ಮಂಗಳವಾರ, ಮಾರ್ಚ್ 9, 2021
31 °C

ವಂಚನೆ ಪ್ರಕರಣ: ಹೈಕೋರ್ಟ್ ಮೊರೆ ಹೋದ ಪ್ರಿಯಾಂಕಾ ಕಾರ್ಯದರ್ಶಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸಲು 1,000 ಬಸ್‌ಗಳನ್ನು ಒದಗಿಸುವ ವಿಚಾರದಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಸಂದೀಪ್ ಸಿಂಗ್ ಅವರು ನಿರೀಕ್ಷಣಾ ಜಾಮೀನು ಕೋರಿ ಶುಕ್ರವಾರ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ. 

ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಸಂದೀಪ್ ಸಿಂಗ್ ಹಾಗೂ ಇತರರ ವಿರುದ್ಧ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಮೇ 19ರಂದು ವಂಚನೆ ಹಾಗೂ ದಾಖಲೆ ತಿರುಚಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ‘ಕಾಂಗ್ರೆಸ್ ಪಟ್ಟಿಯಲ್ಲಿದ್ದ 100 ವಾಹನಗಳು ಬಸ್‌ಗಳಲ್ಲ. 297 ವಾಹನಗಳಿಗೆ ಸಾಮರ್ಥ್ಯ ಪ್ರಮಾಣ ಪತ್ರ ಅಥವಾ ವಾಹನ ವಿಮೆ ಇಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು. ಆದರೆ ಈ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿತ್ತು.  

ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರು, ಪ್ರಕರಣದ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದರು. 

‘ಪ್ರಕರಣದಲ್ಲಿ ಯಾವುದೇ ಅಪರಾಧದ ಸ್ವರೂಪ ಇಲ್ಲ. ಮೇಲಾಗಿ ಇದು ರಾಜಕೀಯ ಪಿತೂರಿಯಿಂದ ದಾಖಲಿಸಿದ ದೂರು’ ಎಂದು ಸಂದೀಪ್ ಪರ ವಕೀಲ ಜೆ.ಎನ್. ಮಾಥುರ್ ವಾದ ಮಂಡಿಸಿದರು. ಕಾಂಗ್ರೆಸ್ ನೀಡಿದ್ದ ಸಾವಿರ ಬಸ್‌ಗಳ ಪಟ್ಟಿಯಲ್ಲಿ ಕಾರು, ಟ್ರಕ್ ಹಾಗೂ, ಆಟೊ ರಿಕ್ಷಾಗಳ ನೋಂದಣಿ ಸಂಖ್ಯೆ ಇದ್ದುದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ವಾಕ್ಸಮರ ನಡೆದಿತ್ತು.‌ 

ರಾಜಸ್ಥಾನ–ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರ ಜತೆ ವಾಗ್ವಾದ ನಡೆಸಿದ್ದ ಲಲ್ಲು ಹಾಗೂ ಕಾರ್ಯಕರ್ತರು ಧರಣಿಯನ್ನೂ ನಡೆಸಿದ್ದರು. ಈ ವೇಳೆ ಲಲ್ಲು ಅವರನ್ನು ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ವಂಚನೆ ಪ್ರಕರಣದಲ್ಲಿ ಅವರನ್ನು ಲಖನೌ ಪೊಲೀಸರು ಮತ್ತೆ ಬಂಧಿಸಿದ್ದಾರೆ. 

ಗಡಿಯಲ್ಲಿ ಅಪಾರ ನಿರೀಕ್ಷೆಯಿಂದ ಕಾದಿದ್ದ ಕಾರ್ಮಿಕರಿಗೆ ಸಾವಿರ ಬಸ್ ಕಳುಹಿಸುವುದಾಗಿ ಪ್ರಿಯಾಂಕಾ ಗಾಂಧಿ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದ್ದರು. ವಾಹನಗಳ ಸಂಖ್ಯೆ, ಚಾಲಕರು ಮೊದಲಾದ ಮಾಹಿತಿ ಒದಗಿಸುವಂತೆ ಕೇಳಿದ್ದ ಸರ್ಕಾರ, ಆರಂಭದಲ್ಲಿ ಪ್ರಸ್ತಾವವನ್ನು ಒಪ್ಪಿತ್ತು. ಬಸ್‌ಗಳನ್ನು ಮೊದಲು ಲಖನೌಗೆ ಕಳುಹಿಸಲು ತಿಳಿಸಿತ್ತು. ಇದನ್ನು ಟೀಕಿಸಿದ್ದ ಸಂದೀಪ್, ‘ಗಡಿಯಲ್ಲಿ ಸಾವಿರಾರು ವಲಸಿಗರು ರಾಜ್ಯ ಪ್ರವೇಶಿಸಲು ಹಾತೊರೆಯುತ್ತಿರುವಾಗ, ಸರ್ಕಾರವು ಬಸ್‌ಗಳನ್ನು ಲಖನೌಗೆ ಕಳುಹಿಸಲು ಸೂಚಿಸಿರುವುದು ಅಮಾನವೀಯ’ ಎಂದು ಆರೋಪಿಸಿದ್ದರು. ಗಡಿಗೆ ತೆರಳಿದ್ದ ಬಸ್‌ಗಳು, ಕಾರ್ಮಿಕರನ್ನು ಕರೆತರದೇ ವಾಪಸಾಗಿದ್ದವು.

ಇನ್ನಷ್ಟು... 

ವಲಸೆ ಕಾರ್ಮಿಕರಿಗೆ 1000 ಬಸ್: ಪ್ರಿಯಾಂಕಾ ವಾದ್ರಾ ಪಟ್ಟಿಯಲ್ಲಿ ಸ್ಕೂಟರ್, ಆಟೋ

ವಲಸೆ ಕಾರ್ಮಿಕರಿಗಾಗಿ 1,000 ಬಸ್‌: ಪ್ರಿಯಾಂಕಾ ಮನವಿಗೆ ಉತ್ತರ ಪ್ರದೇಶ ಸಮ್ಮತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು