ಶುಕ್ರವಾರ, ಏಪ್ರಿಲ್ 23, 2021
22 °C

ಬಜೆಟ್ 2019: ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ ಚಿಂತಿಸುವುದೇ ಸರ್ಕಾರ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಆಗಲಿದೆ ಎಂದು ಮೋದಿ ಭರವಸೆ ನೀಡಿದ್ದರು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಇದು ಸಾಧ್ಯವಿಲ್ಲ ಎಂದು ಅನಿಸಿದರೂ ಕೃಷಿ ವಲಯಕ್ಕೆ ಉತ್ತೇಜನ ನೀಡುವ ಬಜೆಟ್ ನಿರೀಕ್ಷೆ ದೇಶದ ಕೃಷಿಕರಲ್ಲಿದೆ.ಹಾಗಾಗಿ ಕೃಷಿ ವಲಯಕ್ಕೆ ಪ್ರೋತ್ಸಾಹ ನೀಡುವ ಮತ್ತು ಹೆಚ್ಚಿನ ಅಭಿವೃದ್ಧಿಗೆ ಬಜೆಟ್ -2019 ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

ಆದಾಯ ಹೆಚ್ಚು ಮಾಡುವುದರ ಜತೆ ಕೃಷಿ ವಲಯದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಭರವಸೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಾದರೆ ಈ ಬಾರಿಯ ಬಜೆಟ್ ರೈತ ಸ್ನೇಹಿ ಬಜೆಟ್ ಆಗಲಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ
 
ಅಗ್ರಿ ಸ್ಟಾರ್ಟ್‌ಅಪ್ 
ಅಗ್ರಿ ಸ್ಟಾರ್ಟ್‌ಅಪ್ ಈ ಬಜೆಟ್‌ನಲ್ಲಿ ಹೆಚ್ಚು ಚರ್ಚೆಯಾಗುವ ನಿರೀಕ್ಷೆ ಇದೆ. ಕೃತಕ ಬುದ್ಧಿಮತ್ತೆ, ಬ್ಲಾಕ್‌ ಚೈನ್ ಟೆಕ್ನಾಲಜಿ ( ಉತ್ಪಾದನೆ, ಶೇಖರಣೆ, ವಿತರಣೆ ಮೊದಲಾದವುಗಳ ಬಗ್ಗೆ ನಿಗಾವಹಿಸುವ, ಪಾರದರ್ಶಕತೆಯಿರುವ ವ್ಯವಸ್ಥೆ) ವಿಷಯವೂ ಇಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಈ ವ್ಯವಸ್ಥೆಯಿಂದಾಗಿ ಪ್ರತಿಯೊಂದು ವಸ್ತುವಿವ ಗುಣಮಟ್ಟವನ್ನು ಮೂಲದಲ್ಲೇ ಪರೀಕ್ಷಿಸಬಹುದು ಮಾತ್ರವಲ್ಲದೆ ಪ್ರತಿ ಹಂತದಲ್ಲಿನ ವಹಿವಾಟುಗಳ ಬಗ್ಗೆ ಇಲ್ಲಿ ಪಾರದರ್ಶಕತೆ ಇರುತ್ತದೆ. ಗೊಬ್ಬರ ವಿಮೆ ಯೋಜನೆ ಕ್ಲೈಮ್ ಮಾಡುವ ಹೊತ್ತಲ್ಲಿ ಈ ವಿಧಾನ ಉಪಯೋಗಕ್ಕೆ ಬರುತ್ತದೆ.

ಮೊಬೈಲ್ ಅಪ್ಲಿಕೇಷನ್
ಉತ್ಪನ್ನಗಳ ನೇರ ಮಾರಾಟಕ್ಕಾಗಿ ಮೊಬೈಲ್ ಅಪ್ಲಿಕೇಷನ್  (ಮೊಬೈಲ್ ಆ್ಯಪ್) ಗಳ ಬಳಕೆಯ ಬಗ್ಗೆ ಬಜೆಟ್‌ನಲ್ಲಿ ಚರ್ಚೆ ಸಾಧ್ಯತೆ ಇದೆ. ಹವಾಮಾನ, ಪೇಟೆ ಧಾರಣೆ ಮೊದಲಾದವುಗಳಿಗೆ ಆ್ಯಪ್ ಸಹಾಯವಾಗಲಿದೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ದರ ಸಿಗುವ ಗುರಿಯೊಂದಿಗೆ ವೇರ್ ಹೌಸ್ ಅವಲಂಬಿತ ವ್ಯಾಪಾರವನ್ನು ಇಲೆಕ್ಟ್ರಾನಿಕ್ ಪ್ಲಾಟ್‌ಫಾರಂ - ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ (eNAM) ಮೂಲಕ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಇದು ರೈತರಿಗೆ ಗೋದಾಮಿನಿಂದಲೇ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯವಾಗಲಿದ್ದು, ಈ ಮೂಲಕ ರೈತರ ಆದಾಯ ದುಪ್ಪಟ್ಟು ಮಾಡಲು ನೆರವಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.  ಅದೇ ವೇಳೆ  ಹೋಂ ಡೆಲಿವರಿ ಸ್ಟಾರ್ಟ್‌ಅಪ್‌ಗಳಿಗಿರುವ ಸೌಲಭ್ಯ, ರೈತ ಸಂಘಟನೆಗಳಿಗೆ ನೆರವು ಬಜೆಟ್‌ನಿಂದ ನಿರೀಕ್ಷಿಸಲಾಗಿದೆ.

ಉತ್ಪನ್ನಗಳ ಗ್ರಾಮೀಣ ವ್ಯವಸಾಯ ಪದ್ಧತಿ, ಮೀನು ಕೃಷಿಗಾಗಿ ವಿಶೇಷ ನಿಧಿ, ಕೃಷಿ ಮಾಡದೇ ಇರುವ  ಜಮೀನಿನಲ್ಲಿ ಸೌರಶಕ್ತಿ ಯೋಜನೆಗಳನ್ನು ಆರಂಭಿಸುವ ಬಗ್ಗೆಯೂ ಬಜೆಟ್‌ನಲ್ಲಿ ಅನುದಾನ ನಿರೀಕ್ಷಿಸಬಹುದು.

ಹೆಚ್ಚು ಹೂಡಿಕೆ 
ಆಹಾರ ಸಂಸ್ಕರಣೆ ವಲಯ ಮತ್ತು ಗ್ರಾಮೀಣ ಸ್ಟಾರ್ಟ್‌ ಅಪ್‌‌ಗಳಲ್ಲಿಯೂ  ಖಾಸಗಿ ಹೂಡಿಕೆಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆ ಇದೆ. ಐದು ವರ್ಷದ ಅವಧಿಯಲ್ಲಿ ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಖಾಸಗಿ ವಲಯ ₹25 ಲಕ್ಷ ಕೋಟಿ ಹೂಡಿಕೆಗೆ ಅವಕಾಶವಿರುವ ಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಲಿದೆ.  ಹಾಗಾಗಿ ಗ್ರಾಮೀಣ ವಲಯದ ಆರ್ಥಿಕ ಮತ್ತು ಸಾಮಾಜಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ, ಕೃಷಿ ವಲಯ ಮತ್ತು ಅದಕ್ಕೆ ಸಂಬಂಧಿಸಿದ ವಲಯದ ಅಭಿವೃದ್ಧಿ ಮೂಲಕ ನಿರುದ್ಯೋಗ ಸಮಸ್ಯೆ ಮತ್ತು ಬಡತನವನ್ನು ಹೋಗಲಾಡಿಸುವ ಬಗ್ಗೆ ಬಜೆಜ್ ಹೆಚ್ಚಿನ ಗಮನ ಹರಿಸಬಹುದು.

ಹಣದುಬ್ಬರ  
ದೇಶದಲ್ಲಿನ ಕೃಷಿ ಪದ್ದತಿಗಳು ಸಂಪೂರ್ಣ ಮಳೆಯನ್ನು ಅವಲಂಬಿಸಿದ್ದು, ಈ ರೀತಿಯ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೈಕ್ರೊ ಇರಿಗೇಷನ್ ನಿಧಿಯಡಿಯಲ್ಲಿ 1ಕೋಟಿ ಹೆಕ್ಟೇರ್ ಜಮೀನನ್ನು ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಬಲ ಬೆಲೆಯಲ್ಲಿ ಏರಿಕೆ ಸಾಧ್ಯತೆ ಇದ್ದರೂ ಹಣದುಬ್ಬರದ ಬಗ್ಗೆ ಸರ್ಕಾರ ಎಚ್ಚರಿಕೆಯ ನಡೆ ಸ್ವೀಕರಿಸಲಿದೆ.

ಸಾಂಸ್ಥಿಕ ಸಾಲ ಹೆಚ್ಚು ಲಭ್ಯವಾಗುವಂತೆ ಮಾಡುವುದರ ಜತೆಗೆ ಕೆಟ್ಟ ಹವಾಮಾನ ಮತ್ತು ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರೈತರಿಗೆ ಧನ ಸಹಾಯ, ಬಡ್ಡಿದರದಲ್ಲಿ ಕಡಿತ, ಮೊದಲಾದ ಸೌಲಭ್ಯಗಳನ್ನು ಸರ್ಕಾರ ನೀಡುವುದೇ? ಎಂಬುದರ ಬಗ್ಗೆ ರೈತರು ಕುತೂಹಲದಿಂದಿದ್ದಾರೆ.

ಏತನ್ಮಧ್ಯೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವ್ಯಾಪ್ತಿ ವಿಸ್ತರಿಸುವ ಸಾಧ್ಯತೆ ಇದೆ. ರೈತರ ಖಾತೆಗಳಿಗೆ ನೇರವಾಗಿ ನೆರವಿನ ಹಣ ವರ್ಗಾವಣೆ ಮಾಡುವ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರಿಂದ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆಯೂ ಸರ್ಕಾರ ಯೋಚಿಸಿದ್ದು ಇದು ರೈತರಿಗೆ ಸಹಕಾರಿಯಾಗಲಿದೆ.

ಇನ್ನಷ್ಟು...

ರಾಜ್ಯ ಬಜೆಟ್‌: ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದು ಏನು?

ಇಸ್ರೇಲ್‌ ಮಾದರಿ, ಶೂನ್ಯ ಕೃಷಿ, ಮೆಗಾ ಡೇರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು