ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಮಂತ್ರಿ ಕಿಸಾನ್‌ ಯೋಜನೆ: ಎಲ್ಲ ರೈತರಿಗೆ ಸೌಲಭ್ಯ ವಿಸ್ತರಣೆ

ಸಣ್ಣ ವ್ಯಾಪಾರಿಗಳು; ಅತಿಸಣ್ಣ ರೈತರಿಗೆ ಪಿಂಚಣಿ ಯೋಜನೆಗೆ ಸಂಪುಟ ಅಸ್ತು
Last Updated 31 ಮೇ 2019, 20:29 IST
ಅಕ್ಷರ ಗಾತ್ರ

ನವದೆಹಲಿ: ಕೃಷಿಕರಿಗೆ ವಾರ್ಷಿಕ ₹ 6000 ಆರ್ಥಿಕ ನೆರವು ನೀಡುವಪ್ರಧಾನಮಂತ್ರಿ ಕಿಸಾನ್‌ ಯೋಜನೆಯನ್ನು ಎಲ್ಲ ರೈತರಿಗೆ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೇರಿದ್ದ ಮೊದಲ ಸಂಪುಟ ಸಭೆ ಈ ನಿರ್ಧಾರವನ್ನು ತೆಗೆದುಕೊಂಡಿತು. ಬೊಕ್ಕಸಕ್ಕೆ ಇದರಿಂದ ₹ 87,000 ಕೋಟಿ ಹೊರೆ ಆಗಲಿದೆ.

ಜೊತೆಗೆ, ಸುಮಾರು ಐದು ಕೋಟಿ ರೈತರಿಗೆ ನೆರವಾಗುವಂತೆ ₹ 10,000 ಕೋಟಿ ಮೊತ್ತದ ಪಿಂಚಣಿ ಯೋಜನೆಗೂ ಸಂಪುಟವು ಅನುಮೋದನೆ ನೀಡಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಚುನಾವಣಾ ಪೂರ್ವದಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ₹ 75,000 ಕೋಟಿ ಮೊತ್ತದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಸಿದ್ಧಿ (ಪಿಎಂಕೆಎಎಸ್‌ಎಸ್‌) ಯೋಜನೆಯನ್ನು ಪ್ರಕಟಿಸಿತ್ತು. ವಾರ್ಷಿಕ ₹ 6,000ವನ್ನು ಮೂರು ಕಂತುಗಳಲ್ಲಿ ವಿತರಿಸಲಿದ್ದು, ಎರಡು ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ಸುಮಾರು 12.5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದರ ಲಾಭ ದೊರೆಯಲಿದೆ ಎಂದು ಸರ್ಕಾರ ಹೇಳಿತ್ತು.

ಪರಿಷ್ಕೃತ ತೀರ್ಮಾನದಂತೆ ಯೋಜನೆ ವ್ಯಾಪ್ತಿಗೆ ಹೆಚ್ಚುವರಿಯಾಗಿ 2 ಕೋಟಿ ರೈತರು ಸೇರುವರು. ಬೊಕ್ಕಸಕ್ಕೆ ಹೆಚ್ಚುವರಿ ₹ 12,000 ಕೋಟಿ ಹೊರೆ ಬೀಳಲಿದೆ.ಒಟ್ಟಾರೆ 14.5 ಕೋಟಿ ರೈತರಿಗೆ ಇದರ ಲಾಭ ಸಿಗಲಿದೆ.

2019–20ನೇ ಹಣಕಾಸು ವರ್ಷದಲ್ಲಿ ಈ ಯೋಜನೆ ಜಾರಿಗೆ ಒಟ್ಟು ₹ 87,217.50 ಕೋಟಿ ಬೇಕಾಗಲಿದೆ ಎಂದು ಸಚಿವರು ವಿವರ ನೀಡಿದರು.

ಅಧಿಕೃತ ಮಾಹಿತಿ ಪ್ರಕಾರ, ಯೋಜನೆಯಡಿ ಆಗಲೇ ಸುಮಾರು 3.11 ಕೋಟಿ ಸಣ್ಣ, ಅತಿ ಸಣ್ಣ ರೈತರು ಮೊದಲ ಕಂತಿನ ₹ 2,000 ಅನ್ನು ಪಿಎಂ–ಕಿಸಾನ್‌ ಯೋಜನೆಯಡಿ ವಿತರಿಸಲಾಗಿದೆ. 2.75 ಕೋಟಿ ರೈತರಿಗೆ ಎರಡನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

ಪಿಂಚಣಿ ಯೋಜನೆಗೂ ಅಸ್ತು: ಅಲ್ಲದೆ, ಪ್ರಧಾನ ಮಂತ್ರಿ ಕಿಸಾನ್‌ ಪಿಂಚಣಿ ಯೋಜನೆಗೂ ಸಂಪುಟ ಸಭೆ ಅನುಮೋದನೆ ನೀಡಿತು. 60 ವರ್ಷ ವಯಸ್ಸು ಮೀರಿದ ಸಣ್ಣ ಮತ್ತು ಅತಿ ಸಣ್ಣ ಕೃಷಿ ಹಿಡುವಳಿದಾರರಿಗೆ ಮಾಸಿಕ ₹ 3000 ಪಿಂಚಣಿ ನೀಡುವುದು ಈ ಯೋಜನೆಯ ಉದ್ದೇಶ.

ವ್ಯಾಪಾರಿಗಳಿಗೆ ಪಿಂಚಣಿ: 60ವರ್ಷ ವಯಸ್ಸು ಮೀರಿದ ವ್ಯಾಪಾರಿಗಳಿಗೆ ಮಾಸಿಕ ₹ 3,000 ಪಿಂಚಣಿ ಖಾತರಿ ನೀಡುವ ಯೋಜನೆಗೂ ಸಂಪುಟ ಸಮ್ಮತಿ ನೀಡಿದೆ. ಇದರಿಂದ ಸುಮಾರು 3 ಕೋಟಿ ಚಿಲ್ಲರೆ ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

‘ಮೂರು ವರ್ಷಗಳಲ್ಲಿ ಐದು ಕೋಟಿ ವ್ಯಾಪಾರಿಗಳು ಯೋಜನೆ ವ್ಯಾಪ್ತಿಗೆ ಸೇರುವ ನಿರೀಕ್ಷೆಯಿದೆ‍’ ಎಂದು ಸಚಿವ ಪ್ರಕಾಶ್‌ ಜಾವಡೇಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT