ಭಾನುವಾರ, ಏಪ್ರಿಲ್ 11, 2021
33 °C
ಕವಿ ಹೃದಯದ ಮತ್ಸದ್ದಿ

ಜನರ ಮನದಲ್ಲಿ ಅಚ್ಚಳಿಯದೇ ಉಳಿದ ಅಟಲ್‌ ಜಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಆಗಸ್ಟ್‌ 16, 2018 ಅಟಲ್‌ ಬಿಹಾರಿ ವಾಜಪೇಯಿ ಅವರು ವಿಧಿವಶರಾದ ದಿನ. ಅವರು ದೈಹಿಕವಾಗಿ ಇಲ್ಲವಾಗಿ ಇಂದಿಗೆ ಒಂದು ವರ್ಷ ಪೂರ್ಣವಾಯ್ತು. ಆದರೂ, ಜನಾನುರಾಗಿ, ಅಜಾತಶತ್ರು, ಶಾಂತಿದೂತ, ಅಪ್ರತಿಮ ದೇಶಭಕ್ತ, ವಾಗ್ಮಿ, ರಾಜಕಾರಣದ ಭೀಷ್ಮ, ಕವಿ ಹೃದಯಿ, ಶಾಂತಿದೂತ, ಸಂಸದೀಯ ಪಟು... ಹೀಗೆ ಹಲವು ಆಯಾಮಗಳಲ್ಲಿ ಜನರು ಅವರನ್ನು ನೆನಯುತ್ತಲೇ ಇದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಈಚೆಗೆ ನಡೆದ ವಿಶ್ವಾಸಮತ ಯಾಚನೆ ವೇಳೆಯೂ ವಾಜಪೇಯಿ ಹೆಸರು ಪ್ರಸ್ತಾಪವಾಯಿತು. ಅಂತಹ ಬಹುಮುಖ ವ್ಯಕ್ತಿತ್ವ ವಾಜಪೇಯಿ ಅವರದ್ದು.

ವಿಶ್ವವೇ ಅಚ್ಚರಿಯಿಂದ ನೋಡುವಂತೆ ದೇಶವನ್ನು ಮುನ್ನಡೆಸಿದ ಕೀರ್ತಿಗೆ ಪಾತ್ರರಾದ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿ ಹುದ್ದೆಗೇರಿದ್ದರು. ಒಮ್ಮೆ 13 ದಿನಕ್ಕೆ ಅಧಿಕಾರ ಕಳೆದುಕೊಂಡರೆ, ಮತ್ತೊಮ್ಮೆ 13 ತಿಂಗಳಿಗೆ ಅಧಿಕಾರ ಕಳೆದುಕೊಂಡರು. ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿದ ಅವರು, ಐದು ವರ್ಷ ಅಧಿಕಾರ ನಡೆಸಿದರು. ವಾಜಪೇಯಿ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಹಾಗೂ ಬದುಕಿನ ಹಾದಿಯ ಕುರಿತು ಪ್ರಜಾವಾಣಿ ಈ ಹಿಂದೆ ಪ್ರಕಟಿಸಿದ್ದ ಲೇಖನಗಳು ಹಾಗೂ ಇತರ ಮಾಹಿತಿಗಳ ಸಮಗ್ರ ನೋಟವನ್ನು ಇಲ್ಲಿ ಕಟ್ಟಿಕೊಡಲಾಗಿದೆ.  


ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ... 1996ರ ಮೇ ತಿಂಗಳಲ್ಲಿ ವಾಜಪೇಯಿ ಅವರಿಗೆ ಅಂದಿನ ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ ಅವರು ಪ್ರಮಾಣ ವಚನ ಬೋಧಿಸಿದ್ದರು 


ಸಂಸದನಾಗಿ ಐದು ದಶಕಗಳ ಅನುಭವ

ಐದು ದಶಕದ ಸುದೀರ್ಘ ಅವಧಿಗೆ ಸಂಸದರಾಗಿದ್ದ ವಾಜಪೇಯಿ ಅವರು ಭಾರತೀಯ ರಾಜಕಾರಣದ ಭೀಷ್ಮ, ಅಜಾತಶತ್ರು ಎನಿಸಿಕೊಂಡವರು. ಗುಜರಾತ್‌ ಕೋಮುಗಲಭೆ ವೇಳೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ‘ರಾಜಧರ್ಮದ ಪಾಠ’ ಹೇಳಿದ್ದರು. ಆ ಸಂಗತಿ ಇಡೀ ದೇಶದಾದ್ಯಂತ ಚರ್ಚೆಗೂ, ಮೆಚ್ಚುಗೆಗೂ ಕಾರಣವಾಗಿತ್ತು. ಈ ಮೃದುಹೃದಯಿ ನಿಷ್ಠುರವಾಗಿ ಹೇಳಬೇಕಾದ್ದನ್ನು ಹೇಳಬಲ್ಲರು ಎಂದು ಜನ ಅಂದು ಮಾತನಾಡಿಕೊಂಡಿದ್ದರು.

ಬ್ರಹ್ಮಚರ್ಯದ ಬಗ್ಗೆ ಮಾತು ಬಂದಾಗ, ‘ನಾನು ಬ್ರಹ್ಮಚಾರಿಯಲ್ಲ, ಅವಿವಾಹಿತ ಅಷ್ಟೆ’ ಎಂದು ವಾಜಪೇಯಿ ಹೇಳಿದ್ದೂ ಜನರ ಮನಸಿನಲ್ಲಿ ಇನ್ನೂ ಹಚ್ಚಹಸಿರಾಗಿದೆ. ಇದಕ್ಕಾಗಿಯೇ ಅವರ ಬಗ್ಗೆ ಅವರ ಸಮಕಾಲಿನ ರಾಜಕಾರಣಿಗಳು ‘ರೈಟ್‌ ಮ್ಯಾನ್‌ ಇನ್‌ ದಿ ರಾಂಗ್‌ ಪಾರ್ಟಿ’ ಎಂದು ಪದೇ ಪದೇ ಹೇಳಿದ್ದೂ ಇದೆ.

1996ರಲ್ಲಿ ಸಂಸತ್‌ನಲ್ಲಿ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲ ಎನ್ನುವುದು ಗೊತ್ತಾಗಿ, 13 ದಿನಕ್ಕೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾದ ಸನ್ನಿವೇಶದಲ್ಲಿ ಅವರು ಸಂಸತ್‌ನಲ್ಲಿ ಮಾಡಿದ ಭಾವನಾತ್ಮಕವಾದ ಸುಧೀರ್ಘ ಭಾಷಣವನ್ನು ಇಡೀ ದೇಶ ಕಿವಿಗೊಟ್ಟು ಆಲಿಸಿತ್ತು.

ಪಕ್ಷಾತೀತ ಗೌರವ

ವಾಜಪೇಯಿ ಅವರನ್ನು ಎಲ್ಲ ಪಕ್ಷಗಳ ನಾಯಕರೂ ಗೌರವಿಸುತ್ತಿದ್ದರು. ‘ಅಜಾತಶತ್ರು’ ಎಂಬುದು ಅವರ ಬಗ್ಗೆ ಪಕ್ಷಾತೀತವಾಗಿ ಚಾಲ್ತಿಯಲ್ಲಿರುವ ಗೌರವ ಸೂಚಕ ಶಬ್ದ. ಇದು ಭಾರತಕ್ಕಷ್ಟೇ ಸೀಮಿತವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಅಜಾತಶತ್ರುವೇ. ದೇಶದ ಗಡಿಯಾಚೆಗೂ ಅವರು ಚಾಚಿದ್ದ ಸ್ನೇಹಹಸ್ತವೇ ಅದಕ್ಕೆ ಸಾಕ್ಷಿ. ಭಾರತದ ಬದ್ಧ ವೈರಿ ಎಂದೇ ಗುರುತಿಸಿಕೊಂಡು ಬಂದಿರುವ ಪಾಕಿಸ್ತಾನದ ಜತೆಗೂ ಬಾಂಧವ್ಯ ವೃದ್ಧಿಗೆ ಸಿಕ್ಕ ಸಣ್ಣ ಅವಕಾಶವನ್ನೂ ವಾಜಪೇಯಿಯವರು ನಿರ್ಲಕ್ಷಿಸುತ್ತಿರಲಿಲ್ಲ. ಇದಕ್ಕೆ ಹಲವು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ತಮ್ಮ ನೇತೃತ್ವದಲ್ಲಿ ಆರಂಭಿಸಲಾಗಿದ್ದ ದೆಹಲಿ–ಲಾಹೋರ್ ಬಸ್‌ ಸಂಪರ್ಕವನ್ನು ಕಾರ್ಗಿಲ್ ಕದನ ನಡೆದಾಗಲೂ ಕಡಿದುಕೊಳ್ಳಲು ಅವರು ಮುಂದಾಗಿರಲಿಲ್ಲ. ಹೇಗಾದರೂ ಸರಿ, ನೆರೆ ರಾಷ್ಟ್ರದ ಜತೆ ಸ್ನೇಹದಿಂದ ಇರಬೇಕು ಎಂಬುದೇ ಅವರ ಆಶಯವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನ.


ನವದೆಹಲಿಯಲ್ಲಿ 2005ರಲ್ಲಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭೇಟಿಯಾದ ಕ್ಷಣ

ಬಸ್‌ನಲ್ಲಿ ಲಾಹೋರ್‌ಗೆ ತೆರಳಿದ್ದ ‘ಶಾಂತಿದೂತ’

ವಾಜಪೇಯಿ ಅವರು ಎರಡನೇ ಬಾರಿ ಪ್ರಧಾನಿಯಾಗಿದ್ದ ಸಂದರ್ಭ. ಭಾರತ–ಪಾಕಿಸ್ತಾನ ನಡುವಣ ಸಂಬಂಧ ಹದಗೆಡುತ್ತಿತ್ತು. 1988ರಲ್ಲಿ ಭಾರತ ನಡೆಸಿದ್ದ ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಮತ್ತು ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಚಘೈಹಿಲ್ಸ್‌ನಲ್ಲಿ ನಡೆಸಿದ್ದ ಅಣ್ವಸ್ತ್ರ ಪರೀಕ್ಷೆಗಳಿಂದ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಹಳಸಿತ್ತು. ಅಂತಹ ಸನ್ನಿವೇಶದಲ್ಲೂ ಪಾಕಿಸ್ತಾನದ ಜತೆ ಸ್ನೇಹ ಹಸ್ತಚಾಚಲು ಮುಂದಾಗಿದ್ದರು ವಾಜಪೇಯಿ. ಇದರ ಫಲವೇ ಲಾಹೋರ್ ಒಪ್ಪಂದ ಮತ್ತು ದೆಹಲಿ–ಲಾಹೋರ್ ನಡುವಣ ಬಸ್‌ ಸೇವೆಯ ಆರಂಭ.

1999ರ ಫೆಬ್ರುವರಿ 19ರಂದು ದೆಹಲಿ–ಲಾಹೋರ್ ಬಸ್‌ ಸೇವೆ ಆರಂಭಗೊಂಡಿತು. ವಾಜಪೇಯಿ ಅವರು ಬಸ್‌ನಲ್ಲಿ ಲಾಹೋರ್‌ಗೆ ಸಂಚರಿಸುವ ಮೂಲಕ ವಿಶ್ವದ ಗಮನ ಸೆಳೆದರು. ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಶರೀಫ್ ಅವರು ವಾಜಪೇಯಿ ಅವರನ್ನು ಲಾಹೋರ್‌ನಲ್ಲಿ ಸ್ವಾಗತಿಸಿದರು. ಸ್ವಾತಂತ್ರ್ಯಾನಂತರ ಎರಡೂ ರಾಷ್ಟ್ರಗಳ ನಡುವೆ ಕಡಿತಗೊಂಡಿದ್ದ ಸಾರಿಗೆ ಸಂಪರ್ಕವನ್ನು (1976ರಲ್ಲಿ ಸಂಝೋತಾ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭವಾಗಿದ್ದು ಬಿಟ್ಟರೆ ಬೇರೆ ಸಾರಿಗೆ ಸಂಪರ್ಕ ಇರಲಿಲ್ಲ) ಮತ್ತೆ ಆರಂಭಿಸುವ ನಿಟ್ಟಿನಲ್ಲಿ ವಾಜಪೇಯಿ ಕೈಗೊಂಡ ಮಹತ್ವದ ನಿರ್ಧಾರ ಇದಾಗಿತ್ತು. ವಾಘಾ ಗಡಿಯ ಮೂಲಕ ಸಂಚರಿಸುವ ಈ ಬಸ್‌ ಸೇವೆ ಉಭಯ ರಾಷ್ಟ್ರಗಳ ನಾಗರಿಕರಿಗೆ ನೆರೆ ರಾಷ್ಟ್ರದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗುವ ಸದವಕಾಶ ಕಲ್ಪಿಸಿತು.

1999ರ ಮೇನಲ್ಲಿ ಕಾರ್ಗಿಲ್‌ ಕದನ ನಡೆಯಿತು. ಆದರೂ ಬಸ್‌ ಸೇವೆ ಮುಂದುವರಿದೇ ಇತ್ತು! 2001ರಲ್ಲಿ ಭಾರತದ ಸಂಸತ್‌ ಮೇಲೆ ಉಗ್ರರು ದಾಳಿ ನಡೆಸಿದ ನಂತರ ದೆಹಲಿ–ಲಾಹೋರ್ ಬಸ್ ಸೇವೆಯನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾಯಿತು.

ಐತಿಹಾಸಿಕ ಲಾಹೋರ್ ಒಪ್ಪಂದದ ಹರಿಕಾರ

ಆಕಸ್ಮಿಕ ಮತ್ತು ಅನಧಿಕೃತ ಅಣ್ವಸ್ತ್ರ ಬಳಕೆ ತಡೆಗೆ ಎರಡೂ ರಾಷ್ಟ್ರಗಳು ಮಾಡಿಕೊಂಡ ಮಹತ್ವದ ಒಪ್ಪಂದ ಇದು. 1999ರ ಫೆಬ್ರುವರಿ 21ರಂದು ಲಾಹೋರ್‌ನಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ನವಾಜ್ ಶರೀಫ್ ಈ ಒಪ್ಪಂದಕ್ಕೆ ಸಹಿ ಹಾಕಿದರು. ಜತೆಗೆ, 1998ರಲ್ಲಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಅಣ್ವಸ್ತ್ರ ಅತಿಕ್ರಮಣ ತಡೆ ಒಪ್ಪಂದವನ್ನು (ಎನ್‌ಎನ್‌ಎಎ) ಮುಂದುವರಿಸಿಕೊಂಡು ಹೋಗಲೂ ನಿರ್ಧರಿಸಲಾಯಿತು. ಈ ಒಪ್ಪಂದಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ ಶ್ಲಾಘನೆ ವ್ಯಕ್ತವಾಯಿತು.

ಇತ್ತ ಭಾರತದಲ್ಲಿ ವಾಜಪೇಯಿ ಸರ್ಕಾರದ ಜನಪ್ರಿಯತೆ ಹೆಚ್ಚಾಯಿತು. ರಾಜಕೀಯವಾಗಿ ತಾನೊಬ್ಬ ಗಟ್ಟಿ ನಿಲುವಿನ ವ್ಯಕ್ತಿ ಎಂಬುದನ್ನೂ ಈ ಒಪ್ಪಂದದ ಮೂಲಕ ವಾಜಪೇಯಿ ತೋರಿಸಿಕೊಟ್ಟರು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು.

ಘಟಿಸಿತು ಕಾರ್ಗಿಲ್ ಕದನ!

ಒಂದೆಡೆ ವಾಜಪೇಯಿ ನೆರೆ ರಾಷ್ಟ್ರದೊಂದಿಗೆ ಸ್ನೇಹವೃದ್ಧಿಗೆ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ ಅತ್ತ ಪಾಕಿಸ್ತಾನ ಬೆನ್ನಿಗೆ ಇರಿಯುವ ಕೆಲಸ ಮಾಡಿತು (ಅಂದಿನ ಪ್ರಧಾನಿ ನವಾಜ್ ಷರೀಫ್ ಅವರೇ ಇದನ್ನು 2016ರಲ್ಲಿ ಒಪ್ಪಿಕೊಂಡಿದ್ದಾರೆ).

ದೆಹಲಿ–ಲಾಹೋರ್ ಬಸ್‌ ಸೇವೆ ಆರಂಭಗೊಂಡ ಕೆಲವೇ ತಿಂಗಳುಗಳಲ್ಲಿ, ಅಂದರೆ 1999ರ ಮೇ ತಿಂಗಳಿನಲ್ಲಿ ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದರು. ತಡಮಾಡದ ವಾಜಪೇಯಿ ಅವರು ‘ಆಪರೇಷನ್ ವಿಜಯ್’ ಘೋಷಿಸಿದರು. ನಂತರ ನಡೆದ ಸೇನಾ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನಿ ಪಡೆಗಳು ಅತಿಕ್ರಮಿಸಿಕೊಂಡಿದ್ದ ಕೆಲವು ಪ್ರದೇಶಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ನಂತರ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸೇನೆಯನ್ನು ಹಿಂಪಡೆಯಿತು. ಜುಲೈನಲ್ಲಿ ಕದನವಿರಾಮ ಏರ್ಪಟ್ಟಿತು.

ಮೊದಲಿಗೆ, ಕಾರ್ಗಿಲ್ ಕದನಕ್ಕೆ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆಕೂರಿಸಿತ್ತು. ಆದರೆ, ನಂತರದ ಬೆಳವಣಿಗೆಗಳಿಂದ ಪಾಕಿಸ್ತಾನ ಸೇನೆಯ ಕೈವಾಡ ಇರುವುದು ದೃಢಪಟ್ಟಿತ್ತು.

‘ನನ್ನ ಬೆನ್ನಿಗೆ ಇರಿದಿರಿ ನೀವು...’

‘ಲಾಹೋರ್‌ ಒಪ್ಪಂದ ಘೋಷಿಸಿದ ತಕ್ಷಣವೇ ಕಾರ್ಗಿಲ್‌ನಲ್ಲಿ ದುಸ್ಸಾಹಸಕ್ಕೆ ಕೈಹಾಕಿ ನೀವು ನನ್ನ ಬೆನ್ನಿಗೆ ಇರಿದಿರಿ.’ ಹೀಗೆಂದು ವಾಜಪೇಯಿ ಅವರು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆ ಬೇಸರ ವ್ಯಕ್ತಪಡಿಸಿದ್ದರಂತೆ. ಇದನ್ನು ಶರೀಫ್ ಅವರೇ ಹೇಳಿಕೊಂಡಿದ್ದಾರೆ.

2016ರ ಫೆಬ್ರುವರಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ್ದ ಶರೀಫ್ ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. ಜತೆಗೆ, ‘ನಿಮ್ಮ ಜಾಗದಲ್ಲಿ ನಾನೇ ಇದ್ದಿದ್ದರೂ ಅದೇ ಮಾತು ಹೇಳುತ್ತಿದ್ದೆ ಎಂದು ವಾಜಪೇಯಿ ಅವರಿಗೆ ಉತ್ತರಿಸಿದ್ದೆ’ ಎಂದೂ ನೆನಪಿಸಿಕೊಂಡಿದ್ದಾರೆ.

ಪಟ್ಟುಬಿಡದ ಮುಷರಫ್, ವಿಫಲವಾದ ಆಗ್ರಾ ಶೃಂಗಸಭೆ

ಪಾಕಿಸ್ತಾನದ ಜತೆ ಬಾಂಧವ್ಯದ ಬೆಸುಗೆ ಗಟ್ಟಿಗೊಳಿಸಬೇಕು ಎಂಬ ವಾಜಪೇಯಿ ಅವರ ಪ್ರಬಲ ಇಚ್ಛಾಶಕ್ತಿಯ ಕೊನೆಯ ಪ್ರಯತ್ನದ ಫಲವೇ ಆಗ್ರಾ ಶೃಂಗಸಭೆ. 2001ರ ಜುಲೈ14ರಿಂದ 16ರ ವರೆಗೆ ನಡೆದ ಶೃಂಗಸಭೆಯಲ್ಲಿ ವಾಜಪೇಯಿ ಮತ್ತು ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಮಾತುಕತೆ ನಡೆಸಿದ್ದರು. ಉಭಯ ರಾಷ್ಟ್ರಗಳ ನಡುವೆ ದೀರ್ಘಕಾಲದಿಂದ ಇರುವ ವೈಮನಸ್ಸನ್ನು, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಶೃಂಗಸಭೆ ಆಯೋಜನೆಯಾಗಿತ್ತು.

ಆದರೆ, ಕಾಶ್ಮೀರ ಸಮಸ್ಯೆ ಮೊದಲು ಬಗೆಹರಿಸಬೇಕು ಎಂಬ ವಾದ ಮುಷರಫ್ ಅವರದ್ದಾಗಿತ್ತು. ಗಡಿಯಾಚೆ ತರಬೇತಿ ಪಡೆದು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನೆಸಗುವ ಭಯೋತ್ಪಾದಕರನ್ನು ಮಟ್ಟಹಾಕಬೇಕು. ಭಯೋತ್ಪಾದನೆ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂಬುದು ವಾಜಪೇಯಿ ಅವರ ನಿಲುವಾಗಿತ್ತು. ಕೊನೆಗೆ ಇವೆರಡೇ ವಿಷಯಗಳ ಚರ್ಚೆಯೊಂದಿಗೆ ಶೃಂಗಸಭೆ ಅಂತ್ಯಗೊಂಡಿತು. ಆಗ್ರಾ ಘೋಷಣೆಯ ಕರಡು ಸಿದ್ಧಪಡಿಸುವ ಕೆಲಸ ನಡೆಯುತ್ತಿದ್ದಂತೆಯೇ, ನಮ್ಮ ಅಧ್ಯಕ್ಷರು ಅದಕ್ಕೆ ಸಹಿ ಹಾಕದೇ ಹಿಂತಿರುಗುತ್ತಾರೆ ಎಂದಿತು ಪಾಕಿಸ್ತಾನ ಸರ್ಕಾರ. ಶೃಂಗಸಭೆ ವಿಫಲವಾಯಿತು.

ಇದಾದ ಕೆಲವೇ ತಿಂಗಳುಗಳಲ್ಲಿ, ಅಂದರೆ 2001ರ ಡಿಸೆಂಬರ್‌ 13ರಂದು ಭಾರತದ ಸಂಸತ್‌ ಭವನದ ಮೇಲೆ ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸಿದರು. ನೆರೆ ರಾಷ್ಟ್ರದ ಜತೆ ಹೇಗಾದರೂ ಮಾಡಿ ಸ್ನೇಹದಿಂದ ಇರಬೇಕೆಂಬ ವಾಜಪೇಯಿ ಅವರ ಕನಸನ್ನು ಈ ದಾಳಿ ಮತ್ತಷ್ಟು ಮಬ್ಬಾಗಿಸಿತು.


ಆಪ್ತಮಿತ್ರ ಎಲ್‌.ಕೆ.ಅಡ್ವಾಣಿ ಅವರೊಂದಿಗೆ ವಾಜಪೇಯಿ

ಹದಿಮೂರು ಮತ್ತು ವಾಜಪೇಯಿ!

ವಾಜಪೇಯಿ ಈ ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಆಡಳಿತ ನಡೆಸಿದ್ದು ಕೇವಲ 13 ದಿನ. 1996ರಲ್ಲಿ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸದೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1998ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ಆಡಳಿತ ನಡೆಸಿದ್ದು 13 ತಿಂಗಳು. ಮತ್ತೆ 13ರ ಸಂಖ್ಯೆಯೇ ಅವರಿಗೆ ಕೈಕೊಟ್ಟಿತ್ತು. 1999ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ವಾಜಪೇಯಿ ಐದು ವರ್ಷಗಳ ಅವಧಿಯ ಆಡಳಿತ ನಡೆಸಿದರೂ ಮತ್ತೆ ಅವರಿಗೆ ಅದೇ 13ರ ಸಂಖ್ಯೆಯೇ ಅಡ್ಡಿಯಾಯಿತು.

2004ರ ಏಪ್ರಿಲ್‌ 20 ಮತ್ತೆ ಮೇ 10ರಂದು ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ವಾಜಪೇಯಿ ಅಧಿಕಾರ ಕಳೆದುಕೊಂಡರು. ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಈ ಚುನಾವಣೆಯ ಮತಗಳ ಎಣಿಕೆ ನಡೆದಿದ್ದು 2004ರ ಮೇ 13. ವಾಜಪೇಯಿ ಅವರಿಗೆ 13 ಮತ್ತೆ ದುರದೃಷ್ಟವಾಗಿ ಹೊರಹೊಮ್ಮಿತು.

ಸರ್ಕಾರಿ ಯೋಜನೆಗಳಿಗೆ ಗಣ್ಯರ ಹೆಸರಿಡಲು ವಿರೋಧಿಸಿದ್ದ ವಾಜಪೇಯಿ

ಸರ್ಕಾರಿ ಯೋಜನೆಗಳಿಗೆ ಗಣ್ಯರ ಹೆಸರು ಇಡುವುದನ್ನು ಸ್ವತಹ ವಾಜಪೇಯಿ ಅವರೇ ಒಪ್ಪುತ್ತಿರಲಿಲ್ಲ. ‘ಗ್ರಾಮೀಣ ಸಡಕ್‌ ಯೋಜನೆ’ಗೆ ಅಟಲ್‌ ಹೆಸರನ್ನೇ ಇಡುವಂತೆ ಬಿಜೆಪಿಯ ಹಲವಾರು ಮುಖಂಡರು ವಾಜಪೇಯಿ ಅವರ ಬಳಿ ಕೇಳಿಕೊಂಡಿದ್ದಾಗಲೂ ಒಪ್ಪಿರಲಿಲ್ಲವಂತೆ. ಕೊನೆಗೆ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಎಂದು ನಾಮಕರಣ ಮಾಡಲು ಸೂಚಿಸಿದ್ದರಂತೆ.
ವಿವಿಧ ಯೋಜನೆಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಇಡುವ ಸರ್ಕಾರದ ನಿರ್ಧಾರಕ್ಕೆ ವಾಜಪೇಯಿ ಅವರ ಅಣ್ಣನ ಮಗಳು ಕರುಣಾ ಶುಕ್ಲಾ ವಿರೋಧ ವ್ಯಕ್ತಪಡಿಸಿದ್ದರು.

ಕೊನೆಯ ದಿನಗಳು...

90ರ ಇಳಿವಯಸ್ಸಿನ ವಾಜಪೇಯಿ ದೆಹಲಿಯ ಕೃಷ್ಣಮೆನನ್ ಮಾರ್ಗದ ಆರನೆಯ ಬಂಗಲೆಯಲ್ಲಿ ಎಸ್.ಪಿ.ಜಿ. ಪಹರೆಯ ಏಕಾಂಗಿತನದಲ್ಲಿ ತೀವ್ರ ಅಸ್ವಸ್ಥರಾಗಿ ಮಲಗಿ ವರ್ಷಗಳೇ ಉರುಳಿದ್ದವು. ನೆನಪು ಅವರಿಗೆ ಕೈ ಕೊಟ್ಟಿತ್ತು. ಬಂದವರನ್ನು ಗುರುತು ಹಿಡಿಯುವ ಪರಿಸ್ಥಿತಿ ಇರಲಿಲ್ಲ. ಭಾರತರತ್ನ ಪ್ರಶಸ್ತಿ ದೊರೆತಾಗ ಸಂಭ್ರಮಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ. 

‘ಭಾರತ ಪ್ರಕಾಶಿಸುತ್ತಿದೆ’ ಎಂಬ ವಾಜಪೇಯಿ ಸರ್ಕಾರದ ಪ್ರಚಾರವನ್ನು ಜನ ನಂಬಲಿಲ್ಲ. ಪರಿಣಾಮವಾಗಿ 2004ರಲ್ಲಿ ಸೋತ ಬಿಜೆಪಿಯ ಭೀಷ್ಮ ಕಾಲಕ್ರಮೇಣ ‘ಬಾಣಗಳ ಹಾಸಿಗೆ’ಗೆ ಒರಗಿದವರು ಮೇಲೇಳಲಿಲ್ಲ.

2018ರ ಆಗಸ್ಟ್ 16ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌) ಆಸ್ಪತ್ರೆಯಲ್ಲಿ ಅಂದು ಸಂಜೆ 5:05ಕ್ಕೆ ಕೊನೆಯುಸಿರೆಳೆದರು.

ವಾಜಪೇಯಿ 1969ರಲ್ಲಿ ಹೀಗಿದ್ದರು.

ಬಾಬರಿ ಮಸೀದಿ ಅಗ್ನಿಪರೀಕ್ಷೆ

1992ರ ಡಿಸೆಂಬರ್ 6ರಂದು ಆಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ವಾಜಪೇಯಿ ಅವರಿಗೆ ಅಗ್ನಿ ಪರೀಕ್ಷೆ ಒಡ್ಡಿತು. ಅವರು ಆಗ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ಎಲ್.ಕೆ.ಅಡ್ವಾಣಿ ಮತ್ತು ಬಿಜೆಪಿಯ ಇತರ ನಾಯಕರು ಈ ಪ್ರಕರಣ ಸಮರ್ಥಿಸಿಕೊಂಡಿದ್ದರು. ಆದರೆ ವಾಜಪೇಯಿ ಇದನ್ನು ಖಂಡಿಸಿ ತಮ್ಮ ಧರ್ಮನಿರಪೇಕ್ಷ ನಿಲುವಿಗೆ ಅಂಟಿಕೊಂಡು, ರಾಜಕೀಯ ಮುತ್ಸದ್ದಿ ಎನಿಸಿಕೊಂಡರು.

ಕರ್ನಾಟಕ ವಿಧಾನಸಭೆ ಒಳ–ಹೊರಗೂ ಪ್ರತಿಧ್ವನಿಸಿತು ವಾಜಪೇಯಿ ವಿಶ್ವಾಸಮತದ 10 ದಿನದ ಕಲಾಪ!

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ವಿಶ್ವಾಸಮತ ಮಂಡಿಸುವಾಗ 10 ದಿನ ಕಲಾಪ ನಡೆದ ಸಂಗತಿಯು ರಾಜ್ಯ ವಿಧಾನಸಭೆಯ ಒಳ ಹೊರಗೆ ಪ್ರತಿಧ್ವನಿಸಿತು.

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಂಡಿಸಿ ನಡೆಸಿದ ಚರ್ಚೆಯು ಅಂತ್ಯ ಕಾಣದೆ ದಿನದಿಂದ ದಿನಕ್ಕೆ ಮುಂದೆ ಹೋಗುತ್ತಲೇ ಇತ್ತು. ಆಗ, ವಿಪಕ್ಷ ನಾಯಕ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆಯನ್ನು ಇಂದೇ ಕೊನೆಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿದ್ದರು. ಆಗ ರಾಜ್ಯಪಾಲರು ಶೀಘ್ರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮೂರು ಸಂದೇಶಗಳನ್ನು ಕಳಿಸಿದ್ದರು. 

ಈ ವೇಳೆ ಚರ್ಚೆಯ ಮೇಲೆ ಮಾತನಾಡಿದ ಕುಮಾರಸ್ವಾಮಿ, ಶೆಡ್ಯೂಲ್‌ 10 ಬಗ್ಗೆ ಪ್ರಸ್ತಾಪ ಆಗಿದೆ. ಇಲ್ಲಿ ಎಲ್ಲವೂ ವಿಸ್ತ್ರತ ಚರ್ಚೆ ಆಗಬೇಕು. ಬಿಜೆಪಿಯವರಿಗೆ ಆತುರ ಏಕೆ. ವಾಜಪೇಯಿ ವಿಶ್ವಾಸಮತ ಮಂಡಿಸುವಾಗ 10 ದಿನ ಕಲಾಪ ನಡೆದಿಲ್ಲವೇ ಎಂದು ಪ್ರಶ್ನಿಸಿದ್ದರು.

ಇದೇ ವಿಷಯ ಕುರಿತು ಸದನದ ಹೊರಗೆ ಮೈಸೂರಿನಲ್ಲಿ ಮಾತನಾಡಿದ್ದ ಸಚಿವರಾಗಿದ್ದ ಎಚ್.ಡಿ.ರೇವಣ್ಣ, ‘ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು 10 ದಿನ ಅವಕಾಶ ನೀಡಲಾಗಿತ್ತು. ವಿಶ್ವಾಸಮತ ಸಾಬೀತುಪಡಿಸುವ ಕುರಿತು ಸ್ಪೀಕರ್ ಅಂತಿಮ ತೀರ್ಮಾನ ಕೈಗೊಳ್ಳುವರು’ ಎಂದಿದ್ದರು.ಅಂತು ಇಂತು ಆಡಳಿತ ಪಕ್ಷ ಮತ್ತು ವಿಕ್ಷಗಳ ಹಗ್ಗ ಜಗ್ಗಾಟದ ಮಧ್ಯೆ ವಾಜಪೇಯಿ ಅವರನ್ನೂ ಸ್ಮರಿಸುವಂತಾಗಿತ್ತು.

ಬದುಕಿನ ಹೆಜ್ಜೆ ಗುರುತುಗಳು...

1924ರ ಡಿಸೆಂಬರ್ 25ರಂದು ಕೃಷ್ಣಾದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿ ಪುತ್ರನಾಗಿ ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ 'ಶಿಂಧೆ ಕಿ ಚವ್ವಾಣಿ' ಗ್ರಾಮದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕ ಮತ್ತು ಕವಿಯಾಗಿದ್ದರು. ಅವರದು ಮಧ್ಯಮ ವರ್ಗದ ಕುಟುಂಬ.

ಶಿಕ್ಷಣ: ಬಾಲ್ಯದ ಶಿಕ್ಷಣ ಸರಸ್ವತಿ ಶಿಶು ಮಂದಿರದಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ವಿಕ್ಟೋರಿಯಾ ಕಾಲೇಜಿನಲ್ಲಿ ಪಡೆದರು. ಪದವಿ ಶಿಕ್ಷಣದಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಸಂಸ್ಕೃತದಲ್ಲಿ ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದರು. ಹಿಂದಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಹಿಂದಿ ಭಾಷೆಯಲ್ಲಿ ಅಪಾರ ಪಾಂಡಿತ್ಯ, ಪ್ರೇಮ ಹೊಂದಿದ್ದ ಅವರು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಕವಿತೆಗಳನ್ನು ರಚಿಸಿದರು. ಶಾಯಿರಿಗಳನ್ನು ರಸವತ್ತಾಗಿ ವಾಚಿಸುತ್ತಿದ್ದರು.

1939–1957: ಸಂಘ ಟೂ ಸಂಸತ್‌...

1924ನೇ ಡಿಸೆಂಬರ್‌ 25: ಗ್ವಾಲಿಯರ್‌ನಲ್ಲಿ ಕೃಷ್ಣಾದೇವಿ ಮತ್ತು ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಅಟಲ್ ಜನನ.

1939– ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆ. 

1942– ಕ್ವಿಟ್ ಇಂಡಿಯಾ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಚಳವಳಿಯಲ್ಲಿ ಭಾಗಿ, ಸೆರೆವಾಸ.

1951– ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರೊಂದಿಗೆ ಜನಸಂಘ ಸ್ಥಾಪನೆ. ಮುಖರ್ಜಿ ಅವರೊಡನೆ ಕಾಶ್ಮೀರ ಹೋರಾಟದಲ್ಲಿ ಕೈಜೋಡಿಸಿದರು.

1957– ಮೊದಲ ಬಾರಿಗೆ ಲೋಕಸಭೆಯ ಸದಸ್ಯರಾಗಿ ಉತ್ತರಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಆಯ್ಕೆ. ದೇಶದ ಗಮನ ಸೆಳೆದ ಸಂಸತ್‌ ಭಾಷಣಗಳು.

1968–1979: ಅಧಿಕಾರದ ಮೆಟ್ಟಿಲುಗಳು...

1968- ದೀನ್‌ ದಯಾಳ್‌ ಉಪಾಧ್ಯಾಯ ನಿಧನ. ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ ವಾಜಪೇಯಿ.

1975– ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಾಜಕೀಯ ಕೈದಿಯಾಗಿ ಸೆರೆವಾಸ.

1977– ಭಾರತೀಯ ಜನಸಂಘವನ್ನು ಭಾರತೀಯ ಲೋಕದಳ ಮತ್ತು ಸೋಷಿಯಲಿಸ್ಟ್‌ ಪಾರ್ಟಿಯ ಜತೆಗೆ ಒಂದುಗೂಡಿಸಿ, ಜನತಾ ಪಾರ್ಟಿ ರಚನೆ.

1977– ಜನತಾ ಪಕ್ಷ ಗೆಲುವು. ಮೊರಾರ್ಜಿ ದೇಸಾಯಿ ಪ್ರಧಾನಿ. ವಾಜಪೇಯಿ ವಿದೇಶಾಂಗ ಸಚಿವ. ಅಮೆರಿಕದಲ್ಲಿ ಮಾಡಿದ ಭಾಷಣಕ್ಕೆ ವಿಶ್ವದ ಮನ್ನಣೆ.

1979– ಜನತಾ ಸರ್ಕಾರ ಪತನ. ಜನತಾ ಪಾರ್ಟಿ ವಿಸರ್ಜನೆ.

1980– ಎಲ್‌.ಕೆ.ಅಡ್ವಾಣಿ, ಭೈರೋನ್‌ ಸಿಂಗ್‌ ಶೆಖಾವತ್‌ ಜತೆ ಸೇರಿ 1980ರಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸ್ಥಾಪನೆ. ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ

1984– ಕೇವಲ 2 ಲೋಕಸಭಾ ಕ್ಷೇತ್ರಗಳಲ್ಲಿ ಜಯ.

1989– ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ 88 ಸ್ಥಾನಗಳಲ್ಲಿ ಗೆಲುವು.

1991– ಲೋಕಸಭೆ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗಳಿಸಿದ ಬಿಜೆಪಿ. ಮೊದಲ ಬಾರಿಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ.

1996– ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ. ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲಾಗದೆ ಹದಿಮೂರು ದಿನಗಳ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ.

1998– ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ, ಪ್ರಧಾನಿಯಾಗಿ ಎರಡನೆಯ ಬಾರಿಗೆ ಅಧಿಕಾರ ಸ್ವೀಕಾರ. ಹದಿಮೂರು ತಿಂಗಳುಗಳ ಕಾಲ ಆಡಳಿತ.

1998 ಮೇ– ವಾಜಪೇಯಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ನಂತರ, ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಭಾರತ.

1999, ಫೆಬ್ರುವರಿ– ಪಾಕಿಸ್ತಾನದ ಜೊತೆ ಸೌಹಾರ್ದ ಸಂಬಂಧ ಹೊಂದುವ ಉದ್ದೇಶದಿಂದ ದೆಹಲಿ – ಲಾಹೋರ್ ಬಸ್ ಸೇವೆಗೆ  ಚಾಲನೆ.

1999, ಜೂನ್‌– ಪಾಕಿಸ್ತಾನದಿಂದ ಬಂದ ನುಸುಳುಕೋರರನ್ನು ಓಡಿಸಲು ಕಾರ್ಗಿಲ್‌ ವಲಯದಲ್ಲಿ ‘ಆಪರೇಷನ್ ವಿಜಯ್‌’ ಕಾರ್ಯಾಚರಣೆ. ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾರತ ಸಾಧಿಸಿದ ವಿಜಯ, ವಾಜಪೇಯಿ ಅವರ ಜನಪ್ರೀತಿಯನ್ನು ಹೆಚ್ಚಿಸಿತು.

1999– ಪ್ರಧಾನಿಯಾಗಿ ಮೂರನೆಯ ಬಾರಿಗೆ ಅಧಿಕಾರ ಸ್ವೀಕರಿಸಿದ ವಾಜಪೇಯಿ.

2001, ಜುಲೈ– ಪಾಕಿಸ್ತಾನದ ಜೊತೆ ಶಾಂತಿ ಸ್ಥಾಪನೆಗಾಗಿ ಆಗ್ರಾದಲ್ಲಿ ಶೃಂಗಸಭೆ. ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್‌ ಭಾಗಿ.

2004, ಮೇ– ಎನ್‌ಡಿಎ ಮೈತ್ರಿಕೂಟಕ್ಕೆ ಲೋಕಸಭಾ ಚುನಾವಣೆಯಲ್ಲಿ ಸೋಲು. ವಾಜಪೇಯಿ ಆಡಳಿತ ಅಂತ್ಯ.

2005, ಡಿಸೆಂಬರ್‌– ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ ಕವಿ ಹೃದಯಿ.

2009– ಪಾರ್ಶ್ವವಾಯುವಿಗೆ ಒಳಗಾದ ಬಳಿಕ ಮರೆಗುಳಿ ಮತ್ತು ಮಧುಮೇಹದಿಂದ ಹಾಸಿಗೆ ಹಿಡಿದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸಿದ್ದರು.

2018, ಜೂನ್ 11– ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆ ದಾಖಲಿಸಲಾಯಿತು. 

2018, ಆಗಸ್ಟ್ 16– ವಾಜಪೇಯಿ ನಿಧನ 


1996ರಲ್ಲಿ ಪ್ರಧಾನಿಯಾಗಿ ವಾಜಪೇಯಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಕ್ಷಣ

* ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ದೆಹಲಿ ಹೀಗೆ ನಾಲ್ಕು ರಾಜ್ಯಗಳಿಂದ ಬೇರೆ ಬೇರೆ ಅವಧಿಯಲ್ಲಿ ಲೋಕಸಭೆಗೆ ಆಯ್ಕೆಯಾದ ದೇಶದ ಏಕೈಕ ನಾಯಕ ಎನ್ನುವ ಶ್ರೇಯ ಅವರದ್ದು

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ


ಪಟನಾದಲ್ಲಿ 1997ರಲ್ಲಿ ನಡೆದ ಸಮಾವೇಶದಲ್ಲಿನ ಬೃಹತ್‌ ಜನಸಮೂಹವನ್ನು ಉದ್ದೇಶಿಸಿ ವಾಜಪೇಯಿ ಮಾತನಾಡುತ್ತಿರುವುದು. ಚಿತ್ರದಲ್ಲಿ ಶತ್ರುಘ್ನ ಸಿನ್ಹಾ ಇದ್ದಾರೆ

ಪುರಸ್ಕಾರಗಳು

1992: ಪದ್ಮ ವಿಭೂಷಣ

1994: ಲೋಕಮಾನ್ಯ ತಿಲಕ್‌ ಪ್ರಶಸ್ತಿ

1994: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ

1994: ಭಾರತ ರತ್ನ ಪಂಡಿತ್‌ ಗೋವಿಂದ್‌ ವಲ್ಲಭ ಪಂತ್ ಪ್ರಶಸ್ತಿ2014: ಭಾರತ ರತ್ನ

 

ವಾಜಪೇಯಿ ಬಹು ವ್ಯಕ್ತಿತ್ವದ ಮುಖಗಳು...

ಗ್ರಾಮ ಸಡಕ್ ಯೋಜನೆ

ದೇಶದ ಅಧಿಕಾರ ಚುಕ್ಕಾಣಿ ಹಿಡಿದ ತಮ್ಮ ಅಧಿಕಾರಾವಧಿಯಲ್ಲಿ ದೇಶದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಹ ಅನೇಕ ಯೋಜನೆ ಆರಂಭಿಸಿ ಹೆಸರಾದವರು ವಾಜಪೇಯಿ. ಗ್ರಾಮಗಳೇ ಪ್ರಧಾನವಾಗಿರುವ ಈ ದೇಶದಲ್ಲಿನ ಕುಗ್ರಾಮಗಳು ಸಂಪರ್ಕ ರಸ್ತೆಯೇ ಇಲ್ಲದೆ ಅಭಿವೃದ್ಧಿಯಿಂದ ವಂಚಿತವಾಗಿದ್ದ ಆ ದಿನಗಳಲ್ಲಿ ‘ಗ್ರಾಮಗಳ ಅಭ್ಯುದಯಕ್ಕೆ ಅಗತ್ಯವಾದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂಬ ಆಲೋಚನೆ ಅವರಲ್ಲಿ ಮೂಡಿತು. ತಕ್ಷಣ ಅದಕ್ಕೆ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಮೀಸಲಿರಿಸಿ, ‘ಗ್ರಾಮೀಣ ಸಡಕ್‌ ಯೋಜನೆ’ಯನ್ನು ಫೋಷಿಸಿದರು. 

ಹೆದ್ದಾರಿಗಳ ಅಭಿವೃದ್ಧಿ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ‘ಗ್ರಾಮೀಣ ಸಡಕ್‌ ಯೋಜನೆ‘ ರೂಪಿಸಿದ ಬಳಿಕ, ವಾಜಪೇಯಿ ಅವರ ಚಿತ್ತ ದೇಶದ ರಾಷ್ಟ್ರೀಯ ಹೆದ್ದಾರಿಗಳತ್ತ ನೆಟ್ಟಿತು. ಹೆದ್ದಾರಿಗಳನ್ನು ನಾಲ್ಕು ಪಥ (ಚತುಷ್ಪಥ) ಮತ್ತು ಆರು ಪಥಗಳಾಗಿ (ಷಟ್ಪಥ) ಪರಿವರ್ತಿಸಿ ಅಭಿವೃದ್ಧಿ ಮಾಡುವ ಯೋಜನೆಗೆ ಚಾಲನೆ ನೀಡಿದರು. 2001–02ನೇ ಸಾಲಿನಲ್ಲಿ ಈ ಯೋಜನೆಗೆ ಚಾಲನೆ ದೊರೆತ ನಂತರದ ಐದಾರು ವರ್ಷಗಳಲ್ಲಿ ದೇಶದ ಬಹುತೇಕ ಹೆದ್ದಾರಿಗಳು ಅಭಿವೃದ್ಧಿಯಾಗಿ ಹೊಸ ರೂಪ ಪಡೆದವು. 

ಪ್ರಮುಖ ನಾಯಕರೊಂದಿಗೆ ವಾಜಪೇಯಿ 

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಗೂಢಚಾರಿಕೆ ನಡೆಸುತ್ತಿದ್ದ ಅಮೆರಿಕದ ಸ್ಯಾಟಲೈಟ್‌ ಕ್ಯಾಮೆರಾಗಳ ಕಣ್ತಪ್ಪಿಸಿ ಪೋಖ್ರಾನ್‌ ನೆಲದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಭಾರತದ ವಿಜ್ಞಾನಿಗಳು, ಯೋಧರು ಹಗಲಿರುಳು ಶ್ರಮಿಸುತ್ತಿದ್ದರು. ಈ ಮಹಾನ್‌ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯವಾಗಿತ್ತು. ಅತ್ಯಂತ ರಹಸ್ಯವಾಗಿ ನಡೆದ ಪೋಖ್ರಾನ್‌ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಪ್ರೇರಕ ಶಕ್ತಿಯಾಗಿ ನಿಂತರು. 
ರಾಜಸ್ಥಾನದ ಮರಳುಗಾಡಿನ ಬೇಸಿಗೆಯ ಅತ್ಯಂತ ಕಠಿಣ ಸಮಯ, 1998ರ ಮೇ 11ರಂದು ಮಧ್ಯಾಹ್ನ 3:45ಕ್ಕೆ ಅಣ್ವಸ್ತ್ರ ಸಾಧನ ಪರೀಕ್ಷೆ ಪೋಖ್ರಾನ್‌ ಭೂಗರ್ಭದಲ್ಲಿ ಯಶಸ್ವಿಯಾಗಿತ್ತು. 24 ವರ್ಷಗಳ ನಂತರ ಭಾರತ ಎರಡನೇ ಅಣ್ವಸ್ತ್ರ ಪರೀಕ್ಷೆಯಲ್ಲಿ ಗಳಿಸಿದ ಯಶಸ್ಸು ಕಂಡು ಅಮೆರಿಕ ಸೇರಿ ಹಲವು ರಾಷ್ಟ್ರಗಳು ನಿಬ್ಬೆರಗಾದವು.


ಅಣ್ವಸ್ತ್ರ ಪರೀಕ್ಷೆಗಳ ನಂತರ ಉಂಟಾಗಿದ್ದ ಕುಳಿ (ಮೊದಲ ಚಿತ್ರ). ಪರೀಕ್ಷೆಗೆ ಅಣ್ವಸ್ತ್ರವನ್ನು ಅಣಿಗೊಳಿಸುತ್ತಿರುವುದು (ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಟ್ವಿಟರ್ ಖಾತೆಯೆಂದ ತೆಗೆದುಕೊಂಡ ಚಿತ್ರಗಳು)

‘ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ’: ಕವಿ ಹೃದಯಿ

ಕವಿಯ ಆಸೆ ಸುತ್ತಲ ಮನುಷ್ಯರ ಜೊತೆ ಬೆರೆತು ಒಂದಾಗುವುದು. ಅವರ ಜೊತೆಜೊತೆ ನಡೆಯುವುದು, ಅವರ ಗುಂಪಿನಲ್ಲಿ ಕಳೆದು ಹೋಗುವುದು, ಮುಳುಗಿ ಹೋಗುವುದು; ಅಂಥ ಪ್ರಕ್ರಿಯೆಯಲ್ಲಿ ತನ್ನನ್ನು ತಾನೇ ಮರೆತು ತನ್ನ ಅಸ್ತಿತ್ವಕ್ಕೆ ಹೊಸ ಅರ್ಥವನ್ನೂ ಬದುಕಿಗೆ ಸುಗಂಧವನ್ನೂ ತರುವಂಥ ಮಹತ್ವಾಕಾಂಕ್ಷೆಯನ್ನು ಅಟಲ್‌ ಪ್ರಕಟಿಸುತ್ತಾರೆ. ಅವರು ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುವುದು ಹೀಗೆ;

ವಸಂತವೂ ಇರದ, ಶಿಶಿರವೂ ಬಾರದ
ಕೇವಲ ಎತ್ತರದ ಬಿರುಗಾಳಿಗಳ
ಏಕಾಂತದ ಶೂನ್ಯ
ನನ್ನ ಪ್ರಭೂ!
ನನಗೆಂದೂ ಕೊಡದಿರು ಇಂಥ ಎತ್ತರ
ನನ್ನವರ ಅಪ್ಪಿಕೊಳ್ಳಲಾಗದ
ದುಷ್ಟತೆಯ ನನಗೆಂದೆಂದೂ ಕೊಡದಿರು.

’ವಾಜಪೇಯಿ 31’ ಎಂಬ ಈ ಸಂಗ್ರಹದಲ್ಲಿ 31 ಕವಿತೆಗಳಿವೆ. ವೈಯಕ್ತಿಕ ಭಾವನೆಗಳನ್ನೇ ಸಣ್ಣ ಸಣ್ಣ ಪ್ರತಿಮೆಗಳ ಮೂಲಕ ಅಭಿವ್ಯಕ್ತಿಗೊಳಿಸುವ ಕವಿ ಅಟಲ್‌ ಸಮಕಾಲೀನ ವಸ್ತು–ಸಂಗತಿಗಳನ್ನು ತಮ್ಮ ಕಾವ್ಯದ್ರವ್ಯವನ್ನಾಗಿ ಮಾಡಿಕೊಂಡಿದ್ದಾರೆ. ಹರಿದ ತಂತಿಯಿಂದ ವಸಂತ ಸ್ವರ ಹರಿಸಿ, ಹೆಬ್ಬಂಡೆಯ ಎದೆಸೀಳಿ ಹೊಸ ಚಿಗುರನ್ನು ಮೊಳೆಯಿಸುವ, ಪೂರ್ವದಲ್ಲಿ ಅರುಣೋದಯ ರೇಖೆಯನ್ನು ಕಾಣುತ್ತಾ ಹೊಸ ಗೀತೆಯೊಂದನ್ನು ಹಾಡುವೆನು ಎನ್ನುವ ಕವಿ ಅಟಲ್‌ ಸೋಲೊಪ್ಪರಾಲೆ, ಹೊಸ ಗೀತೆಯ ಹಾಡುವೆ ಎನ್ನುತ್ತಾರೆ. ಮತ್ತೊಂದು ಕವಿತೆಯಲ್ಲಿ, ‘ನಾನು ಹಾಡುವುದಿಲ್ಲ’ ಎನ್ನುತ್ತಾರೆ.

‘ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ
ನಾನು ಹಾಡುವುದಿಲ್ಲ
.......
ಬಿಡುಗಡೆಯ ಗಳಿಗೆಯಲ್ಲಿ
ಬಂಧಿ ನಾನು ಮತ್ತೆ ಮತ್ತೆ
ನಾನು ಹಾಡುವುದಿಲ್ಲ’

–––
(ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ‘ಬಹುವಚನ’ (2005) ಪುಸ್ತಕದಲ್ಲಿ ಈ ಲೇಖನ ಪ್ರಕಟವಾಗಿದೆ)


ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಶೀಲಾ ದೀಕ್ಷಿತ್‌ ಅವರೊಂದಿಗೆ ವಾಜಪೇಯಿ

 

ವಾಜಪೇಯಿ ನಿಧನರಾದಾಗ ಗಣ್ಯರ ಮನದಾಳದ ಮಾತುಗಳು...

ವಾಜಪೇಯಿ ಶತ್ರುವನ್ನೂ ಟೀಕಿಸಿದವರಲ್ಲ: ಎಚ್‌.ಡಿ.ದೇವೇಗೌಡ

‘ರಾಜಕೀಯ ಜೀವನದಲ್ಲಿ ವಾಜಪೇಯಿ ಅವರು ಶತ್ರುವನ್ನೂ ಕಟುವಾದ ಶಬ್ಧದಿಂದ ಟೀಕಿಸಿದವರಲ್ಲ. ಅವರೊಬ್ಬ ಶ್ರೇಷ್ಠ ನಾಯಕ, ಸಂಸದೀಯ ಪಟು, ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿಯೂ ಆದ ಎಚ್‌.ಡಿ.ದೇವೇಗೌಡ ಅವರು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಂತಾಪ ಸೂಚಿಸಿದ್ದರು.


ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ವಾಜಪೇಯಿ

ವಾಜಪೇಯಿ ಅವರದು ಬಿಜೆಪಿ ಧ್ವನಿ ಮಾತ್ರವಾಗಿರಲಿಲ್ಲ, ಜನಸಾಮಾನ್ಯನ ಧ್ವನಿಯಾಗಿತ್ತು: ಮೋದಿ 

ವಾಜಪೇಯಿ ಅವರದು ಬಿಜೆಪಿ ಧ್ವನಿ ಮಾತ್ರವಾಗಿರಲಿಲ್ಲ. ಜನಸಾಮಾನ್ಯನ ಧ್ವನಿಯಾಗಿತ್ತು. ಅವರು ಮಾತನಾಡಿದರೆ ಇಡೀ ದೇಶವೇ ತದೇಕ ಚಿತ್ತದಿಂದ ಆಲಿಸುತ್ತಿತ್ತು. ವಾಜಪೇಯಿ ಇಡೀ ರಾಜಕೀಯ ಜೀವನವನ್ನು ವಿರೋಧ ಪಕ್ಷದಲ್ಲಿಯೇ ಕಳೆದರು. ಅಧಿಕಾರಕ್ಕಾಗಿ ಎಂದಿಗೂ ಹಪಾಹಪಿಸಲಿಲ್ಲ. ಅಧಿಕಾರಕ್ಕಾಗಿ ತತ್ವ, ಸಿದ್ಧಾಂತಗಳೊಂದಿಗೆ ರಾಜಿ ಆಗಲಿಲ್ಲ. ಸದಾ ದೇಶ ಮತ್ತು ದೇಶದ ಜನರಿಗಾಗಿ ಅವರು ಬದುಕಿದರು  ಎಂದು ಪ್ರಧಾನಿ ನರೇಂದ್ರ ಮೊದಿ ಬಣ್ಣಿಸಿದ್ದರು.


ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಲಾಗಿರುವ ‘ಸದೈವ ಅಟಲ್‌’ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಪುಷ್ಪನಮನ ಸಲ್ಲಿಸಿದ್ದರು.

ವಾಜಪೇಯಿ 94ನೇ ಜನ್ಮದಿನ: ‘ಸದೈವ ಅಟಲ್‌’ ಸ್ಮಾರಕ ಲೋಕಾರ್ಪಣೆ

ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನದ(ಡಿ.25) ಅಂಗವಾಗಿ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಲಾಗಿರುವ ‘ಸದೈವ ಅಟಲ್‌’ ಸ್ಮಾರಕವನ್ನು 2018ರ ಡಿ.25ರಂದು ಲೋಕಾರ್ಪಣೆ ಮಾಡಲಾಯಿತು. ಅಂದು ಈ ಸ್ಮಾರಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಕೇಂದ್ರ ಕೇಂದ್ರ ಲೋಕೋಪಯೋಗಿ ಇಲಾಖೆ 1.5 ಎಕರೆ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಿಸಿದೆ. ಈ ಯೋಜನೆಗೆ ಒಟ್ಟು ₹10.51 ಕೋಟಿ ವೆಚ್ಚವಾಗಿದೆ. ಅಟಲ್‌ ಸ್ಮೃತಿ ಸಮಿತಿ ನಿಧಿಯನ್ನು ಈ ಯೋಜನೆಗೆ ಬಳಸಲಾಗಿದೆ.


ವಾಜಪೇಯಿ ಸ್ಮರಣಾರ್ಥ ಬಿಡುಗಡೆ ಮಾಡಲಾದ ₹100ರ ನಾಣ್ಯ

ವಾಜಪೇಯಿ ಸ್ಮರಣಾರ್ಥ ₹100ರ ನಾಣ್ಯ ಬಿಡುಗಡೆ

ವಾಜಪೇಯಿ ಅವರ 94ನೇ ಜನ್ಮದಿನ(ಡಿ.25) ಮುನ್ನಾದಿನದಂದು 2018ರ ಡಿ.24ರಂದು ಅವರ ಸ್ಮರಣಾರ್ಥ ಹೊರತರಲಾದ ₹100 ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು.

ಈ ನಾಣ್ಯವನ್ನು ಬೆಳ್ಳಿ, ಕಂಚು, ನಿಕಲ್ ಮತ್ತು ಸತು (ಝಿಂಕ್) ನಿಂದ ತಯಾರಿಸಲಾಗಿದೆ. ಇದರ ತೂಕ 35 ಗ್ರಾಂ.  ಈ ನಾಣ್ಯದಲ್ಲಿ ಅಶೋಕ ಸ್ತಂಭದ ಮತ್ತು  ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೇ ಎಂದು  ಬರೆಯಲಾಗಿದೆ. ಎಡಭಾಗದಲ್ಲಿ ಭಾರತ್ ಎಂದು ಬರೆದಿದ್ದು, ಬಲಭಾಗದಲ್ಲಿ ಇಂಗ್ಲಿಷ್‍ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.

(ಮಾಹಿತಿ ಸಂಗ್ರಹ ಮತ್ತು ನಿರೂಪಣೆ: ಶಿವಕುಮಾರ ಜಿ.ಎನ್.)

 

ಇನ್ನಷ್ಟು...

ವಾಜಪೇಯಿಗೆ ಇತ್ತು ತುಮಕೂರಿನ ಗೆಳೆತನದ ನಂಟು

ಕವಿಹೃದಯದ ನೇತಾರ: ಮಾತಿನ ಸೊಗಸುಗಾರ

ಶ‍್ರೇಷ್ಠ ಮುತ್ಸದ್ದಿಗೆ ವಿದಾಯ: ‘ಉದಾರಹೃದಯಿ’ ಯುಗಾಂತ

‘ಚಿನ್ನದೂರಿನ’ ಜತೆ ‘ಅಟಲ್‌’ ನಂಟು

ಗೌಡಾಜೀ ಆಯಿಯೇ ಕುಛ್‌ ತೋ ಕರೇಂಗೆ...ದೇವೇಗೌಡರಿಗೆ ಅಟಲ್‌ಜೀ ಸ್ವಾಗತ ನುಡಿ

‘ಅಜಾತ ಶತ್ರು’ಗೆ ಉತ್ತರ ಕನ್ನಡದ ನಂಟು

ವಾಜಪೇಯಿ ನಿಧನಕ್ಕೆ ಸಿದ್ಧಗಂಗಾ ಶ್ರೀ ಸಂತಾಪ

ಸಂಸ್ಮರಣೆ | ಪರಿಸರ ಸ್ನೇಹಿಯೂ; ಆಕರ್ಷಕ ಗಣಪನೂ...! 

ಪಶ್ಚಿಮವಾಹಿನಿಯಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ

ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಗಾಂಧೀಜಿ, ವಾಜಪೇಯಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು