ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಎಸ್‌ಪಿ–ಬಿಎಸ್‌ಪಿ ಮೈತ್ರಿ ಸಾಧ್ಯತೆ

ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್‌ ತಯಾರಿ
Last Updated 25 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸುವ ತಯಾರಿ ನಡೆಸಿದೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಗಳು ಉತ್ತರ ಪ್ರದೇಶದಲ್ಲಿ ಕಣಕ್ಕಿಳಿಯಲಿದ್ದಾರೆ.

ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ ಸ್ಥಾನ ಹೊಂದಾಣಿಕೆ ಬಹುತೇಕ ಅಂತಿಮಗೊಂಡಿದೆ. ಮೈತ್ರಿಗೆ ಬಿಎಸ್‌ಪಿ ನಾಯಕಿ ಮಾಯಾವತಿ ಅಂತಿಮ ಸ್ಪರ್ಶ ನೀಡುವುದು ಮಾತ್ರ ಬಾಕಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೈತ್ರಿ ಘೋಷಣೆ ಅಧಿಕೃತ ಘೋಷಣೆ ನಂತರ ಉಳಿದ ಸ್ಥಾನಗಳ ಹೊಂದಾಣಿಕೆ ಅಂತಿಮಗೊಳ್ಳಲಿದೆ ಎಂದು ಹೆಸರು ಹೇಳಲು ಇಚ್ಛಿಸದ ನಾಯಕರು ತಿಳಿಸಿದ್ದಾರೆ.

ತೃತೀಯರಂಗ ರಚನೆಗೆ ಕಸರತ್ತು: ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಹೊರಗಿಟ್ಟು ಪ್ರಾದೇಶಿಕ ಪಕ್ಷಗಳೊಂದಿಗೆ ತೃತೀಯರಂಗ ರಚಿಸುವ ಯತ್ನವನ್ನೂ ಮಾಯಾವತಿ ಮುಂದುವರಿಸಿದ್ದಾರೆ.

ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಮತ್ತು ಜನತಾ ಛತ್ತೀಸಗಡ ಕಾಂಗ್ರೆಸ್‌ (ಜೆಸಿಸಿ) ಒಳಗೊಂಡ ತೃತೀಯರಂಗ ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಸಮ್ಮತಿ ಸೂಚಿಸಿವೆ ಎಂದು ಹೇಳಲಾಗಿದೆ.

ಜನವರಿ ಮೊದಲ ವಾರ ಲಖನೌದಲ್ಲಿ ಸರಣಿ ಸಭೆ ಆಯೋಜಿಸಲಾಗಿದ್ದು ಅದರಲ್ಲಿ ಮಾಯಾವತಿ ಭಾಗವಹಿಸಲಿದ್ದಾರೆ. ಸ್ಥಾನ ಹೊಂದಾಣಿಕೆ ಮತ್ತು ಚುನಾವಣಾ ರಣತಂತ್ರಕ್ಕೆ ಇದೇ ವೇಳೆ ಅಂತಿಮ ರೂಪ ದೊರೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ, ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ, ಐಎನ್‌ಎಲ್‌ಡಿ ನಾಯಕ ಅಭಯ್‌ ಸಿಂಗ್‌ ಚೌಟಾಲ ಮತ್ತು ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್‌ ಸೊರೆನ್‌ ಜತೆ ಈಗಾಗಲೇ ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಸಂಪರ್ಕದಲ್ಲಿದ್ದಾರೆ.

ಎನ್‌ಸಿಪಿ ನಾಯಕ ಶರದ್‌ ಪವಾರ್‌ ಮತ್ತು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ಅವರೊಂದಿಗೆ ಮಾಯಾವತಿ ಮಾತುಕತೆ ನಡೆಸಲಿದ್ದಾರೆ. ಇದರೊಂದಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ ಅವರನ್ನು ತೃತೀಯರಂಗದ ತೆಕ್ಕೆಗೆ ಸೆಳೆದುಕೊಳ್ಳುವ ಯತ್ನಗಳು ನಡೆದಿವೆ ಎಂದು ಬಿಎಸ್‌ಪಿ ನಾಯಕರು ಹೇಳಿದ್ದಾರೆ.

* ಉತ್ತರ ಪ್ರದೇಶದಲ್ಲಿ ಸಮಾನಮನಸ್ಕ ಪಕ್ಷಗಳ ಮಹಾಮೈತ್ರಿಕೂಟ ರಚನೆಯಾಗಲಿದೆ. ಅದರಲ್ಲಿ ಕಾಂಗ್ರೆಸ್‌ ಇರುವ ಬಗ್ಗೆ ಈಗಲೇ ಏನನ್ನೂ ಹೇಳಲಾಗದು

ಅಬ್ದುಲ್ ಹಫೀಜ್‌,ಸಮಾಜವಾದಿ ಪಕ್ಷದ ವಕ್ತಾರ

ಕಾಂಗ್ರೆಸ್‌ಗೆ ಎರಡು ಕ್ಷೇತ್ರ?

ನವದೆಹಲಿ: ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದೆ.

ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಮೈತ್ರಿಯ ಸುಳಿವು ಸಿಗುತ್ತಿದ್ದಂತೆಯೇ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದೆ ಎಂದು ಹೇಳಲಾಗಿದೆ.

ಎಸ್‌ಪಿ–ಬಿಎಸ್‌ಪಿ ಜತೆ ಕೈಜೋಡಿಸಿದರೆ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ದಕ್ಕುವುದು ಅನುಮಾನ. ರಾಯ್‌ ಬರೇಲಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ರಾಜ್ಯ ನಾಯಕರು ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT