ಸೋಮವಾರ, ಸೆಪ್ಟೆಂಬರ್ 23, 2019
24 °C

ಕನ್ಹಯ್ಯಾಗೆ ಬಾಲಿವುಡ್‌ ಬೆಂಬಲ

Published:
Updated:
Prajavani

ಪಾಟ್ನಾ: ಬಿಹಾರದ ಬೇಗುಸರಾಯ್‌ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಅವರ ಪ್ರಚಾರಕ್ಕಾಗಿ ಬಾಲಿವುಡ್‌ನ ಅನೇಕ ದಿಗ್ಗಜರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಹಿರಿಯ ನಟಿ ಶಬಾನಾ ಆಜ್ಮಿ, ಸ್ವರಾ ಭಾಸ್ಕರ್‌, ನಟ ಪ್ರಕಾಶ್‌ ರಾಜ್‌, ಲೇಖಕ ಜಾವೇದ್‌ ಅಖ್ತರ್‌, ನಿರ್ದೇಶಕ ಇಮ್ತಿಯಾಜ್‌ ಅಲಿ ಹಾಗೂ ರಂಗನಟ ಸೋನಲ್‌ ಝಾ ಅವರು ಕನ್ಹಯ್ಯ ಪರ ಪ್ರಚಾರ ನಡೆಸಲಿದ್ದಾರೆ. ಇವರಲ್ಲದೆ ‘ನರ್ಮದಾ ಉಳಿಸಿ’ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್‌ ಹಾಗೂ ಗುಜರಾತ್‌ನ ಇನ್ನೊಬ್ಬ ಯುವ ನಾಯಕ ಹಾರ್ದಿಕ್‌ ಪಟೇಲ್‌ ಅವರನ್ನೂ ಪ್ರಚಾರಕ್ಕಾಗಿ ಬಳಸಿಕೊಳ್ಳಲು ಸಿಪಿಎಂ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪಕ್ಷದ ಹಿರಿಯ ನಾಯಕಿ ನಿವೇದಿತಾ ಝಾ, ‘ಬಾಲಿವುಡ್‌ ದಿಗ್ಗಜರ ಜೊತೆ ಮಾತುಕತೆ ಇನ್ನೂ ನಡೆಯುತ್ತಿದೆ. ಪ್ರಚಾರ ಕಾರ್ಯಕ್ರಮಗಳಿಗೆ ಅಂತಿಮ ರೂಪ ನೀಡಲಾಗುತ್ತಿದೆ’ ಎಂದಿದ್ದಾರೆ.

ಈನಡುವೆ, ಚುನಾವಣಾ ಪ್ರಚಾರಕ್ಕಾಗಿ ಜನರಿಂದ ಹಣ ಸಂಗ್ರಹಿಸಲು ಹನ್ಹಯ್ಯ ಅವರು ‘ಅವರ್‌ ಡೆಮಾಕ್ರಸಿ’ ಸಂಘಟನೆಯ ಜೊತೆ ಸೇರಿಕೊಂಡು ವೇದಿಕೆಯೊಂದನ್ನು ರಚಿಸಿದ್ದಾರೆ. ‘ಚುನಾವಣಾ ವೆಚ್ಚಕ್ಕಾಗಿ ಆಯೋಗ ನಿಗದಿ ಮಾಡಿರುವ ಗರಿಷ್ಠ ಮೊತ್ತ ₹ 70 ಲಕ್ಷ ಸಂಗ್ರಹಿಸಲು ಈ ಯೋಜನೆ ರೂಪಿಸಿದ್ದೇವೆ. ವೆಬ್‌ಸೈಟ್‌ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಈಗಾಗಲೇ ಸುಮಾರು ₹ 30 ಲಕ್ಷ ಸಂಗ್ರಹವಾಗಿದೆ. ಈ ವೆಬ್‌ಸೈಟ್‌ಗೆ ಹ್ಯಾಕರ್‌ಗಳು ದಾಳಿ ಮಾಡಿದ್ದರಿಂದ ಸ್ವಲ್ಪ ಸಮಯದ ಮಟ್ಟಿಗೆ ಇದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸಂಗ್ರಹವಾಗಿದ್ದ ಹಣ ಸುರಕ್ಷಿತವಾಗಿದೆ’ ಎಂದು ಸಿಪಿಎಂ ಮೂಲಗಳು ತಿಳಿಸಿವೆ.

ಬೇಗುಸರಾಯ್‌ ಕ್ಷೇತ್ರದಲ್ಲಿ ಕನ್ಹಯ್ಯ ಅವರು ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಸಚಿವ ಗಿರಿರಾಜ್‌ ಸಿಂಗ್‌ ಅವರನ್ನು  ಎದುರಿಸಲಿದ್ದಾರೆ.

Post Comments (+)