ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬ್ಲ್ಯಾಕ್‌ಮೇಲ್‌ ತಂತ್ರ: ಮಮತಾ ಕಿಡಿ

ಕುಮಾರ್‌ ವಿರುದ್ಧ ಶಿಸ್ತುಕ್ರಮಕ್ಕೆ ಕೇಂದ್ರ ಸೂಚನೆ
Last Updated 5 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಕೋಲ್ಕತ್ತ:ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳನ್ನು ‘ಬ್ಲ್ಯಾಕ್‌ಮೇಲ್‌’ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಸಿಬಿಐ ವಿರುದ್ಧ ಭಾನುವಾರದಿಂದ ಆರಂಭಿಸಿದ್ದ ಮೂರು ದಿನಗಳ ಧರಣಿಯನ್ನು ಮಂಗಳವಾರ ಅಂತ್ಯಗೊಳಿಸಿ ಅವರು ಮಾತನಾಡಿದರು.

ಸಿಬಿಐ ಬಗ್ಗೆ ಅಪಾರವಾದ ಗೌರವವಿದೆ. ಆದರೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕಿದ್ದ ಸಿಬಿಐ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಅವರು ಆರೋಪಿಸಿದರು.

ರವೀಂದ್ರನಾಥ್‌ ಟಾಗೋರ್‌ ಅವರ ನೊಬೆಲ್‌ ಪದಕ ಕಳವಾಗಿ ವರ್ಷಗಳೇ ಉರುಳಿವೆ. ಅದನ್ನು ಪತ್ತೆ ಮಾಡಲು ಸಿಬಿಐನಿಂದಇನ್ನೂ ಸಾಧ್ಯವಾಗಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿ–ಶಾ ಜೋಡಿ ಸೂಚಿಸುವ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸುವ ರೀತಿಯಲ್ಲಿಯೇ ಟಾಗೋರ್‌ ನೊಬೆಲ್‌ ಪದಕದ ಪತ್ತೆಯನ್ನೂ ಚುರುಕುಗೊಳಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

2004ರಲ್ಲಿ ಶಾಂತಿನಿಕೇತನದಿಂದ ಟಾಗೊರ್‌ ಅವರ ನೊಬೆಲ್‌ ಪದಕ ಕಳುವಾಗಿದ್ದು, ಇನ್ನೂ ಪತ್ತೆಯಾಗಿಲ್ಲ.

ಮೋದಿ–ಶಾ ಜೋಡಿಯ ಬ್ಲ್ಯಾಕ್‌ಮೇಲ್‌ಗೆ ಹೆದರಿ ಅನೇಕ ನಾಯಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ ಬಳಿಕ ಅವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ ಎಂದರು.

ಬಿಜೆಪಿ ಸೇರಿದರೆ ಪ್ರಕರಣ ರದ್ದಾಗುತ್ತವೆ. ಸೇರದಿದ್ದರೆ ನಿಮ್ಮ ಮೇಲೆ ಸಿಬಿಐ, ಜಾರಿ ನಿರ್ದೇಶನಾಲಯ, ಐ.ಟಿ ದಾಳಿ ನಡೆಯುತ್ತವೆ ಎಂದು ಮಮತಾ ಕಿಡಿ ಕಾರಿದರು.

‘ನನ್ನದು ದೇಶದ ಕೋಟ್ಯಂತರ ಜನರ ಪರವಾದ ಹೋರಾಟವಾಗಿತ್ತೇ ಹೊರತು ರಾಜೀವ್‌ ಕುಮಾರ್‌ ಎಂಬ ಒಬ್ಬ ಅಧಿಕಾರಿ ಅಥವಾ ವ್ಯಕ್ತಿಯ ಪರವಾದ ಹೋರಾಟವಾಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡನೇ ದಿನದ ಕಲಾಪವೂ ವ್ಯರ್ಥ
ಎರಡನೇ ದಿನವೂ ಸಂಸತ್‌ ಉಭಯ ಸದನಗಳ ಕಲಾಪಗಳು ಸಿಬಿಐ–ಮಮತಾ ಬ್ಯಾನರ್ಜಿ ಸಂಘರ್ಷಕ್ಕೆ ಬಲಿಯಾದವು. ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಸಿಬಿಐಯನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಟಿಎಂಸಿ, ಕಾಂಗ್ರೆಸ್‌, ಸಮಾಜವಾದಿ ಪಕ್ಷದ ಸಂಸದರು ಸ್ಪೀಕರ್‌ ಪೀಠದ ಎದುರು ನುಗ್ಗಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಹಾಗೂ ಸಿಬಿಐ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಎರಡನೇ ದಿನವೂ ಯಾವುದೇ ಚರ್ಚೆ ನಡೆಯದೆ ವ್ಯರ್ಥವಾದವು.

ಶಿಸ್ತುಕ್ರಮಕ್ಕೆ ಕೇಂದ್ರ ಸೂಚನೆ

ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರು ಸೇವಾ ನಿಯಮಾವಳಿ ಉಲ್ಲಂಘಿಸುವ ಮೂಲಕ ಅಶಿಸ್ತು ತೋರಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೆಚ್ಚಿನ ಅಧಿಕಾರಿ ಎಂದೇ ಪರಿಗಣಿತವಾಗಿರುವ ರಾಜೀವ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸೂಚಿಸಿರುವುದು ಕೇಂದ್ರ ಮತ್ತು ರಾಜ್ಯದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಕೋಲ್ಕತ್ತದಲ್ಲಿ ನಡೆಸುತ್ತಿದ್ದ ಧರಣಿಯನ್ನು ಹಿಂದಕ್ಕೆ ಪಡೆದಿದ್ದರೂ ಹೋರಾಟವನ್ನು ದೆಹಲಿಯಲ್ಲಿ ಮುಂದುವರಿಸಲಾಗುವುದು ಎಂದು ಮಮತಾ ಹೇಳಿರುವುದು ಸಂಘರ್ಷ ಮುಂದುವರಿಯಲಿದೆ ಎಂಬುದರ ಸೂಚನೆ ಎಂದು ವಿಶ್ಲೇಷಿಸಲಾಗಿದೆ.

ರಾಜೀವ್‌ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಮಮತಾ ಬ್ಯಾನರ್ಜಿ ಅವರ ಜತೆ ಧರಣಿ ಕುಳಿತ ರಾಜೀವ್‌ ಕುಮಾರ್‌ ಅವರು ಪೊಲೀಸ್‌ ಸೇವಾ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ. ರಾಜೀವ್‌ ಕುಮಾರ್‌ ಅಶಿಸ್ತಿನ ವರ್ತನೆಯ ವಿರುದ್ಧ ಶಿಸ್ತುಕ್ರಮ ಜರುಗಿಸಿದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

***

ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಇದು ಕಪಾಳಮೋಕ್ಷ
–ಬಿಜೆಪಿ

**

ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಅವರ ಧರಣಿ ಅತಿರೇಕರ ಪ್ರತಿಕ್ರಿಯೆ. ಭಾರತದ ಅಧಿಕಾರ ಮರಳಿ ಪಡೆಯಲು ಹವಣಿಸುತ್ತಿರುವ ‘ಭ್ರಷ್ಟರ ಕೂಟ’ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದೆ
- ಅರುಣ್ ಜೇಟ್ಲಿ, ಕೇಂದ್ರ ಸಚಿವ

**

ಮಮತಾ ಬ್ಯಾನರ್ಜಿ ನಾಟಕವಾಡುವುದರಲ್ಲಿ ನಿಸ್ಸೀಮರು. ರಾಜಕೀಯ ವಿರೋಧಿಗಳಿಗೆ ಬಿಸಿ ಮುಟ್ಟಿಸಲು ಅವರು ಈ ನಾಟಕವಾಡುತ್ತಿದ್ದಾರೆ
- ಗಿರಿರಾಜ್‌ ಸಿಂಗ್‌, ಕೇಂದ್ರ ಸಚಿವ

**

ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ವ್ಯವಸ್ಥಿತವಾಗಿ ಗೊಂದಲ ಸೃಷ್ಟಿಸುತ್ತಿದೆ. ಕೋಲ್ಕತ್ತದಲ್ಲಿ ನಡೆದ ಬೆಳವಣಿಗೆ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ
- ಉದ್ಧವ್‌ ಠಾಕ್ರೆ, ಶಿವ ಸೇನಾ ನಾಯಕ

**

ಸಿಬಿಐ ಎದುರು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ಜಯ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು.
- ವಿಜಯವರ್ಗೀಯ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

**

ಲೋಕಸಭಾ ಚುನಾವಣೆ ಬಳಿಕ ಟಿಎಂಸಿ ಬೆಂಬಲಕ್ಕೆ ನಿಂತಿರುವ 23 ವಿರೋಧ ಪಕ್ಷಗಳಿಂದ ಮೋದಿ ಬೆಂಬಲ ಕೋರಬಾರದು
- ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ಸುಪ್ರೀಂ ಕೋರ್ಟ್ ಹೇಳಿದ್ದೇನು?
* ಮೇಘಾಲಯದ ಶಿಲಾಂಗ್‌ನಲ್ಲಿ ನಡೆಯಲಿರುವ ಸಿಬಿಐ ವಿಚಾರಣೆಗೆ ಕೋಲ್ಕತ್ತ ನಗರ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಹಾಜರಾಗಬೇಕು

* ತನಿಖೆ ವೇಳೆ ಬಂಧನ ಸೇರಿದಂತೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದಂತೆ ತಾಕೀತು

* ಸಿಬಿಐ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಫೆಬ್ರುವರಿ 18ರ ಒಳಗಾಗಿ ಉತ್ತರಿಸುವಂತೆ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮುಖಸ್ಥ (ಡಿಜಿಪಿ) ಮತ್ತು ಕೋಲ್ಕತ್ತ ಪೊಲೀಸ್‌ ಕಮಿಷನರ್‌ಗೆ ನಿರ್ದೇಶನ

* ಮೂವರು ನೀಡುವ ಉತ್ತರದ ಆಧಾರದಲ್ಲಿ ಫೆಬ್ರುವರಿ 20ರಂದು ನಡೆಯಲಿರುವ ವಿಚಾರಣೆಗೆ ಖುದ್ದು ಹಾಜರಾತಿ ಬಗ್ಗೆ ಕೋರ್ಟ್ ನಿರ್ಣಯ

* ನ್ಯಾಯಾಲಯಕ್ಕೆ ಖುದ್ದು ಹಾಜರಾತಿ ಬಗ್ಗೆ ಫೆ.19ರಂದು ಮೂವರಿಗೂ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್‌ ಅವರಿಂದ ಮಾಹಿತಿ
**

ಎರಡನೇ ದಿನದ ಕಲಾಪವೂ ವ್ಯರ್ಥ
ಎರಡನೇ ದಿನವೂ ಸಂಸತ್‌ ಉಭಯ ಸದನಗಳ ಕಲಾಪಗಳು ಸಿಬಿಐ–ಮಮತಾ ಬ್ಯಾನರ್ಜಿ ಸಂಘರ್ಷಕ್ಕೆ ಬಲಿಯಾದವು.

ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಸಿಬಿಐಯನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಟಿಎಂಸಿ, ಕಾಂಗ್ರೆಸ್‌, ಸಮಾಜವಾದಿ ಪಕ್ಷದ ಸಂಸದರು ಸ್ಪೀಕರ್‌ ಪೀಠದ ಎದುರು ನುಗ್ಗಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಹಾಗೂ ಸಿಬಿಐ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಎರಡನೇ ದಿನವೂ ಯಾವುದೇ ಚರ್ಚೆ ನಡೆಯದೆ ವ್ಯರ್ಥವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT