ಭಾನುವಾರ, ಸೆಪ್ಟೆಂಬರ್ 26, 2021
21 °C
ಮೂರು ಸಂಸ್ಥೆಗಳ ಅಧ್ಯಯನ ಆಧರಿಸಿ ಸ್ಥಾಯಿಸಮಿತಿ ವರದಿ; ಅಧ್ಯಯನ ವಿಧಾನಗಳಲ್ಲಿ ಏಕರೂಪತೆ ಇಲ್ಲ

ಭಾರತದ ₹34 ಲಕ್ಷ ಕೋಟಿ ಕಪ್ಪುಹಣ ವಿದೇಶದಲ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): 1980ರಿಂದ 2010ರ ಅವಧಿಯಲ್ಲಿ ಭಾರತದಿಂದ ವಿದೇಶಗಳಿಗೆ ರವಾನೆಯಾಗಿರುವ ಕಪ್ಪುಹಣದ ಮೊತ್ತ ₹15.15 ಲಕ್ಷ ಕೋಟಿಯಿಂದ ₹34.3 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ. 

ಮೂರು ಪ್ರತ್ಯೇಕ ಸಂಸ್ಥೆಗಳು ನಡೆಸಿದ ಅಧ್ಯಯನಗಳಲ್ಲಿ ಈ ಮಾಹಿತಿ ದಾಖಲಾಗಿದ್ದು, ಹಣಕಾಸು ಕುರಿತ ಸ್ಥಾಯಿಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. 

ಎಂ.ವೀರಪ್ಪ ಮೊಯಿಲಿ ನೇತೃತ್ವದ ಸಂಸದೀಯ ಸಮಿತಿಯು ವರದಿಯನ್ನು ಹಿಂದಿನ ಲೋಕಸಭೆ ಸ್ಪೀಕರ್‌ಗೆ ಮಾರ್ಚ್ 28ರಂದು ಸಲ್ಲಿಸಿತ್ತು. 

ರಿಯಲ್ ಎಸ್ಟೇಟ್, ಗಣಿಗಾರಿಕೆ, ಔಷಧ, ಪಾನ್ ಮಸಾಲಾ, ಗುಟ್ಕಾ, ತಂಬಾಕು, ಷೇರುಪೇಟೆ, ಸಿನಿಮಾ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ದಾಖಲೆಯಿಲ್ಲದ ಸಂಪತ್ತು ವಿದೇಶಗಳಿಗೆ ಹರಿದಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. 

‘ದಾಖಲೆಯಿಲ್ಲದ ಸಂಪತ್ತಿನ ಸ್ಥಿತಿಗತಿ: ಒಂದು ವಿಶ್ಲೇಷಣೆ’ ಹೆಸರಿನ ವರದಿಯಲ್ಲಿ ಕಪ್ಪುಹಣ ಕ್ರೋಡೀಕರಣವನ್ನು ಅಳತೆ ಮಾಡುವ ಯಾವುದೇ ವಿಶ್ವಾಸಾರ್ಹ ಹಾಗೂ ನಿಖರ ವಿಧಾನಗಳು ಇಲ್ಲ ಎಂದು ತಿಳಿಸಿದೆ.

ಎಲ್ಲ ಅಂದಾಜುಗಳೂ ಊಹೆಯ ಮೇಲೆ ನಿಂತಿವೆ. ಅಧ್ಯಯನದ ಉದ್ದೇಶಕ್ಕಾಗಿ ಬಳಸಿದ ಯಾವುದೇ ವಿಧಾನಗಳು ಏಕರೂಪವಾಗಿಲ್ಲ ಹಾಗೂ ಯಾವುದೇ ಅಂದಾಜುಗಳಲ್ಲಿ ಒಮ್ಮತವೂ ಇಲ್ಲ ಎಂದು ವರದಿ ತಿಳಿಸಿದೆ.

ಇದು ಪ್ರಾಥಮಿಕ ವರದಿ: ಹೈದರಾಬಾದ್ ವರದಿ: ಇನ್ನಷ್ಟು ಸಮಯ ಸಿಕ್ಕಿದ್ದರೆ ಸ್ಥಾಯಿ ಸಮಿತಿಯು ಕಪ್ಪುಹಣದ ಪ್ರಮಾಣವನ್ನು ನಿರ್ಧರಿಸುತ್ತಿತ್ತು ಎಂದು ವೀರಪ್ಪ ಮೊಯಿಲಿ ಪ್ರತಿಕ್ರಿಯಿಸಿದ್ದಾರೆ. 

ಇದು ಪ್ರಾಥಮಿಕ ವರದಿ: ಮೊಯಿಲಿ

ಹೈದರಾಬಾದ್ ವರದಿ: ಇನ್ನಷ್ಟು ಸಮಯ ಸಿಕ್ಕಿದ್ದರೆ ಸ್ಥಾಯಿ ಸಮಿತಿಯು ಕಪ್ಪುಹಣದ ಪ್ರಮಾಣವನ್ನು ನಿರ್ಧರಿಸುತ್ತಿತ್ತು ಎಂದು ವೀರಪ್ಪ ಮೊಯಿಲಿ ಪ್ರತಿಕ್ರಿಯಿಸಿದ್ದಾರೆ. 

‘ಇದು ಪ್ರಾಥಮಿಕ ವರದಿ ಮಾತ್ರ. ಸಮಯದ ಅಭಾವದಿಂದಾಗಿ ವಿಸ್ತೃತ ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ. 

‘ವರದಿಯ ಪರಿಶೀಲನೆಯು ಈಗಿನ ಲೋಕಸಭೆಯ ಹಣಕಾಸು ಸಮಿತಿಗೆ ಸಂಬಂಧಪಟ್ಟ ವಿಚಾರ. ಕಪ್ಪುಹಣದ ಪ್ರಮಾಣವನ್ನು ನಿರ್ಧರಿಸುವುದು ಕಷ್ಟವೇನಲ್ಲ’ ಎಂದು ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ. 

ಮೂರು ವರದಿಗಳ ಮೂರು ಅಂದಾಜುಗಳು

* ಅನ್ವಯಿಕ ಆರ್ಥಿಕ ಸಂಶೋಧನೆಯ ರಾಷ್ಟ್ರೀಯ ಮಂಡಳಿ (ಎನ್‌ಸಿಎಇಆರ್‌) ಅಧ್ಯಯನದ ಪ್ರಕಾರ 1980–2010ರ ಅವಧಿಯಲ್ಲಿ ಭಾರತದ ಹೊರಗೆ ಸಂಗ್ರಹವಾಗಿರುವ ದಾಖಲೆರಹಿತ ಸಂಪತ್ತಿನ ಮೌಲ್ಯ ₹26.8 ಲಕ್ಷ ಕೋಟಿಯಿಂದ ₹34.3 ಲಕ್ಷ ಕೋಟಿ.

* ರಾಷ್ಟ್ರೀಯ ಹಣಕಾಸು ನಿರ್ವಹಣಾ ಸಂಸ್ಥೆ ಪ್ರಕಾರ, 1990–2008ರ ಅವಧಿಯಲ್ಲಿ ಜಮೆಯಾದ ಕಪ್ಪುಹಣದ ಮೊತ್ತ ₹9.41 ಲಕ್ಷ ಕೋಟಿ. ದೇಶದಲ್ಲಿ ಲೆಕ್ಕಕ್ಕೆ ಸಿಗದ ಆದಾಯದ ಪೈಕಿ ಶೇ 10ರಷ್ಟು ಹಣವು ದೇಶದಿಂದ ಹೊರಗೆ ರವಾನೆಯಾಗಿದೆ ಎಂದು ಸಂಸ್ಥೆ ಅಂದಾಜಿಸಿದೆ. 

* ಸಾರ್ವಜನಿಕ ನೀತಿ ಹಾಗೂ ಹಣಕಾಸು ಕುರಿತ ರಾಷ್ಟ್ರೀಯ ಸಂಸ್ಥೆ (ಎನ್‌ಐಪಿಎಫ್‌ಪಿ) ವರದಿ ಪ್ರಕಾರ, 1997–2009ರ ಅವಧಿಯಲ್ಲಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.2ರಿಂದ ಶೇ 7.4ರಷ್ಟು ಸಂಪತ್ತಿನ ಅಕ್ರಮ ಹೊರಹರಿವು ಕಂಡುಬಂದಿದೆ. 

* ದೇಶ ಹಾಗೂ ವಿದೇಶಗಳಲ್ಲಿ ಲೆಕ್ಕಕ್ಕೆ ಸಿಗದ ಅಕ್ರಮ ಸಂಪತ್ತಿನ ಮೌಲ್ಯಮಾಪನ ಹಾಗೂ ಸಮೀಕ್ಷೆ ನಡೆಸುವಂತೆ 2011ರಲ್ಲಿ  ಕೇಂದ್ರ ಹಣಕಾಸು ಸಚಿವಾಲಯವು ಎನ್‌ಐಪಿಎಫ್‌ಪಿ, ಎನ್‌ಸಿಎಇಆರ್ ಹಾಗೂ ಎನ್‌ಐಎಫ್‌ಎಂ ಸಂಸ್ಥೆಗಳಿಗೆ ಸೂಚಿಸಿತ್ತು. 

* 3 ಅಧ್ಯಯನ ವರದಿಗಳು ಹಾಗೂ 7 ಎಸ್‌ಐಟಿ ತನಿಖಾ ವರದಿಗಳನ್ನು ಆಧರಿಸಿ ಕೇಂದ್ರ ಹಣಸಾಸು ಸಚಿವಾಲಯವು ಕಪ್ಪುಹಣ ತಡೆಗೆ ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ವರದಿ ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು