ಬಿಹಾರ: ಕಿರುಕುಳ ವಿರೋಧಿಸಿದ 34 ಬಾಲಕಿಯರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

7
ಕಸ್ತೂರಬಾ ವಸತಿ ಶಾಲೆಗೆ ನುಗ್ಗಿ ಥಳಿಸಿದ ಗೂಂಡಾಗಳು

ಬಿಹಾರ: ಕಿರುಕುಳ ವಿರೋಧಿಸಿದ 34 ಬಾಲಕಿಯರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

Published:
Updated:

ಪಟ್ನಾ: ಕಿರುಕುಳ ನೀಡುವುದನ್ನು ವಿರೋಧಿಸಿದ 34 ಬಾಲಕಿಯರ ಮೇಲೆ ಗೂಂಡಾಗಳ ಗುಂಪೊಂದು ಹಲ್ಲೆ ನಡೆಸಿದ ಅಮಾನವೀಯ ಘಟನೆ ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್‌ನಲ್ಲಿ ನಡೆದಿದೆ.

ಪಟ್ಟಣದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಬಾಲಕಿಯರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಕೆಲವು ಸ್ಥಳೀಯ ಯುವಕರು ಶಾಲೆ ಒಳಗೆ ನುಸುಳಲು ಯತ್ನಿಸಿದ್ದಾರೆ. ಅಲ್ಲದೇ, ಬಾಲಕಿಯರ ಕುರಿತಂತೆ ಶಾಲೆಯ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದಿದ್ದಾರೆ. ಈ ಕೃತ್ಯವನ್ನು ಪ್ರತಿಭಟಿಸಿದ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

ನಂತರ, ಬಾಲಕಿಯರು ಯುವಕರನ್ನು ಹಿಡಿದು, ಹೊಡೆದಾಗ, ಅವರು ಶಾಲೆಯಿಂದ ಕಾಲ್ಕಿತ್ತಿದ್ದಾರೆ. ಸುಮಾರು ಎರಡು ಗಂಟೆ ನಂತರ ತಮ್ಮ ಸ್ನೇಹಿತರು, ಸಂಬಂಧಿಗಳೊಂದಿಗೆ, ಬಡಿಗೆಗಳ ಸಮೇತ ಶಾಲೆಗೆ ನುಗ್ಗಿದ ಯುವಕರ ಗುಂಪು ಬಾಲಕಿಯರನ್ನು ಮನಬಂದಂತೆ ಥಳಿಸಿದೆ. ಇದಕ್ಕೆ ಪ್ರತಿರೋಧ ಒಡ್ಡಿದ ಶಿಕ್ಷಕರ ಮೇಲೂ ಗುಂಪು ಹಲ್ಲೆ ಮಾಡಿದೆ.

‘ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಹಲ್ಲೆಕೋರರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿ ವಿನಯಕುಮಾರ್‌ ತಿಳಿಸಿದ್ದಾರೆ.

‘ಇದು ಅತ್ಯಂತ ಖೇದದ ವಿಷಯ. ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಯಾರೊಬ್ಬರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಬೈದ್ಯನಾಥ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಅಸಮರ್ಥ ಮುಖ್ಯಮಂತ್ರಿ: ತೇಜಸ್ವಿ ಯಾದವ್ ಟೀಕೆ

ಹಲ್ಲೆ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾದ ನಂತರ ಮುಖ್ಯಮಂತ್ರಿಯ ಆಡಳಿತ ವೈಫಲ್ಯದ ವಿರುದ್ಧ ಹರಿಹಾಯ್ದ ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಸರಣಿ ಟ್ವೀಟ್‌ಗಳಲ್ಲಿ ಸರ್ಕಾರದ ಅಸಮರ್ಥತೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೇಜವಾಬ್ದಾರಿ ಆಡಳಿತವನ್ನು ಖಂಡಿಸಿದ್ದಾರೆ.

‘ಮುಖ್ಯಮಂತ್ರಿ ನಿತೀಶ್ ಕುಮಾರ್ ಗೂಂಡಾಗಳಿಗೆ ಶರಣಾಗಿದ್ದಾರೆ. ಅಪರಾಧಿಗಳ ಪರವಾಗಿ ಉಪಮುಖ್ಯಮಂತ್ರಿ ಲಾಬಿ ಮಾಡುತ್ತಿದ್ದಾರೆ. ಅತ್ಯಾಚಾರಿಗಳನ್ನು ಕಾಪಾಡಲು ಮುಖ್ಯಮಂತ್ರಿ ಸ್ವತಃ ಮಧ್ಯಪ್ರವೇಶಿಸುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯದ ಬಹುತೇಕ ಪ್ರಕರಣಗಳಲ್ಲಿ ಆಡಳಿತ ಪಕ್ಷದ ಸದಸ್ಯರೇ ಇರುತ್ತಾರೆ. ಪ್ರಾಮಾಣಿಕ ಅಧಿಕಾರಿಗಳು ಅಪರಾಧಿಗಳನ್ನು ಹಿಡಿಯಲು ಯತ್ನಿಸಿದರೆ ಅಂಥವರನ್ನು ವರ್ಗಾವಣೆ ಮಾಡಲಾಗುತ್ತದೆ’ ಎಂದು ಹರಿಹಾಯ್ದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !