರಾಂವಿಲಾಸ್‌ ಪಾಸ್ವಾನ್‌ ಅವರು ರಾಜ್ಯ ಸರ್ಕಾರಗಳನ್ನು ಕೋರಿದ್ದಾರೆ. ಈ ಯೋಜನೆಯನ್ನು ಮುಂದಿನ ಐದು ತಿಂಗಳು ವಿಸ್ತರಿಸುವ ಪ್ರಕ್ರಿಯೆಗೆ ತಕ್ಷಣವೇ ಚಾಲನೆ ನೀಡಬೇಕು ಎಂದೂ ಅವರು ವಿನಂತಿಸಿಕೊಂಡಿದ್ದಾರೆ. 

ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಅಗತ್ಯ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವಂತೆಯೂ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಜೂನ್‌ ತಿಂಗಳ ಧಾನ್ಯ ಇನ್ನೂ ವಿತರಣೆ ಆಗಿಲ್ಲ. ಇತರ ಕೆಲವು ರಾಜ್ಯಗಳೂ ವಿತರಣೆಯಲ್ಲಿ ಹಿಂದೆ ಬಿದ್ದಿವೆ. ಬಿಹಾರದಲ್ಲಿ ಶೇ 37, ದೆಹಲಿಯಲ್ಲಿ ಶೇ 66, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದಲ್ಲಿ ಶೇ 72ರಷ್ಟು ವಿತರಣೆ ಮಾತ್ರ ಆಗಿದೆ. 

ಪ್ರತಿ ಫಲಾನುಭವಿಗೆ ತಿಂಗಳಿಗೆ ಐದು ಕೆ.ಜಿ. ಅಕ್ಕಿ ಅಥವಾ ಗೋಧಿ ಮತ್ತು ಕುಟುಂಬಕ್ಕೆ ತಿಂಗಳಿಗೆ ಒಂದು ಕೆ.ಜಿ. ಬೇಳೆ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನೀಡಲಾಗುತ್ತಿರುವ ಸಬ್ಸಿಡಿ ದರದ ಧಾನ್ಯದ ಜತೆಗೆ ಹೆಚ್ಚುವರಿಯಾಗಿ ಈ ವಿತರಣೆ ನಡೆಸಲಾಗುತ್ತಿದೆ. 

ಚೀನಾ ಪ್ರಸ್ತಾಪವೇ ಇಲ್ಲ: ಕಾಂಗ್ರೆಸ್‌
ಪ್ರಧಾನಿಯ ಭಾಷಣದಲ್ಲಿ ಅಬ್ಬರ ಬಿಟ್ಟರೆ ಬೇರೇನೂ ಇಲ್ಲ. ಭಾಷಣದ ಬಗ್ಗೆ ಭಾರಿ ನಿರೀಕ್ಷೆ ಇದ್ದರೂ ಏನೂ ಆಗಿಲ್ಲ. ಚೀನಾದ ಜತೆಗಿನ ಗಡಿ ಬಿಕ್ಕಟ್ಟನ್ನು ಅವರು ಪ್ರಸ್ತಾಪವೇ ಮಾಡಿಲ್ಲ ಎಂದು ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.

‘ಚೀನಾದ ವಿರುದ್ಧ ದಿಟ್ಟವಾಗಿ ಮಾತನಾಡುವ ಧೈರ್ಯವನ್ನು ಪ್ರಧಾನಿ ತೋರುತ್ತಾರೆ, ಶತ್ರು ದೇಶಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂಬ ದೊಡ್ಡ ನಿರೀಕ್ಷೆ ನಮ್ಮಲ್ಲಿ ಇತ್ತು. ಆದರೆ, ಪ್ರಧಾನಿ ಮತ್ತೊಮ್ಮೆ ತಪ್ಪಿಸಿಕೊಂಡಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೆತ್‌ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು