ದಲಿತರ ಕೇರಿಯಲ್ಲಿ ‘ಭೋಜನಕೂಟ’: ಬಿಜೆಪಿ ತಂತ್ರ

7
ಬಿಎಸ್‌ಪಿ, ಎಸ್‌ಪಿ ಮೈತ್ರಿಕೂಟಕ್ಕೆ ತಿರುಗೇಟು ನೀಡುವ ಯೋಚನೆ

ದಲಿತರ ಕೇರಿಯಲ್ಲಿ ‘ಭೋಜನಕೂಟ’: ಬಿಜೆಪಿ ತಂತ್ರ

Published:
Updated:

ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಹಾಗೂ ಎಸ್‌ಪಿ ಮೈತ್ರಿಕೂಟಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ರಾಜ್ಯದ ದಲಿತರ ಓಲೈಕೆಗೆ ಭೋಜನಕೂಟದ ಮೊರೆ ಹೋಗಿದೆ.

ಪರಿಶಿಷ್ಟ ಜಾತಿಯ ಜನರನ್ನು ಸೆಳೆಯುವ ಉದ್ದೇಶದಿಂದ ಉತ್ತರ ಪ್ರದೇಶದ ವಿವಿಧ ಭಾಗಗಳ ದಲಿತ ಕೇರಿಗಳಲ್ಲಿ ಮಂಗಳವಾರ ಸಾಮೂಹಿಕ ಭೋಜನಕೂಟವನ್ನು ಬಿಜೆಪಿ ಏರ್ಪಡಿಸಿತ್ತು.

ರಾಜ್ಯದ ಎಲ್ಲ ಪಟ್ಟಣಗಳಲ್ಲೂ ಇಂತಹ ಭೋಜನ ಕೂಟಗಳು ಇಡೀ ತಿಂಗಳು ನಡೆಯಲಿವೆ ಎಂದು ಬಿಜೆಪಿ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ. 

ದಲಿತರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಕೊಡುಗೆಗಳನ್ನು ಆ ಸಮುದಾಯದ ಜನರಿಗೆ ತಲುಪಿಸುವ ಹೊಣೆಯನ್ನು ಪಕ್ಷದ ದಲಿತ ನಾಯಕರಿಗೆ ನೀಡಲಾಗಿದೆ.

ಬಿಜೆಪಿಯು ದಲಿತ ವಿರೋಧಿ ಎಂದು ಹಣೆಪಟ್ಟಿ ಕಟ್ಟಿರುವ ಬಿಎಸ್‌ಪಿ ಹಾಗೂ ದಲಿತ ಸಂಘಟನೆಗಳಿಗೆ ತಿರುಗೇಟು ನೀಡಲು ಈ ವೇದಿಕೆಗಳನ್ನು ಬಳಸಿಕೊಳ್ಳಲು ಪಕ್ಷ ನಿರ್ಧರಿಸಿದೆ. 

**

ಸಂಬಂಧ ಮೊದಲಿನಂತಿಲ್ಲ!
ಠಾಕೂರ್ ಹಾಗೂ ದಲಿತ ಸಮುದಾಯಗಳ ನಡುವೆ ರಾಜ್ಯದ ಕೆಲವು ಕಡೆ ನಡೆದ ಘರ್ಷಣೆಗಳು ಹಾಗೂ ಭೀಮಸೇನೆ ಸಂಸ್ಥಾಪಕ ಚಂದ್ರಶೇಖರ್ ಬಂಧನವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅವಧಿಯಲ್ಲಿ ಜರುಗಿದವು. ಇವು ದಲಿತ ಸಮುದಾಯದಲ್ಲಿ  ಬಿಜೆಪಿ ಬಗ್ಗೆ ಅಸಮಾಧಾನ ಹುಟ್ಟುಹಾಕಿವೆ ಎಂಬುದನ್ನು ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಾರೆ.

2014ರ ಲೋಕಸಭೆ ಹಾಗೂ 2017ರ ವಿಧಾನಸಭೆ ಚುನಾವಣೆಗಳಲ್ಲಿ ದಲಿತ ಸಮುದಾಯವು ಬಿಜೆಪಿ ಕೈಹಿಡಿದಿತ್ತು. ಲೋಕಸಭೆ ಚುನಾವಣೆಯಲ್ಲಿ ಎಲ್ಲ 17 ಮೀಸಲು ಕ್ಷೇತ್ರಗಳನ್ನು ಅದು ಗೆದ್ದುಕೊಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ 86ರ ಪೈಕಿ 76 ಮೀಸಲು ಕ್ಷೇತ್ರಗಳಲ್ಲಿ ಕಮಲ ಪಕ್ಷದ ಶಾಸಕರು ಆರಿಸಿಬಂದಿದ್ದರು. 

ಆದರೆ 2017ರ ಬಳಿಕ ಪರಿಸ್ಥಿತಿ ಬದಲಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಡುತ್ತಾರೆ. 

ಎಸ್‌ಸಿ ಸಮುದಾಯದ ಬೆಂಬಲವನ್ನು ಬಿಎಸ್‌ಪಿ ಮತ್ತೆ ಪಡೆದುಕೊಂಡರೆ ಮತಬ್ಯಾಂಕ್‌ ಕತೆ ಏನು ಎಂಬುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಮರಳಿ ವಿಶ್ವಾಸ ಗಳಿಸಲು ಬಿಜೆಪಿ ಹಮ್ಮಿಕೊಂಡಿರುವ ‘ಭೋಜನ ರಾಜಕೀಯ’ ಪಕ್ಷಕ್ಕೆ ಲಾಭ ತಂದುಕೊಡಲಿದೆಯಾ ಎಂಬುದು ಈಗಿರುವ ಪ್ರಶ್ನೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 8

  Angry

Comments:

0 comments

Write the first review for this !