ಗುರುವಾರ , ಡಿಸೆಂಬರ್ 12, 2019
25 °C

ಕಾಂಗ್ರೆಸ್, ಎಐಎಂಐಎಂ ಹೊರತುಪಡಿಸಿ ಯಾವುದೇ ಪಕ್ಷದ ಜೊತೆ ಮೈತ್ರಿಗೆ ಸಿದ್ಧ: ಬಿಜೆಪಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲಂಗಾಣ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷ ಬಹುಮತ ಸಾಧಿಸಲು ವಿಫಲವಾದರೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತೆಲಂಗಾಣ ಬಿಜೆಪಿ ಘಟಕದ ಮುಖ್ಯಸ್ಥ ಡಾ. ಕೆ.ಲಕ್ಷ್ಮಣ್‌ ಹೇಳಿದ್ದಾರೆ.

ಬಿಜೆಪಿಯ ಹಾಲಿ ಶಾಸಕರೂ ಆಗಿರುವ ಲಕ್ಷ್ಮಣ್‌, ‘ನಾವು ಖಂಡಿತಾ ಅಧಿಕಾರದಲ್ಲಿರಲಿದ್ದೇವೆ. ನಾವು ಅಧಿಕಾರಕ್ಕಾರಕ್ಕೇರಲು ಸಾರ್ವಜನಿಕರು ಮತ ನೀಡದಿದ್ದರೆ, ಕಾಂಗ್ರೆಸ್‌ ಹಾಗೂ ಎಐಎಂಐಎಂ ಹೊರತುಪಡಿಸಿ ಯಾವುದೇ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುವುದು. ಫಲಿತಾಂಶ ಪ್ರಕಟಗೊಂಡ ಬಳಿಕ ಹೈಕಮಾಂಡ್‌ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಬಿಜೆಪಿಯು ಖಂಡಿತ ಸರ್ಕಾರದ ಭಾಗವಾಗಿರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ‘ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದ ಸಾವಿರಾರು ಜನರ ಮನಸ್ಥಿತಿಯನ್ನು ಗಮನಿಸಿದರೆ, ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷವು ಬಿಜೆಪಿಗಿಂತ ಹೆಚ್ಚು ಸ್ಥಾನ ಗಳಿಸುವುದಿಲ್ಲ’ ಎಂದು ಭವಿಷ್ಯ ನುಡಿದರು.

ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್‌) ವಕ‌್ತಾರ ಭಾನು ಪ್ರಕಾಶ್‌ ಇದಕ್ಕೆ ಪ್ರತಿಕ್ರಿಯಿಸಿದ್ದು, ‘ನಮಗೆ ಯಾವುದೇ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಅಗತ್ಯ ಬಹುಮತ ಪಡೆದು ಸ್ವಂತ ಬಲದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ತೆಲಂಗಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜಿ.ಎನ್‌.ರೆಡ್ಡಿಯವರೂ ಮೈತ್ರಿ ಕುರಿತ ಮಾತುಗಳನ್ನಾಡಿದ್ದಾರೆ. ಎಐಎಂಐಎಂ ಪಕ್ಷವು ನಮ್ಮೊಡನೆ ಕೈಜೋಡಿಸಲು ಬಯಸಿದೆ. ನಾವೂ ಸಿದ್ಧರಿದ್ದೇವೆ ಎಂದಿದ್ದಾರೆ.

‘ನಮ್ಮ ದೇಶದಲ್ಲಿ ಯಾವ ಪಕ್ಷವೂ ಶಾಶ್ವತ ಶತ್ರುವಲ್ಲ ಅಥವಾ ಮಿತ್ರ ಪಕ್ಷವೂ ಅಲ್ಲ. ನಾವು ಪರಿಸ್ಥಿತಿಯನ್ನು ಗಮನಿಸಿ ಮೈತ್ರಿ ನಿರ್ಧಾರ ಕೈಗೊಳ್ಳಲಿದ್ದೇವೆ. ಟಿಆರ್‌ಎಸ್‌ ಬಿಜೆಪಿ ಜೊತೆ ಕೈಜೋಡಿಸಿದರೆ, ಎಐಎಂಐಎಂ ನಮ್ಮೊಡನೆ ಬರಬಹುದು’ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು