ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ನಿರ್ಮಾಣಕ್ಕೆ ಖಾಸಗಿ ಮಸೂದೆ: ಬಿಜೆಪಿ ಸಂಸದ ರಾಕೇಶ್‌ ಸಿನ್ಹಾ ಪ್ರಸ್ತಾವ

Last Updated 1 ನವೆಂಬರ್ 2018, 16:22 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸುವ ಬಗ್ಗೆ ಬಿಜೆಪಿ ರಾಜ್ಯಸಭೆ ಸದಸ್ಯ ರಾಕೇಶ್‌ ಸಿನ್ಹಾ ಪ್ರಸ್ತಾಪಿಸಿದ್ದಾರೆ.

ಈ ವಿಷಯ ಕುರಿತು ಕಾಂಗ್ರೆಸ್‌, ಎಡ ಮತ್ತು ಇತರೆ ವಿರೋಧ ಪಕ್ಷಗಳಿಗೆ ಸವಾಲು ಹಾಕಿರುವ ಅವರು, ಈ ಪಕ್ಷಗಳ ನಾಯಕರು ರಾಜ್ಯಸಭೆಯಲ್ಲಿ ಮಂಡಿಸಲುದ್ದೇಶಿಸಿರುವ ಖಾಸಗಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಗಾಂಧಿ, ಸಿತಾರಾಂ ಯಚೂರಿ, ಲಾಲುಪ್ರಸಾದ್‌, ಮಾಯಾವತಿ ಅವರು ಖಾಸಗಿ ಮಸೂದೆ ಬೆಂಬಲಿಸುವರೇ? ಅವರಿಂದ ಉತ್ತರ ನಿರೀಕ್ಷಿಸಲಾಗುತ್ತಿದೆ ಎಂದು ಸಿನ್ಹಾ ಅವರು ಗುರುವಾರ ಟ್ವೀಟ್‌ ಮಾಡಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಅಯೋಧ್ಯೆಯಲ್ಲಿನ ವಿವಾದಾತ್ಮಕ ಸ್ಥಳದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ನಡೆದಿರುವ ಚರ್ಚೆಗೆ ಸಿನ್ಹಾ ಅವರ ಪ್ರಸ್ತಾವ ಮತ್ತಷ್ಟು ಕಾವು ನೀಡುವ ಸಾಧ್ಯತೆ ಇದೆ.

ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ನಿವೇಶನ ವಿವಾದವು ತನ್ನ ಆದ್ಯತೆ ಅಲ್ಲ. 2019ರ ಜನವರಿ ಮೊದಲ ವಾರದಲ್ಲಿ ಸೂಕ್ತ ಪೀಠವು ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದೆ. ಆದರೆ, ಸಂಘ ಪರಿವಾರ ಚಳಿಗಾಲದ ಅಧಿವೇಶನದಲ್ಲಿ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಅಥವಾ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದೆ.

ಬಿಜೆಪಿ, ಸಂಘ ಪರಿವಾರದ ಹಲವು ಮುಖಂಡರ ಆಗ್ರಹದಂತೆ ಸುಗ್ರೀವಾಜ್ಞೆ ಹೊರಡಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಪಕ್ಷ ಇತ್ತೀಚೆಗೆ ಸವಾಲು ಹಾಕಿತ್ತು.

‘ಯಾವುದೇ ವಿಷಯಕ್ಕಾದರೂ ಪ್ರಧಾನಿ ಪ್ರತಿಕ್ರಿಯೆ ನೀಡುತ್ತಾರೆ ಎಂದಾದರೆ ಸುಗ್ರೀವಾಜ್ಞೆಯ ಬೇಡಿಕೆಗೂ ಅವರೇ ಪ್ರತಿಕ್ರಿಯೆ ನೀಡಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗೆ ಮೊದಲು ಈ ವಿಚಾರವನ್ನು ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸುವುದು ಹೊಸದೇನೂ ಅಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಇತ್ತೀಚೆಗೆ ಹೇಳಿದ್ದರು.

ಮಂದಿರ ಪರ ನಿಂತ ಮುಲಾಯಂ ಸೊಸೆ

ಲಖನೌ (ಪಿಟಿಐ): ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಈ ಕುರಿತು ಸುಪ್ರೀಂ ಕೋರ್ಟ್‌ನಿಂದ ಸೂಕ್ತ ನ್ಯಾಯ ದೊರಕಲಿದೆ ಎಂಬ ವಿಶ್ವಾಸವಿದೆ’ ಎಂದು ಸಮಾಜವಾದಿ ಪಾರ್ಟಿ (ಎಸ್‌ಪಿ) ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್‌ ಹೇಳಿದ್ದಾರೆ.

‘ರಾಮಾಯಣದಲ್ಲಿ ರಾಮನ ಜನ್ಮಸ್ಥಳ ಅಯೋಧ್ಯೆ ಎಂದು ಹೇಳಲಾಗಿದೆ. ಆದ್ದರಿಂದ ರಾಮಮಂದಿರ ನಿರ್ಮಾಣವಾಗಲೇಬೇಕು. ನಾನು ಬಿಜೆಪಿ ಜೊತೆಗಿಲ್ಲ, ಆದರೆ ರಾಮದೇವರ ಜೊತೆಗಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಮುಲಾಯಂ ಪುತ್ರ ಪ್ರತೀಕ್‌ ಅವರ ಪತ್ನಿ ಅಪರ್ಣಾ ಅವರು 2017ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಸದ್ಯ ಶಿವಪಾಲ್‌ ಸಿಂಗ್‌ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ ಲೋಹಿಯಾ (ಪಿಎಸ್‌ಪಿಎಲ್‌) ಸೇರಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ರಾಮನ ನೆನಪಿನಲ್ಲಿ ಅದ್ದೂರಿ ದೀಪಾವಳಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದೇವಸ್ಥಾನಗಳ ಪಟ್ಟಣಕ್ಕೆ ‘ವಿಶೇಷ ಕೊಡುಗೆ’ ನೀಡುವುದಾಗಿ ಪ್ರಕಟಿಸಿರುವುದುಅಯೋಧ್ಯೆಯಲ್ಲಿ ಈ ವರ್ಷ ಅದ್ದೂರಿ ದೀಪಾವಳಿ ಆಚರಣೆಯ ಸುಳಿವು ಕೊಟ್ಟಿದೆ.

ರಾಮಮಂದಿರ ನಿರ್ಮಾಣ ಕುರಿತು ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು ಎಂಬ ಬಿಜೆಪಿಯ ಕೆಲವು ನಾಯಕರು ಹಾಗೂ ಸಂಘ ಪರಿವಾರದ ಒತ್ತಾಯದ ನಡುವೆಯೇ ಆದಿತ್ಯನಾಥ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಯೋಧ್ಯೆಯಲ್ಲಿನ ಗೋಡೆಗಳ ಮೇಲೆ ರಾಮಾಯಣದಲ್ಲಿರುವ ರಾಮನ ಜೀವನ ಹಾಗೂ ಅವನ ಕಾರ್ಯಗಳನ್ನು ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ದೇಶ, ವಿದೇಶಗಳಿಂದ ಬರುವ ಭಕ್ತರನ್ನು ಸ್ವಾಗತಿಸಲು ಸ್ವಾಗತ ಕಮಾನುಗಳನ್ನು ಹಾಕಲಾಗುತ್ತಿದೆ.ಮೂರು ಲಕ್ಷಕ್ಕಿಂತ ಹೆಚ್ಚು ಹಣತೆಗಳ ಮೂಲಕ ದೀಪಾಲಂಕಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಹಿಂದೂ ಪುರಾಣದ ಪ್ರಕಾರ, ರಾವಣನನ್ನು ಸೋಲಿಸಿದ ನಂತರ ದೀಪಾವಳಿ ಸಂದರ್ಭದಲ್ಲಿ ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಜೊತೆಗೆ ರಾಮ ಅಯೋಧ್ಯೆಗೆ ಹಿಂದಿರುಗಿದ್ದ. ಆ ಸಂದರ್ಭದಲ್ಲಿ ರಾಮನನ್ನು ಸ್ವಾಗತಿಸಿದ ಮಾದರಿಯಲ್ಲಿಯೇ ಈ ಬಾರಿಯೂ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ರಾಮ ಮಂದಿರ ನಿರ್ಮಾಣಕ್ಕಾಗಿ ಕಾನೂನು ರೂಪಿಸುವ ಬೇಡಿಕೆಗೆ ಆದಿತ್ಯನಾಥ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಹಿರಿಯ ಸ್ವಾಮೀಜಿಯೊಬ್ಬರು ಹೇಳಿದ್ದಾರೆ.

‘ರಾಮಮಂದಿರ ಆಗದಿದ್ದರೆ ಬಿಜೆಪಿಗೆ ಎರಡೇ ಸ್ಥಾನಗಳು’

ಮುಂಬೈ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆ ಹುಸಿಯಾದರೆ ಲೋಕಸಭೆಯಲ್ಲಿ ಬಿಜೆಪಿ 280 ಸ್ಥಾನದಿಂದ ಎರಡು ಸ್ಥಾನಕ್ಕೆ ಕುಸಿಯಲಿದೆ’ ಎಂದು ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಹೇಳಿದರು.

‘ಅಧಿಕಾರ ಹಿಡಿಯುವುದಕ್ಕಾಗಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿದ್ದ ಇಟ್ಟಿಗೆಗಳನ್ನು ಬಿಜೆಪಿ ಮೆಟ್ಟಿಲು ಮಾಡಿಕೊಂಡಿತ್ತು’ಎಂದು ರಾಯಗಡ ಜಿಲ್ಲೆಯ ಮಹಾಡ್‌ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಆಪಾದಿಸಿದರು.

2014ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಇತರೆ ಪಕ್ಷಗಳಿಗಿಂತ ಹೆಚ್ಚಿನ ಭರವಸೆಗಳನ್ನು ನೀಡಿತ್ತು. ಆದರೆ, ಅವೆಲ್ಲವೂ ಆಕರ್ಷಕ ಮಾತುಗಳಾಗಿಯೇ ಉಳಿದಿದ್ದು, ಹುಸಿಯಾಗಿವೆ. ಇದರ ಪರಿಣಾಮ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT