ಷೇರುಪೇಟೆಯ ಭವಿಷ್ಯದ ಸ್ವರೂಪ ನಿರ್ಧರಿಸಲಿರುವ ಬಜೆಟ್‌

ಗುರುವಾರ , ಜೂಲೈ 18, 2019
28 °C

ಷೇರುಪೇಟೆಯ ಭವಿಷ್ಯದ ಸ್ವರೂಪ ನಿರ್ಧರಿಸಲಿರುವ ಬಜೆಟ್‌

Published:
Updated:
Prajavani

ಬೆಂಗಳೂರು: ದೇಶಿ ಷೇರುಪೇಟೆಯನ್ನು ಏರಿಕೆಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗಲು ಅಗತ್ಯವಾದ ಕ್ರಮಗಳನ್ನು ಬಜೆಟ್‌ ಒಳಗೊಂಡಿರಲಿದೆಯೇ ಎನ್ನುವ ನಿರೀಕ್ಷೆ ಷೇರು ಹೂಡಿಕೆದಾರರಲ್ಲಿ ಮನೆ ಮಾಡಿದೆ.

ಸೂಚ್ಯಂಕವು ಏರುಗತಿಯಲ್ಲಿ ಸಾಗಲು ಬಜೆಟ್‌ ನಿರ್ಣಾಯಕ ಪಾತ್ರ ವಹಿಸಲಿರುವುದರಿಂದ ಹೂಡಿಕೆದಾರರು ಬಜೆಟ್‌ ಅನ್ನು ತೀವ್ರ ಕಾತರದಿಂದ ಎದುರು ನೋಡುತ್ತಿದ್ದಾರೆ. ಸರ್ಕಾರವು ವಿತ್ತೀಯ ವಿವೇಕ ಕಾಯ್ದುಕೊಳ್ಳಲಿದೆಯೇ ಎನ್ನುವ ಕುತೂಹಲವೂ ಪೇಟೆಯಲ್ಲಿ ಮನೆ ಮಾಡಿದೆ.

ಕುಂಠಿತ ದೇಶಿ ಆರ್ಥಿಕತೆಗೆ ಉತ್ತೇಜನ ನೀಡುವ, ಉದ್ಯೋಗ ಸೃಷ್ಟಿಗೆ ನೆರವಾಗುವ ಮತ್ತು ಗ್ರಾಮೀಣ ಸಂಕಷ್ಟಗಳಿಗೆ ಪರಿಹಾರ ಒದಗಿಸುವ ಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಪ್ರಕಟಿಸಲಿದ್ದಾರೆ ಎಂದು ಷೇರು ವಹಿವಾಟುದಾರರು ಬಲವಾಗಿ ನಂಬಿದ್ದಾರೆ.

ಷೇರುಪೇಟೆಯ ಸಂವೇದಿ ಸೂಚ್ಯಂಕವು 2018ರ ಬಜೆಟ್‌ ಮಂಡನೆ ನಂತರ ಶೇ 10ರಷ್ಟು ಬೆಳವಣಿಗೆ ದಾಖಲಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌), ಎಚ್‌ಡಿಎಫ್‌ಸಿ ಮತ್ತು ಬಜಾಜ್‌ ಫೈನಾನ್ಸ್‌ನಂತಹ ಕೆಲವೇ ಕೆಲ ಷೇರುಗಳು ಹೂಡಿಕೆದಾರರಿಗೆ ಕೈತುಂಬ ಲಾಭ ತಂದುಕೊಟ್ಟಿವೆ. ಆದರೆ, ಉಳಿದ ಶೇ 80ರಷ್ಟು ಷೇರುಗಳು ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.

ಷೇರುಪೇಟೆಯ ಸಂವೇದಿ ಸೂಚ್ಯಂಕವು ಸಾರ್ವಕಾಲಿಕ ದಾಖಲೆ ತಲುಪಿದ್ದರೂ, ಯಾವುದೇ ಸಂದರ್ಭದಲ್ಲಾದರೂ ಯಾವುದೇ ಷೇರು ಗರಿಷ್ಠ ಮಟ್ಟದಿಂದ ಪ್ರಪಾತಕ್ಕೆ ಕುಸಿಯುವ ಅನಿಶ್ಚಿತತೆ ಮನೆ ಮಾಡಿದೆ. ಮುಂಗಾರು ವಿಳಂಬ ತಂದೊಡ್ಡಲಿರುವ ಸಂಕಷ್ಟ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟು ಮತ್ತು ಕುಂಠಿತ ಆರ್ಥಿಕತೆ ಮತ್ತಿತರ ವಿದ್ಯಮಾನಗಳು ಸದ್ಯಕ್ಕೆ ಮಾರುಕಟ್ಟೆ ವಹಿವಾಟಿನಲ್ಲಿ ಸೂಕ್ತವಾಗಿ ಪ್ರತಿಫಲನಗೊಳ್ಳುತ್ತಿಲ್ಲ.

ಷೇರು ಮಾರುಕಟ್ಟೆಯ ಪಾಲಿಗೆ ಬಜೆಟ್‌ ಮಂಡನೆಯು ಪ್ರಮುಖ ಘಟನೆಯಾಗಿರಲಿದೆ. ಮಾರುಕಟ್ಟೆಯ ಭವಿಷ್ಯದ ಸ್ವರೂಪವನ್ನು ಬಜೆಟ್‌ ನಿರ್ಧರಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರದ ಆಲೋಚನಾ ಧಾಟಿ ಹೇಗೆ ಇರಲಿದೆ ಎನ್ನುವುದರ ಸುಳಿವೂ ಇಲ್ಲಿ ಸಿಗಲಿದೆ.

ಹಣಕಾಸು ಕ್ಷೇತ್ರದ ಸಮಸ್ಯೆಗಳಾದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಹೆಚ್ಚಳ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟಿಗೆ ಸರ್ಕಾರ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇದೆ. ಇದರಿಂದ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳವಾಗಲಿದೆ. ವಾಹನ ತಯಾರಿಕೆ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ಗೃಹ ಮತ್ತು ಕಟ್ಟಡ ನಿರ್ಮಾಣ ಸಲಕರಣೆಗಳ ಉದ್ದಿಮೆಗಳಲ್ಲಿ ಚೇತರಿಕೆ ಕಂಡು ಬರುವ ಸಾಧ್ಯತೆ ಇದೆ.

ಔಷಧಿ ತಯಾರಿಕೆ, ಬ್ಯಾಂಕಿಂಗ್‌ ಮತ್ತು ಗೃಹ ಹಣಕಾಸು ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಳ್ಳಲಿವೆ. ಬಜೆಟ್‌ನಲ್ಲಿ ಬ್ಯಾಂಕ್‌ಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪುನರ್ಧನ ದೊರೆಯುವ ಸಾಧ್ಯತೆ ಇದೆ. ಇದು ಬ್ಯಾಂಕಿಂಗ್‌ ವಲಯವನ್ನು ಸದೃಢಗೊಳಿಸಲಿದೆ.

ಸರ್ಕಾರದ ವಿತ್ತೀಯ ಕೊರತೆ ಉದ್ದೇಶಗಳು, ಮಾರುಕಟ್ಟೆ ಸಾಲ ಯೋಜನೆಗಳಲ್ಲಿನ ಬದಲಾವಣೆ ಮತ್ತು ತೆರಿಗೆ ವರಮಾನದಲ್ಲಿನ ಪರಿಷ್ಕರಣೆ ಬಗ್ಗೆಯೂ ಹೂಡಿಕೆದಾರರು ಎದುರು ನೋಡುತ್ತಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !